Umesh Katti: ಏರ್‌ಲಿಫ್ಟ್ ಮೂಲಕ ಬೆಳಗಾವಿಗೆ ಬರಲಿದೆ ಕತ್ತಿ ಪಾರ್ಥಿವ ಶರೀರ: ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಸಂಸ್ಕಾರ
Sep 07, 2022 06:01 AM IST
ಉಮೇಶ್ ಕತ್ತಿ (ಸಂಗ್ರಹ ಚಿತ್ರ)
- ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು, ಏರ್‌ಲಿಫ್ಟ್ ಮೂಲಕ ಬೆಳಗಾವಿಗೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯಿಂದ ಕತ್ತಿ ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕತ್ತಿ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ಬೆಂಗಳೂರು: ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು, ಏರ್‌ಲಿಫ್ಟ್ ಮೂಲಕ ಬೆಳಗಾವಿಗೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯಿಂದ ಕತ್ತಿ ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕತ್ತಿ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ಇಂದು(ಸೆ.07-ಬುಧವಾರ) ಬೆಳಗ್ಗೆ 7 ಗಂಟೆಗೆ ಪಾರ್ಥಿವ ಶರೀರವನ್ನು ಎಚ್‌ಎಎಲ್‌ನಿಂದ ಬೆಳಗಾವಿಗೆ ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಗಿದ್ದು, ಸಂಜೆ 5 ಗಂಟೆಯವರೆಗೂ ಬೆಲ್ಲದ ಬಾಗೇವಾಡಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕತ್ತಿ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿವೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯ ಬಳಿಯೇ ಕತ್ತಿ ಅವರಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಇನ್ನು ಕತ್ತಿ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಬುಧವಾರ ಶಾಲೆ, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಕತ್ತಿ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಬೆಲ್ಲದ ಬಾಗೇವಾಡಿಯಲ್ಲಿ ಕತ್ತಿ ಅಭಿಮಾನಿಗಳು ಜಮಾವವಣೆಗೊಂಡಿದ್ದಾರೆ.
ನಿನ್ನೆ(ಸೆ.06-ಮಂಗಳವಾರ) ತಡರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ, ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರನ್ನು ಉಳಿಸಿಕೊಳ್ಳಲು ವೈದ್ಯರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ರಾತ್ರಿ 11:30ರ ಸುಮಾರಿಗೆ ಕತ್ತಿ ನಿಧನರಾಗಿರುವುದನ್ನು ಆಸ್ಪತ್ರೆಯ ಮೂಲಗಳು ಖಚಿತಪಡಿಸಿದವು.
ಉಮೇಶ್ ಕತ್ತಿ ಅವರಿಗೆ ಹೃದಯಾಘಾತ ಆದಾಗ ಅವರ ಮಗಳು ಮತ್ತು ಅಳಿಯ ಬೆಂಗಳೂರಿನಲ್ಲಿಯೇ ಇದ್ದರು. ವಿಷಯ ತಿಳಿದ ನಂತರ ಅವರ ಪತ್ನಿ ಮತ್ತು ಸೋದರ ರಮೇಶ್ ಕತ್ತಿ ತಡರಾತ್ರಿ ಬೆಂಗಳೂರಿಗೆ ಪ್ರಯಾಣಿಸಿದರು. ಕತ್ತಿ ಇನ್ನಿಲ್ಲ ಎಂಬ ಸುದ್ದಿ ತಿಳಿದು ಅವರ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.
ಬೆಳಗ್ಗೆಯೇ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನ ಇದ್ದು, ಉಮೇಶ್ ಕತ್ತಿ ಅವರ ಮನೆಯವರು ಹಾಗೂ ಆಪ್ತರು ಪ್ರಯಾಣ ಬೆಳಸಲಿದ್ದಾರೆ. ಸಂಪುಟ ಸಹೋದ್ಯೋಗಿಗಳು, ಹಾಗೂ ಮುಖಂಡರು ಬೆಳಗಾವಿಗೆ ತೆರಳಲು ಬೆಳಗ್ಗೆ 11ಗಂಟೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಉಮೇಶ್ ಕತ್ತಿ ಓರ್ವ ಜನಪರ ಚಿಂತಕರಾಗಿದ್ದರು. ಅವರಿಗೆಯಾವುದೇ ಇಲಾಖೆಯ ಜವಾಬ್ದಾರಿ ನೀಡಿದರೂ ಅದರಲ್ಲಿ ಜನಪರ ಚಿಂತನೆಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಅದರಲ್ಲೂ ಬೆಳಗಾವಿ ಜಿಲ್ಲೆಯ ಜನರೆಂದರೆ ಉಮೇಶ್ ಕತ್ತಿ ಅವರಿಗೆ ಅಚ್ಚುಮೆಚ್ಚು ಎಂದು ಅವರ ಸಂಪುಟದ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದಾರೆ.
ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಉಮೇಶ್ ಕತ್ತಿ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಆಗಾಗ ಪ್ರತ್ಯೇಕ ರಾಜ್ಯ ರಚನೆ ಬಗ್ಗೆಯೂ ಧ್ವನಿ ಎತ್ತುತ್ತಿದ್ದರು. ಈ ಭಾಗದ ಅಭಿವೃದ್ಧಿ ಬಗ್ಗೆ ಅವರಿಗೆ ಸಾಕಷ್ಟು ಚಿಂತನೆ ಇತ್ತು ಎಂದು ಉಮೇಶ್ ಕತ್ತಿ ಆಪ್ತರು ಹೇಳುತ್ತಾರೆ.