logo
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ದಸರಾ ಬೆನ್ನಲ್ಲೇ ಟಿಕೆಟ್ ಶುಲ್ಕ ಹೆಚ್ಚಳ

ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ದಸರಾ ಬೆನ್ನಲ್ಲೇ ಟಿಕೆಟ್ ಶುಲ್ಕ ಹೆಚ್ಚಳ

Jayaraj HT Kannada

Oct 24, 2024 08:19 PM IST

google News

ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ಟಿಕೆಟ್ ಶುಲ್ಕ ಹೆಚ್ಚಳ

    • ದಸರಾ ಸಂಭ್ರಮ ಮುಗಿದ ಬೆನ್ನಲ್ಲೇ ಮೈಸೂರು ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಅರಮನೆ ಟಿಕೆಟ್‌ ದರ ಪರಿಷ್ಕರಿಸಲಾಗಿದ್ದು, ನಾಳೆಯಿಂದ ಶುಲ್ಕ ಹೆಚ್ಚಳವಾಗಲಿದೆ. ಹೆಚ್ಚುವರಿ ದರದ ವಿವರ ಇಲ್ಲಿದೆ.
ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ಟಿಕೆಟ್ ಶುಲ್ಕ ಹೆಚ್ಚಳ
ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ಟಿಕೆಟ್ ಶುಲ್ಕ ಹೆಚ್ಚಳ (Pixabay)

ಮೈಸೂರು: ನಾಡಹಬ್ಬ ಮೈಸೂರು ದಸರಾ ಸಂಭ್ರಮ ಮುಗಿಯುತ್ತಿದ್ದಂತೆಯೇ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಬರುವ ಪ್ರವಾಸಿಗರಿಗೆ ಅರಮನೆ ಮಂಡಳಿ ಶಾಕ್‌ ಕೊಟ್ಟಿದೆ. ಅರಮನೆ ಪ್ರವೇಶಕ್ಕೆ ಟಿಕೆಟ್‌ ಶುಲ್ಕವನ್ನು ಏರಿಸಲಾಗಿದೆ. ಇದರೊಂದಿಗೆ ದಿನನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅರಮನೆ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆಯ ಒಳಾವರಣದಲ್ಲಿ ಇರುವ ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯಗಳನ್ನು ಉಚಿತಗೊಳಿಸಲಾಗಿದೆ. ಇದರ ಬಳಕೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಒಂದೆಡೆ ಕೆಲವು ಸೌಲಭ್ಯಗಳನ್ನು ಉಚಿತ ಮಾಡಿದರೆ, ಮತ್ತೊಂದೆಡೆ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಅದರಂತೆ ವಯಸ್ಕರಿಗೆ ಟಿಕೆಟ್‌ ದರವನ್ನು 120 ರೂಪಾಯಿಗೆ ಏರಿಸಲಾಗಿದೆ. ಈವರೆಗೆ ವಯಸ್ಕರಿಗೆ ಟಿಕೆಟ್‌ 100 ರೂ ಮಾತ್ರವಿತ್ತು. ಮತ್ತೊಂದೆಡೆ 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ ಟಿಕೆಟ್‌ ನಿಗದಿಪಡಿಸಲಾಗಿದೆ (10 ವರ್ಷದೊಳಗಿನ ಮಕ್ಕಳಿಗೆ ಉಚಿತ). ಈ ಹಿಂದೆ ಮಕ್ಕಳಿಗೆ 50 ರೂಪಾಯಿ ಮಾತ್ರವೇ ಇತ್ತು.

ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲೆ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್‌ ನೀಡಲಾಗುತ್ತದೆ. ಈ ಹಿಂದೆ 30 ರೂ ಇತ್ತು. ಅದನ್ನು ಈಗ 50 ರೂಪಾಯಿಗೆ ಏರಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಕೇವಲ 100 ರೂ ಇದ್ದ ಟಿಕೆಟ್‌ ದರವನ್ನು 1000 ರೂಗೆ ಏರಿಸಲಾಗಿದೆ. ಈ ಕುರಿತು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಷ್ಕೃತ ಶುಲ್ಕವು ನಾಳೆ (ಅಕ್ಟೋಬರ್‌ 25) ಶುಕ್ರವಾರದಿಂದಲೇ ಅನ್ವಯಿಸಲಿದೆ.

ಟಿಎಸ್ ಸುಬ್ರಹ್ಮಣ್ಯ ಮಾಹಿತಿ

ಮೈಸೂರು ಅರಮನೆ ವೀಕ್ಷಣೆಗೆ ದಿನನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರು ಈಗ ಪ್ರವೇಶ ಶುಲ್ಕ ಪಾವತಿಸಿದರೆ ಸಾಕು. ಅರಮನೆಯ ಒಳಾವರಣದಲ್ಲಿ ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯವನ್ನು ಉಚಿತವಾಗಿ ಬಳಸಬಹುದು. ಹಿಂದೆ ಇದಕ್ಕೆ ಶುಲ್ಕ ಪಾವತಿಸಬೇಕಾಗಿತ್ತು ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿಎಸ್ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

ಅಂತೂ ದಸರಾ ಮುಗಿದ ಬೆನ್ನಲ್ಲೇ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಒಂದೆಡೆ ಕೊಟ್ಟು, ಮತ್ತೊಂದೆಡೆ ಕಿತ್ತುಕೊಳ್ಳಲಾಗುತ್ತಿದೆ. ಮುಂದೆ ಕುಟುಂಬ ಸಮೇತರಾಗಿ ಮೈಸೂರು ಅರಮನೆ ನೋಡಬೇಕೆನ್ನುವವರು ಹೆಚ್ಚುವರಿ ಶುಲ್ಕ ಭರಿಸಲು ಸಿದ್ಧರಾಗಿ ಹೋಗಬೇಕಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ