Mysore Dasara 2024: ಮೈಸೂರು ದಸರಾ ಡ್ರೋನ್ ಶೋ ನ ಅನಧಿಕೃತ ಡ್ರೋನ್ ವಿಡಿಯೋ ಚಿತ್ರೀಕರಣ ಮಾಡೀರಿ ಹುಷಾರ್
Oct 09, 2024 06:07 PM IST
ಮೈಸೂರಿನಲ್ಲಿ ಆಯೋಜನೆಗೊಂಡಿರುವ ಡ್ರೋನ್ ಪ್ರದರ್ಶನದ ನೋಟ.
- ಮೈಸೂರಿನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿರುವ ಡ್ರೋನ್ ಪ್ರದರ್ಶನವನ್ನು ಅನಧಿಕೃತವಾಗಿ ಡ್ರೋನ್ ಬಳಸುತ್ತಿರುವುದು ಕಂಡು ಬಂದ ನಂತರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಮುನ್ನೆಚ್ಚರಿಕೆ ನೀಡಿದೆ.
ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತಿದೊಡ್ಡ ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದ್ದು, ಅ.6 ಮತ್ತು 7ರಂದು ನಡೆದ ಪ್ರದರ್ಶನ ಅಭೂತಪೂರ್ವ ಯಶಸ್ಸಿನೊಂದಿಗೆ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಡ್ರೋನ್ ಪ್ರದರ್ಶನ ನಡೆಯುವ ವೇಳೆ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಡ್ರೋನ್ ಗಳನ್ನು ಹಾರಿಸಿ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಿರುವುದು ಹಾಗೂ ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುತ್ತಿರುವುದು ಕಂಡು ಬಂದ ನಂತರ ಸೆಸ್ಕ್ ಎಚ್ಚರಿಕೆ ವಹಿಸಿದೆ.
ಈ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಡ್ರೋನ್‌ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ 2024ರ ಅಕ್ಟೋಬರ್ 11 ಹಾಗೂ 12 ರಂದು ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸುವುದು ಹಾಗೂ ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂದಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳಲು ಸೆಸ್ಕ್ ನಿರ್ಧರಿಸಿದೆ.
ಈಗಾಗಲೇ ಯಾರೆಲ್ಲಾ ಅನಧಿಕೃತವಾಗಿ ಡ್ರೋನ್ ಪ್ರದರ್ಶನವನ್ನು ಖಾಸಗಿಯಾಗಿ ಡ್ರೋನ್ ಮೂಲಕ ಚಿತ್ರೀಕರಿಸಿದ್ದಾರೆ ಅವರುಗಳ ವಿರುದ್ಧವೂ ಪ್ರಕರಣ ದಾಖಲಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಕೇವಲ ಡ್ರೋನ್ ಪ್ರದರ್ಶನ ಮಾತ್ರವಲ್ಲದೆ ದಸರಾ ಅಂಗವಾಗಿ ಮೈಸೂರು ನಗರದಾದ್ಯಂತ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರದ ದೃಶ್ಯಗಳನ್ನು ಸಹ ಡ್ರೋನ್ ಮೂಲಕ ಅನಧಿಕೃತವಾಗಿ ಚಿತ್ರೀಕರಿಸುವುದು ಕೂಡ ಅಪರಾಧವಾಗಿದೆ. ಹಾಗಾಗಿ, ಯಾವುದೇ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್ ಗಳ ಮೂಲಕ ಅನಧಿಕೃತ ಚಿತ್ರೀಕರಣ ಮಾಡದಂತೆ ಎಚ್ಚರಿಸಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೂರು ದಿನದ ಹಿಂದೆ ಸತತ ಎರಡು ದಿನ ರಾಜ್ಯದಲ್ಲೇ ಹಾಗೂ ಮೈಸೂರು ದಸರೆಯಲ್ಲಿ ಮೊದಲ ಬಾರಿಗೆ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿಯ ಜನರಿಗೆ ಮರೆಯಲಾಗದ ಅನುಭವ ನೀಡುವಲ್ಲಿ ಯಶಸ್ವಿಯಾಗಿದ್ದವು.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋನಲ್ಲಿ 1500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ್ದವು. ರಾತ್ರಿ 7:45ಕ್ಕೆ ಆರಂಭಗೊಂಡ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಿ ಗಮನ ಸೆಳೆದಿದ್ದವು.
ಇನ್ನೂ ಎರಡು ಪ್ರದರ್ಶನಗಳು ಈಗ ನಿಗದಿಯಾಗಿವೆ. ಇದರ ನಡುವೆ ಕೆಲವರು ಡ್ರೋನ್ ಬಳಸಿ ಈ ಪ್ರದರ್ಶನದ ವಿಡಿಯೋ ತೆಗೆದು ಹಾಕುತ್ತಿರುವುದರಿಂದ ಸೆಸ್ಕ್ ಇಂತಹದೊಂದು ಎಚ್ಚರಿಕೆ ನೀಡಲಾಗಿದೆ.