ಕರ್ನಾಟಕ ದೇವಸ್ಥಾನಗಳ ಆದಾಯ; ಕುಕ್ಕೆ ಸುಬ್ರಹ್ಮಣ್ಯ ನಂ 1, ನಂತರದ ಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ ದೇಗುಲ
Apr 07, 2024 02:13 PM IST
ಕರ್ನಾಟಕ ದೇವಸ್ಥಾನಗಳ ಆದಾಯ; ಕುಕ್ಕೆ ಸುಬ್ರಹ್ಮಣ್ಯ ನಂ 1 ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ ದೇಗುಲಗಳ ಆದಾಯ ಕಂಡುಬಂದಿದೆ.
ಕರ್ನಾಟಕ ದೇವಸ್ಥಾನಗಳ ಆದಾಯ ವಿವರ ಪ್ರಕಟವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ನಂ 1 ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆ, ನಂಜನಗೂಡು ಶ್ರೀಕಂಠೇಶ್ವರ ದೇಗುಲಗಳ ಆದಾಯ ಇದೆ. ಕರ್ನಾಟಕದ ದೇವಸ್ಥಾನಗಳ ಆದಾಯದ ಆಯ್ದ ವಿವರ ಇಲ್ಲಿದೆ. (ವರದಿ - ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಆದಾಯ ದೃಷ್ಟಿಯಲ್ಲಿ ಕರ್ನಾಟಕದಲ್ಲೇ ನಂಬರ್ 1. ಇದರ ಬೆನ್ನಿಗೇ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವಿದ್ದರೆ, ಮೂರನೇ ಸ್ಥಾನ ನಂಜನಗೂಡು ದೇವಸ್ಥಾನಕ್ಕಿದೆ.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023ರ ಏಪ್ರಿಲ್ ತಿಂಗಳಿಂದ 2024ರ ಮಾರ್ಚ್ 31ರವರೆಗಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ ಆದಾಯ ಗಳಿಸಿದೆ. ಈ ಮೂಲಕ ಸತತ 13ನೇ ವರ್ಷದಲ್ಲಿ ರಾಜ್ಯದ ನಂಬರ್ ಒನ್ ದೇವಸ್ಥಾನವಾಗಿ ಕುಕ್ಕೆ ಸುಬ್ರಹ್ಮಣ್ಯ ತನ್ನ ಸ್ಥಾನವನ್ನು ಮುಂದುವರಿಸಿದೆ. ಕಳೆದ ವರ್ಷ ಈ ದೇವಸ್ಥಾನಕ್ಕೆ 123 ಕೋಟಿ ರೂ ಆದಾಯ ಲಭಿಸಿತ್ತು. ಈ ವರ್ಷ ಭಕ್ತರ ಪ್ರವಾಹವೂ ಜಾಸ್ತಿ ಇದ್ದು, ದೇವಸ್ಥಾನದ ಆದಾಯವೂ ಹೆಚ್ಚಾಗಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೊದಲ ಸ್ಥಾನ ಗಳಿಸಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ 68.23 ಕೋಟಿ ರೂ ಆದಾಯ ಗಳಿಸಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಕೊಲ್ಲೂರು ದೇವಸ್ಥಾನಕ್ಕೆ 59.47 ಕೋಟಿ ರೂ ಆದಾಯ ದೊರಕಿತ್ತು.
ಯಾವ ದೇವಸ್ಥಾನಕ್ಕೆ ಎಷ್ಟು ಆದಾಯ
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾ 30.73 ಕೋಟಿ ರೂ
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 25.8 ಕೋಟಿ ರೂ
ಮಂದಾರ್ತಿ (ಉಡುಪಿ ಜಿಲ್ಲೆ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 15.27 ಕೋಟಿ ರೂ
ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ 16.29 ಕೋಟಿ ರೂ
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ 13.65 ಕೋಟಿ ರೂ
ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ 11.37 ಕೋಟಿ ರೂ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಲೆಕ್ಕಾಚಾರ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2008-09ನೇ ವರ್ಷದಲ್ಲೇ 31 ಕೋಟಿ ರೂ ಆದಾಯವಿತ್ತು. ನಂತರದ ವರ್ಷಗಳಲ್ಲಿ 38.5 ಕೋಟಿ, 56.24 ಕೋಟಿ, 66.76 ಕೋಟಿ, 68 ಕೋಟಿ, 77.6 ಕೋಟಿ, 88.83 ಕೋಟಿ, 89.65 ಕೋಟಿ,95.92 ಕೋಟಿ, 92.09 ಕೋಟಿ, 98.92 ಕೋಟಿ, 68.94 ಕೋಟಿ, 72.73 ಕೋಟಿ ರೂ ಆದಾಯ ಲಭಿಸಿತ್ತು. ಕೊರೊನಾ ಸಂದರ್ಭ ಆದಾಯ ಇಳಿಕೆಯಾದದ್ದು ಹೊರತುಪಡಿಸಿದರೆ, ಬಹುತೇಕ ಎಲ್ಲ ವರ್ಷಗಳಲ್ಲೂ ಆದಾಯ ಜಾಸ್ತಿಯೇ ಇತ್ತು. 2006-07ರಲ್ಲಿ ಈ ದೇವಸ್ಥಾನದ ಆದಾಯ 19.76 ಕೋಟಿ ಇತ್ತು. 2007-08ರಲ್ಲಿ 24.44 ಕೋಟಿ ರೂಗಳಾದವು. ಆಗ ರಾಜ್ಯದ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿಗೆ ಪಾತ್ರವಾಯಿತು. ದೇವಸ್ಥಾನಕ್ಕೆ ಸ್ಥಳೀಯ ಆದಾಯಗಳಿಂದಲ್ಲದೆ, ಕಾಣಿಕೆ ಹುಂಡಿ, ಹರಕೆ ಸೇವೆ, ಅನುದಾನ, ಶಾಶ್ವತ ಸೇವೆಗಳಿಂದ ಆದಾಯ ಲಭಿಸುತ್ತಿದೆ.
ಸೆಲೆಬ್ರಿಟಿಗಳೂ, ಸಾಮಾನ್ಯರೂ ಬರ್ತಾರೆ
ದಕ್ಷಿಣ ಕನ್ನಡ ಜಿಲ್ಲೆಯ ಈ ದೇವಸ್ಥಾನಕ್ಕೆ ಸ್ಟಾರ್ ಗಳೂ ಬರ್ತಾರೆ, ಸಾಮಾನ್ಯರೂ ಬರ್ತಾರೆ. ಪ್ರತಿದಿನವೂ ಇಲ್ಲಿ ರಶ್ ಇರುತ್ತದೆ. ಕ್ರಿಕೆಟ್ ಕಲಿಗಳಾದ ಸಚಿನ್ ತೆಂಡುಲ್ಕರ್, ಬಾಲಿವುಡ್, ಸ್ಯಾಂಡಲ್ ವುಡ್ ಸಿನಿಮಾನಟರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಸುಬ್ರಹ್ಮಣ್ಯನ ಸನ್ನಿಧಿಗೆ ಬಾರದ ರಾಜಕಾರಣಿಗಳು ಇಲ್ಲ. ರಾಜ್ಯದ ಬಹುತೇಕ ಎಲ್ಲಾ ರಾಜಕಾರಣಿಗಳೂ ಈ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ವಿಶೇಷವಾಗಿ ತಮಿಳುನಾಡಿನ ಭಕ್ತರು ಇಲ್ಲಿಗೆ ಬರುವುದುಂಟು. ಇತ್ತೀಚೆಗೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದ ಭಕ್ತರ ದಂಡು ಹರಿದು ಬರುತ್ತಿದೆ ಸುಬ್ರಹ್ಮಣ್ಯ ದೇವರ ಮೇಲಿನ ವಿಶೇಷ ಅಭಿಮಾನ, ಭಕ್ತಿ, ಗೌರವದಿಂದ ಹರಿಕೆ ಸಂದಾಯ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಹಾಗೆಯೇ ಇಲ್ಲಿನ ಆಶ್ಲೇಷ ಬಲಿ ಸೇವೆ ಪ್ರಸಿದ್ಧ.
ಓನ್ ಲೈನ್ ಸೇವೆಗಳೂ ಜಾಸ್ತಿ
2023-24ನೇ ವಿತ್ತೀಯ ವರ್ಷ ಮಾರ್ಚ್ 31ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆದಾಯ 146.01 ಕೋಟಿ ರೂಪಾಯಿಗಳಾಗಿದೆ. ಕಳೆದ ವರುಷ ಅಂದರೆ 2022-23ಕ್ಕೆ 123.46 ಕೋಟಿ ರೂಪಾಯಿಗಳ ಆದಾಯದೊಂದಿಗೆ ಪ್ರಪ್ರಥಮ ಬಾರಿಗೆ 100 ಕೋಟಿಯ ಗಾಡಿಯನ್ನು ದಾಟಿತು. ದೇವಾಲಯದ ಬೇಡಿಕೆಯ ಪೂಜೆಗಳನ್ನು (ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಭಿಷೇಕವನ್ನು) ಪೂರ್ತಿಯಾಗಿ ಸರಕಾರದ ಅಂಗಸಂಸ್ಥೆಯಾದ ಎನ್‌ಐಸಿಯ ಅಡಿಯಲ್ಲಿ ಬರುವಂತೆ ಆನ್‌ಲೈನ್ ಸೇವೆ ಒದಗಿಸಲಾಯಿತು ಮತ್ತು ಈ-ಹುಂಡಿಯನ್ನು ಕೂಡ ತೆರೆಯಲಾಯಿತು ಇದರಿಂದ ಒನ್ಲೈನ್ ಟ್ರಾನ್ಸಾಕ್ಷನ್ ಮೂಲಕ ದೇವಾಲಯಕ್ಕೆ ಗಣನೀಯವಾಗಿ ಕಾಣಿಕೆ ಹರಿದು ಬರುತ್ತಿದೆ. ಪೂಜಾ ಸಂಖ್ಯೆಯಲ್ಲಿ ಗಣನಿಯವಾಗಿ ಏರಿಕೆ ಕಂಡಿದೆ.
ಈಗ ದೇವಾಲಯದ ವಸತಿಗೃಹಗಳನ್ನು ಕೂಡ ಒನ್ಲೈನ್ ಬುಕಿಂಗ್ ಮಾಡಬಹುದಾಗಿದೆ. ಈಗಾಗಲೇ 500 ಕೋಟಿಗೂ ಮಿಕ್ಕಿದ ಹಣ ದೇವಾಲಯದಲ್ಲಿ ಠೇವಣಿ ಇದೆ ಇದರಿಂದ ಬರುವ ಭಕ್ತರಿಗೆ ಅತ್ಯಗತ್ಯವಾದ ಮೂಲ ಸೌಕರ್ಯವಾದ ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಅನ್ನ ಛತ್ರದ ವ್ಯವಸ್ಥೆ, ದೇವಾಲಯದಿಂದ ಸ್ಥಳೀಯ ಸಣ್ಣ ಪುಟ್ಟ ದೇವಾಲಯಗಳ ಜಾತ್ರೆಗೆ ನೀಡುತ್ತಿರುವ ದಿನಸಿ ಸಾಮಾನು ಮತ್ತು ದೇವಾಲಯದ ದೇವಾಲಯದ ಸಾಮಾನುಗಳನ್ನು ದಾಸ್ತಾನು ಇಡಲು ಬೇಕಾಗಿರುವ ಉಗ್ರಾಣ, ದೇವಾಲಯದ ಶಿಲಾಮಯ ರಥಬೀದಿ, ಒಪಿಡಿ, ಸ್ಥಳೀಯರಿಗೆ ವ್ಯಾಪಾರ ಮಾಡಲು ಬೇಕಾಗಿರುವ ಸಣ್ಣ ಸಣ್ಣ ಸ್ಥಳಾವಕಾಶ, ಶಿಲಾಮಯ ಸ್ನಾನ ಘಟ್ಟ, ಪಾರ್ಕಿಂಗ್ ವ್ಯವಸ್ಥೆ ಮತ್ತು ಅಗತ್ಯ ಇರುವ ಪೂಜೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಇನ್ನಿತರ ಸೇವೆಗಳ ಸಂಖ್ಯೆ ಹೆಚ್ಚಿಸಲು ಕಟ್ಟಡಗಳ ಕಾಮಗಾರಿ ರಚನೆ ಆಗಬೇಕಾಗಿದ್ದು, ಇದಕ್ಕೆ ತಾಂತ್ರಿಕ ಅನುಮೋದನೆಯೂ ದೊರಕಿದೆ.
(ವರದಿ - ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.