Mysore Dasara: ಯುವ ದಸರಾದಲ್ಲಿ ಈ ಬಾರಿ ಎಆರ್ ರಹಮಾನ್, ಇಳಯರಾಜ ಮಾಡ್ತಾರೆ ಮೋಡಿ; ಯಾವ ದಿನ ಯಾರ ಕಾರ್ಯಕ್ರಮ
Sep 25, 2024 12:32 PM IST
ಮೈಸೂರು ದಸರಾದ ಯುವ ದಸರಾದಲ್ಲಿ ಎಆರ್ ರಹಮಾನ್, ಶ್ರೇಯಾ ಘೋಷಾಲ್, ಇಳಯರಾಜ ಸಂಗೀತ ಸಂಜೆಗಳು ಆಕರ್ಷಣೆಯಾಗಲಿವೆ.
- ಈ ಬಾರಿ ಮೈಸೂರು ದಸರಾದ ಯುವ ದಸರಾದಲ್ಲಿ ಖ್ಯಾತ ಸಂಗೀತ ನಿರ್ದೇಶಕ 81 ರ ಇಳಿ ವಯಸ್ಸಿನಲ್ಲೂ ಇಳಯರಾಜ ಅವರು ಮೋಡಿ ಮಾಡಲಿದ್ದಾರೆ. ಎ.ಆರ್.ರಹಮಾನ್ ಕೂಡ ದಸರಾದಲ್ಲಿ ಭಾಗಿಯಾಗುತ್ತಿದ್ದಾರೆ.
ಮೈಸೂರು: ಮೈಸೂರು ದಸರಾದಲ್ಲಿ ಯುವ ಮನಸುಗಳಿಗೆ ಮಾತ್ರವಲ್ಲದೇ ಜೋಶ್ ಪ್ರಿಯರಿಗೆಲ್ಲಾ ಕಿಚ್ಚು ಹಚ್ಚುವ ಯುವ ದಸರಾದಲ್ಲಿ ಈ ಬಾರಿ ಸಂಗೀತ ದಿಗ್ಗಜ ಇಳಯರಾಯ, ಯುವ ಮನಸುಗಳಿಗೆ ಕಚಗುಳಿ ಇಡುವ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಮಾಧುರ್ಯದ ಗಾಯಕಿ ಶ್ರೇಯಾ ಘೋಷಾಲ್, ಕನ್ನಡಿಗರ ಹೆಮ್ಮೆಯ ಕಲಾವಿದ, ಸಂಗೀತ ನಿರ್ದೇಶಕ ಹಾಗೂ ಗಾಯಕ ರವಿ ಬಸ್ರೂರು, ಖ್ಯಾತ ಕಲಾವಿದ ಬಾದ್ ಶಾ ಅವರು ಕಾರ್ಯಕ್ರಮ ನೀಡಲಿದಾರೆ. ದಸರಾದಲ್ಲಿ ಎ.ಆರ್.ರಹಮಾನ್ ಹಾಗೂ ಇಳಯರಾಜ ಅವರಂತಹ ದಿಗ್ಗಜರು ಮೊದಲ ಬಾರಿಗೆ ಭಾಗಿಯಾಗುತ್ತಿರುವುದು ವಿಶೇಷ. ಯುವದಸರಾ 2024ರ ಉಪಸಮಿತಿಯು ಅಧಿಕೃತ ಕಾರ್ಯಕ್ರಮಗಳ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಹಿಂದೆಲ್ಲಾ ಶ್ರೇಯಾ ಘೋಷಾಲ್ ಯುವ ದಸರಾದಲ್ಲಿ ಹಾಡಿದ್ಧಾರೆ. ಕೆಲ ವರ್ಷದ ನಂತರ ಅವರು ಆಗಮಿಸುತ್ತಿದ್ದಾರೆ. ಅದೇ ರೀತಿ ಬಾದ್ ಶಾ ಕೂಡ ಭಾಗವಹಿಸುತ್ತಿದ್ದಾರೆ. ರವಿಬಸ್ರೂರ್ ಕೂಡ ಕನ್ನಡದ ಜತೆಗೆ ತುಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದು ಬಹುಭಾಷೆಯ ಚಿತ್ರಗಳ ಕಾರ್ಯಕ್ರಮ ನೀಡಲಿದ್ದಾರೆ.
ಈ ಬಾರಿಯ ದಸರಾದಲ್ಲಿ ವಿಶೇಷವಾಗಿ ಇಳಯರಾಜ ಅವರ ಕಾರ್ಯಕ್ರಮ ಆಕರ್ಷಣೆಯಾಗಲಿದೆ.81 ರ ಇಳಿವಯಸ್ಸಿನಲ್ಲೂ ಎಲ್ಲಾ ವಯೋಮಾನದವರನ್ನು ಆಕರ್ಷಿಸಬಲ್ಲ ಸಂಗೀತ ಮಾಂತ್ರಿಕ ಇಳಯರಾಜ ಅವರು. 70- 80ರ ದಶಕದಿಂದಲೂ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಸಹಿತ ಹಲವು ಭಾಷೆಗಳಿಗೆ ಸಂಗೀತ ನಿರ್ದೇಶನ ನೀಡಿ ಹಾಡನ್ನೂ ಹಾಡಿರುವ ಇಳಯರಾಜ ವಿಭಿನ್ನ ಸಂಗೀತ ಸಂಯೋಜನೆಯ ಅಭಿಜಾತ ಕಲಾವಿದ. ಕನ್ನಡದಲ್ಲಿ ಕೆಲವೇ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರೂ ಬಹುತೇಕ ಸೂಪರ್ ಹಿಟ್ ಆಗಿವೆ.
ಅದೇ ರೀತಿ ಎ.ಆರ್.ರಹಮಾನ್ ಕೂಡ 90ರ ದಶಕದಿಂದಲೂ ಬಾಂಬೆಯಂತಹ ಚಿತ್ರದ ಮೂಲಕ ಹೊಸ ರೀತಿಯ ಸಂಗೀತ ಪ್ರಪಂಚವನ್ನೇ ಸೃಷ್ಟಿಸಿದವರು. ಹಿಂದಿ ಹಾಗೂ ತಮಿಳಿನಲ್ಲಿ ಹೆಚ್ಚು ಎನ್ನಿಸಿದರೂ ರಹಮಾನ್ ಅವರು ಕೂಡ ಕನ್ನಡ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ.
ಬಾದಶಾ ಹೊಸ ತಲೆಮಾರಿನ ಗಾಯಕ. ಹಿಂದಿ, ಕನ್ನಡ ಗೀತೆಗಳ ಮೂಲಕ ಗಮನ ಗೆದ್ದವರು. ಅವರ ಕಾರ್ಯಕ್ರಮವೂ ಆಕರ್ಷಣೆಯಾಗಲಿದೆ.
ಪ್ರತಿ ವರ್ಷ ಯುವ ದಸರಾ ಕಾರ್ಯಕ್ರಮ ಆರು ದಿನ ಇರುತ್ತಿತ್ತಾದರೂ ಈ ಬಾರಿ ಅದನ್ನು ಐದು ದಿನಗಳಿಗೆ ಸೀಮಿತಗೊಳಿಸಲಾಗಿದೆ.
ಯಾವ ದಿನ ಯಾರ ಕಾರ್ಯಕ್ರಮವಿದೆ
- ಅಕ್ಟೋಬರ್ 6ರ ಭಾನುವಾರ ಬಾಲಿವುಡ್‌ನ ಖ್ಯಾತ ಗಾಯಕಿ ಶ್ರೇಯ ಘೋಷಾಲ್ ಮತ್ತು ತಂಡ
- ಅಕ್ಟೊಬರ್ 7ರ ಸೋಮವಾರ ಕನ್ನಡದ ಸಂಗೀತ ಸಂಯೋಜಕ ಹಾಗೂ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡ
- ಅಕ್ಟೋಬರ್ 8ರ ಮಂಗಳವಾರ ಖ್ಯಾತ ಬಾಲಿವುಡ್ ಗಾಯಕ ಹಾಗೂ ರಾಪರ್ ಬಾದ್ ಶಾ ಮತ್ತು ತಂಡ
- ಅಕ್ಟೋಬರ್ 9ರ ಬುಧವಾರ ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಹಾಗೂ ಗಾಯಕ ಎ.ಆರ್.ರಹಮಾನ್ ಮತ್ತು ತಂಡ
- ಅಕ್ಟೋಬರ್ 10ರ ಗುರುವಾರ ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಹಾಗೂ ಗಾಯಕ ಇಳಯರಾಜ ಮತ್ತು ತಂಡ