logo
ಕನ್ನಡ ಸುದ್ದಿ  /  ಕರ್ನಾಟಕ  /  ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ; ಕರಾವಳಿ ಕೃಷಿಕರಿಗೆ ಮಿಶ್ರಫಲ

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ; ಕರಾವಳಿ ಕೃಷಿಕರಿಗೆ ಮಿಶ್ರಫಲ

Umesh Kumar S HT Kannada

Mar 27, 2024 03:51 PM IST

google News

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ (ಸಾಂಕೇತಿಕ ಚಿತ್ರ)

  • ರೋಬಸ್ಟಾ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆಯಾಗಿರುವುದು ಒಂದೆಡೆ, ಅಡಕೆ ಬೆಲೆಯಲ್ಲಿ ಚೇತರಿಕೆ ಕಂಡಿರುವುದು ವಾಣಿಜ್ಯ ಬೆಳೆಗಾರರ ಮುಖದಲ್ಲಿ ನಗು ಕಾಣುವಂತೆ ಮಾಡಿದೆ. ಈ ಕುರಿತು ಒಂದು ಅವಲೋಕನ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ (ಸಾಂಕೇತಿಕ ಚಿತ್ರ)
ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ (ಸಾಂಕೇತಿಕ ಚಿತ್ರ)

ಮಂಗಳೂರು: ಸಾಮಾನ್ಯವಾಗಿ ಕರಾವಳಿಯ ಕೃಷಿಕರು ವಾಣಿಜ್ಯ ಬೆಳೆಯಾದ ಅಡಕೆಗೆ ಪ್ರಥಮ ಪ್ರಾಶಸ್ತ್ಯ ನೀಡಿ, ಉಳಿದ ಜಾಗದಲ್ಲಿ ಇತರ ಬೆಳೆ ಬೆಳೆಯುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಿಶ್ರಬೆಳೆಗೂ ಆದ್ಯತೆ ನೀಡುತ್ತಿರುವ ಪರಿಣಾಮ, ಅಂಥ ಕೃಷಿಕರ ಮೊಗದಲ್ಲೀಗ ಮಂದಹಾಸ. ಕಾರಣ, ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿ ಕೆ.ಜಿ.ಗೆ 200 ರೂ. ದಾಟಿದೆ. ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಏರಿದ್ದು, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ. ಒಣ ಕೊಕ್ಕೊಗೆ ಕೆ.ಜಿ. ಗೆ 500-575 ರೂ. ಇದ್ದದ್ದು, 575-650 ರೂ. ಆಗಿದೆ. ಕೆ.ಜಿ.ಗೆ 75 ರೂ.ನಷ್ಟು ಏರಿಕೆ ಕಂಡಿರುವುದು ಇಲ್ಲಿ ಉಲ್ಲೇಖನೀಯ.

ಕೊಕ್ಕೊ ಉತ್ತಮ ಮಿಶ್ರಬೆಳೆ. ಆದರೆ ಹಲವು ವರ್ಷಗಳಿಂದ ಅಡಕೆ ಜೊತೆಯಾಗಿ ಕೊಕ್ಕೊ ಬೆಳೆಯುತ್ತಿದ್ದರೂ ಅಡಕೆಗೆ ಧರ ಏರಿದಾಗಲೂ ಕೊಕ್ಕೊ 60ರೂ ಆಸುಪಾಸಿನಲ್ಲೇ ಇತ್ತು. ಇದರಿಂದ ನಿಧಾನವಾಗಿ ಕೃಷಿಕರು ಕೊಕ್ಕೊವನ್ನು ಬದಿಗೆ ಸರಿಸಿ, ಅಡಕೆಯತ್ತ ಮನ ಮಾಡಿದರು. ಪರಿಣಾಮ, ಕಂಡಕಂಡಲ್ಲೆಲ್ಲಾ ಅಡಕೆ ಸಸಿಗಳು ಕಾಣಿಸುತ್ತಿದ್ದರೆ, ಉಳಿದೆಲ್ಲಾ ಗಿಡಗಳು ಗೌಣವಾಗುತ್ತಿವೆ. ಇಂಥ ಹೊತ್ತಿನಲ್ಲೇ ಕೊಕ್ಕೊ ಧಾರಣೆ ಏರುಹಾದಿ ಕಾಣಿಸುತ್ತಿದೆ.

ಹೊಸ ಅಡಕೆ ಧಾರಣೆ ಹೆಚ್ಚಳ: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಸಿಂಗಲ್‌ಚೋಲ್‌, ಡಬ್ಬಲ್‌ ಚೋಲ್‌ ಧಾರಣೆ ಸ್ಥಿರವಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 345-365 ರೂ. ದಾಖಲಾಗಿದೆ. ಹೊರ ಮಾರು ಕಟ್ಟೆ ಯಲ್ಲಿ 370 ರೂ. ತನಕವೂ ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಸಿಂಗಲ್‌ ಚೋಲ್‌ ಕೆ.ಜಿ.ಗೆ 420-435 ರೂ., ಡಬ್ಬಲ್‌ ಚೋಲ್‌ ಕೆ.ಜಿ.ಗೆ 435-445 ರೂ. ಇದ್ದು, ಧಾರಣೆ ಸ್ಥಿರವಾಗಿತ್ತು. ಕೆಲ ತಿಂಗಳುಗಳಿಂದ ಅಡಕೆ ಧಾರಣೆ ಇಳಿಹಾದಿಯಲ್ಲಿದ್ದರೂ ಇದೀಗ ಕೊಂಚ ಏರುತ್ತಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ಕೃಷಿಕರೆಲ್ಲಾ ಅಡಕೆಯತ್ತ ದೃಷ್ಟಿ ಹರಿಸಿದ್ದು, ಅಡಕೆ ಬೆಳೆ ಜಾಸ್ತಿಯಾದದ್ದು ಹಾಗೂ ಆಮದು ಅಡಕೆ ಧಾರಣೆಯ ಇಂದಿನ ವೈಪರೀತ್ಯಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇಳಿಹಾದಿಯಲ್ಲಿ ಗೇರು ಬೀಜದ ದರ

ಒಂದು ಕಾಲದಲ್ಲಿ ಸೀಸನ್ ನಲ್ಲಿ ಕೆ.ಜಿ.ಗೆ 120 ರೂವರೆಗೆ ಇದ್ದ ಗೇರು ಈಗ 95 ರೂಗೆ ಇಳಿದಿದೆ. ಹವಾಮಾನ ವೈಪರೀತ್ಯದಿಂದ ಗೇರು ಹೂವಿನ ಮೊಗ್ಗು ಕರಗುವುದರಿಂದ ಉತ್ಪಾದನೆಯೂ ಕಡಿಮೆಯಾಗಿದೆ. ಈ ವರ್ಷಾರಂಭದಲ್ಲಿ ಕೆ.ಜಿ.ಗೆ 100 ರೂ ಇದ್ದ ಗೇರುದರ, ಇದೀಗ 90 ರೂಗೆ ಇಳಿಕೆಯಾಗಿದೆ. ಕಳೆದ ವರ್ಷ ಕೇರಳದಲ್ಲಿ ಬೆಂಬಲ ಬೆಲೆಯೊಂದಿಗೆ ಬೀಜ ಖರೀದಿಯಾಗಿತ್ತು. ಈ ವರ್ಷವೂ ಡಿಸೆಂಬರ್‌, ಜನವರಿ ತಿಂಗಳಲ್ಲಿ ಅಕಾಲಿಕ ಮೋಡ ಕವಿದು ಮಳೆಯಾಗಿತ್ತು.

ಗೇರು ಹೂ ಬಿಡುವ ಸಂದರ್ಭದಲ್ಲಿ ಮೋಡ ಮತ್ತು ಮಳೆಯಾದರೆ ಫಸಲು ಬರುವುದಿಲ್ಲ. ಒಳ್ಳೆಯ ಚಳಿ ಹಾಗೂ ಬಿಸಿಲು ಇದ್ದರೆ ಉತ್ತಮ ಫಸಲು ಬರುತ್ತದೆ. ಈ ವರ್ಷವೂ ಬೆಳೆ ಕಡಿಮೆಯಾಗಿದೆ. ವರ್ಷದ ಆದಾಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆರಾಜ್ಯದಲ್ಲಿ 53 ಸಾವಿರ ಟನ್‌ ಗೇರು ಫಸಲು ಬರುತ್ತಿದೆ. ಮಂಗಳೂರು ವಿಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,130 ಹೆಕ್ಟೇರ್‌, ಉಡುಪಿ ಜಿಲ್ಲೆಯಲ್ಲಿ 7,403, ಶಿವಮೊಗ್ಗದಲ್ಲಿ 2,064 ಸೇರಿದಂತೆ 18,597 ಹೆಕ್ಟೇರ್‌, ಕುಮಟಾ ವಿಭಾಗದ ಉತ್ತರ ಕನ್ನಡ ಜಿಲ್ಲೆಯಲ್ಲಿ 7,032 ಹೆಕ್ಟೇರ್‌ ಸೇರಿದಂತೆ ಒಟ್ಟು 25,629 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಬೆಳೆಸಲಾಗುತ್ತಿದೆ. ಆದರೂ ಗೇರು ಬೆಲೆ ಇಳಿಹಾದಿಯಲ್ಲಿರುವುದು ಕೃಷಿಕರನ್ನು ಕಂಗಾಲಾಗಿಸಿದೆ.

ರೋಬಸ್ಟಾ ಕಾಫಿ ಬೀಜ ಬೆಲೆ ಏರಿಕೆ

ವಯನಾಡ್ ಮಾರುಕಟ್ಟೆಯಲ್ಲಿ ಶನಿವಾರದಂದು ಕಚ್ಚಾ ರೋಬಸ್ಟಾ ಕಾಫಿ ಹಣ್ಣುಗಳ ಫಾರ್ಮ್‌ಗೇಟ್ ಬೆಲೆ ಪ್ರತಿ ಕಿಲೋಗ್ರಾಂಗೆ (ಕೆಜಿ) ದಾಖಲೆಯ 172 ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ 115 ರೂಪಾಯಿ ಇತ್ತು. ಏತನ್ಮಧ್ಯೆ, ರೋಬಸ್ಟಾ ಕಾಫಿ ಬೀಜಗಳ ಸ್ಪಾಟ್ ಬೆಲೆಯು 2023 ರಲ್ಲಿ ಅದೇ ಅವಧಿಯಲ್ಲಿ 210 ರೂಪಾಯಿಯಿಂದ ಕೆಜಿಗೆ 315 ರೂಪಾಯಿಯಷ್ಟಿತ್ತು. ಮಾರ್ಚ್ 2022 ರಲ್ಲಿ ಕಚ್ಚಾ ಹಣ್ಣುಗಳು ಮತ್ತು ಬೀನ್ಸ್‌ಗೆ ಕ್ರಮವಾಗಿ 80 ರೂಪಾಯಿ ಮತ್ತು 145 ರೂಪಾಯಿಯಷ್ಟಿತ್ತು.

ಅರೇಬಿಕಾ ಬೀಜಗಳ ಬೆಲೆ ರೋಬಸ್ಟಾ ಬೆಲೆಗಿಂತ ಕಡಿಮೆಯಾಗಿದೆ. ಅರೇಬಿಕಾ ತಳಿಯ ಕಾಫಿಯ ಫಾರ್ಮ್‌ಗೇಟ್ ಬೆಲೆ ಶನಿವಾರ ಕೆಜಿಗೆ 305 ರೂಪಾಯಿ ಇತ್ತು. ಸಾಂಪ್ರದಾಯಿಕವಾಗಿ ಅರೇಬಿಕಾ ವೈವಿಧ್ಯವು ಪ್ರೀಮಿಯಂ ಬೆಲೆಯನ್ನು ಪಡೆಯುತ್ತಿದ್ದರೂ, ಕಡಿಮೆ ಲಭ್ಯತೆಯಿಂದಾಗಿ ಈಗ ರೋಬಸ್ಟಾ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ