ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಿದ ಮೈಸೂರು ಲೋಕಾಯುಕ್ತ, ಸಿಎಂಗೆ ಶುರುವಾಯ್ತು ಟೆನ್ಶನ್
Nov 04, 2024 06:39 PM IST
ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಿದ ಮೈಸೂರು ಲೋಕಾಯುಕ್ತ
- CM Siddaramaiah: ಮುಡಾ ಕೇಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವೆಂಬರ್ 6ರ ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಬಹು ಕೋಟಿ ಹಗರಣಕ್ಕೆ ಸಂಬಂಧಿಸಿ ದಾಖಲಾಗಿರುವ ಪ್ರಕರಣದಲ್ಲಿ ಎ1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. 50-50ರ ಅನುಪಾತದ ಅಡಿ ನಿವೇಶನಗಳ ಹಂಚಿಕೆಯಲ್ಲಿ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ನವೆಂಬರ್ 6ರ ಬೆಳಿಗ್ಗೆ 10.30ಕ್ಕೆ ಬರುವಂತೆ ಸೂಚಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಎ2 ಆರೋಪಿ ಸಿಎಂ ಪತ್ನಿ ಪಾರ್ವತಿ, ಎ3 ಆರೋಪಿ ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಎ4 ಆರೋಪಿ ಭೂಮಿ ಮಾರಿದ ದೇವರಾಜ್ ವಿಚಾರಣೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ಇದೀಗ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ವಾರ ಎ2 ಆರೋಪಿ ಪತ್ನಿ ಪಾರ್ವತಿ ಅವರನ್ನು ಸತತ ಮೂರು ಗಂಟೆಗಳ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಎ3, ಎ4 ಆರೋಪಿಗಳನ್ನು ಒಟ್ಟಿಗೆ ಕರೆಸಿಕೊಂಡಿದ್ದರು.