Mandya Crime: ಮಂಡ್ಯ ಜಿಲ್ಲೆಯಲ್ಲಿ ಹಾಡಹಗಲೇ ಶೂಟೌಟ್ : ಜಮೀನು ವಿಚಾರದಲ್ಲಿ ಅಣ್ಣನ ಮಗನನ್ನೇ ಕೊಂದ ರೌಡಿ ಶೀಟರ್
Nov 06, 2023 07:12 AM IST
ಮಂಡ್ಯ ಜಿಲ್ಲೆಯಲ್ಲಿ ಯುವಕನನ್ನು ಕೊಲೆ ಮಾಡಲಾಗಿದ್ದು. ಸ್ಥಳಕ್ಕೆ ಎಸ್ಪಿ ಯತೀಶ್ ಭೇಟಿ ನೀಡಿದ್ದರು.
- Mandya Crime News ಮಂಡ್ಯ ಜಿಲ್ಲೆಯಲ್ಲಿ ಜಮೀನು ವಿಚಾರವಾಗಿ ವಿವಾದ ತಾರಕಕ್ಕೇರಿ ಅಣ್ಣನ ಮಗನನ್ನೇ ಚಿಕ್ಕಪ್ಪ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಹಾಡ ಹಗಲೇ ಶೂಟೌಟ್ ನಡೆದು ಒಬ್ಬನನ್ನು ಹತ್ಯೆ ಮಾಡಲಾಗಿದೆ.
ನಾಗಮಂಗಲ ತಾಲ್ಲೂಕು ಹನುಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆಯಾದವನನ್ನು ಜಯಪಾಲ್(19 ) ಎಂದು ಗುರುತಿಸಲಾಗಿದೆ.
ಜಮೀನು ವಿವಾದದ ವಿಚಾರವಾಗಿ ಈತನ ಚಿಕ್ಕಪ್ಪ ಕುಮಾರ್ ಎಂಬಾತನೇ ಕೃತ್ಯ ಎಸಗಿದ್ದು, ಕೊಲೆ ಮಾಡಿ ಪರಾರಿಯಾಗಿದ್ದಾನೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಹನುಮನಹಳ್ಳಿ ಗ್ರಾಮದಲ್ಲಿ ಜಮೀನು ಒಂದರ ವಿಚಾರವಾಗಿ ವಿವಾದ ಉಂಟಾಗಿತ್ತು. ರೌಡಿಶೀಟರ್ ಆಗಿರುವ ಕುಮಾರ್ ಆಲಿಯಾಸ್ ಸೀಮೆಎಣ್ಣೆ ಕುಮಾರ ಹಾಗೂ ಇನ್ನೊಬ್ಬರ ಜತೆಗೆ ವಿವಾದ ಶುರುವಾಗಿ ಇದು ನ್ಯಾಯಾಲಯ ಮೆಟ್ಟಿಲು ಕೂಡ ಏರಿತ್ತು. ನ್ಯಾಯಾಲಯಕ್ಕೆ ಹೋಗುವ ಹಿಂದೆ ಜಯಪಾಲ್ ಕೈವಾಡವಿದೆ ಎನ್ನುವ ಅನುಮಾನ ಕುಮಾರ್ ನಲ್ಲಿತ್ತು. ಈ ಬಗ್ಗೆ ಆಗಾಗ ಜಗಳಗಳೂ ಆಗಿದ್ದವು. ಆದರೆ ಪದೇ ಪದೇ ಭೂಮಿ ವಿಚಾರದಲ್ಲಿ ಅಡ್ಡಿಪಡಿಸುತ್ತಿದ್ದ ತನ್ನ ಅಣ್ಣನ ಮಗನಾದ ಜಯಪಾಲ್‌ನ ಮೇಲೆ ಆಕ್ರೋಶವೂ ಕುಮಾರ್‌ಗೆ ಇತ್ತು.
ಇದೇ ವಿಚಾರವಾಗಿ ಭಾನುವಾರ ಗ್ರಾಮದ ದೇವಸ್ಥಾನದ ಬಳಿ ಜಯಪಾಲನನ್ನು ಕುಮಾರ್ ಕರೆಯಿಸಿಕೊಂಡಿದ್ದು, ನನ್ನ ಪಾತ್ರ ಇದರಲ್ಲಿ ಇಲ್ಲ ಎಂದು ಆಣೆ ಪ್ರಮಾಣ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜತೆಗಿದ್ದವರು ಬಿಡಿಸಲು ಹೋಗಿದ್ದಾರೆ. ಆದರೂ ಜಗಳ ನಿಂತಿಲ್ಲ. ಸಿಟ್ಟಿನಲ್ಲಿ ಕುಮಾರ್ ಅಲ್ಲಿಯೇ ಶೂಟ್ ಮಾಡಿದ್ದು ಜಯಪಾನ ಕುಸಿದು ಬಿದ್ದಿದ್ಧಾನೆ. ಕುಮಾರ್ ಅಲ್ಲಿಂದ ಪರಾರಿಯಾಗಿದ್ದು,. ಜಯಪಾಲನನ್ನು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾರ್ಗಮಧ್ಯೆಯೇ ಆತ ಮೃತಪಟ್ಟಿರುವುದನ್ನು ಆಸ್ಪತ್ರೆ ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಯತೀಶ್, ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
ಈಗಾಗಲೇ ಹಲವು ಹಲ್ಲೆ, ಗಲಾಟೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕುಮಾರ್ ವಿರುದ್ದ ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ತರೆಯಲಾಗಿದೆ. ಪೊಲೀಸರು ಕೆಲ ದಿನಗಳ ಹಿಂದೆ ಆತನಿಗೆ ಕರೆಯಿಸಿ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಚಿಸಿದ್ದರು. ಅಲ್ಲದೇ ಕುಮಾರ್ ಬಳಿ ಗನ್ ಕೂಡ ಇದ್ದು, ಇದರ ಪರವಾನಿಗೆ ಇತ್ತೆ ಇಲ್ಲವೇ, ಎಲ್ಲಿಂದ ತರಲಾಗಿತ್ತು ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ತಲೆಮರೆಸಿಕೊಂಡಿರುವ ಕುಮಾರ್ ಸೆರೆಗೆ ತಂಡಗಳನ್ನೂ ರಚಿಸಿದ್ದಾರೆ.
ಜಯಪಾಲ್ ಕೊಲೆ ಹಿನ್ನೆಲೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.ಮಗ ಶವ ನೋಡಲು ಬಂದ ತಾಯಿಯೂ ನಾಗಮಂಗಲ ಆಸ್ಪತ್ರೆ ಆವರಣದಲ್ಲಿ ಕುಸಿದು ಬಿದ್ದಿದ್ಧಾರೆ. ಕೊಲೆಯಾದವನ ತಾಯಿಗೆ ಕೆಲ ದಿನಗಳ ಹಿಂದೆಯಷ್ಟೇ ಹೃದಯ ಶಸ್ತ್ರ ಚಿಕಿತ್ಸೆಯೂ ಆಗಿದೆ ಎಂದು ಕುಟುಂಬದವರು ಹೇಳಿದರು.
ಇದನ್ನೂ ಓದಿರಿ