logo
ಕನ್ನಡ ಸುದ್ದಿ  /  ಕರ್ನಾಟಕ  /  Kannada Sahitya Sammelana: ಮುಸ್ಲಿಂ ಲೇಖಕರ ಕಡೆಗಣನೆ, ಪರ್ಯಾಯ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ, ಫೇಸ್‌ಬುಕ್‌ನಲ್ಲಿ ಬಿಸಿಬಿಸಿ ಚರ್ಚೆ

Kannada Sahitya Sammelana: ಮುಸ್ಲಿಂ ಲೇಖಕರ ಕಡೆಗಣನೆ, ಪರ್ಯಾಯ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ, ಫೇಸ್‌ಬುಕ್‌ನಲ್ಲಿ ಬಿಸಿಬಿಸಿ ಚರ್ಚೆ

HT Kannada Desk HT Kannada

Dec 27, 2022 12:24 PM IST

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ

    • ಕನ್ನಡ ಸಾಹಿತ್ಯ ವಲಯದಲ್ಲಿ ಹೊಸ ಚರ್ಚೆ ಹಾಕಿದ ಈ ವಿದ್ಯಮಾನ ಇದೀಗ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸಲು ಕಾರಣವಾಗುತ್ತಿದೆ. ಈ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜನವರಿ 6ರಿಂದ 8ರವರೆಗೆ ಹಾವೇರಿಯಲ್ಲಿ ನಡೆಯಲಿದೆ. ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಸಾಹಿತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ವಿಚಾರವು ಹೊಸ ಚರ್ಚೆ, ವಿವಾದ ಹುಟ್ಟು ಹಾಕಿತ್ತು.

ಟ್ರೆಂಡಿಂಗ್​ ಸುದ್ದಿ

Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

ಕರ್ನಾಟಕ ಹವಾಮಾನ ಮೇ 6; ಚಾಮರಾಜನಗರ, ಮೈಸೂರು ಜಿಲ್ಲೆಗಳ ಕೆಲವೆಡೆ ಮಳೆ, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಶಾಖದ ಅಲೆ ಎಚ್ಚರಿಕೆ

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಕನ್ನಡ ಸಾಹಿತ್ಯ ವಲಯದಲ್ಲಿ ಹೊಸ ಚರ್ಚೆ ಹಾಕಿದ ಈ ವಿದ್ಯಮಾನ ಇದೀಗ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸಲು ಕಾರಣವಾಗುತ್ತಿದೆ. ಈ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ.

ಎರಡು ದಿನದ ಹಿಂದೆ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದವು. "ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಬರಬೇಕು. ಬರಗೂರು ಇರಬೇಕು. ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ ಎಂ ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್‌ ಫಂಡಿಂಗ್‌ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ

ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯ:ಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ!" ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು.

ಈ ಕುರಿತು ನಿನ್ನೆಯೂ ಅವರು ಅಪ್‌ಡೇಟ್‌ ನೀಡಿದ್ದು, ಸ್ಥಳ ಮತ್ತು ದಿನಾಂಕ ಕುರಿತು ಮಾಹಿತಿ ಸದ್ಯದಲ್ಲಿಯೇ ನೀಡುವುದಾಗಿ ತಿಳಿಸಿದ್ದಾರೆ. "ಕನಿಷ್ಠ ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕ ಲೇಖಕಿಯರ ಸಂಖ್ಯೆ ಆಗಲೇ ೬೦೦ನ್ನು ಮೀರಿದೆ. ಹೊಸ ಹೆಸರುಗಳು ಇನ್ನೂ ಬರುತ್ತಲೇ ಇವೆ. ಹೆಸರುಗಳನ್ನು ಕಳಿಸಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಕನ್ನಡ ಸಾಹಿತ್ಯ ಪರಿಷತ್ತು ಬಹುತೇಕವಾಗಿ ಅನುಪಯುಕ್ತವಾಗಿರುವ ಹಿನ್ನೆಲೆಯಲ್ಲಿ ಉಪಯುಕ್ತ ಸಮ್ಮೇಳನ ಹೇಗೆ ನಡೆಸಬೇಕೆಂಬುದರ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಮಧ್ಯಮ ವರ್ಗಕ್ಕೆ ಸಹಜವಾದ ವ್ಯಂಗ್ಯ, ಹತಾಶೆ, ಸಿನಿಕತನಗಳೂ ಸಹಜವಾಗಿ ಕಾಣಿಸಿಕೊಳ್ಳುತ್ತಿವೆ. ಅತ್ಯಂತ ಹೆಚ್ಚು ಪ್ರತಿಕ್ರಿಯೆಗಳು ಉತ್ತರ ಕರ್ನಾಟಕದ ಭಾಗದಿಂದ ಬರುತ್ತಿರುವುದು ಕುತೂಹಲದ ವಿಷಯವಾಗಿದೆ. ಎಲ್ಲವನ್ನೂ ಅಳೆದು ತೂಗಿ, ಗಡಿಬಿಡಿ ಮಾಡದೆ, ಉಪಯೋಗವಾಗುವಂಥ ಏನಾದರೂ ಮಾಡೋಣ. ಅದು ಈ ಹೊತ್ತಿನ ನಮ್ಮ ಜವಾಬ್ದಾರಿಯೂ ಹೌದುʼʼ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ನನ್ನ ನಿಜವಾದ ಆತಂಕವಿರುವುದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದು ನಡೆಸುವ ಸಮ್ಮೇಳನಗಳು ಸಂಪೂರ್ಣ ಅನುಪಯುಕ್ತವಾಗಿರುವುದರ ಬಗ್ಗೆ. ತೆರಿಗೆದಾರರ ಹಣ ಪೋಲಾಗುತ್ತಿರುವುದರ ಬಗ್ಗೆ. ಕರ್ನಾಟಕ ಏಕೀಕರಣ ಚಳುವಳಿಯೂ ಸೇರಿದಂತೆ ಪರಿಷತ್ತು ಹಿಂದೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದೆ. ಆದರೆ ಇವತ್ತು ಅದಕ್ಕೆ ಏನೂ ಮಾಡಲಾಗುತ್ತಿಲ್ಲ. ೨೧ನೇ ಶತಮಾನದ ಕನ್ನಡ - ಕರ್ನಾಟಕ ಇದಿರಿಸುತ್ತಿರುವ ಕೋಮುವಾದ ಮತ್ತು ಜಾಗತೀಕರಣದ ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ, ಗಡಿ ಸಮಸ್ಯೆ, ತ್ರಿಭಾಷಾ ಸೂತ್ರ, ಇತ್ಯಾದಿಗಳಿಂದಾಗಿ ಕನ್ನಡ ಇವತ್ತು ಹಿಂದೆ ಬಿದ್ದಿದೆ. ಇಂಥ ವಿಷಯಗಳಲ್ಲಿ ಕನ್ನಡದ ಪರವಾಗಿ ಧ್ವನಿ ಎತ್ತಿ, ನಾಯಕತ್ವ ನೀಡುವ ಅರ್ಹತೆಯನ್ನು ಪರಿಷತ್ತು ಕಳೆದುಕೊಂಡಿದೆ. ಪರಿಷತ್ತೇ ಸಮ್ಮೇಳನಗಳಲ್ಲಿ ಅಂಗೀಕರಿಸಿದ ನಿರ್ಣಯಗಳೆಷ್ಟು? ಅವುಗಳ ಗತಿ ಏನಾಗಿದೆ? ಸರಕಾರೀ ಅಂಗ ಸಂಸ್ಥೆಯಾಗಿ ಬೆಳೆದಿರುವ ಅದು ಸಾಹಿತ್ಯದ ಮೂಲ ಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದೆ.

ಲಕ್ಷಾಂತರ ಸದಸ್ಯರಿರುವ ಪರಿಷತ್ತಿಗೆ ಇವತ್ತು ಸಂವೇದನಾ ಶೀಲ ಲೇಖಕರು ಅಧ್ಯಕ್ಷರಾಗುವುದೂ ಸಾಧ್ಯವಿಲ್ಲ ಎಂಬುದೂ ಸಾಬೀತಾಗಿದೆ. ಈ ಎಲ್ಲಾ ಕಾರಣದಿಂದಾಗಿ ಜನರು ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ. ಅದು ಒಂದು ಬಗೆಯ ಪ್ರತಿಭಟನೆಯಿಂದ ಆರಂಭವಾಗುವುದೂ ಅನಿವಾರ್ಯ. ಆದರೆ ಪ್ರತಿಭಟನೆಯೇ ಅದರ ಕೆಲಸವಲ್ಲ, ಕೆಲಸವಾಗಬಾರದು. ನಾನು ಹೇಳುತ್ತಿರುವುದು ಹೊಸ ಮಾತುಗಳೇನೂ ಅಲ್ಲ. ೧೯೭೫ರಲ್ಲಿ ಕುವೆಂಪು ಅವರು ಮೈಸೂರಿನಲ್ಲಿ ಉದ್ಘಾಟಿಸಿದ ಬರಹಗಾರ ಕಲಾವಿದರ ಸಮ್ಮೇಳನದಲ್ಲಿ ಆಡಿದ ಮಾತುಗಳು ಇಂದಿಗೂ ನಮಗೆ ಪ್ರೇರಣೆ ನೀಡುತ್ತಿವೆ. ಇಂಥ ಕೆಲಸಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಲಂಕೇಶ್‌, ಸುಬ್ಬಣ್ಣ, ತೇಜಸ್ವಿ, ರಾಮದಾಸ್‌ ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರನ್ನು ಹೊರಗಟ್ಟಿರುವುದು ತಕ್ಷಣಕ್ಕೆ ಎದ್ದು ಕಾಣುವ ಸಂಗತಿಯಾಗಿದೆ. ೮೩ಜನ ಸನ್ಮಾನಿತರಲ್ಲಿ ಮುಸ್ಲಿಮನೊಬ್ಬನೂ ಇರದಿರುವುದು ಆಕಸ್ಮಿಕ ಏನೂ ಅಲ್ಲ. ಇದೊಂದು ಕೋಮುವಾದೀ ಪ್ರಕ್ರಿಯೆ. ಹಾಗಂತ ನಾವಿದನ್ನು ಹೇಳಿದರೆ-ʼ ನೋಡಿ ಇವರು ಜನರನ್ನು ಒಡೆಯುತ್ತಿದ್ದಾರೆʼ ಎಂದು ಅವರೇ ಹೇಳಬಹುದು.

ಇದನ್ನು ನೆವ ಮಾಡಿಕೊಂಡು ನಾವೆಲ್ಲ ಮತ್ತೊಂದು ವೇದಿಕೆಯನ್ನು ಕಟ್ಟಿಕೊಂಡು ಕ್ರಿಯಾಶೀಲರಾಗಬೇಕಾದ್ದು ಅತ್ಯಗತ್ಯ. ಅಂದರೆ ಮುಸ್ಲಿಂ ಲೇಖಕರ ಸಮ್ಮೇಳನ ಮಾಡುವುದು ಎಂಬ ಅರ್ಥವಲ್ಲ. ನಾಡು ನುಡಿಗೆ ಉಪಯುಕ್ತವಾದ ಒಂದು ಸಮಾವೇಶವನ್ನು ಎಲ್ಲರೂ ಒಳಗೊಂಡಂತೆ ನಡೆಸುವುದು ಎಂದರ್ಥ. ಇದಕ್ಕೆ ದೂರಗಾಮೀ ಪರಿಣಾಮ ಬೀರುವ ಶಕ್ತಿ ಇರುವುದರಿಂದ ಸಾಕಷ್ಟು ಯೋಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಯೋಚನೆಗಳಿಗೆ ಇದುವರೆಗೆ ದೊರೆತ ಬೆಂಬಲ ಮಾತ್ರ ಅಸಾಧಾರಣ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಒಟ್ಟಾರೆ ಕಳೆದ ಕೆಲವು ದಿನಗಳಿಂದ ಈ ಕುರಿತು ಹೊಸ ಬಗೆಯ ಚರ್ಚೆ ನಡೆಯುತ್ತಿದ್ದು, ಪರ್ಯಾಯ ಸಮ್ಮೇಳನವೊಂದು ಸದ್ಯದಲ್ಲಿಯೇ ನಡೆಯುವ ಸೂಚನೆಯಿದೆ.

    ಹಂಚಿಕೊಳ್ಳಲು ಲೇಖನಗಳು