Madikeri Dasara 2024: ಮಡಿಕೇರಿ ದಸರಾ ದಶ ಮಂಟಪದಲ್ಲಿ ವಿಷ್ಣು ಅವತಾರ, ಕಾಳಿಂಗ ಮರ್ದನ, ಕೃಷ್ಣ ಬಾಲಲೀಲೆ, ರಾವಣ ಸಂಹಾರ
Oct 12, 2024 10:17 PM IST
ಮಡಿಕೇರಿ ದಸರಾದ ದಶಮಂಟಪದಲ್ಲಿ ಗಮನ ಸೆಳೆಯುವ ಕಂಸ ವಧೆ ರೂಪಕ.
ಮಡಿಕೇರಿ ದಸರಾರದ ದಶಮಂಟಪಗಳ ಮೆರವಣಿಗೆಗೆ ಚಾಲನೆ ದೊರೆತಿದೆ. ಈ ಬಾರಿ ಹತ್ತು ಮಂಟಪಗಳು ವಿಭಿನ್ನ ಪರಿಕಲ್ಪನೆಯೊಂ ದಿಗೆ ಮೆರವಣಿಗೆ ರೂಪಿಸಿವೆ.
ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದೇ ಕರೆಯಿಸಿಕೊಳ್ಳುವ ಮಡಿಕೇರಿ ದಸರಾದಿಂದಲೂ ಜನಪ್ರಿಯವಾಗಿದೆ. ವಿಶೇಷವಾಗಿ ಮಡೀಕೇರಿ ದಶಮಂಟಪವು ಇಲ್ಲಿನ ದಸರಾದ ವಿಶೇಷ. ಈ ಬಾರಿಯ ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಆಕರ್ಷಣೆಯೊಂದಿಗೆ ಮೆರವಣಿಗೆಯು ಶನಿವಾರ ಸಂಜೆ ಶುರುವಾಯಿತು. ಮಳೆಯ ಆತಂಕ, ಭಾರೀ ಭದ್ರತೆ, ಜನ ಜಂಗುಳಿ, ಪ್ರವಾಸಿಗರ ಉತ್ಸಾಹದ ನಡುವೆ ಈ ಬಾರಿಯ ದಶಮಂಟಪ ಆರಂಭಗೊಂಡಿತು. ಇಡೀ ಮಡಿಕೇರಿ ನಗರದಲ್ಲಿ ದಶಮಂಟಪಗಳು ಸುತ್ತು ಹಾಕಿ ಹಬ್ಬದ ಕಳೆಯನ್ನು ಹೆಚ್ಚಿಸಲಿವೆ. ಒಂದು ಹತ್ತು ಮಂಟಪಗಳು ಮೆರವಣಿಗೆಯಲ್ಲಿ ಇರಲಿವೆ. ಸುದೀರ್ಘ ಇತಿಹಾಸ ಹೊಂದಿರುವ ಕೊಡಗು ಜಿಲ್ಲೆಯ ವಿಭಿನ್ನ ಸಂಸ್ಥೆಗಳು ತಮ್ಮ ತಂಡದೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಮಂಟಪ ತಯಾರಿಸಲು ಲಕ್ಷಾಂತರ ರೂ. ವೆಚ್ಚ ಮಾಡಿ ಅಭಿಮಾನ ಮರೆಯಲಿವೆ.
ವಿಜಯದಶಮಿಯಂದು ಪಲ್ಲಕ್ಕಿಯಲ್ಲಿ ದೇವರಪಟಗಳನ್ನು ಹೊತ್ತುಕೊಂಡು ನಗರದಲ್ಲಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭವಾಯಿತು. ನಂತರ, ಚಲಿಸುವ ಮಂಟಪ ಮಾಡುವುದನ್ನು ಆರಂಭಿಸಲಾಯಿತು. ತದನಂತರ ಕ್ರಮೇಣ ಉಳಿದ ದೇಗುಲಗಳೂ ಮಂಟಪ ಹೊರಡಿಸಲು ಆರಂಭಿಸಿದವು. ಈಗ ಅದೇ ಜನಪ್ರಿಯವಾಗಿದೆ. ಈ ಬಾರಿಯೂ ಇದೇ ರೀತಿಯಲ್ಲಿ ಸಂಘಟಕರು ಮೆರವಣಿಗೆ ಆಯೋಜನೆ ಮಾಡಿದ್ದಾರೆ.
ಪೇಟೆ ಶ್ರೀರಾಮಮಂದಿರ
ಪೇಟೆ ಶ್ರೀರಾಮಮಂದಿರದ ಮಂಟಪವೇ ಮೊದಲು ಹೊರಟು 4 ಕರಗಗಳ ದೇವಸ್ಥಾನಕ್ಕೆ ಕಳಸದೊಂದಿಗೆ ಹೋಗುತ್ತದೆ. ತದನಂತರ, ಎಲ್ಲ ಮಂಟಪಗಳೂ ಹೊರಡುತ್ತವೆ. 150ಕ್ಕೂ ಅಧಿಕ ವರ್ಷದ ಇತಿಹಾಸವಿರುವ ಕಾಲದಿಂದ ವಿಜಯದಶಮಿಯಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ದೇಗುಲ ಈ ಬಾರಿ ಪೇಟೆ ಶ್ರೀರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿಯು ‘ವಿಷ್ಣುವಿನ ಮತ್ಸ್ಯಾವತಾರ’ ಕಥಾ ಹಂದರವನ್ನು ಆಯ್ದುಕೊಂಡಿದೆ.
ದೇಚೂರಿನಲ್ಲಿ ‘ಕಾಳಿಂಗ ಮರ್ಧನ’
ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿರುವ ದೇಚೂರು ಶ್ರೀರಾಮಮಂದಿರವು 106ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಅತಿ ವಿಶಿಷ್ಟವಾಗಿರುವ ಹಾಗೂ ರಮಣೀಯ ಎನಿಸುವ ‘ಕಾಳಿಂಗ ಮರ್ಧನ’ದ ಕಥಾ ಹಂದರವನ್ನು ಪ್ರಸ್ತುತಪಡಿಸಿದೆ.. ಇದಕ್ಕಾಗಿ ಒಟ್ಟು 2 ಟ್ರಾಕ್ಟರ್‌ಗಳನ್ನು ಬಳಕೆ ಮಾಡಲಾಗಿದ್ದು, 28 ಕಲಾಕೃತಿಗಳು ತಮ್ಮ ಚಮತ್ಕಾರ ತೋರಲಿವೆ.
ದಂಡಿನ ಮಾರಿಯಮ್ಮ ಮಂಟಪ
ತನ್ನ 94ನೇ ವರ್ಷದ ಮಂಟಪೋತ್ಸವ ರೂಪಿಸಿರುವ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ‘ಕೌಶಿಕ ಮಹಾತ್ಮೆ’ ಕಥಾ ಹಂದರವನ್ನು ಆಯ್ದುಕೊಂಡಿದೆ. ಈ ಬಾರಿ ಒಟ್ಟು 21 ಕಲಾಕೃತಿಗಳನ್ನು ಒಳಗೊಂಡ ಬೃಹತ್ ಪ್ರದರ್ಶನ ಇದಾಗಿದ್ದು, ಇದಕ್ಕಾಗಿ 2 ಟ್ರಾಕ್ಟರ್‌ನ್ನು ಬಳಕೆ ಮಾಡಲಾಗಿದೆ.
ಚೌಡೇಶ್ವರಿ ದೇಗುಲ
ಮಡಿಕೇರಿ ಮಹದೇವಪೇಟೆಯ ಚೌಡೇಶ್ವರಿ ದೇಗುಲದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಮಂಟಪದ ಜೊತೆಗೆ ಕಲಾತಂಡವೊಂದನ್ನು ಕರೆತರಿಸಿದೆ. ಕೇರಳದ ಪೂಕೋಡುವಿನ ಬ್ಯಾಂಡ್‌ಸೆಟ್ ಶೋಭಾಯಾತ್ರೆಯ ರಂಗು ಹೆಚ್ಚಿಸಲಿದೆ.ಮಂಟಪೋತ್ಸವದ ತನ್ನ 62ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಸಮಿತಿಯು ಈ ಬಾರಿ ‘ಅರುಣಾಸುರ ವಧೆ’ ಕಥಾ ಪ್ರಸಂಗವನ್ನು ಪ್ರದರ್ಶನದ ಸ್ಥಬ್ಧ ಚಿತ್ರ ಹೊಂದಿದೆ.
ಕುಂದೂರು ಮೊಟ್ಟೆ
ತನ್ನ 51ನೇ ವರ್ಷದ ಮಂಟಪೋತ್ಸವದಲ್ಲಿ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯು ‘ಕದಂಬ ಕೌಶಿಕೆ’ ಕಥಾಪ್ರಸಂಗವನ್ನು ಪ್ರದರ್ಶಿಸಿದೆ. ಇದರೊಂದಿಗೆ ಗೊಂಬೆಕುಣಿತ ಹಾಗೂ ಕೀಲುಕುದುರೆಯಂತಹ ಕಲಾತಂಡಗಳನ್ನೂ ಮೆರವಣಿಗೆಗೆ ಕರೆಸಿದೆ.
‘ಸಿಂಧೂರ ಗಣಪತಿ’ ಕಥಾ ಪ್ರಸಂಗ
ಶ್ರೀ ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯು 61ನೇ ವರ್ಷದಲ್ಲಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದು ಈ ಬಾರಿ ಮಂಡಳಿಯು ‘ಸಿಂಧೂರ ಗಣಪತಿ’ ಕಥಾ ಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ.
ಕೋದಂಡರಾಮ ಸಮಿತಿ
50ನೇ ವರ್ಷದ ಮಂಟಪೋತ್ಸವದಲ್ಲಿ ಭಾಗಿಯಾಗುತ್ತಿರುವ ನಗರದ ಕೋದಂಡರಾಮ ದೇವಾಲಯ ಸಮಿತಿಯು ಈ ಬಾರಿ ‘ರಾಮನಿಂದ ರಾವಣನ ಸಂಹಾರ’ದ ಕಥಾವಸ್ತುವನ್ನು ಮಂಟಪದಲ್ಲಿ ಪ್ರದರ್ಶಿಸಿದೆ.ಈ ಬಾರಿ ಮೆರವಣಿಗೆಗೆ ಮಂಗಳೂರಿನ ವಾದ್ಯಗೋಷ್ಠಿಯನ್ನು ಕರೆಸಿರುವುದು ವಿಶೇಷ ಎನಿಸಿದೆ.
ಕೋಟೆ ಮಾರಿಯಮ್ಮ ಮಂಟಪ
ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 48 ವರ್ಷಗಳನ್ನು ಪೂರೈಸಿರುವ ಇಲ್ಲಿನ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ತನ್ನ ಮಂಟಪದಲ್ಲಿ ಕೃಷ್ಣನ ಬಾಲಲೀಲೆ ಮತ್ತು ಕಂಸವಧೆ ಕಥಾಪ‍್ರಸಂಗವನ್ನು ಪ್ರದರ್ಶಿಸಿದೆ.
ಕರವಲೆ ಭಗವತಿ ಮಂಟಪ
ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ನಗರದ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ಕೊಲ್ಲೂರು ಮೂಕಾಂಬಿಕೆ ಮಹಿಮೆ ಕಥಾಪ್ರಸಂಗವನ್ನು ಪ್ರದರ್ಶನಕ್ಕೆ ಅಣಿಗೊಳಿಸಿರುವುದು ವಿಶೇಷ.