logo
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಮಂಡ್ಯದಲ್ಲೇ 2024ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಸದ್ಯವೇ ಹೊಸ ದಿನಾಂಕ ನಿಗದಿ : ಮಹೇಶ್‌ ಜೋಷಿ

Mandya Sahitya Sammelana: ಮಂಡ್ಯದಲ್ಲೇ 2024ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಸದ್ಯವೇ ಹೊಸ ದಿನಾಂಕ ನಿಗದಿ : ಮಹೇಶ್‌ ಜೋಷಿ

HT Kannada Desk HT Kannada

Dec 18, 2023 08:47 AM IST

google News

ಸಾಹಿತ್ಯ ಸಮ್ಮೇಳನ ಆಯೋಜನೆ ಸಂಬಂಧ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್‌ ಜೋಷಿ ಮಾತನಾಡಿದರು.

    • Mandya sahitya sammalena ಬರದ ಕಾರಣದಿಂದ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿಯೇ ನಡೆಯಲಿದ್ದು. ಹೊಸ ದಿನಾಂಕ ಬಾಕಿಯಿದೆ. ಏನಿದರ ವಿವರ…
ಸಾಹಿತ್ಯ ಸಮ್ಮೇಳನ ಆಯೋಜನೆ ಸಂಬಂಧ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್‌ ಜೋಷಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನ ಆಯೋಜನೆ ಸಂಬಂಧ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್‌ ಜೋಷಿ ಮಾತನಾಡಿದರು.

ಮಂಡ್ಯ: ಮುಂದಿನ ವರ್ಷದ ಜನವರಿಗೆ ಮಂಡ್ಯದಲ್ಲಿ ನಡೆಯಬೇಕಿದ್ದ87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈಗಾಗಲೇ ಮುಂದೂಡಿಕೆಯಾಗಿದೆ. ಆದರೆ ಸ್ಥಳ ಬದಲಾವಣೆಯೇನೂ ಆಗುವುದಿಲ್ಲ. ಸಕ್ಕರೆ ನಾಡು ಮಂಡ್ಯದಲ್ಲಿಯೇ ಕನ್ನಡದ ಜಾತ್ರೆ ನಡೆಯುವುದು ಖಚಿತವಾಗಿದೆ. ಯಾವಾಗ ನಡೆಸಬೇಕು ಎನ್ನುವ ಕುರಿತು ತೀರ್ಮಾನ ಬಾಕಿಯಿದೆ.

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ 2024ರ ಜನವರಿಯಲ್ಲಿ ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿತ್ತು. ಈಗ ಮತ್ತೆ ಸಮ್ಮೇಳನ ಆಯೋಜನೆ ಕುರಿತ ಚಟುವಟಿಕೆಗಳು ಶುರುವಾಗಿದೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಷಿ ಅವರು ಮಂಡ್ಯದಲ್ಲಿ ಸಭೆ ನಡೆಸಿದರು. ಮಂಡ್ಯದಲ್ಲಿಯೇ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳಲಿದೆ. ಇದರಲ್ಲಿ ಅನುಮಾನವೇ ಬೇಡ. ಮಂಡ್ಯ ಬಿಟ್ಟು ಬೇರೆ ಕಡೆ ಆಯೋಜಿಸಲಾಗುತ್ತದೆ ಎಂಬ ಊಹಾಪೋಹಗಳಿಗೂ ಅವಕಾವಿಲ್ಲ ಎಂದು ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ಆದರೆ ಹೊಸದಾಗಿ ಯಾವಾಗ ಆಚರಿಸಬೇಕು ಎನ್ನುವ ಕುರಿತು ಚರ್ಚೆ ನಡೆಸಿದರೂ ಒಮ್ಮತದ ಅಭಿಪ್ರಾಯ ಬರಲಿಲ್ಲ. ಇನ್ನೊಮ್ಮೆ ಸಭೆ ಸೇರಿ ದಿನಾಂಕ ನಿಗದಿ ಮಾಡುವ ತೀರ್ಮಾನಕ್ಕೆ ಬರಲಾಯಿತು.

ತಿಂಗಳೊಳಗೆ ಸಮ್ಮೇಳನ ನಡೆಸಲು ಆಗುವುದಿಲ್ಲ. ಇದಕ್ಕಾಗಿ ಕನಿಷ್ಠ ಆರು ತಿಂಗಳಾದರೂ ತಯಾರಿಯಾಗಬೇಕು. ಫೆಬ್ರವರಿ-ಮಾರ್ಚ್‌ ಹೊತ್ತಿಗೆ ಪರೀಕ್ಷೆಗಳು ಶುರುವಾಗುತ್ತವೆ. ಜತೆಗೆ ಲೋಕಸಭೆ ಚುನಾವಣೆಯೂ ಏಪ್ರಿಲ್‌ನಲ್ಲಿ ಆಗಬಹುದು. ಇದರಿಂದ ಸದ್ಯ ಸಮ್ಮೇಳನ ಆಯೋಜನೆ ಕಷ್ಟ. ಇದರಿಂದ ಜೂನ್‌ ನಂತರ ಸಮ್ಮೇಳನ ಆಯೋಜನೆಗೆ ಯೋಜಿಸಬೇಕು. ಈಗಲೇ ಎಲ್ಲರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಬೇಕು ಎನ್ನುವ ಸಲಹೆ ಕೇಳಿ ಬಂದಿತು.

ಈ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ಡಾ.ಮಹೇಶ್‌ ಜೋಷಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2024ರಲ್ಲಿ ಮಂಡ್ಯದಲ್ಲೇ ನಡೆಯಲಿದೆ. ಈ ಬಗ್ಗೆ ಶೀಘ್ರದಲ್ಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಜೊತೆಗೂಡಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಮಂಡ್ಯದಲ್ಲಿ 2024ರ ಜನವರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಯೋಜಿಸಲಾಗಿತ್ತು. ಬರ ಹಾಗೂ ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡಲಾಯಿತು. ಮಂಡ್ಯದಿಂದ ಬೇರೊಂದು ಜಿಲ್ಲೆಗೆ ಸಮ್ಮೇಳನವನ್ನು ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂಡ್ಯದಲ್ಲಿಯೇ ಸಮ್ಮೇಳನ ನಡೆಯುವುದು ಖಚಿತ ಎಂದು ಸ್ಪಷ್ಟನೆ ನೀಡಿದರು.

2024ರಲ್ಲಿ ಯಾವಾಗ ಸಮ್ಮೇಳನ ನಡೆಸಬಹುದು. ಹೊಸ ದಿನಾಂಕ ಯಾವುದು ಆಗಬಹುದು. ಸಮ್ಮೇಳನದ ಸ್ವರೂಪ ಹೇಗಿದ್ದರೆ ಒಳ್ಳೆಯದು ಎಂಬ ಬಗ್ಗೆ ಸಾಹಿತ್ಯಾಭಿಮಾನಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸಲಹೆ ನೀಡಿದ್ದಾರೆ. ಈ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕಾರದ ಮುಂದೆ ಇರಿಸಿ ಹೊಸ ದಿನಾಂಕ ಘೋಷಿಸಲಾಗುವುದು ಎಂದು ಮಹೇಶ್‌ ಜೋಷಿ ತಿಳಿಸಿದರು.

ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ನೇ. ಬ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜಿ.ಟಿ ವೀರಪ್ಪ, ಮೀರಶಿವಲಿಂಗಯ್ಯ, ಕನ್ನಡ ಪರ ಸಂಘಟನೆಯ ಮುಖ್ಯಸ್ಥರಾದ ಧರಣೇಂದ್ರಯ್ಯ, ಹೊಸ್ಕೂರು ಕೃಷ್ಣೇಗೌಡ, ಎಂ.ಬಿ ರಮೇಶ್, ಬಿ.ಎಂ ಅಪ್ಪಾಜಪ್ಪ, ದರಸಗುಪ್ಪೆ ಧನಂಜಯ, ಬಿ.ಎಂ ಭಾಸ್ಕರ್, ಹೊಳಲು ಶ್ರೀಧರ್, ಮದೇವಸ್ವಾಮಿ, ಅಂಜನ ಶ್ರೀಕಾಂತ್, ಕೃಷ್ಣ ಎಲ್ .ತಾಲ್ಲೂಕು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾದ ಪ್ರಕಾಶ್ , ಪೂರ್ಣಚಂದ್ರ , ಮಂಜುನಾಥ್ , ಚಂದ್ರಲಿಂಗು , ಉಮಾಶಂಕರ್ ಚೇತನ್ ಮಳವಳ್ಳಿ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ