Mysuru News: ಮೈಸೂರು ಅರಮನೆಯ ಆತ್ಮವಿಲಾಸ ಗಣಪನ ವೈಶಿಷ್ಟ್ಯ
Sep 22, 2023 04:34 PM IST
ಮೈಸೂರು ಅರಮನೆಯ ಆತ್ಮವಿಲಾಸ ಗಣಪನ ವೈಶಿಷ್ಟ್ಯ
- ಮೈಸೂರು ಅರಮನೆಯಲ್ಲಿ ವಿಶೇಷವಾಗಿ ನೆಲೆಯಾಗಿರುವ ಕೆಂಪು ಬಣ್ಣದಲ್ಲಿರುವ ಈ ಗಣಪನನ್ನು ನೋಡುವುದೇ ಒಂದು ಅದೃಷ್ಟ. ಈ ಅಪರೂಪದ ಗಣಪತಿಯ ಫೋಟೋ ತೆಗೆಯಲು ಸಹ ಅವಕಾಶವಿಲ್ಲ. ಬಹಳ ಹಿಂದೆ ತೆಗೆದ ಆತ್ಮವಿಲಾಸ ಗಣಪನ ಏಕೈಕ ಚಿತ್ರ ಈಗಲೂ ಎಲ್ಲೆಡೆ ಹರಿದಾಡುತ್ತಿದೆ.
ಗಣೇಶ ಚತುರ್ಥಿ ಈಗಷ್ಟೇ ಸಂಪನ್ನವಾಗಿದೆ. ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ವಿಘ್ನನಿವಾರಕ ವಿನಾಯಕನನ್ನು ಪೂಜಿಸಲಾಗುತ್ತದೆ. ಕೆಲವೆಡೆ ಇನ್ನೂ ಗಣಪತಿ ಪೂಜೆ ನಡೆಯುತ್ತಲೇ ಇದೆ. ಹೀಗೆ ಮೈಸೂರಿನಲ್ಲೊಂದು ವಿಶೇಷ ಗಣಪತಿ ಇದೆ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರತ್ಯಕ್ಷವಾಗಿ ನೋಡಿರುವ ಈ ಗಣಪತಿ ಮೈಸೂರು ಅರಮನೆಯಲ್ಲಿ ವಿರಾಜಮಾನವಾಗಿದೆ. ಇದರ ಹೆಸರು ಆತ್ಮವಿಲಾಸ ಗಣಪತಿ.
ಆತ್ಮವಿಲಾಸ ಸಾಲಿಗ್ರಾಮ ಗಣಪ
ಮೈಸೂರು ಅರಮನೆಯಲ್ಲಿ ವಿಶೇಷವಾಗಿ ನೆಲೆಯಾಗಿರುವ ಕೆಂಪು ಬಣ್ಣದಲ್ಲಿರುವ ಈ ಗಣಪನನ್ನು ನೋಡುವುದೇ ಒಂದು ಅದೃಷ್ಟ. ಈ ಅಪರೂಪದ ಗಣಪತಿಯ ಫೋಟೋ ತೆಗೆಯಲು ಸಹ ಅವಕಾಶವಿಲ್ಲ. ಬಹಳ ಹಿಂದೆ ತೆಗೆದ ಆತ್ಮವಿಲಾಸ ಗಣಪನ ಏಕೈಕ ಚಿತ್ರ ಈಗಲೂ ಎಲ್ಲೆಡೆ ಹರಿದಾಡುತ್ತಿದೆ. ಆತ್ಮವಿಲಾಸ ಗಣಪನ ವಿಗ್ರಹ ಬೃಹದಾಕಾರ, ಬಣ್ಣ ಕೆಂಪು. ಗಣಪನ ಮೇಲೆ ಆಕರ್ಷಕವಾದ ಅರ್ಧ ಚಂದ್ರಾಕಾರದ ಹಸಿರು ಬಣ್ಣದ ಕಮಾನಿದೆ, ಗಣಪನ ಹಿಂಭಾಗದಲ್ಲಿ ಚಿನ್ನದ ಬಣ್ಣದ ಲೇಪನದಲ್ಲಿ ಸರ್ಪದಂತಹ ಆಕಾರದ ಚಿತ್ತಾರವಿದೆ. ಅಕ್ಕ ಪಕ್ಕದಲ್ಲಿ ಆಕರ್ಷಕ ಮಂಟಪವಿದೆ. ಆತ್ಮವಿಲಾಸ ಗಣಪ ಚತುರ್ಭುಜನಾಗಿದ್ದಾನೆ. ಎಡಗೈನಲ್ಲಿ ಪಾಶ ಹಿಡಿದಿದ್ದಾನೆ. ಬಲಗೈನಲ್ಲಿ ಅಂಕುಶ ಹಿಡಿದಿದ್ದಾನೆ. ಮೂರನೇ ಕೈನಲ್ಲಿ ಮೋದಕ, ನಾಲ್ಕನೇ ಕೈನಲ್ಲಿ ಮುರಿದ ದಂತವನ್ನು ಹಿಡಿದಿದ್ದಾನೆ. ತಲೆಯ ಮೇಲೆ ಚಿನ್ನದ ಬಣ್ಣದ ಕಿರೀಟವಿದೆ. ಹಣೆಯ ತುಂಬಾ ಗಂಧದ ತಿಲಕವಿದೆ. ಅಗಲವಾದ ಕಿವಿಗಳು, ಎರಡು ದಂತದಲ್ಲಿ ಒಂದು ದಂತ ಭಗ್ನವಾಗಿರುವುದು. ಡೊಳ್ಳು ಹೊಟ್ಟೆ. ಹಳದಿ ಬಣ್ಣದ ಹೆಡೆ ಬಿಚ್ಚಿದ ಸರ್ಪ. ಕಾಲುಗಳಲ್ಲಿ ಆಕರ್ಷಕ ಗೆಜ್ಜೆಯಿದೆ. ಸಾಕಷ್ಟು ವರ್ಣಮಯವಾಗಿರುವ ಈ ಆತ್ಮವಿಲಾಸ ಗಣಪನನ್ನು ನೋಡಲು ಎರಡು ಕಣ್ಣು ಸಾಲದು.
ಆತ್ಮವಿಲಾಸ ಗಣಪನಿಗಿದೆ ಶತ ಶತಮಾನದ ಇತಿಹಾಸ - ಬೆಂಕಿಯ ಕೆನ್ನಾಲಿಗೆಗೆ ಸಿಗದೆ ಉಳಿದಿದ್ದೇ ಪವಾಡ
ಆತ್ಮವಿಲಾಸ ಗಣಪನಿಗೆ ಇನ್ನೂರು ವರ್ಷದ ಇತಿಹಾಸವಿದೆ. ಈ ಹಿಂದೆ ಇದೇ ಮೈಸೂರು ಅರಮನೆಯ ಜಾಗದಲ್ಲಿದ್ದ ಗಂಧದ ಅರಮನೆ ನಿರ್ಮಾಣ ಮಾಡಿದಾಗಲೇ ಈ ಆತ್ಮವಿಲಾಸ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತಂತೆ. 18ನೇ ಶತಮಾನದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೈಸೂರಿನ ಗಂಧದ ಅರಮನೆ ಸಂಪೂರ್ಣ ಸುಟ್ಟು ಕರಕಲಾಯಿತಂತೆ. ಅರಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದರೂ ಈ ಆತ್ಮವಿಲಾಸ ಗಣಪತಿಗೆ ಮಾತ್ರ ಏನು ಆಗಿರಲಿಲ್ಲವಂತೆ. ನಂತರ ಸದ್ಯ ಇರುವ ಅರಮನೆಯನ್ನು ಕಟ್ಟುವಾಗ ಇದೇ ಆತ್ಮವಿಲಾಸ ಗಣಪತಿಯಿಂದಲೇ ಅರಮನೆ ಕಟ್ಟುವ ಕೆಲಸ ಆರಂಭವಾಯಿತಂತೆ. ಇದೇ ವಿಘ್ನ ನಿವಾರಕನಿಗೆ ಪೂಜಿಸಿ, ಪ್ರಾರ್ಥನೆ ಸಲ್ಲಿಸಿ ಆರಂಭಿಸಿದ ಅರಮನೆ ಕಟ್ಟುವ ಕೆಲಸ ಯಾವುದೇ ಅಡೆ, ತಡೆಗಳಿಲ್ಲದೆ ಸಂಪೂರ್ಣವಾಗಿದ್ದು ಈಗ ಇತಿಹಾಸ.
ಪವಾಡ ಸದೃಶವಾಗಿ ಉಳಿದ ಆತ್ಮವಿಲಾಸ ಗಣಪತಿ ಎಂದರೆ ಯದುವಂಶದ ಅರಸರಿಗೆ ಅಪಾರ ಭಕ್ತಿ. ತಾವು ಯಾವುದೇ ಕೆಲಸ ಆರಂಭಿಸುವ ಮುನ್ನ ವಿಶೇಷ ದಿನಗಳಲ್ಲಿ, ಹಬ್ಬದ ದಿನಗಳಲ್ಲಿ ಆತ್ಮವಿಲಾಸ ಗಣಪತಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಸುಣ್ಣದ ಗಾರೆ ( ಸುಧೆ ) ಯಿಂದ ಮಾಡಿರುವಂತಹ ಗಣಪತಿ ವಿಗ್ರಹದ ಹೊಟ್ಟೆಯಲ್ಲಿ 12 ಸಾಲಿಗ್ರಾಮಗಳಿವೇ ಅಂತ ಹೇಳಲಾಗುತ್ತದೆ. ಜಗತ್ತಿನ ಬಹಳ ಶ್ರೇಷ್ಠವಾದಂತ, ಪವಿತ್ರವಾದಂತಹ ಗಣಪತಿ ಇದಾಗಿದೆ. ಇಂಹತ ಗಣಪನಿಗೆ ರಾಜ ವಂಶಸ್ಥರು ಪ್ರತಿದಿನ ಶಾಸ್ತ್ರೋಕ್ತವಾಗಿ ಪೂಜೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ಅರ್ಚಕರು ಕಳೆದ 5 ತಲೆ ಮಾರುಗಳಿಂದ ಆತ್ಮವಿಲಾಸ ಗಣಪತಿಯ ಪೂಜಾ ಕೈಂಕರ್ಯಗಳ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ. ಪ್ರತಿದಿನ ಬೆಳಗ್ಗೆ ಸಂಜೆ ಆತ್ಮವಿಲಾಸ ಗಣಪತಿಗೆ ಪೂಜೆ ನೆರವೇರಿಸಿ ನೈವೇದ್ಯ ಅರ್ಪಿಸಲಾಗುತ್ತಿದೆ. ಈ ಮೂಲಕ ನಾಡು, ನಾಡಿನ ಜನರು ಹಾಗೂ ಯದುವಂಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.