logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಶಿವಾಜಿನಗರ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಮೇಲೆ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾ ಸಂಕೀರ್ಣ

ಬೆಂಗಳೂರು: ಶಿವಾಜಿನಗರ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಮೇಲೆ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾ ಸಂಕೀರ್ಣ

Jayaraj HT Kannada

Oct 06, 2024 01:55 PM IST

google News

ಬೆಂಗಳೂರು: ಶಿವಾಜಿನಗರ ಮೆಟ್ರೋ ನಿಲ್ದಾಣದ ಮೇಲೆ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾ ಸಂಕೀರ್ಣ

    • Shivajinagar Metro Station: ಬೆಂಗಳೂರಿನ ಶಿವಾಜಿನಗರ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಮೇಲೆ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಇದರಲ್ಲಿ ನಾಗರಿಕರಿಗೆ ಸಾಂಸ್ಕೃತಿಕ ಸೌಲಭ್ಯ ಸಿಗಲಿದೆ. ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಈ ಕೆಲಸ ಶುರುವಾಗಲಿದೆ.
ಬೆಂಗಳೂರು: ಶಿವಾಜಿನಗರ ಮೆಟ್ರೋ ನಿಲ್ದಾಣದ ಮೇಲೆ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾ ಸಂಕೀರ್ಣ
ಬೆಂಗಳೂರು: ಶಿವಾಜಿನಗರ ಮೆಟ್ರೋ ನಿಲ್ದಾಣದ ಮೇಲೆ ನಿರ್ಮಾಣವಾಗಲಿದೆ ಸುಸಜ್ಜಿತ ಕ್ರೀಡಾ ಸಂಕೀರ್ಣ (OneIndia)

ಈಗಾಗಲೇ ಜಾಗತಿಕ ಐಟಿ ಹಬ್‌ ಆಗಿರುವ ಬೆಂಗಳೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಗರದಲ್ಲಿ ಮೆಟ್ರೋ ರೈಲು ಮಾರ್ಗಗಳು ಕೂಡಾ ವಿಸ್ತರಣೆಗೊಳ್ಳುತ್ತಿದ್ದು, ಜನರ ಓಡಾಟ ಸುಗಮವಾಗುತ್ತಿದೆ. ಈ ನಡುವೆ ನಗರದಲ್ಲಿ ಲಭ್ಯ ಸ್ಥಳಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ಸರ್ಕಾರ ಗಮನ ಹರಿಸುತ್ತಿದೆ. ಸದ್ಯ ನಗರದಲ್ಲಿ ಶಿವಾಜಿನಗರ ಮೆಟ್ರೋ ನಿಲ್ದಾಣ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇನ್ನೇನು ಕಾಮಗಾರಿ ಪೂರ್ಣಗೊಳ್ಳಲಿದೆ. ಇದು ಅಂಡರ್‌ಗ್ರೌಂಡ್‌ ಮೆಟ್ರೋ ನಿಲ್ದಾಣವಾಗಿದೆ. ಈ ಮೆಟ್ರೋ ನಿಲ್ದಾಣದ ಮೇಲೆ ಕ್ರಿಯಾತ್ಮಕ ಕ್ರೀಡೆ ಮತ್ತು ಸಾಂಸ್ಕೃತಿಕ ಸೌಲಭ್ಯವನ್ನು ಪರಿಚಯಿಸಲು ಬೆಂಗಳೂರು ನಗರ ಸಜ್ಜಾಗುತ್ತಿದೆ.

ಸುಮಾರು ಎರಡು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಥಳದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸುವುದು ಸದ್ಯದ ಯೋಜನೆ. ಇದರಲ್ಲಿ ವ್ಯಾಪಕ ಶ್ರೇಣಿಯ ಕ್ರೀಡಾ ಸೌಲಭ್ಯಗಳು, ಸಭಾಂಗಣ ಮತ್ತು ಸಾಂಸ್ಕೃತಿಕ ಕೇಂದ್ರ ಇರಲಿದೆ. ಇದರೊಂದಿಗೆ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ನಗರದ ಭೂದೃಶ್ಯ ಮತ್ತಷ್ಟು ಶ್ರೀಮಂತಗೊಳ್ಳಲಿದೆ.

ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ

“ಶಿವಾಜಿನಗರ ಭೂಗತ ಮೆಟ್ರೋ ನಿಲ್ದಾಣದ ಮೇಲಿನ ಎರಡು ಎಕರೆ ಪ್ರದೇಶದಲ್ಲಿ ವಿಶಿಷ್ಟ ಕ್ರೀಡಾ ಸೌಲಭ್ಯವನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಸಭಾಂಗಣ ಮತ್ತು ಸಾಂಸ್ಕೃತಿಕ ಕೇಂದ್ರ ಇರಲಿದೆ. ಸದ್ಯ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆ ನಂತರ ನಮ್ಮ ಯುವಕರಿಗೆ ಕ್ರಿಕೆಟ್, ಫುಟ್ಬಾಲ್, ಬ್ಯಾಸ್ಕೆಟ್‌ಬಾಲ್ ಮತ್ತು ಈಜು ತರಬೇತಿ ಪಡೆಯಲು ನಾವು ಸುಂದರ ಸ್ಥಳವನ್ನು ಸೃಷ್ಟಿಸುತ್ತಿದ್ದೇವೆ” ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಕೂಡಾ ನಮ್ಮ ಮೆಟ್ರೋ ಕುರಿತು ಅಪ್ಡೇಟ್‌ ನೀಡಿದೆ. ಶಿವಾಜಿನಗರ ಮೆಟ್ರೋ ನಿಲ್ದಾಣ ಕಾಮಗಾರಿ ಇನ್ನೇನು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ. ಕಾಮಗಾರಿ ಮುಗಿದ ನಂತರ ಸ್ಟೇಷನ್‌ ಮೇಲಿನ ಭೂಮಿಯನ್ನು ಅಭಿವೃದ್ಧಿ ಕಾಮಗಾರಿಗಾಗಿ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಸಮುದಾಯದ ವೈವಿಧ್ಯಮಯ ಹಿತಾಸಕ್ತಿಗಳನ್ನು ಪೂರೈಸುವ ಈ ಪ್ರಮುಖ ಪ್ರದೇಶವನ್ನು ಬಹುಕಾರ್ಯ ಕ್ರೀಡಾ ಸಂಕೀರ್ಣವಾಗಿ ಪರಿವರ್ತಿಸುವ ಯೋಜನೆಗಳು ಈಗಾಗಲೇ ಚಾಲನೆಯಲ್ಲಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದ ಅರ್ಷದ್, ಪಾಶ್ಚಿಮಾತ್ಯ ದೇಶಗಳಲ್ಲಿ ಇದೇ ರೀತಿಯ ಸ್ಥಳಗಳನ್ನು ನೋಡಿ ಪ್ರೇರಿತರಾದ ಕುರಿತು ಮಾತನಾಡಿದರು. ಹೀಗಾಗಿ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಂಡ ನನಂತರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಕ್ರೀಡಾ ಸಂಕೀರ್ಣ ಎದ್ದು ನಿಲ್ಲಲಿದೆ. ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ