logo
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರು ಚಾಮುಂಡಿಬೆಟ್ಟದಲ್ಲಿ ಅದ್ದೂರಿ ರಥೋತ್ಸವ; ಮನೆ ದೇವರ ಪೂಜೆಯಿಂದ ದೂರ ಉಳಿದ ರಾಜವಂಶಸ್ಥ ಯದುವೀರ್‌

Mysore News: ಮೈಸೂರು ಚಾಮುಂಡಿಬೆಟ್ಟದಲ್ಲಿ ಅದ್ದೂರಿ ರಥೋತ್ಸವ; ಮನೆ ದೇವರ ಪೂಜೆಯಿಂದ ದೂರ ಉಳಿದ ರಾಜವಂಶಸ್ಥ ಯದುವೀರ್‌

Umesha Bhatta P H HT Kannada

Oct 16, 2024 03:51 PM IST

google News

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ರಥೋತ್ಸವ ಹಾಗೂ ದೇವಿಯ ಅಲಂಕಾರ, (ಚಿತ್ರ: ಅನುರಾಗ್‌ ಬಸವರಾಜ್‌ ಮೈಸೂರು)

    • ನಾಡಿನ ಅಧಿದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ರಥೋತ್ಸವವು ಬುಧವಾರ ವೈಭವದಿಂದ ನೆರವೇರಿತು. ಶುಕ್ರವಾರ ದೇವಿಯ ತೆಪ್ಪೋತ್ಸವವು ನಡೆಯಲಿದೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ರಥೋತ್ಸವ ಹಾಗೂ ದೇವಿಯ ಅಲಂಕಾರ, (ಚಿತ್ರ: ಅನುರಾಗ್‌ ಬಸವರಾಜ್‌ ಮೈಸೂರು)
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ರಥೋತ್ಸವ ಹಾಗೂ ದೇವಿಯ ಅಲಂಕಾರ, (ಚಿತ್ರ: ಅನುರಾಗ್‌ ಬಸವರಾಜ್‌ ಮೈಸೂರು)

ಮೈಸೂರು: ಮೈಸೂರು ದಸರಾ ಮುಗಿದ ನಾಲ್ಕು ದಿನದಲ್ಲಿಯೇ ನಾಡಿನ ಅಧಿದೇವತೆ,ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ರಥೋತ್ಸವವು ಬುಧವಾರ ವೈಭವದಿಂದಲೇ ನೆರವೇರಿತು. ಕರ್ನಾಟಕದ ವಿವಿಧೆಡೆಗಳಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ನೆರವೇರಿದ ಚಾಮುಂಡೇಶ್ವರಿ ದೇವಿಯ ರಥೋತ್ಸವದಲ್ಲಿ ಭಕ್ತಿ ಭಾವ ಮೇಳೈಸಿತ್ತು. ಮಗ ಹುಟ್ಟಿರುವ ಕಾರಣದಿಂದ ಅಶುಚಿಯಾಗಿರುವ ಮೈಸೂರು ಕೊಡಗು ಸಂಸದ ಹಾಗೂ ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರಥೋತ್ಸವದಿಂದಲೂ ದೂರ ಉಳಿದರು. ಯದುವೀರ್‌ ಮಾತ್ರವಲ್ಲದೇ ರಾಜವಂಶಸ್ಥರು ಯಾರೂ ಬಂದಿರಲಿಲ್ಲ.

ಬೃಹದಾಕಾರದ ರಥಕ್ಕೆ ವಿವಿಧ ಬಣ್ಣದ ಬಾವುಟಗಳನ್ನು ಕಟ್ಟಲಾಗಿತ್ತಲ್ಲದೇ ವಿವಿಧ ಬಗೆಯ ಹೂವುಗಳು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗೆ ಚಿನ್ನ, ವಜ್ರ ವೈಡೂರ್ಯದ ಆಭರಣಗಳನ್ನು ಧರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರು ಮಹಾಮಂಗಳಾರತಿ ಮಾಡಿದ ಬಳಿಕ ರಥೋತ್ಸವ ಆರಂಭವಾಯಿತು.ಬೆಳಿಗ್ಗೆ 9:30ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬೃಹತ್ ರಥ ದೇಗುಲವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿತು. ಸುಮಾರು ಒಂದು ಗಂಟೆ ಕಾಲ ಕ್ರಮಿಸಿದ ಬೃಹತ್ ರಥ ಬೆಳಿಗ್ಗೆ 10:30ರ ಸುಮಾರಿಗೆ ಸ್ವಸ್ಥಾನಕ್ಕೆ ಬಂದು ತಲುಪಿತು.

ರಥೋತ್ಸವ ಸಾಗಿದೆಡೆಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ರಥದ ಮೇಲೆ ಹಣ್ಣು ಜವನ ಎಸೆದು ಹರಕೆ ತೀರಿಸಿದ ಭಕ್ತರು, ಜೈ ಚಾಮುಂಡಿ, ಉಘೇ ಉಘ ಚಾಮುಂಡಿ ಎಂದು ಘೋಷಣೆ ಕೂಗಿ ಭಕ್ತಿಭಾವ ತೋರಿದರು.ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಅತ್ಯಂತ ವೈಭವದಿಂದ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನೆರವೇರಿತು‌.

ನಾದಸ್ವರ ವಾದನ, ಪೊಲೀಸ್ ವಾದ್ಯವೃಂದ, ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ತಂದವು. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಸಿಡಿಮದ್ದುಗಳನ್ನು ಸಿಡಿಸಿದರು.

ಚಾಮುಂಡೇಶ್ವರಿ ರಥೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಲ್ಲದೇ, ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಪತ್ನಿ ಲಲಿತಾದೇವೇಗೌಡ ಹಾಗೂ ಮಕ್ಕಳು ರಥೋತ್ಸವದಲ್ಲಿ ಭಾಗಿಯಾಗಿ ಪೂಜೆಯನ್ನು ಸಲ್ಲಿಸಿದರು.

ರಾಜವಂಶಸ್ಥ ಯದುವೀರ್ ಅವರ ಪತ್ನಿಗೆ ಆಯುಧಪೂಜೆಯ ದಿನ ಪುತ್ರ ಸಂತಾನವಾದ ಹಿನ್ನೆಲೆಯಲ್ಲಿ, ಸೂತಕದ ಕಾರಣ ರಾಜಮನೆತನದ ಯಾವೊಬ್ಬ ಸದಸ್ಯರು ರಥೋತ್ಸವದಲ್ಲಿ ಭಾಗಿಯಾಗಲಿಲ್ಲ.

ಚಾಮುಂಡೇಶ್ವರಿ ದೇವಿ ಮೈಸೂರು ಅರಸರ ಕುಲದೇವತೆಯಾಗಿರುವ ಕಾರಣ ರಥೋತ್ಸವ ಆರಂಭದ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು.

ಶುಕ್ರವಾರ ಸಂಜೆ ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ಅಮ್ಮನವರ ತೆಪ್ಪೋತ್ಸವ ನಡೆಯಲಿದೆ. ಅದರೊಂದಿಗೆ ಈ ವರ್ಷದ ದಸರಾ ಧಾರ್ಮಿಕ ಚಟುವಟಿಕೆಗಳಿಗೆ ಚಾಮುಂಡಿಬೆಟ್ಟದಲ್ಲಿ ತೆರೆ ಬೀಳಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ