logo
ಕನ್ನಡ ಸುದ್ದಿ  /  Karnataka  /  Mysuru Crime News Rowdy Sheeter Chandrashekhar Alias Chandru Murdered In Vontikoppal Mgb

Mysuru Crime: ಮೈಸೂರಿನಲ್ಲಿ ಹಾಡಹಗಲೇ ರೌಡಿಶೀಟರ್‌ ಕೊಲೆ, ಯಾರಿದು ಚಂದ್ರು

HT Kannada Desk HT Kannada

May 19, 2023 12:53 PM IST

ಹತ್ಯೆಯಾದ ಚಂದ್ರಶೇಖರ್ ಅಲಿಯಾಸ್ ಚಂದ್ರು

    • Rowdy Sheeter Chandru Murder:  ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿ ಇರುವ ಟೈಲರ್ ಅಂಗಡಿ ಬಳಿ ಚಂದ್ರು ಮಾತನಾಡುತ್ತಾ ನಿಂತಿದ್ದ ವೇಳೆ ಮಾತೃಮಂಡಳಿ ಕಡೆಯಿಂದ ಒಂಟಿಕೊಪ್ಪಲು ಮಾರ್ಗವಾಗಿ ಕಾಳಿದಾಸ ರಸ್ತೆಯಲ್ಲಿ 4 ಬೈಕ್‌ ಗಳಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಚಂದ್ರುವಿನ ತಲೆ, ಭುಜ ಮತ್ತು ಕೈ ತೋಳಿನ ಭಾಗಕ್ಕೆ ಹೊಡೆದಿದ್ದಾರೆ.
ಹತ್ಯೆಯಾದ ಚಂದ್ರಶೇಖರ್ ಅಲಿಯಾಸ್ ಚಂದ್ರು
ಹತ್ಯೆಯಾದ ಚಂದ್ರಶೇಖರ್ ಅಲಿಯಾಸ್ ಚಂದ್ರು

ಮೈಸೂರು: ಹಾಡಹಗಲೇ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ. ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದ್ರು (47) ಹತ್ಯೆಗೀಡಾದ ರೌಡಿಶೀಟರ್. ಈತ ನಗರಪಾಲಿಕೆ ಮಾಜಿ ಸದಸ್ಯ ಅವ್ವಾ ಮಾದೇಶ್​​ನ ಆಪ್ತ ಎನ್ನಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

Bangalore Weather: ಬೆಂಗಳೂರಿನಲ್ಲಿ ದಾಖಲೆ ಬಿಸಿಲು, ಇತಿಹಾಸದಲ್ಲೇ ಅತಿ ಹೆಚ್ಚು 3ನೇ ಬಿಸಿ ದಿನ !

ಕರ್ನಾಟಕ ಸಿಇಟಿ ಗೊಂದಲ; ಮರುಪರೀಕ್ಷೆ ಇಲ್ಲ, ಪಠ್ಯೇತರ ಪ್ರಶ್ನೆ ಬಿಟ್ಟು ಉಳಿದವುಗಳ ಮೌಲ್ಯಮಾಪನಕ್ಕೆ ತೀರ್ಮಾನ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

ನಗರದ ವಿವಿ ಪುರಂ ಠಾಣಾ ವ್ಯಾಪ್ತಿಯ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿ ಗುರುವಾರ (ಮೇ 18) ಸಂಜೆ 5 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ರೌಡಿಸಂ ಬಿಟ್ಟು ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಒಂಟಿಕೊಪ್ಪಲಿನ ನಿವಾಸಿ ಚಂದ್ರು ಅಲಿಯಾಸ್ ಚಂದ್ರುನನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ನಾಲ್ಕು ಬೈಕ್​​ಗಳಲ್ಲಿ 8 ಮಂದಿ ಬಂದಿದ್ದು, ಈ ಪೈಕಿ 4 ಮಂದಿ ಮಾರಕಾಸ್ತ್ರಗಳಿಂದ ಅವನನ್ನು ಹೊಡೆದಿದ್ದರು ಎನ್ನಲಾಗಿದೆ. ಮೃತ ಚಂದ್ರುಗೆ ಪತ್ನಿ ಮತ್ತು 7 ವರ್ಷದ ಮಗ ಇದ್ದಾರೆ.

ನಿನ್ನೆ ಸಂಜೆ ವಿವಿ ಮೊಹಲ್ಲಾದ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿ ಇರುವ ಟೈಲರ್ ಅಂಗಡಿ ಬಳಿ ಚಂದ್ರು ಮಾತನಾಡುತ್ತಾ ನಿಂತಿದ್ದ ವೇಳೆ ಮಾತೃಮಂಡಳಿ ಕಡೆಯಿಂದ ಒಂಟಿಕೊಪ್ಪಲು ಮಾರ್ಗವಾಗಿ ಕಾಳಿದಾಸ ರಸ್ತೆಯಲ್ಲಿ 4 ಬೈಕ್‌ ಗಳಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಚಂದ್ರುವಿನ ತಲೆ, ಭುಜ ಮತ್ತು ಕೈ ತೋಳಿನ ಭಾಗಕ್ಕೆ ಹೊಡೆದಿದ್ದಾರೆ. ನಂತರ ಟೈಲರ್ ಅಂಗಡಿಯಿಂದ ಸುಮಾರು 15 ಹೆಜ್ಜೆಯಷ್ಟು ದೂರದಲ್ಲಿ ಇರುವ ನಂದಿನಿ ಹಾಲು ಮಾರಾಟ ಕೇಂದ್ರದ ಬಳಿ ಇರುವ ಎಡ ತಿರುವಿನ ಮೂಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರುವನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಈ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್‌ ಆಯುಕ್ತ ಬಿ.ರಮೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮುತ್ತುರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಜಾಹ್ನವಿ, ಎಸಿಪಿಗಳಾದ ಅಶ್ವಥ್ ನಾರಾಯಣ್‌, ಸಂದೇಶ್‌ ಕುಮಾರ್, ಪರಶುರಾಮಪ್ಪ ಅವರನ್ನು ಒಳಗೊಂಡಂತೆ ವಿವಿಪುರಂ ಪೊಲೀಸರು, ಬೆರಳಚ್ಚು ತಂಡ, ಶ್ವಾನ ದಳ ತಂಡ ಸ್ಥಳ ಪರಿಶೀಲನೆ ಶೋಧ ಕಾರ್ಯ ನಡೆಸಿದೆ. ಸಿಸಿ ಟಿವಿ ಪರಿಶೀಲನೆ ಮಾಡಲಾಗಿದೆ. ಟೈಲರ್‌ ಅಂಗಡಿಯಲ್ಲಿದ್ದ ಮೂವರು ಟೈಲರ್‌ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಕೊಲೆಯಾದ ಚಂದ್ರು ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಾದೇಶ್ ಅವರ ಆಪ್ತ ಎನ್ನಲಾಗಿದ್ದು, ಘಟನಾ ಸ್ಥಳದ ಸುತ್ತಲಿನಲ್ಲಿ ಇರುವ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಯಿತು. ಚಂದ್ರುವಿನ ಮನೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆತನ ಕುಟುಂಬಸ್ಥರು ಮತ್ತು ಸ್ನೇಹಿತರು ಘಟನಾಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು ಅವರನ್ನು ಚದುರಿಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದಿದ್ದಾರೆ.

ಚಂದ್ರು 2008ರ ಹುಣಸೂರು ರಾಮ-ಲಕ್ಷ್ಮಣ ಜೋಡಿ ಕೊಲೆ ಪ್ರಕರಣದಲ್ಲಿ ಮತ್ತು 2016ರ ಪಡುವಾರಹಳ್ಳಿ ದೇವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆನಂತರ ರೌಡಿಸಂ ಸಹವಾಸ ಬೇಡ ಎಂದು ಸಣ್ಣಪುಟ್ಟ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಚಂದ್ರು ಮೇಲೆ ರೌಡಿಶೀಟ್ ಇದ್ದರೂ ಇತ್ತೀಚಿಗೆ ಯಾವುದೇ ಪ್ರಕರಣಗಳು, ದೂರುಗಳು ದಾಖಲಾಗಿರಲಿಲ್ಲ. ಚುನಾವಣೆ ವೇಳೆ ರೌಡಿ ಪರೇಡ್ ನಡೆಸಿದ್ದಾಗ ಚಂದ್ರುವನ್ನು ಕರೆಸಿ ಯಾವುದೇ ಗಲಾಟೆ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದೆವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಮ್ಮ ಬಳಿ ಹಲವು ಸುಳಿವುಗಳು ಇವೆ. ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಆನಂತರ ಹತ್ಯೆಗೆ ಕಾರಣ ಏನು ಎಂಬುದು ತಿಳಿಯುತ್ತದೆ ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ವರದಿ: ಧಾತ್ರಿ ಭಾರದ್ವಾಜ್‌

ಬೆಳಗಾವಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಬೆಳಗಾವಿ: ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ( ಮೇ 18, ಗುರುವಾರ) ನಡೆದಿದೆ.

ಮೃತ ಯುವಕನ್ನು 23 ವರ್ಷದ ರುದ್ರಪ್ಪ ಕರಲಿಂಗನವರ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಪಿವಿ ಸ್ನೇಹಾ ಮತ್ತು ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ದುಷ್ಕರ್ಮಿಗಳು ರುದ್ರಪ್ಪನನ್ನು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ. ಆದರೆ ತನಿಖೆ ಬಳಿಕ ಆರೋಪಿಗಳು ಯಾರು, ಕೃತ್ಯ ಎಸಗಲು ಕಾರಣ ಏನು ಎಂಬುದು ತಿಳಿದು ಬರಲಿದೆ.

    ಹಂಚಿಕೊಳ್ಳಲು ಲೇಖನಗಳು