logo
ಕನ್ನಡ ಸುದ್ದಿ  /  ಕರ್ನಾಟಕ  /  ಮೊದಲ ದಿನವೇ ಯಶಸ್ಸು ಕಂಡ ಯುವ ದಸರಾ; ಶ್ರೇಯಾ ಘೋಷಾಲ್-ವಾಸುಕಿ ವೈಭವ್ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಸಮೂಹ

ಮೊದಲ ದಿನವೇ ಯಶಸ್ಸು ಕಂಡ ಯುವ ದಸರಾ; ಶ್ರೇಯಾ ಘೋಷಾಲ್-ವಾಸುಕಿ ವೈಭವ್ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಸಮೂಹ

Jayaraj HT Kannada

Oct 06, 2024 11:54 PM IST

google News

ಯುವ ದಸರಾ: ಶ್ರೇಯಾ ಘೋಷಾಲ್-ವಾಸುಕಿ ವೈಭವ್ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಸಮೂಹ

    • Yuva Dasara: ಮೊದಲ ದಿನವೇ ಯುವ ದಸರಾ ಭಾರಿ ಯಶಸ್ಸು ಕಂಡಿದೆ. ಯುವ ಪೀಳಿಗೆಯು ಯುವ ದಸರಾವನ್ನು ಎಂಜಾಯ್‌ ಮಾಡಿದೆ. ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ವಾಸುಕಿ ವೈಭವ್ ಗೀತೆಗಳಿಗೆ ಯುವ ಜನತೆ ಕುಣಿದು ಕುಪ್ಪಳಿಸಿದ್ದಾರೆ. ಆ ಮೂಲಕ ನಾಡಹಬ್ಬ ಮೈಸೂರು ದಸರಾ ರಂಗು ಹೆಚ್ಚಿಸಿದ್ದಾರೆ.
ಯುವ ದಸರಾ: ಶ್ರೇಯಾ ಘೋಷಾಲ್-ವಾಸುಕಿ ವೈಭವ್ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಸಮೂಹ
ಯುವ ದಸರಾ: ಶ್ರೇಯಾ ಘೋಷಾಲ್-ವಾಸುಕಿ ವೈಭವ್ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಸಮೂಹ

ಮೈಸೂರು: ನಾಡಹಬ್ಬ ಮೈಸೂರು ದಸರಾ ನಿಮಿತ್ತ ಯುವ ದಸರಾ ಅದ್ಧೂರಿಯಾಗಿ ನಡೆಯಿತು. ಮೈಸೂರು ನಗರದ ಹೊರವಲಯದ ಉತ್ತನಹಳ್ಳಿಯಲ್ಲಿ ಆಯೋಜಿಸಲಾದ ಯುವ ದಸರಾ ಕಾರ್ಯಕ್ರಮವನ್ನು ಕನ್ನಡ ಚಲಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು. ಈ ಕಾರ್ಯಕ್ರಮವು ಮೈಸೂರು ಇತಿಹಾಸವನ್ನು ಸಾರುವ ಹಬ್ಬ. ಕರ್ನಾಟಕ ಹಾಗೂ ಮೈಸೂರಿಗೆ ಹೆಚ್ಚಿನ ಮೆರುಗನ್ನು ನೀಡುವ ಹಬ್ಬ. ಕರ್ನಾಟಕದ ಪ್ರತಿಯೊಬ್ಬರಿಗೂ ಬಹು ದೊಡ್ಡ ಹಬ್ಬ. ಈ ಹಬ್ಬದಂದು ತಾಯಿ ಚಾಮುಂಡೇಶ್ವರಿ ಧೈರ್ಯ, ಶಕ್ತಿ, ಭಕ್ತಿಯನ್ನು ನೀಡಿ ಪ್ರತಿಯೊಬ್ಬರನ್ನು ಕಾಪಾಡಲಿ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಶಿಸಿದರು.

ಮೊದಲ ದಿನವೇ ಯುವ ದಸರಾ ಯಶಸ್ಸು ಕಂಡಿತು. ನೆರೆದಿದ್ದ ಸಾವಿರಾರು ಜನರು ಶ್ರೇಯಾ ಘೋಷಾಲ್ ಹಾಗೂ ವಾಸುಕಿ ವೈಭವ್ ಹಾಡಿದ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಯುವ ಪೀಳಿಗೆಯು ಯುವ ದಸರಾದ ಮೆರುಗು ಹೆಚ್ಚಿಸಿದರು. ಹಲವು ಚಲನಚಿತ್ರ ಗೀತೆ ಗಾಯನಗಳಿಗೆ ನೆರದಿದ್ದ ಜನರು ಹುಚ್ಚೆದ್ದು ಕುಣಿದರು.

ಯುವ ದಸರಾ ಕಾರ್ಯಕ್ರಮದಲ್ಲಿ ಮೊದಲ ಗೀತೆಯಾಗಿ ಕೆಜಿಎಫ್ ಚಿತ್ರದ ನಾನು ಬಳ್ಳಿಯ ಮಿಂಚು, ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ, ಸುಂಟರಗಾಳಿ ಚಿತ್ರದ ಗೀತೆ ಹೀಗೆ ವಿವಿಧ ಗೀತೆಗಳಿಗೆ ಜಾನ್ವಿ ರಾಯಲ್ ಮತ್ತು ತಂಡ ಕುಣಿದು ಕುಪ್ಪಳಿಸಿ ಯುವಕರ ಮೈ ನವಿರೇಳಿಸಿದರು. ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದ ಮಾನ್ವಿತಾ ಮತ್ತು ತಂಡವು ಭೀಮಾ ಚಿತ್ರದ ಬ್ಯಾಡ್ ಬಾಯ್ಸ್, ಟಗರು ಚಿತ್ರದ ಮೆಂಟಲ್ ಹೋ ಜಾವ, ಹಿತ್ತಲಕ ಕರಿಬೇಡ ಮಾವ ಗೀತೆಗಳಿಗೆ ಕುಣಿದು ಯುವಕರನ್ನು ರಂಜಿಸಿದರು.

ಕನ್ನಡದ ಖ್ಯಾತ ಹಿನ್ನಲೆ ಗಾಯಕ ವಾಸುಕಿ ವೈಭವ್ ಅವರ ತಂಡವು, ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಗೀತೆಯ ಮೂಲಕ ಸಂಗೀತ ಸಂಜೆ ಆರಂಭಿಸಿತು. ಕಾಣದಂತೆ ಮಯವಾದನ್ನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಪುನೀತ್ ರಾಜ್‌ಕುಮಾರ್ ಅವರ ಹಾಡಿಗೆ ಮೈಸೂರು ಜನರು ದನಿಗೂಡಿಸಿದರು. ಶಿಳ್ಳೆ ಚಪ್ಪಾಳೆ ಮೂಲಕ ಮೈಸೂರು ಜನತೆಯ ಪ್ರೀತಿ ಪಡೆದರು.

ಶ್ರೇಯಾ ಘೋಷಾಲ್‌ ಕಂಠಕ್ಕೆ ಮೂಕವಿಸ್ಮಿತರಾದ ಜನ

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರು ಸುನ್ ರಹಾ ಹೇ ನಾತೂ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಯುವ ದಸರಾ ಕಾರ್ಯಕ್ರಮದ ಅದ್ಧೂರಿತನ ಹೆಚ್ಚಿಸಿದರು. ಕನ್ನಡದ ಚಕ್ರವರ್ತಿ ಚಿತ್ರದ ಒಂದೂ ಮಳೆ ಬಿಲ್ಲು, ಕೊಟ್ಟಿಗೊಬ್ಬ ಚಿತ್ರದ ಸಾಲುತಿಲ್ಲವೇ , ಸಂಜು ವೆಡ್ಸ್ ಗೀತಾ ಚಿತ್ರದ ಗಗನವೇ ಬಾಗಿ ಸೇರಿದಂತೆ ವಿವಿಧ ಕನ್ನಡ ಚಿತ್ರಗೀತೆಗಳು ಹಾಗೂ ಹಿಂದಿ ಚಿತ್ರದ ಗೀತೆಗಳಿಗೆ ಘೋಷಾಲ್‌ ಧ್ವನಿಯಾದರು. ಮೈಸೂರು ಜನತೆಯನ್ನು ಕುಣಿದು ಕುಪ್ಪಳಿಸಿ ರಂಗೇಸಿರಿ ನಿರೀಕ್ಷೆಗೂ ಮೀರಿದ ಜನತೆಯ ಪ್ರೀತಿ ಬರಿಸುವಲ್ಲಿ ಯಶಸ್ವಿಗೊಂಡರು.

ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಹಿಂದಿ ಚಿತ್ರದ ಗೀತೆಗಳ ಜೊತೆಗೆ ಕನ್ನಡ ಚಿತ್ರದ ಗೀತೆಗಳಿಗೆ ಸಂಗೀತ ರಸಿಕರು ಮನಸೋತರು. ಯುವ ಸಮೂಹವು ಜೊತೆಯಲ್ಲಿ ಕುಣಿದು ಕುಪ್ಪಳಿಸಿ ಯುವ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್‌ಸಿ ಮಹದೇವಪ್ಪ ಅವರು ಮಾತನಾಡಿ, ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯಗಳ ಜನತೆಗೆ ದಸರಾ ಶುಭಾಶಯ ಕೋರಿದರು. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಬಾರಿ ಅದ್ಧೂರಿಯಾಗಿ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬನ್ನಿಮಂಟಪದಲ್ಲಿ 1500 ಡ್ರೋನ್‌ಗಳ ಶೋ ಆಯೋಜಿಸಲಾಗಿದೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯ್ರಮಗಳು, ಕವಿಗೋಷ್ಠಿ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ