Mangaluru News: ಮಂಗಳೂರಿನಿಂದ ದುಬೈಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ವಿಳಂಬ; ಪ್ರಯಾಣಿಕರ ಆಕ್ರೋಶ
Jul 11, 2023 03:15 PM IST
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿಯಿಂದ 180ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಂಗಳೂರು: ಬಂದರು ನಗರಿ ಮಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ (ಜುಲೈ 10) ತಡರಾತ್ರಿ 11 ಗಂಟೆಗೆ ದುಬೈ ಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಬೆಳಿಗ್ಗೆಯಾದರೂ ಇನ್ನೂ ಹೊರಟಿಲ್ಲ.
ತಡರಾತ್ರಿ ದುಬೈಗೆ ಹೊರಡಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಇಂಜಿನ್ ಹಾಳಾಗಿದೆಯೆಂದು ಪ್ರಯಾಣಿಕರಿಗೆ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೆ, ಪ್ರಯಾಣಿಕರು ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತೆ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ರಾತ್ರಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ 180ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಏರ್ ಇಂಡಿಯಾ ಬೇಸ್‌ಗೆ ರಿಪೇರಿಗೆ ತೆರಳಿರುವ ವಿಮಾನ, ಬೆಳಗ್ಗೆ 9 ಗಂಟೆಗೆ ತಾಂತ್ರಿಕ ತೊಂದರೆ ನಿವಾರಿಸಿ ಬರಬೇಕಿತ್ತು. ಆದರೆ ವಿಮಾನವು 10 ಗಂಟೆ ದಾಟದರೂ ಬಾರದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ತ ವಿಮಾನವೂ ಇಲ್ಲ, ಇತ್ತ ಬದಲಿ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೂ ದುಬೈಗೆ ಹಾರಿದ ವಿಮಾನ
“ಜುಲೈ 10 ರಂದು ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ವಿಮಾನ ವಿಳಂಬದಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ತಾಂತ್ರಿಕ ದೋಷದಿಂದಾಗಿ, ವಿಮಾನವು 12 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಯಿತು. ಇಂದು(ಮಂಗಳವಾರ) ಮಧ್ಯಾಹ್ನ 12.10ಕ್ಕೆ ಟೇಕ್ ಆಫ್ ಆಗಿದೆ. ಸುಗಮ ಪ್ರಯಾಣಕ್ಕಾಗಿ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು” ಎಂದು ವಿಮಾನ ನಿಲ್ದಾಣದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಪರ್ಯಾಯ ವ್ಯವಸ್ಥೆ ಬೇಡ ಎಂದ ಪ್ರಯಾಣಿಕರು
“ವಿಮಾನ ವಿಳಂಬ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮಂಗಳೂರು-ತಿರುವನಂತಪುರ ಮಾರ್ಗವಾಗಿ ದುಬೈಗೆ ಸಂಪರ್ಕ ವಿಮಾನ(connecting flight) ಅಥವಾ ಹೋಟೆಲ್ ಸೌಕರ್ಯಗಳನ್ನು ನೀಡುವ ಆಯ್ಕೆ ನೀಡಲಾಯ್ತು. ಆದರೆ ಪ್ರಯಾಣಿಕರು ಬದಲಿ ವಿಮಮಾನದ ಆಗಮನಕ್ಕಾಗಿ ಕಾಯಲು ನಿರ್ಧರಿಸಿದರು. ಏರ್‌ಲೈನ್ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ಸಮಯದಲ್ಲಿ ಉಪಾಹಾರಗಳನ್ನು ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣಿಕರ ಸಹಕಾರ ಮತ್ತು ತಿಳುವಳಿಕೆಯನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ,” ಎಂದು ಏರ್‌ಲೈನ್ ತಿಳಿಸಿದೆ.