ಕರ್ನಾಟಕ ಪಿಯುಸಿ ಫಲಿತಾಂಶ; ಉತ್ತೀರ್ಣ ಪ್ರಮಾಣದಲ್ಲಿ 17 ನೇ ಸ್ಥಾನಕ್ಕೆ ಕುಸಿದ ಮೈಸೂರು ಜಿಲ್ಲೆ, ಮಹಾರಾಣಿ ಕಾಲೇಜು ವಿದ್ಯಾರ್ಥಿನಿಗೆ 594 ಅಂಕ
Apr 11, 2024 07:50 AM IST
ಮಹಾರಾಣಿ ಕಾಲೇಜು ವಿದ್ಯಾರ್ಥಿನಿಗೆ 594 ಅಂಕ- ವಿದ್ಯಾರ್ಥಿನಿ ಶ್ರೇಯಾ ಗಣೇಶ್ ಅಯ್ಯರ್.
ಕರ್ನಾಟಕ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣ ಪ್ರಮಾಣದಲ್ಲಿ 17ನೇ ಸ್ಥಾನಕ್ಕೆ ಕುಸಿದ ಮೈಸೂರು ಜಿಲ್ಲೆ ಕಳೆದ ಬಾರಿ 13ನೇ ಸ್ಥಾನದಲ್ಲಿತ್ತು. ಇದೇ ವೇಳೆ, ಮಹಾರಾಣಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಗೆ 594 ಅಂಕ ಬಂದಿದ್ದು, ಈ ಸಾಧನೆ ಮಾಡಿದ ವಿದ್ಯಾರ್ಥಿನಿ ಶ್ರೇಯಾ ಗಣೇಶ್ ಅಯ್ಯರ್ ಗಮನಸೆಳೆದಿದ್ದಾರೆ. (ವರದಿ- ರಂಗಸ್ವಾಮಿ, ಮೈಸೂರು)
ಮೈಸೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆನಿಸಿರುವ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ (ಏಪ್ರಿಲ್ 10) ಪ್ರಕಟಗೊಂಡಿದ್ದು ಒಟ್ಟಾರೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ17 ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದ ಉತ್ತೀರ್ಣ ಪ್ರಮಾಣದಲ್ಲಿ ಮೈಸೂರು ಜಿಲ್ಲೆ 13ನೇ ಸ್ಥಾನ ಪಡೆದಿತ್ತು. ಈ ಬಾರಿ ಮೈಸೂರು ಜಿಲ್ಲೆ ದ್ವಿತೀಯ ಪಿಯುಸಿ ಫಲಿತಾಂಶದ ಉತ್ತೀರ್ಣ ಪ್ರಮಾಣ ಕುಸಿತ ಕಂಡಿರುವುದು ಶಿಕ್ಷಣ ವಲಯದಲ್ಲಿ ಕಳವಳ ಮೂಡಿಸಿದೆ.
ಆದಾಗ್ಯೂ, ಮೈಸೂರಿನ ಊರ್ವೀಶ್ ಪ್ರಶಾಂತ್ ವಿಜ್ಞಾನ ವಿಭಾಗದಲ್ಲಿ ಇಡೀ ರಾಜ್ಯಕ್ಕೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದು, ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಊರ್ವೀಶ್ ಪ್ರಶಾಂತ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದು, ಮೈಸೂರು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ಐಐಟಿ ವ್ಯಾಸಂಗದ ಕನಸು ಊರ್ವಿಶ್ ಪ್ರಶಾಂತ್‌ಗೆ
ಊರ್ವಿಶ್ ಪ್ರಶಾಂತ್ ಅವರ ತಂದೆ ಡಾ ಹರೀಶ್ ಪ್ರಶಾಂತ್ ಮೈಸೂರಿನ ಸಿ ಎಫ್ ಟಿ ಆರ್ ಐ ನಲ್ಲಿ ಪ್ರಧಾನ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಡಾ ಸವಿತಾ ಪ್ರಶಾಂತ್ ಅವರು ಮೈಸೂರಿನ ಜೆಎಸ್ಎಸ್ ಮಾಸ್ಟರ್ ಡಿಗ್ರಿ ಕಾಲೇಜಿನಲ್ಲಿ ಬಯೋಕೆಮೆಸ್ಟ್ರಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ತಾಯಿ ಹಾಗೂ ಕಾಲೇಜು ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ವ್ಯಾಸಂಗ ಮಾಡಿದ್ದ ಊರ್ವಿಶ್ ಪ್ರಶಾಂತ್ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದು ಮುಂದೆ ಐಐಟಿ ಸೇರುವ ಗುರಿ ಹೊಂದಿದ್ದಾರೆ. ಇನ್ನೂ ಕುವೆಂಪುನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ.
ಮೈಸೂರಿನ ಮಹಾರಾಣಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯ ಅತ್ಯುತ್ತಮ ಸಾಧನೆ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಲವೆಡೆ ಗಮನ ಸೆಳೆದಿದ್ದಾರೆ. ಮೈಸೂರಿನ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಗಣೇಶ್ ಅಯ್ಯರ್ 600ಕ್ಕೆ 594 ಅಂಕಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಎಸ್ ಎಸ್ ಎಲ್ ಸಿ ವರೆಗೂ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೇಯಾ ಗಣೇಶ್ ಅಯ್ಯರ್, ಎಸ್ ಎಸ್ ಎಲ್ ಸಿ ಯಲ್ಲಿ 99% ಅಂಕಗಳಿಸಿದ್ದರು. ಆ ಬಳಿಕ ಸರ್ಕಾರಿ ಕಾಲೇಜಿನಲ್ಲೇ ಪಿಯುಸಿ ವ್ಯಾಸಂಗ ಮಾಡಬೇಕೆಂಬ ಸದುದ್ದೇಶದಿಂದ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸೇರಿದ್ದ ಶ್ರೇಯಾ, ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಕೂಡ ಓದಿನಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತುಪಡಿಸಿರುವ ಶ್ರೇಯಾ ಮುಂದೆ ಇಂಜಿನಿಯರಿಂಗ್ ಕೋರ್ಸ್ ಓದುವ ಗುರಿ ಹೊಂದಿದ್ದಾರೆ.
ಶ್ರೇಯ ಗಣೇಶ್ ಅಯ್ಯರ್ ಅವರ ತಂದೆ ಗಣೇಶ್ ಅವರು ಗ್ರಾಹಕರ ಆಯೋಗ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇವರ ತಾಯಿ ರಮ್ಯ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ತಾಯಿ ಹಾಗು ಕಾಲೇಜಿನ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಶ್ರೇಯಾ ಗಣೇಶ್ ಅಯ್ಯರ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸುವ ಮೂಲಕ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
(ವರದಿ- ರಂಗಸ್ವಾಮಿ, ಮೈಸೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.