Yaduveer Wadiyar: ಯದುವೀರ್ ಒಡೆಯರ್ ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಬರಲಿಲ್ಲ; ಮನೆ ದೇವರು ಪೂಜೆಯಿಂದ ರಾಜವಂಶಸ್ಥದೂರ ಉಳಿಯಲು ಕಾರಣ ಏನು
Oct 12, 2024 06:16 PM IST
ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಜಂಬೂ ಸವಾರಿ ಪುಷ್ಪಾರ್ಚನೆಗೆ ಬರಲಿಲ್ಲ.
- ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಂಬೂ ಸವಾರಿ ಪುಷ್ಪಾರ್ಚನೆಗೆ ಈ ಬಾರಿ ಬರಲಿಲ್ಲ. ಇದಕ್ಕೆ ಕಾರಣ ಇಲ್ಲಿದೆ.
ಮೈಸೂರು: ಮೈಸೂರು ಹಾಗೂ ಕೊಡಗು ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿ ಹಾಗೂ ವಿಜಯದಶಮಿಗೆ ಸಂಬಂಧಿಸಿದ ಅರಮನೆಯ ವಿಧಿ ವಿಧಾನಗಳನ್ನು ಮುಗಿಸಿದರೂ ವಿಶ್ವವಿಖ್ಯಾತ ಜಂಬೂ ಸವಾರಿಗೆ ಬರಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ವೇದಿಕೆ ಏರಿ ಪುಷ್ಪಾರ್ಚನೆಯನ್ನೂ ಮಾಡಲಿಲ್ಲ. ಜಂಬೂ ಸವಾರಿ ಪ್ರಮುಖ ಭಾಗವಾದ ಪುಷ್ಪಾರ್ಚನೆ ವೇಳೆ ರಾಜವಂಶಸ್ಥರ ಪ್ರತಿನಿಧಿ ಇರುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದೂ ತಮ್ಮ ಮನೆ ದೇವರಾದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಚಟುವಟಿಕೆಯಿಂದ ದೂರವೇ ಉಳಿದರು. ಈ ಮೂಲಕ ಮಗ ಹುಟ್ಟಿದ್ದರಿಂದ ಹತ್ತು ದಿನ ಅಶೌಚ ಇರುವ ಕಾರಣವೂ ಈ ನಿರ್ಧಾರದ ಹಿಂದೆ ಇರುವಂತೆ ಕಾಣುತ್ತಿದೆ.
ಶುಕ್ರವಾರ ಬೆಳಿಗ್ಗೆ ಯದುವೀರ್ ಅವರ ಪತ್ನಿ ತ್ರಿಷಿಕಾಕುಮಾರಿ ದೇವಿ ಅವರು ಎರಡನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದು ಸಂತಸಕ್ಕೆ ಕಾರಣವಾಗಿತ್ತು. ದಸರಾ ವೇಳೆಯೇ ರಾಜವಂಶಸ್ಥರ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯ ಖುಷಿ ಇಮ್ಮಡಿಸಿತ್ತು. ಆದರೆ ಈ ವೇಳೆ ದಸರಾ ಧಾರ್ಮಿಕ ಚಟುವಟಿಕೆಗಳನ್ನು ಮಾಡಲು ಅಶೌಚದ ಅಡ್ಡಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಯದುವೀರ್ ಅವರು ಧಾರ್ಮಿ ವಿಧಿವಿಧಾನ ನಡೆಸುವರೇ, ಖಾಸಗಿ ದರ್ಬಾರ್ ನಡೆಸುವರೇ ಇಲ್ಲವೇ ಎನ್ನುವ ಚರ್ಚೆ ಎದುರಾಗಿತ್ತು.
ಆದರೆ ಅವರು ಕಂಕಣ ಧರಿಸಿರುವುದರಿಂದ ಯಾವುದೇ ಅಡ್ಡಿಯಿಲ್ಲ. ಎಲ್ಲಾ ಧಾರ್ಮಿಕ ವಿಧಿವಿಧಾನ ಸುಸೂತ್ರವಾಗಿ ನೆರವೇರಿಸಬಹುದು. ಅಲ್ಲದೇ ಖಾಸಗಿ ದರ್ಬಾರ್ ಕೂಡ ಮುಗಿಸಬಹುದು. ವಿಜಯದಶಮಿ ದಿನದ ಜಟ್ಟಿ ಕಾಳಗ, ಶಮೀ ಪೂಜೆ ಯಲ್ಲೂ ಭಾಗಿಯಾಗಬಹುದು ಎಂದು ಪುರೋಹಿತರು, ಆಗಮಿಕರು ಖಚಿತಪಡಿಸಿದ್ದರು. ಅದರಂತೆ ಯದುವೀರ್ ಅವರು ಕಂಕಣಧಾರಿಯಾಗಿ ಎಲ್ಲ ಚಟುವಟಿಕೆಯನ್ನು ಮುಗಿಸಿದ್ದರು.
ವಿಜಯದಶಮಿ ದಿನವೇ ನಡೆಯುವ ಜಂಬೂ ಸವಾರಿಯ ಪುಷ್ಪಾರ್ಚನೆಯಲ್ಲಿ ರಾಜವಂಶಸ್ಥರು ಪಾಲ್ಗೊಳ್ಳುವ ಸಂಪ್ರದಾಯ ಮೊದಲಿನಿಂದಲೂ ಇದೆ. ಈಗ ಒಂಬತ್ತು ವರ್ಷದಿಂದಲೂ ಯದುವೀರ್ ಪುಷ್ಪಾರ್ಚನೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಮಗು ಹುಟ್ಟಿದ ನಂತರ ಕುಟುಂಬಕ್ಕೆ ಸೂತಕ ಬಂದಿದ್ದರಿಂದ ಏನು ಮಾಡುವುದು ಪ್ರಶ್ನೆಯಿತ್ತು. ಕಂಕಣಧಾರಿಯಾಗಿಯೇ ಆ ಚಟುವಟಿಕೆಯಲ್ಲಿಯೇ ಭಾಗಿಯಾಗಬೇಕೇ ಎನ್ನುವ ಪ್ರಶ್ನೆಯಿದ್ದವು.
ಜಂಬೂಸವಾರಿಯ ದಿನದಂದು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಬೇಕು. ಚಾಮುಂಡೇಶ್ವರಿ ದೇವಿ ರಾಜವಂಶಸ್ಥರ ಮನೆ ದೇವರು. ಅದೂ ಅಶುಚಿಯಾಗಿ ದೇವರ ವೇದಿಕೆ ಏರುವುದು ಬೇಡ ಎನ್ನುವ ಸಲಹೆಯನ್ನು ಆಗಮಿಕರು ನೀಡಿದ್ದರು. ಹಿರಿಯರೂ ಕೂಡ ಇದನ್ನೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಯದುವೀರ್ ಇದರಿಂದ ದೂರ ಉಳಿದರು ಎನ್ನಲಾಗುತ್ತಿದೆ.
ಹತ್ತು ದಿನದ ಎಲ್ಲಾ ಅಶೌಚ ಮುಗಿಯಲಿ. ಆನಂತರ ದೇವರಿಗೆ ಪೂಜೆ ಸಲ್ಲಿಸಿದರಾಯಿತು. ಹಿಂದೆಯೂ ದಸರಾದ ಧಾರ್ಮಿಕ ವಿಧಿವಿಧಾನಗಳನ್ನು ಸೂತಕದ ಸಂದರ್ಭದಲ್ಲಿ ಅರಮನೆಯಲ್ಲಿ ಮಾಡಲಾಗಿದೆ. ಶುಭ ಕಾರ್ಯದ ವೇಳೆ ಯಾವುದೇ ಅಡ್ಡಿಯಾಗದಿರಲಿ ಎಂದು ಕಂಕಣವನ್ನು ಇದೇ ಕಾರಣಕ್ಕೆ ಧಾರಣೆ ಮಾಡಲಾಗುತ್ತದೆ. ಈಗಲೂ ಅರಮನೆಯ ಎಲ್ಲಾ ದಸರಾ ವಿಧಿ ವಿಧಾನಗಳು ಪೂರ್ಣಗೊಂಡಿವೆ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಹೇಳುತ್ತಾರೆ.
ಇನ್ನು ನಾಲ್ಕು ದಿನಗಳಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ. ಅಲ್ಲಿಗೂ ರಾಜವಂಶಸ್ಥರು ಭಾಗಿಯಾಗಬೇಕು. ಇನ್ನೂ ಒಂಬತ್ತು ದಿನ ಅಶೌಚ ಇರುವುದರಿಂದ ಯದುವೀರ್ ಅದಕ್ಕೂ ಭಾಗಿಯಾಗುವುದಿಲ್ಲ ಎಂದು ಅರಮನೆ ಮೂಲಗಳು ತಿಳಿಸಿವೆ.
ಮೈಸೂರು ರಾಜವಂಶಸ್ಥರು ದೇವರ ಮೇಲೆ ಅಪಾರ ನಂಬಿಕೆವುಳ್ಳವರು. ಶ್ರದ್ದೆಯಿಂದಲೇ ಎಲ್ಲವನ್ನೂ ಮಾಡುತ್ತಾರೆ. ಇದನ್ನೂ ಕೂಡ ಮಾಡಿದ್ದಾರೆ ಎನ್ನುವುದು ತಜ್ಞರು ಹೇಳುವ ನುಡಿ.