Mysore Court News: ಹೆಂಡತಿ ಮಕ್ಕಳ ಜತೆಯಲ್ಲಿ ತಾಯಿಯನ್ನೂ ಕೊಲೆ ಮಾಡಿದ್ದ ಮೈಸೂರಿನ ಆರೋಪಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದ ಕೋರ್ಟ್
Nov 28, 2024 05:12 PM IST
ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕೊಲೆ ಮಾಡಿದ್ದ ಮೈಸೂರು ಜಿಲ್ಲೆಯ ವ್ಯಕ್ತಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
Mysore Court News: ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಲೇ ಇದ್ದ ಮೈಸೂರು ಜಿಲ್ಲೆ ಸರಗೂರಿನ ವ್ಯಕ್ತಿ ಆಕೆ ಗರ್ಭಿಣಿಯಾಗಿದ್ದಾಗಲೇ ಭೀಕರವಾಗಿ ಕೊಲೆ ಮಾಡಿದ್ದೂ ಅಲ್ಲದೇ ತನ್ನಿಬ್ಬರು ಮಕ್ಕಳು, ತಾಯಿಯನ್ನೂ ಕೊಲೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯಾಗಿದೆ.
Mysore Court News:ಹೆಂಡತಿ, ಮಕ್ಕಳ ಜತೆಗೆ ಹೆತ್ತ ತಾಯಿಯನ್ನೂ ಭೀಕರವಾಗಿ ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಮೈಸೂರಿನ ನ್ಯಾಯಾಲಯವ ಮರಣದಂಡನೆ ಶಿಕ್ಷೆ ವಿಧಿಸಿದೆ. ಮೈಸೂರು ಜಿಲ್ಲೆಯಲ್ಲಿ ಮೂರು ವರ್ಷದ ಹಿಂದೆ ಭಾರೀ ಗಮನ ಸೆಳೆದಿದ್ದ ಪ್ರಕರಣವಿದು. ಪ್ರಕರಣದ ಕುರಿತಾಗ ಸುದೀರ್ಘ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದರಿಂದ ವ್ಯಕ್ತಿಗೆ ಮರಣದಂಡದೆ ಶಿಕ್ಷೆ ವಿಧಿಸಲಾಗಿದೆ. ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಚಾಮೇಗೌಡನಹುಂಡಿ ಗ್ರಾಮದಲ್ಲಿ ನಡೆದಿದ್ದ ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಣಿಕಂಠಸ್ವಾಮಿ ಆಲಿಯಾಸ್ ಕುಂಟ ಮರಣ ದಂಡೆನೆಗೆ ಒಳಗಾದ ವ್ಯಕ್ತಿ.
ಕಳೆದ 2014ರಲ್ಲಿ ಗಂಗೆ ಎಂಬುವಳನ್ನು ವಿವಾಹವಾಗಿದ್ದ ಮಣಿಕಂಠಸ್ವಾಮಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದುವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು.
ಹೆಂಡತಿ ಮೇಲೆ ಅನುಮಾನಪಟ್ಟು ಪದೇ ಪದೇ ಮಣಿಕಂಠ ಜಗಳವಾಡುತ್ತಿದ್ದ. ಊರವರು, ಸಂಬಂಧಿಕರು ಮನ ಒಲಿಸಿ ರಾಜೀಪಂಚಾಯಿತಿ ನಡೆಸಿದರು ತನ್ನ ಬುದ್ದಿ ಬಿಟ್ಟಿರಲಿಲ್ಲ. ಜಗಳ ಮಾತ್ರ ಮುಂದುವರಿದಿತ್ತು.
.2021 ರ ಏಪ್ರಿಲ್ 28 ರಂದು ಆರೋಪಿಯಾದ ಮಣಿಕಂಠಸ್ವಾಮಿ ತನ್ನ ಹೆಂಡತಿಯ ಶೀಲ ಶಂಕಿಸಿ ಜಗಳ ಮಾಡಿದ್ದ. ಈ ವೇಳೆ ತುಂಬು ಗರ್ಭಿಣಿಯಾಗಿದ್ದ ಪತ್ನಿ ಗಂಗೆಯನ್ನು ಕೊಲೆ ಮಾಡಿದ್ದ.
ಬೆಳಗಿನ ಜಾವ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಒಂಬತ್ತು ತಿಂಗಳ ಗರ್ಭಣಿ ಮತ್ತು ತಾಯಿ ಕೆಂಪಾಜಮ್ಮ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಸೇರಿದಂತೆ ಮೂರು ಜನರ ತಲೆಗೆ ಹೊಡೆದು ಕೊಲೆ ಮಾಡಿದ್ದೂ ಅಲ್ಲದೇ ಒಂದುವರೆ ವರ್ಷದ ಮಗ ರೋಹಿತ್ ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿ ಅಲ್ಲಿಂದ ಪರಾರಿಯಾಗಿದ್ದ
ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದರ ಬಗ್ಗೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆತನ ವಿರುದ್ದ ಕ್ರಮಕ್ಕೂ ಒತ್ತಾಯಿಸಿದ್ದರು. ಬಳಿಕ ಆರೋಪಿಯನ್ನು ಸರಗೂರು ಪೊಲೀಸರು ಬಂಧಿಸಿದ್ದರು. ಸರಗೂರು ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿ ವಿಚಾರಣೆ ನಡೆಸಿ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಅಪರಾಧಿ ಮಣಿಕಂಠ ಸ್ವಾಮಿಗೆ ಮರಣದಂಡನೆಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.