logo
ಕನ್ನಡ ಸುದ್ದಿ  /  ಕರ್ನಾಟಕ  /  85 ವಯಸ್ಸಿಗೂ ಮೇಲ್ಪಟ್ಟ ಮತದಾರರ ಸಂಖ್ಯೆ ದಕ್ಷಿಣ ಕನ್ನಡದಲ್ಲಿ ಅಧಿಕ; ಮನೆಯಲ್ಲೇ ಹಕ್ಕು ಚಲಾಯಿಸಿದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ

85 ವಯಸ್ಸಿಗೂ ಮೇಲ್ಪಟ್ಟ ಮತದಾರರ ಸಂಖ್ಯೆ ದಕ್ಷಿಣ ಕನ್ನಡದಲ್ಲಿ ಅಧಿಕ; ಮನೆಯಲ್ಲೇ ಹಕ್ಕು ಚಲಾಯಿಸಿದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ

Umesh Kumar S HT Kannada

Apr 18, 2024 12:14 PM IST

google News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 87 ವರ್ಷದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರು ಮನೆಯಲ್ಲೇ ಮತದಾನದ ಹಕ್ಕು ಚಲಾಯಿಸಿದರು.

  • ಲೋಕಸಭಾ ಚನಾವಣೆಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಹೊಂದಿದ 85 ವಯಸ್ಸಿಗೂ ಮೇಲ್ಪಟ್ಟ ಮತದಾರರ ಸಂಖ್ಯೆ ದಕ್ಷಿಣ ಕನ್ನಡದಲ್ಲಿ ಅಧಿಕ. ಈ ರೀತಿ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಮನೆಯಲ್ಲೇ ಹಕ್ಕು ಚಲಾಯಿಸಿದರು. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 87 ವರ್ಷದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರು  ಮನೆಯಲ್ಲೇ ಮತದಾನದ ಹಕ್ಕು ಚಲಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 87 ವರ್ಷದ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರು ಮನೆಯಲ್ಲೇ ಮತದಾನದ ಹಕ್ಕು ಚಲಾಯಿಸಿದರು.

ಮಂಗಳೂರು: 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40ಕ್ಕಿಂತ ಜಾಸ್ತಿ ಅಂಗವೈಕಲ್ಯ ಉಂಟಾದವರಿಗೆ ಚುನಾವಣಾ ಆಯೋಗ ಮನೆಯಲ್ಲೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಿದ್ದು, ಅದರಂತೆ ಮನೆಗೆ ಅಧಿಕಾರಿಗಳು ತೆರಳಿ ಓಟು ಹಾಕಿಸುವ ಪ್ರಕ್ರಿಯೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಇಂಥ ಮತದಾರರಿದ್ದಾರೆ.

ಈ ಕುರಿತು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದು ಹೀಗೆ. "ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಶೇ. 40 ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಅಂಗವೈಕಲ್ಯ ಹೊಂದಿದವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗವು ಒದಗಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಮಾಡಲು ಅರ್ಹರಾದ 8,010 ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಇದ್ದಾರೆ. ಈ ಪೈಕಿ 5,011 ಹಿರಿಯ ನಾಗರಿಕರು, 1,647 ವಿಶೇಷ ಚೇತನರು ಸೇರಿ ಒಟ್ಟು 6,658 ಮತದಾರರು ಏಪ್ರಿಲ್ 17ರ ತನಕ ಮತ ಚಲಾಯಿಸಿದರು. ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಮತ್ತು ಅಂಗವೈಕಲ್ಯ ಹೊಂದಿರುವವರಿದ್ದಾರೆ. ಈ ಪೈಕಿ ಯಾರು ಅಪೇಕ್ಷೆ ಪಡುತ್ತಾರೋ ಅವರಿಗೆ ಅವರ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ತಿಳಿಸಿದ್ದಾರೆ.

ಮನೆಯಲ್ಲಿಯೇ ತಮಗೆ ಮತದಾನದ ಅವಕಾಶವನ್ನು ನೀಡಿದ್ದಕ್ಕಾಗಿ ತಮ್ಮ ಸಂತಸವನ್ನು ಹಂಚಿಕೊಂಡಿರುತ್ತಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ‌ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಆನಂದ್ ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ

ಮೊದಲ ಬಾರಿಗೆ ಮನೆಯಲ್ಲೇ ಓಟು ಮಾಡಿದ ಪೂಜಾರಿ

ಹಿರಿಯ ರಾಜಕಾರಣಿ 87ರ ಹರೆಯದ ಜನಾರ್ದನ ಪೂಜಾರಿ ಈಗ ಸಕ್ರಿಯ ರಾಜಕಾರಣದಲ್ಲಿಲ್ಲ. ಅವರ ಮನೆಗೆ ಘಟಾನುಘಟಿ ನಾಯಕರು ಆಗಮಿಸುವುದುಂಟು. ಕಾಂಗ್ರೆಸ್ ಪಕ್ಷದ ನಾಯಕರಾದರೂ ಪಕ್ಷಾತೀತವಾಗಿ ಅವರ ಬೆಂಬಲಿಗರಿದ್ದಾರೆ. ಸ್ವಾಭಿಮಾನಿ ಎಂದೇ ಹೆಸರುವಾಸಿಯಾದ ಜನಾರ್ದನ ಪೂಜಾರಿ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲೇ ಮನೆಯಲ್ಲಿ ಮತದಾನ ಮಾಡುವ ಅವಕಾಶ ಇತ್ತು. ಆದರೆ ಅದನ್ನು ನಿರಾಕರಿಸಿದ ಪೂಜಾರಿ ಅವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಈ ಬಾರಿ ಪೂಜಾರಿಯವರು ಮನೆಯಲ್ಲೇ ಮತದಾನ ಮಾಡಿದರು.

ಇದುವರೆಗೂ ಪೂಜಾರಿ ಅವರು ಬಂಟ್ವಾಳದ ಭಂಡಾರಿಬೆಟ್ಟು ಶಾಲೆಯ ಭಾಗ ಸಂಖೈ 130 ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರು ತಮ್ಮ ಮನೆಯಲ್ಲೇ ಮತದಾನ ಚಲಾಯಿಸಿದರು. ಕಳೆದ ವಿಧಾನಸಭಾ ಚುನಾವಣೆಗೆ ಅವರು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರು.

ಜನಾರ್ದನ ಪೂಜಾರಿ ಮತ ಚಲಾವಣೆ

ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿಯವರ ಬಿ ಮೂಡ ಗ್ರಾಮದ ಬಸ್ತಿಪಡ್ಪುವಿನಲ್ಲಿರುವ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಲಾಯಿತು. 87ರ ಹರೆಯದ ಬಿ.ಜನಾರ್ದನ ಪೂಜಾರಿ ಬಂಟ್ವಾಳದಲ್ಲಿರುವ ತಮ್ಮ ಮನೆಯಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸಿದರು. ಮನೆಯಲ್ಲಿಯೆ ಮತದಾನ ಮಾಡುವ ಮತದಾರರ ಮನೆಗಳಿಗೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದ ಮತಗಟ್ಟೆ ಅಧಿಕಾರಿಗಳ ತಂಡ ಹೋಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷಕ್ಕೆ ಮೇಲ್ಪಟ್ಟ ಮತ್ತು ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿದ ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಾರೆ. ಈ ಪ್ರಕ್ರಿಯೆ ಏಪ್ರಿಲ್ 15ರಂದು ಶುರುವಾಗಿದೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ