logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime News: ಬಿಜೈ ರಾಜ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ

Mangaluru Crime News: ಬಿಜೈ ರಾಜ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ

HT Kannada Desk HT Kannada

Nov 10, 2023 04:46 PM IST

google News

ಬಿಜೈ ರಾಜ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ

    • Mangaluru Crime: ರವಿ ಪೂಜಾರಿ ವಿರುದ್ಧ ದಾಖಲಾದ ಎರಡು ಪ್ರಕರಣಗಳಲ್ಲಿ ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಒಂದು ಪ್ರಕರಣದಲ್ಲಿ ಜೆಎಂಎಫ್ ಸಿ ನ್ಯಾಯಾಲಯ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ.
ಬಿಜೈ ರಾಜ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ
ಬಿಜೈ ರಾಜ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ

ಮಂಗಳೂರು: ಬಿಜೈ ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2012ರಲ್ಲಿ ಮಂಗಳೂರಿನ ಫಳ್ನೀರ್ ವೆಸ್ಟ್ ಗೇಟ್ ಟವರ್ಸ್ ಕಟ್ಟಡದ ನ್ಯಾಷನಲ್ ಮೆಡಿಕಲ್ ಸಮೀಪ ಕಾಯಿನ್ ಬೂತ್ ಬಳಿ ರವಿ ಪೂಜಾರಿ ಒಳಸಂಚು ನಡೆಸಿ ಶೈಲೇಶ್ ರಾಜ ಯಾನೆ ಬಿಜೈ ರಾಜಾ ನನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಿಸಿರುವುದಾಗಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಮಂಗಳೂರಿನ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ, ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಘಟನೆ ವೇಳೆ ರವಿ ಪೂಜಾರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2021ರಲ್ಲಿ ಆತನನ್ನ ಸೆನೆಗಲ್ ನಲ್ಲಿ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ, ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ರವಿ ಪೂಜಾರಿ ವಿರುದ್ಧ ದಾಖಲಾದ ಎರಡು ಪ್ರಕರಣಗಳಲ್ಲಿ ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಒಂದು ಪ್ರಕರಣದಲ್ಲಿ ಜೆಎಂಎಫ್ ಸಿ ನ್ಯಾಯಾಲಯ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ. ಬಿಜೈ ರಾಜಾ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೃಆದ ಮಲ್ಲಿಕಾರ್ಜುನಸ್ವಾಮಿ, ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ರವಿ ಪೂಜಾರಿ ಪರವಾಗಿ ಮಂಗಳೂರಿನ ವಕೀಲರಾದ ಅರುಣ್ ಬಂಗೇರ, ರಿಹಾನಾ ಪರ್ವೀನ್ ವಾದಿಸಿದ್ದರು.

ಮಂಗಳೂರು ಏರ್ ಪೋರ್ಟ್ ನಲ್ಲಿ ಅಕ್ರಮ ಸಾಗಾಟ: 42.9 ಲಕ್ಷ ರೂ ಮೌಲ್ಯದ ಚಿನ್ನ ಸೀಝ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ ಚಿನ್ನವನ್ನು ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು. 42.9 ಲಕ್ಷ ರೂ ಮೌಲ್ಯದ ಸೊತ್ತನ್ನು ಸೀಝ್ ಮಾಡಿದ್ದಾರೆ. ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಆಗಮಿಸಿ, ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಟ್ರಾಲಿ ಬ್ಯಾಗಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತ, ಪುಡಿ ರೂಪದ 24 ಕ್ಯಾರೆಟ್ ನ ಚಿನ್ನವನ್ನು ಹಳದಿ ಬಣ್ಣದ ಪುಡಿ ಮಿಶ್ರ ಮಾಡಿ, ಪ್ಯಾಕೆಟ್ ನಲ್ಲಿರಿಸಿ, ಟಿಫಾನಿ ಎಕ್ಲೇರ್ಸ್ ಎಂಬ ಚಾಕೊಲೇಟ್ ಕವರ್ ನೊಳಗೆ ಬಚ್ಚಿಟ್ಟುಕೊಂಡಿದ್ದ. ಅದನ್ನು ಸಾಗಿಸುತ್ತಿದ್ದ ಈತನನ್ನು ಕಸ್ಟಮ್ಸ್ಅಧಿಕಾರಿಗಳು, 420 ಗ್ರಾಂ ತೂಕದ 25,49,400 ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಫ್ಲೈಟ್ ನಿಂದ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡುಬಂದಿದ್ದು, ಅವರನ್ನು ವಿಚಾರಿಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ, ಡಬ್ಬಲ್ ಲೇಯರ್ಡ್ ಒಳಉಡುಪು, ಸಾಕ್ಸ್ ಹಾಗೂ ಪ್ಯಾಂಟ್ ನ ಲೂಪ್ ಒಳಗೆ ಅಡಗಿಸಿ ಸಾಗಿಸುತ್ತಿದ್ದರು. ಅಲ್ಲದೆ ಸಾಕ್ಸ್ ಒಳಗೆ ಬಚ್ಚಿಟ್ಟು ಒಂದು ಚಿನ್ನದ ಸರವನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇವರಿಂದ 288 ಗ್ರಾಂ ತೂಕದ 17,40,660 ರೂ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

(ವರದಿ: ಹರೀಶ ಮಾಂಬಾಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ