Mangaluru News: ವಿಟ್ಲ ದಲಿತ ಬಾಲಕಿ ಲೈಂಗಿಕ ದೌರ್ಜನ್ಯ ಪ್ರಕರಣ; ಕಠಿಣ ಕ್ರಮಕ್ಕೆ ರಮಾನಾಥ ರೈ ಒತ್ತಾಯ, ಮಂಗಳೂರು ಫೈಲ್ಸ್ ಎಂದ ಗುಂಡೂರಾವ್
Aug 02, 2023 04:49 PM IST
ಬಂಟ್ವಾಳದಲ್ಲಿ ರಮಾನಾಥ ರೈ ಸುದ್ದಿಗೋಷ್ಠಿ
Mangaluru News: ವಿಟ್ಲ ದಲಿತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದರು. ಸಚಿವ ದಿನೇಶ್ ಗುಂಡೂರಾವ್ ಈ ಪ್ರಕರಣವನ್ನು ಮಂಗಳೂರು ಫೈಲ್ಸ್ ಎಂದು ವ್ಯಾಖ್ಯಾನಿಸಿ ಟ್ವೀಟ್ ಮಾಡಿದ್ದಾರೆ.
ಮಂಗಳೂರು: ಕೆಲ ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ದೂರಿನನ್ವಯ ಐವರನ್ನು ಬಂಧಿಸಲಾಗಿದ್ದು, ಇವರು ಬೇರೆ ಬೇರೆ ಸಂದರ್ಭ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರಲಾಗಿದೆ.
ಇದೀಗ ಈ ವಿಷಯಕ್ಕೆ ಸಂಬಂಧಿಸಿ ಬಂಟ್ವಾಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮಾನಾಥ ರೈ, ಘಟನೆಯನ್ನು ಖಂಡಿಸಿದ್ದು, ಈ ಕುರಿತು ಬಿಜೆಪಿ ಪಕ್ಷದ ನಾಯಕರೂ ಪ್ರತಿಕ್ರಿಯೆ ನೀಡಬೇಕು, ದಲಿತ ಬಾಲಕಿಯ ಪರ ಧ್ವನಿ ಎತ್ತಬೇಕು ಎಂದಿದ್ದಾರೆ.
ಇದೇ ಹೊತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇದನ್ನು ಮಂಗಳೂರು ಫೈಲ್ಸ್ ಎನ್ನಬಹುದೇ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ನಿರ್ಗಮಿತ ಅಧ್ಯಕ್ಷ ಕಟೀಲ್ ಉಡುಪಿ ಪ್ರಕರಣವನ್ನು ಕೇರಳ ಫೈಲ್ಸ್‌ಗೆ ಹೋಲಿಸಿದ್ದಾರೆ. ಹಾಗಾದರೆ ಇವರದ್ದೇ ಕ್ಷೇತ್ರದ ವಿಟ್ಲದಲ್ಲಿ ನಡೆದಿರುವ ನಿರಂತರ ಅತ್ಯಾಚಾರ ಯಾವ ಫೈಲ್ಸ್? ಇದನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೆ? ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಉಡುಪಿ ಪ್ರಕರಣವನ್ನು ರಾದ್ಧಾಂತ ಮಾಡಿದ ಬಿಜೆಪಿಯವರು, ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಆರೋಪಿಗಳು ಇವರ ಸಂಘಟನೆಗೆ ಸೇರಿದವರು ಎನ್ನುವ ಕಾರಣಕ್ಕಾಗಿ ಮೌನವೇ? ಬಿಜೆಪಿಯವರ ಪ್ರಕಾರ ಅಪರಾಧಿಗಳ ಧರ್ಮದ ಆಧಾರದ ಮೇಲೆ ಆ ಪ್ರಕರಣದ ತೀವ್ರತೆ ಮತ್ತು ಗುರುತ್ವ ನಿರ್ಧಾರವಾಗುತ್ತದೆಯೇ? ಎಂದು ದಿನೇಶ್ ಗುಂಡೂರಾವ್ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಿ – ಬಂಟ್ವಾಳದಲ್ಲಿ ರೈ
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತ ಬಾಲಕಿಯೋರ್ವಳ ಮೇಲೆ ನಡೆಸಿದ ಅತ್ಯಾಚಾರ ಘಟನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಣೆಮಂಗಳೂರು ಬ್ಲಾಕ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ. ಇಂಥ ಕೃತ್ಯ ಎಸಗುವವರ ವಿರುದ್ಧ ಬಿಜೆಪಿ ನಾಯಕರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಇದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಲ್ಲರೂ ಇಂಥ ವಿಚಾರಗಳ ಕುರಿತು ಗಂಭೀರವಾಗಿ ಆಲೋಚಿಸಬೇಕು. ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಇದರಲ್ಲಿ ಭಾಗಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ತಿಳಿದುಕೊಂಡಿದ್ದು, ಇದರ ಕುರಿತು ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ನೈತಿಕ ಗೂಂಡಾಗಿರಿ ವಿರುದ್ಧ ಎಲ್ಲರೂ ಧ್ವನಿ ಎತ್ತಲಿ
ಸಮಾಜದ ರಕ್ಷಣೆ ಮಾಡಬೇಕಾದ ಪೊಲೀಸರ ಮೇಲೆಯೇ ನೈತಿಕ ಗೂಂಡಾಗಿರಿಯನ್ನು ಮಾಡಲಾಗುತ್ತಿದೆ, ಪತ್ರಕರ್ತರನ್ನೂ ಬಿಟ್ಟಿಲ್ಲ ಎಂದು ಆರೋಪಿಸಿದ ರಮಾನಾಥ ರೈ, ಇಂಥ ಘಟನೆಗಳು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿ, ಎಲ್ಲರೂ ಈ ಕುರಿತು ಧ್ವನಿ ಎತ್ತಬೇಕು, ಹೊಸ ಸರಕಾರ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾರ್ಯವಾಗುತ್ತಿದೆ ಎಂದರು.
ಮಾದಕ ದ್ರವ್ಯ ಸೇವನೆ, ಅದರ ಹಿಂದಿರುವ ಬೇರುಗಳ ವಿರುದ್ಧ ದೊಡ್ಡದೊಂದು ಅಭಿಯಾನವೇ ಆಗಬೇಕು ಎಂದು ಹೇಳಿದ ರೈ ಇಡೀ ಸಮಾಜ ಒಟ್ಟಾಗಿ ಕಾರ್ಯಪ್ರವೃತ್ತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ, ಯುವ ಕಾಂಗ್ರೆಸ್ ಮುಖಂಡರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್ ಬಡಕಬೈಲ್ ಉಪಸ್ಥಿತರಿದ್ದರು.