Matrimonial sites: ವೈವಾಹಿಕ ವಂಚನೆ ತಡೆಗೆ ಬೇಕೊಂದು ʻವಿವಾಹ ನೋಂದಣಿʼ ವೆಬ್‌ಸೈಟ್; ಸರ್ಕಾರದ ಮುಂದಿದೆ ಜನಾಗ್ರಹ
Mar 30, 2023 05:58 PM IST
“ವಿವಾಹ ನೋಂದಣಿ ವೆಬ್‌ಸೈಟ್” ಬೇಕೆಂಬುದು ಅತಿ ಬೇಡಿಕೆಯ ಜನಾಗ್ರಹ
Matrimonial sites: ವಿವಾಹ ಸಂಬಂಧ ಏರ್ಪಡಿಸುವ ಮ್ಯಾಟಿಮೊನಿ ಕೇಂದ್ರಗಳು, ವೆಬ್‌ಸೈಟ್‌ಗಳು ಸಾಕಷ್ಟಿವೆ. ಇಲ್ಲಾಗುವ ವಂಚನೆಗಳ ವಿಚಾರ ಪದೇಪದೆ ಸುದ್ದಿ ಆಗುತ್ತಲೇ ಇದೆ. ವಿವಾಹ ಸಂಬಂಧ ಎಂಬುದು ಬದುಕಿನಲ್ಲಿ ಮಹತ್ವದ ಘಟ್ಟ. ಇಲ್ಲಿ ಮುಚ್ಚುಮರೆ ಇರಬಾರದು ಎಂಬುದು ಹೊಸ ತಲೆಮಾರಿನ ನಿಲುವು. ಆದ್ದರಿಂದ “ವಿವಾಹ ನೋಂದಣಿ ವೆಬ್‌ಸೈಟ್” ಬೇಕೆಂಬುದು ಅತಿ ಬೇಡಿಕೆಯ ಜನಾಗ್ರಹ.
ವಿವಾಹ ಎಂದರೇನು? ಹಲವು ವ್ಯಾಖ್ಯಾನ ಸಿಗಬಹುದು ಮತ್ತು ಅನೇಕರು ಅನೇಕ ವಿಚಾರಗಳನ್ನು ಅವರ ಅನುಭವದ ಅಳತೆಯಲ್ಲಿ ಹೇಳಬಹುದು. ಸರಳವಾಗಿ ಹೇಳುವುದಾದರೆ ವಿವಾಹ ಎಂಬುದು ʻಉತ್ತಮ ಸಮಾಜಕ್ಕೆ ಅಗತ್ಯವಾದ ಬದುಕಿಗೆ ಇರುವಂತಹ ಒಂದು ನೈತಿಕ ಚೌಕಟ್ಟುʼ ಎಂದು ಹೇಳಲು ಅಡ್ಡಿ ಇಲ್ಲ. ಕೆಲವರಿಗೆ ಇದು ಸಾಂಪ್ರದಾಯಿಕ ಬದ್ಧತೆ. ಅನೇಕರಿಗೆ ಇದು ಜೀವನ ಬಂಧ ಅಂದರೆ ಕೊನೆಗಾಲದ ತನಕ ಒಟ್ಟಿಗೆ ಸತಿಪತಿಯಾಗಿ ಜೀವನ ಸಾಗಿಸುವ ಜೀವನ ಬಂಧ.
ವಿವಾಹ ಬಂಧ ಏರ್ಪಡುವುದು ಹೇಗೆ? - ಈಗ ಕೆಲವು ವರ್ಷಗಳ ಹಿಂದೆ ʻಮದುವೆ ಬ್ರೋಕರ್ʼಗಳ ಜಮಾನಾ ಇತ್ತು. ಅದಕ್ಕೂ ಮೊದಲು ವಧು ಅನ್ವೇಷಣೆ, ವರಾನ್ವೇಷಣೆಗೆ ಅದರದ್ದೇ ಆದ ಸಾಂಪ್ರದಾಯಿಕ ಮಾರ್ಗಗಳಿದ್ದವು. ಈಗ ಕೆಲವು ವರ್ಷಗಳಿಂದ ಆನ್‌ಲೈನ್ ಮ್ಯಾಚ್‌ಮೇಕರ್ ಮಾರುಕಟ್ಟೆ ಹೆಚ್ಚು ಜನಪ್ರಿಯವಾಗಿವೆ.
ಪ್ರಸ್ತುತ, ಭಾರತದ ಆನ್‌ಲೈನ್ ಮ್ಯಾಚ್‌ಮೇಕಿಂಗ್ ಮಾರುಕಟ್ಟೆ ಮೌಲ್ಯ ಕಳೆದ ವರ್ಷ 800 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು. ಈ ಮಾರುಕಟ್ಟೆಯಲ್ಲಿ ಶೇಕಡ 70 ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಿದ್ದರೆ, ಶೇಕಡ 30 ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಿವೆ. ಕೋವಿಡ್ ಸಂಕಷ್ಟಕ್ಕೆ ಮೊದಲು ಇದು ಅರ್ಧಕ್ಕರ್ಧ ಇತ್ತು ಎಂಬುದನ್ನು HTಕನ್ನಡದ ಸೋದರ ತಾಣ ದ ಮಿಂಟ್ ವರದಿ ಹೇಳಿದೆ.
ಮ್ಯಾಚ್‌ಮೇಕಿಂಗ್ ಮಾರುಕಟ್ಟೆಯ ಮೇಲ್ನೋಟದ ಸಮಸ್ಯೆಗಳು
- ವಧು-ವರರ ಪ್ರೊಫೈಲ್ ದೃಢೀಕರಣ ವ್ಯವಸ್ಥೆ ಇಲ್ಲ.
- ಕೌಟುಂಬಿಕ ಹಿನ್ನೆಲೆ ಚೆಕ್ ಮಾಡುವುದು ಕಷ್ಟ.
- ಉದ್ಯೋಗ, ವೇತನ, ಆಸ್ತಿ-ಪಾಸ್ತಿ ವಿಚಾರದಲ್ಲಿ ಸ್ಪಷ್ಟತೆ ಇರುವುದಿಲ್ಲ
- ಕ್ರಿಮಿನಲ್‌ಗಳು ವಂಚನೆ ಎಸಗಲು ಪ್ರಯತ್ನಿಸುತ್ತಿರುತ್ತಾರೆ
- ವಿವಾಹಿತರು ವಿಚ್ಛೇದನ ಪಡೆಯದೆ ಮರುಮದುವೆಗೆ ಪ್ರಯತ್ನಿಸುತ್ತಾರೆ.
ಈ ಎಲ್ಲ ವಿಷಯಗಳನ್ನು ಗಮನಿಸಿಕೊಂಡು ಸುರಧೇನುಪುರದ ಮಲ್ಲಿಕಾರ್ಜುನ ಎಂಬುವವರು ಪ್ರತಿಪಾದಿಸಿದ್ದು ಹೀಗೆ -
ವಿವಾಹ ವಿಚ್ಛೇದನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ,‘1000 ಸುಳ್ಳು ಹೇಳಿ ಒಂದು ಮದುವೆ ಮಾಡು’ ಎಂಬ ಒಂದೇ ಸಾಲಿನ ನೀತಿಗೆ , ಮದುವೆಯ ಬ್ರೋಕರುಗಳು ಅಂಟಿಕೊಂಡಿರುವುದೇ ಕಾರಣ. ಸಾಮಾನ್ಯ ಉದ್ಯೋಗದ ಗಂಡುಗಳಿಗೆ ಹೆಣ್ಣು ಕೊಡಲು ಹೆಣ್ಣಿನ ಪಾಲಕರು ಸುತರಾಂ ಒಪ್ಪುವುದಿಲ್ಲ. ಶಿಕ್ಷಣದಲ್ಲಿ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳೇ ಮುಂದೆ ಇದ್ದಾರೆ. ಕೆಲವು ಗಂಡುಮಕ್ಕಳು ದುಶ್ಚಟಗಳ ದಾಸರು. ಇಂತಹ ಗಂಡಿಗೆ ಹೆಣ್ಣು ಹೊಂದಿಸುವುದೇ ಸವಾಲು. ದುಡ್ಡು ಕೊಡುವಂಥವರೂ ಇವರೇ ಆದ್ದರಿಂದ ಇಂತಹ ನ್ಯೂನತೆಗಳನ್ನು ಬಳಸಿಕೊಂಡು ಮದುವೆ ದಲ್ಲಾಳಿಗಳು ಸುಳ್ಳುಗಳನ್ನು ವೈಭವೀಕರಿಸಿ ಮದುವೆ ಮಾಡಿಸಿಬಿಡುತ್ತಾರೆ. ಅದಕ್ಕೆ ಪೂರಕವಾಗಿ ಜಾತಕ, ಗಣಕೂಟ, ಅಷ್ಟೇ ಏಕೆ ಹೆಸರನ್ನೇ ಬದಲಿಸುವ ಸಲಹೆ ಕೊಡುವಂಥ ಧನದಾಹಿ ಪುರೋಹಿತರು, ಜ್ಯೋತಿಷಿಗಳೂ ಇದ್ದಾರೆ. ಅವರೆಲ್ಲ ಈ ದಲ್ಲಾಳಿಗಳ ಮರ್ಜಿಯಲ್ಲಿರುತ್ತಾರೆ. ಈ ರೀತಿ ಹಸೆಮಣೆ ಏರಿದವರ ದಾಂಪತ್ಯ ಕೊನೆತನಕ ಇರುವುದಿಲ್ಲ. ಒಂದೋ ಎರಡೋ ಕೆಲವೊಮ್ಮೆ ಒಂದೇ ದಿನಕ್ಕೆ ಮುರಿದು ಹೋಗಿರುವಂತಹ ಉದಾಹರಣೆಗಳಿವೆ. ಇಂತಹ ಪ್ರಕರಣದಲ್ಲಿ ಕೌಟುಂಬಿಕ ಸಂಧಾನಗಳು ಯಶಸ್ವಿಯಾಗುವುದಿಲ್ಲ. ಆದ್ದರಿಂದ ಮದುವೆ ಎಷ್ಟೇ ವಿಜೃಂಭಣೆಯಿಂದ ಮಾಡಿದರೂ, ಮದುವೆ ನೋಂದಣಿ ಮಾಡಿಸುವುದು ಕಡ್ಡಾಯ ಆಗಬೇಕು. ಇದಕ್ಕಾಗಿ ಒಂದು ವಿವಾಹ ನೋಂದಣಿ ವೆಬ್‌ಸೈಟ್ ಅನ್ನು ಸರ್ಕಾರವೇ ಪರಿಚಯಿಸಬೇಕು.
ವಿವಾಹ ನೋಂದಣಿ ವೆಬ್‌ಸೈಟ್
ಸರ್ಕಾರ ಪರಿಚಯಿಸಬೇಕಾದ ವಿವಾಹ ನೋಂದಣಿ ವೆಬ್‌ಸೈಟ್‌ನಲ್ಲಿ ಇದುವರೆಗೆ ಆದ ವಿವಾಹ, ಮುಂದಿನ 15 ದಿನಗಳಲ್ಲಿ ಆಗಲಿರುವ ಮದುವೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರು, ಏನು ಕಾರಣ? ಕೌಟುಂಬಿಕ ಹಿನ್ನೆಲೆ ಮುಂತಾದ ಎಲ್ಲ ವಿವರಗಳೂ ಇರಲಿ. ಆಧಾರ್ ಸಂಖ್ಯೆ ಕೂಡಾ ಇರಲಿ. ಮದುವೆಗೆ ಮುಂಚಿತವಾಗಿ ವಿವಾಹ ನೋಂದಣಿ ಮಾಡುವಾಗ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ವಿವರಗಳೂ ಒಂದೆಡೆ ಸಿಗುತ್ತದೆ. ಬೇರೆ ಮದುವೆ ಆಗಿದ್ದರೆ, ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಬಾಲ್ಯ ವಿವಾಹ, ವಿಶೇಷ ವಿವಾಹದ ಹೆಸರಲ್ಲಿ ನಡೆಯುವ ವಂಚನೆ ಎಲ್ಲವೂ ತಪ್ಪುತ್ತದೆ. ನೋಂದಣಿ ಆಗದ ವಿವಾಹಕ್ಕೆ ಕಾನೂನಿನ ಮಾನ್ಯತೆ ಸಿಗದಿರಲಿ. ನೋಂದಣಿ ಮಾಡಿಸಿಕೊಂಡು ಸರಳ ವಿವಾಹ ಮಾಡಿಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹಧನ ನೀಡಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಚಿವಾಲಯಗಳು ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ.
ಮೈಸೂರಿನ ಮಾಲತಿ ಎಬಿ ಅವರು ಕೂಡ ಇದಕ್ಕೆ ಪೂರಕ ಅಭಿಪ್ರಾಯವನ್ನೇ ವಾಚಕರ ವಾಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ವಿವಾಹ ನೋಂದಣಿ ವೆಬ್‌ಸೈಟ್‌ಗೆ ಸಂಬಂಧಿಸಿ ಅವರ ಪ್ರತಿಪಾದನೆ ಹೀಗಿದೆ -
ವಿವಾಹ ಮಾಹಿತಿಯುಳ್ಳ ಸಮಗ್ರ ಜಾಲತಾಣದ ಅಗತ್ಯವಿರುವ ಕುರಿತು ಮಲ್ಲಿಕಾರ್ಜುನ ಅವರ ಆಗ್ರಹ ಸೂಕ್ತವಾಗಿದೆ. ಹಲವಾರು ಮುರಿದ ದಾಂಪತ್ಯ ಸಂಬಂಧಗಳಿಗೆ ಮಾಹಿತಿ ಕೊರತೆಯೇ ಕಾರಣ. ವಧು–ವರರ ಕುರಿತಾದ ಮಾಹಿತಿಯು ಪಾಲಕರಿಗೆ ಸಮಾಧಾನ ತರುವಂತೆ ಇರಬೇಕು. ಹಾಗಿಲ್ಲದೇ ಇದ್ದಾಗ, ಸದ್ಯದ ಅಸಹಜ ಹೊಂದಾಣಿಕೆ, ಮಾನಸಿಕ ಅಶಾಂತಿ, ದಾಂಪತ್ಯ ಕಲಹ, ವಿಚ್ಛೇದನ ಮುಂತಾದವುಗಳು ಘಟಿಸುತ್ತವೆ. ಹಣವೇ ಎಲ್ಲ ಎನ್ನುವ ಕಾಲಘಟ್ಟದಲ್ಲಿ ಗುಣ ಗೌಣವಾಗಿ ತಲೆತಗ್ಗಿಸುವ ಪರಿಸ್ಥಿತಿಯೇ ಹೆಚ್ಚು. ಆದ್ದರಿಂದ ಸಂಬಂಧ ಬೆಳೆಸುವಾಗ ಅಗತ್ಯ ಬೇಕಾದ ಎಲ್ಲ ಮಾಹಿತಿಯೂ ಸರ್ಕಾರದ ವೆಬ್‌ಸೈಟ್‌ನಲ್ಲೇ ಸಿಗುವಂತಾದರೆ ಚೆನ್ನ.
ಕೊನೆಯ ಮಾತು- ಸಮಾಜದಲ್ಲಿರುವ ಅನೇಕ ವೈವಾಹಿಕ ಸಮಸ್ಯೆಗಳನ್ನು ಆರಂಭದಲ್ಲೇ ಚಿವುಟಿ ಹಾಕುವುದಕ್ಕೆ ವಿವಾಹ ನೋಂದಣಿ ಕಡ್ಡಾಯ ಒಂದು ಮಾರ್ಗ. ಲವ್ ಜಿಹಾದ್, ಬಾಲ್ಯ ವಿವಾಹ, ಹಲವು ಮದುವೆ ಆಗುವುದು ಮುಂತಾದ ವಂಚನೆಯ ಜಾಲಕ್ಕೆ ಯುವತಿಯರು, ಮಹಿಳೆಯರು, ಬಾಲಕಿಯರು ಬೀಳದಂತೆ ತಡೆಯಲು ಇದು ಒಂದು ಪರಿಹಾರೋಪಾಯವೂ ಹೌದು.
ಕೇಂದ್ರ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಗತ್ಯವಾಗಿ ವಿವಾಹ ನೋಂದಣಿ ವೆಬ್‌ಸೈಟ್ ಚಾಲ್ತಿಗೆ ತರುವ ಕಡೆಗೆ ಗಮನಹರಿಸುವುದು ಒಳಿತು. ಡಿಜಿಟಲ್ ಇಂಡಿಯಾ ಚಾಲ್ಲಿಯಲ್ಲಿರುವ ಕಾರಣ, ಭವ್ಯ ಭಾರತದ ಭವಿಷ್ಯಕ್ಕಾಗಿ, . ವೈಯಕ್ತಿಕ ಡೇಟಾ ಸೋರಿಕೆ ತಡೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಏಕೀಕೃತ ವಿವಾಹ ನೋಂದಣಿ ವೆಬ್‌ಸೈಟ್ ರೂಪಿಸುವುದು ಉತ್ತಮ. ಇದು ಜಗತ್ತಿಗೊಂದು ಮಾದರಿಯಾದೀತು.