logo
ಕನ್ನಡ ಸುದ್ದಿ  /  ಕರ್ನಾಟಕ  /  Metro Pillar Tragedy: ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ವರದಿ ಸಲ್ಲಿಸಿ, ಅವಘಡಕ್ಕೆ ಕಾರಣ ಹೇಳಿದ ಐಐಎಸ್‌ಸಿ

Metro pillar tragedy: ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ವರದಿ ಸಲ್ಲಿಸಿ, ಅವಘಡಕ್ಕೆ ಕಾರಣ ಹೇಳಿದ ಐಐಎಸ್‌ಸಿ

HT Kannada Desk HT Kannada

Jan 22, 2023 03:36 PM IST

google News

ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ

    • ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ತಜ್ಞರ ತಂಡ ಬಿಎಂಆರ್​ಸಿಎಲ್​ಗೆ ವರದಿ ಸಲ್ಲಿಸಿದೆ.
ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ
ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ತಜ್ಞರ ತಂಡ ಬಿಎಂಆರ್​ಸಿಎಲ್​ಗೆ ವರದಿ ಸಲ್ಲಿಸಿದೆ.

ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜೆ.ಎಂ. ಚಂದ್ರಕಿಶನ್ ನೇತೃತ್ವದ ತಂಡ 27 ಪುಟಗಳ ವರದಿ ಸಿದ್ಧಪಡಿಸಿ ಇ-ಮೇಲ್ ಮೂಲಕ ವರದಿಯನ್ನು ಬಿಎಂಆರ್‌ಸಿಎಲ್‌ಗೆ ಸಲ್ಲಿಸಿದೆ. 18 ಮೀಟರ್ ಎತ್ತರದ ಕಂಬಕ್ಕೆ ಯಾವುದೇ ಆಸರೆ ಇಲ್ಲದಿದ್ದರಿಂದ ರಸ್ತೆಗೆ ವಾಲಿದೆ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅನಾಹುತಕ್ಕೆ ಇದೇ ಕಾರಣ. ಚೌಕಟ್ಟಿಗೆ ಆಸರೆಯಾಗಿ ಕಟ್ಟಲಾಗಿದ್ದ ಐರನ್​ ರೋಪ್​​ಗಳನ್ನು ತೆರವುಗೊಳಿಸಿದ ಬಳಿಕ ಒಂದು ದಿನ ಪೂರ್ತಿ ಅಸುರಕ್ಷಿತ ಸ್ಥಿತಿಯಲ್ಲಿ ಇತ್ತು ಎಂದು ವರದಿಯಲ್ಲಿ ತಿಳಿಸಿದೆ.

ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕಿತ್ತು

ಈ ರೀತಿಯ ಕಂಬ ನಿರ್ಮಾಣ ಮಾಡುವಾಗ ಆಸರೆಗಾಗಿ ಐರನ್​ ರೋಪ್ ಗಳಿಂದ ಬಿಗಿಯಲಾಗುತ್ತದೆ. ಅದನ್ನು ತೆರವುಗೊಳಿಸಿದ ತಕ್ಷಣ ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕು. ಅಲ್ಲಿಯ ತನಕ ಸುರಕ್ಷತೆ ದೃಷ್ಟಿಯಿಂದ ಕ್ರೇನ್‌ನಿಂದ ಆಸರೆ ನೀಡಬೇಕಿತ್ತು. ಈಗ ಬಿದ್ದಿರುವ ಚೌಕಟ್ಟಿಗೆ ಈ ರೀತಿಯ ಯಾವುದೇ ಆಸರೆ ಇರಲಿಲ್ಲ. ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕರಿಗೆ ತಿಳಿವಳಿಕೆ ನೀಡಬೇಕು. ಹೊಸದಾಗಿ ಬರುವ ಕಾರ್ಮಿಕರಿಗೆ ತರಬೇತಿ ನೀಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಘಟನೆ?

ಬೆಂಗಳೂರಿನ ನಾಗವಾರ ಪ್ರದೇಶದಲ್ಲಿ ಜನವರಿ 10ರಂದು ಬೆಳಗ್ಗೆ ನಿರ್ಮಾಣ ಹಂತದ ಮೆಟ್ರೋ ಕುಸಿದು ತಾಯಿ ಮತ್ತು ಮಗ ಸಾವಿಗೀಡಾಗಿದ್ದರು. ಕೆಆರ್‌ ಪುರಂನಿಂದ ಹೆಬ್ಬಾಳಕ್ಕೆ ದಂಪತಿ ತಮ್ಮ ಎರಡೂವರೆ ವರ್ಷದ ಮಗನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಸಿಲ್ಕ್ ಬೋರ್ಡ್‌ನಿಂದ ಏರ್​​​ಪೋರ್ಟ್ ವರೆಗಿನ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿದಿದೆ. ಘಟನೆಯಲ್ಲಿ ಮೂವರೂ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಹಾಗೂ ಮಗ ಸಾವನ್ನಪ್ಪಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್​, ಮಾಧ್ಯಮಗಳ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು, ಈ ಪ್ರಕರಣದಲ್ಲಿ ರಾಜ್ಯಸರ್ಕಾರ, ಬಿಎಂಆರ್‌ಸಿಎಲ್‌ ಮತ್ತು ಬಿಬಿಎಂಪಿಯನ್ನು ಪ್ರತಿವಾದಿಗಳನ್ನಾಗಿ ಮಾಡಿತ್ತು.

ದುರಂತ ಸಂಭವಿಸಿದ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂತ್ರಸ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 10 ಲಕ್ಷ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು. ಅಲ್ಲದೆ, ಪರಿಹಾರದ ವಿಚಾರಕ್ಕಿಂತಲೂ ಈ ದುರಂತದ ಹೊಣೆಗಾರರನ್ನು ಗುರುತಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು.

ಬಳಿಕ ಬಿಎಂಆರ್‌ಸಿಎಲ್‌ನ ಮುಖ್ಯ ಇಂಜಿನಿಯರ್‌ ಅನ್ನು ಅಮಾನತು ಮಾಡಲು ಸರ್ಕಾರ ಸೂಚಿಸಿತ್ತು. ಅಲ್ಲದೆ, ಮೆಟ್ರೋ ಪಿಲ್ಲರ್‌ ನಿರ್ಮಾಣದ ಹೊಣೆಗಾರಿಕೆ ಹೊತ್ತವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆಯೂ ನಿರ್ದೇಶನ ನೀಡಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ