ಆಧಾರ್ ನವೀಕರಣ ಯಾಕೆ ಬೇಕು, ಅಪ್ಡೇಟ್ ಆಗದೆ ಇದ್ದರೆ ತೊಂದರೆಯಾಗುತ್ತದೆಯೇ: ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ ಅಭಿಯಾನ
Oct 07, 2024 01:32 PM IST
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಆಧಾರ್ ಸೇವಾ ಕೇಂದ್ರ ಜಿಲ್ಲೆಯ ಹಲವೆಡೆ ಸ್ಥಳೀಯ ಪಂಚಾಯಿತಿ, ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆದು ಅಭಿಯಾನವನ್ನು ಮಾಡುತ್ತಿದೆ.
ಆಧಾರ್ ಸೇವೆ ಮಾನ್ಯತೆ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಆಧಾರ್ ಸೇವಾ ಕೇಂದ್ರ ಜಿಲ್ಲೆಯ ಹಲವೆಡೆ ಸ್ಥಳೀಯ ಪಂಚಾಯಿತಿ, ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆದು ಅಭಿಯಾನವನ್ನು ಮಾಡುತ್ತಿದೆ. ನಿಗದಿಪಡಿಸಿದ ಶುಲ್ಕದೊಂದಿಗೆ ಹಳ್ಳಿಗಳಲ್ಲಿ ಈ ಕ್ಯಾಂಪ್‌ಗಳನ್ನು ನಡೆಸುತ್ತಿರುವ ಕಾರಣ ಇದು ಸಹಕಾರಿಯೂ ಆಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಡಿ) ವತಿಯಿಂದ ಒದಗಿಸಲಾಗುವ ಆಧಾರ್ ಇಂದು ಭಾರತೀಯರ ಬದುಕಿನ ಭಾಗವಾಗಿದೆ. ಪ್ರತಿಯೊಬ್ಬರೂ ಆಧಾರ್ ಹೊಂದಿದ್ದರೂ ಅದರಲ್ಲಿ ತಪ್ಪುಗಳು ನುಸುಳುವುದು, ಮೊಬೈಲ್ ನಂಬರ್ ಅಪ್ಡೇಟ್ ಆಗದೆ ಇರುವುದು ಸಹಿತ ಹಲವು ತೊಂದರೆಗಳಿಂದಾಗಿ ಸರಕಾರದಿಂದ ದೊರಕುವ ಸೌಲಭ್ಯಗಳಿಂದ ತೊಡಗಿ, ಆಸ್ಪತ್ರೆಗೆ ದಾಖಲಾದಾಗ ಸಿಗುವ ರಿಯಾಯಿತಿಗಳಿಗೂ ತೊಡಕಾಗುವುದುಂಟು.
ಅಲ್ಲದೆ, ಹತ್ತು ವರ್ಷಗಳ ಕಾಲ ಯಾವುದೇ ಅಪ್‍ಡೇಟ್ ಮಾಡದೆ ಇದ್ದರೆ, ಸಾಧ್ಯವಾದರೆ ಆನ್ಲೈನ್‌ನಲ್ಲಿ ಆಗದೇ ಇದ್ದರೆ, ಸಮೀಪದ ಆಧಾರ್ ಕೇಂದ್ರದಲ್ಲಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು ಎಂದು ಯುಐಡಿಎಡಿ ಹೇಳಿದೆ. ಹೀಗಾಗಿ ಆಧಾರ್ ಸೇವೆ ಮಾನ್ಯತೆ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಆಧಾರ್ ಸೇವಾ ಕೇಂದ್ರ ಜಿಲ್ಲೆಯ ಹಲವೆಡೆ ಸ್ಥಳೀಯ ಪಂಚಾಯಿತಿ, ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆದು ಅಭಿಯಾನವನ್ನು ಮಾಡುತ್ತಿದೆ. ನಿಗದಿಪಡಿಸಿದ ಶುಲ್ಕದೊಂದಿಗೆ ಹಳ್ಳಿಗಳಲ್ಲಿ ಈ ಕ್ಯಾಂಪ್‌ಗಳನ್ನು ನಡೆಸುತ್ತಿರುವ ಕಾರಣ ಇದು ಸಹಕಾರಿಯೂ ಆಗಿದೆ.
ಹೊಸ ಆಧಾರ್ ಕಾರ್ಡ್‌ಗೆ ಏನು ಬೇಕು?
ಮಗುವಿನ ಹೊಸ ಆಧಾರ್ ಕಾರ್ಡ್ ಮಾಡಬೇಕು ಎಂದಿದ್ದರೆ, ಜನನ ಪ್ರಮಾಣ ಪತ್ರದ ಮೂಲಪ್ರತಿ, ತಂದೆ-ತಾಯಿಯ ಆಧಾರ್ ಕಾರ್ಡ್ ಅಗತ್ಯ. ಮಗುವಿನೊಂದಿಗೆ ತಂದೆ ಅಥವಾ ತಾಯಿ ಬರಬೇಕಾಗುತ್ತದೆ.
ಬಯೋಮೆಟ್ರಿಕ್ ಹಾಗೂ ಇತರ ತಿದ್ದುಪಡಿ
5 ವರ್ಷಕ್ಕೆ ಮೇಲ್ಪಟ್ಟ ಹಾಗೂ 15 ವರ್ಷಕ್ಕೆ ಮೇಲ್ಪಟ್ಟವರು ಕಡ್ಡಾಯವಾಗಿ ಬಯೋಮೆಟ್ರಿಕ್ ತಿದ್ದುಪಡಿ ಮಾಡಬೇಕು. ಒಂದು ವೇಳೆ ವಿಳಾಸವನ್ನು ತಿದ್ದುಪಡಿ ಮಾಡುವುದಿದ್ದರೂ ಸೂಕ್ತ ದಾಖಲೆಗಳನ್ನು ನೀಡಿ ಮಾಡಬಹುದು. ಹಾಗೆಯೇ ಹತ್ತು ವರ್ಷಗಳ ಕಾಲ ಆಧಾರ್ ನವೀಕರಣವನ್ನು ಮಾಡದೇ ಇದ್ದ ಪಕ್ಷದಲ್ಲಿ ಬಯೋಮೆಟ್ರಿಕ್ ಅಪ್ಡೇಟ್ ಮಾಡುವುದು ಒಳಿತು. ಕಾರಣ, ಎಲ್ಲ ಸರಕಾರಿ ಯೋಜನೆಯನ್ನು ಪಡೆಯಲು ಅಪ್ಡೇಟ್ ಮಾಡಿದ ಕಾರ್ಡ್ ಹೊಂದಿರಬೇಕಾಗುತ್ತದೆ. ಹಾಗೆಯೇ ತಂದೆ-ತಾಯಿ, ಪತಿಯ ಹೆಸರು, ಜನ್ಮದಿನಾಂಕ, ವಿಳಾಸ ತಿದ್ದುಪಡಿ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ತಿದ್ದುಪಡಿ, ಸೇರ್ಪಡೆಯನ್ನು ಸೂಕ್ತ ದಾಖಲೆ ನೀಡಿ ಮಾಡುವ ಅವಕಾಶ ಇರುತ್ತದೆ.
ನವೀಕರಿಸಿದ ಆಧಾರ್ ಪ್ರಮುಖ ಪ್ರಯೋಜನಗಳೇನು?
ಬ್ಯಾಂಕ್ ಖಾತೆ ತೆರೆಯುವುದು ಇದರಿಂದ ಸುಲಭ. ಕಿರಿಕಿರಿ ಇರುವುದಿಲ್ಲ. ದೇಶದ ಯಾವುದೇ ಭಾಗದಲ್ಲಾದರೂ ಪಡಿತರ ಪಡೆಯಲು, ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ವಯ ಸಾಧ್ಯ. ಸರಕಾರಿ, ಯೋಜನೆ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಸುಲಭ. ವಿವಿಧ ವಿದ್ಯಾರ್ಥಿವೇತನ, ಕಾರ್ಯಕ್ರಮಗಳಿಗೆ ಇದು ಅಗತ್ಯ. ಬ್ಯಾಂಕ್‌ಗಳು ಹೆಚ್ಚು ವೇಗವಾಗಿ ಸಾಲದ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸಲು ಸುಲಭವಾಗುತ್ತದೆ. ಐಟಿ ರಿಟರ್ನ್ಸ್‌ಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ.
ಫೋನ್ ನಂಬರ್ ತಪ್ಪದೇ ಅಪ್ಡೇಟ್ ಮಾಡಿ
ಈ ಕುರಿತು ಮಾತನಾಡಿದ ಆಧಾರ್ ಸೇವಾ ಕೇಂದ್ರದ ಮೆನೇಜರ್ ಶೀತಲ್, ಜನಸಾಮಾನ್ಯರು ಆಧಾರ್‌ಗೆ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಮರೆತಿರುತ್ತಾರೆ. ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿದ್ದ ರೋಗಿಯ ಸಂಬಂಧಿಕರು ಸೌಲಭ್ಯಗಳನ್ನು ಪಡೆಯಲು ಆಧಾರ್‌ನ ದೂರವಾಣಿ ಅಪ್ಡೇಟ್ ಮಾಡಿಲ್ಲದ ಕಾರಣ, ಮಾಡಿಸಿಕೊಡಬಹುದೇ ಎಂಬ ಕರೆಗಳು ನಮಗೆ ಬರುತ್ತವೆ. ಅಂಥ ಸನ್ನಿವೇಶ ಬಾರದೇ ಇರುವಂತೆ ಆಧಾರ್ ಹೊಂದಿದವರು ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಿಕೊಂಡು ಇಟ್ಟಿರುವುದು ಇಂಥ ಸಂದರ್ಭ ಅನುಕೂಲಕರವಾಗುತ್ತದೆ. ಈ ಕುರಿತು ಜನಜಾಗೃತಿಯೂ ಅವಶ್ಯ ಎಂದರು.
ಮಂಗಳೂರು ಅಲ್ಲದೆ, ಪುತ್ತೂರು ತಾಲೂಕು ಕಚೇರಿ ಹಾಗೂ ಉಳ್ಳಾಲ ನಗರಸಭೆಯಲ್ಲಿ ನಮ್ಮ ಮಂಗಳೂರು ಆಧಾರ್ ಸೇವಾ ಕೇಂದ್ರದ ಸೇವೆ ನಿತ್ಯವೂ ಇದೆ. ಅಲ್ಲದೆ ಎರಡು ತಂಡಗಳಾಗಿ ಜಿಲ್ಲೆಯ ಹಲವೆಡೆ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ನಾವು ಕ್ಯಾಂಪ್‌ಗಳನ್ನು ಮಾಡುತ್ತೇವೆ. ದಿನವೊಂದಕ್ಕೆ ಸರಾಸರಿ ಮುನ್ನೂರರಷ್ಟು ಮಂದಿ ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಶೀತಲ್ ಹೇಳಿದರು.
ಸಾಮಾಜಿಕ ಕಳಕಳಿಯ ಭಾಗವಾಗಿ ಹಿದಾಯ ಫೌಂಡೇಶನ್ ಸಹಕಾರದೊಂದಿಗೆ ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಸಹಕಾರದಲ್ಲಿ ಹಲವೆಡೆ ಆಧಾರ್ ಶಿಬಿರವನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಸರಕಾರಿ ಸೌಲಭ್ಯ ಪಡೆಯಲು ಆಧಾರ್ ಅಪ್ಡೇಟ್ ಆಗಿದ್ದರೆ ಒಳ್ಳೆಯದು ಎಂಬ ದೃಷ್ಟಿಯಿಂದ ನಾವು ಆಯೋಜನೆಯಲ್ಲಿ ನೆರವು ನೀಡುತ್ತಿದ್ದೇವೆ ಎಂದು ಹಿದಾಯ ಫೌಂಡೇಶನ್ ಯುವ ಘಟಕ ಉಪಾಧ್ಯಕ್ಷ ಆಶಿಕ್ ಕುಕ್ಕಾಜೆ ಹೇಳಿದ್ದಾರೆ.