logo
ಕನ್ನಡ ಸುದ್ದಿ  /  ಕರ್ನಾಟಕ  /  New Year 2025: ಹೊಸ ವರ್ಷಾಚರಣೆ ಭದ್ರತೆಗೆ ಅಣಿಯಾಗುತ್ತಿರುವ ಬೆಂಗಳೂರು ಪೊಲೀಸ್; ಡ್ರಗ್ಸ್‌ ವಹಿವಾಟು ಮೇಲೆ ಕಣ್ಗಾವಲು, ರೌಡಿಗಳಿಗೂ ಎಚ್ಚರಿಕೆ

New Year 2025: ಹೊಸ ವರ್ಷಾಚರಣೆ ಭದ್ರತೆಗೆ ಅಣಿಯಾಗುತ್ತಿರುವ ಬೆಂಗಳೂರು ಪೊಲೀಸ್; ಡ್ರಗ್ಸ್‌ ವಹಿವಾಟು ಮೇಲೆ ಕಣ್ಗಾವಲು, ರೌಡಿಗಳಿಗೂ ಎಚ್ಚರಿಕೆ

Umesha Bhatta P H HT Kannada

Dec 04, 2024 11:45 AM IST

google News

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಜೋಶ್‌ ತುಂಬುವ ಚರ್ಚ್‌ ರಸ್ತೆ. ಬೆಂಗಳೂರಿನಲ್ಲಿ ಪೊಲೀಸರು ಈ ಬಾರಿ ಕಟ್ಟೆಚರ ವಹಿಸಿದ್ದಾರೆ.

  • Bangalore New Year 2025: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಡ್ರಗ್ಸ್‌ ಬಳಕೆ, ಅನಗತ್ಯ ಗದ್ದಲಕ್ಕೆ ಆಸ್ಪದ ನೀಡದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಹೇಗಿರಲಿದೆ ಪೊಲೀಸ್‌ ಭದ್ರತೆ, ಇಲ್ಲಿದೆ ಮಾಹಿತಿ.

    (ವರದಿ:ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಜೋಶ್‌ ತುಂಬುವ ಚರ್ಚ್‌ ರಸ್ತೆ. ಬೆಂಗಳೂರಿನಲ್ಲಿ ಪೊಲೀಸರು ಈ ಬಾರಿ ಕಟ್ಟೆಚರ ವಹಿಸಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಜೋಶ್‌ ತುಂಬುವ ಚರ್ಚ್‌ ರಸ್ತೆ. ಬೆಂಗಳೂರಿನಲ್ಲಿ ಪೊಲೀಸರು ಈ ಬಾರಿ ಕಟ್ಟೆಚರ ವಹಿಸಿದ್ದಾರೆ.

Bangalore New Year 2025:ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಲಾಡ್ಜ್, ಮತ್ತು ರೆಸ್ಟೋರೆಂಟ್‌ ಗಳ ಪರಿಶೀಲನೆ ನಡೆಸುತ್ತಿದ್ದು, ಮಾದಕ ವಸ್ತುಗಳ ಮಾರಾಟದ ಬಗ್ಗೆ ಎಚ್ಚರ ವಹಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಈ ಸಂಬಂಧ ಮಾಹಿತಿ ನೀಡಿದ್ದು, ನಶೆ ಮುಕ್ತ ನಗರ ರೂಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.ಡ್ರಗ್ಸ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ 380 ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. 1,233 ರೌಡಿ ಶೀಟರ್‌ ಗಳನ್ನು ಕರೆಯಿಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ.

ಬಾರ್ ಆ್ಯಂಡ್ ರೆಸ್ಟೊರೆಂಟ್‌ ಗಳಲ್ಲಿ ಕೆಲಸ ಮಾಡುವ 1630 ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಜತೆಗೆ ವೈನ್‌ ಸ್ಟೋರ್ಸ್‌, ಪಬ್‌ಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಸಾ ಅವಧಿ ಮುಗಿದರೂ ನಗರದಲ್ಲೇ ವಾಸವಾಗಿರುವ ವಿದೇಶಿ ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 29 ಮಂದಿ ವಿದೇಶಿಗರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗಿದೆ ಮತ್ತು ಅವರನ್ನು ವಾಪಸ್‌ ಕಳುಹಿಸಲು ಪೊಲೀಸರು ಕ್ರಮ ವಹಿಸಿದ್ದಾರೆ.

ಭಾರಿ ಪ್ರಮಾಣದ ಡ್ರಗ್ಸ್‌ ವಶ

ಹೊಸ ವರ್ಷದ ಹಿನ್ನೆಲೆಯಲ್ಲಿ ಡ್ರಗ್ಸ್‌ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್‌ ಜಾಲಗಳನ್ನು ಬೆಂಗಳೂರು ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಬೇಧಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ ನಶೆ ಮುಕ್ತ ಬೆಂಗಳೂರು ನಿರ್ಮಾಣದತ್ತ ಹೆಜ್ಜೆ ಹಾಕಿದ್ದಾರೆ. ಹೊಸ ವರ್ಷಾಚರಣೆಗೆ ಗಾಂಜಾ ಸಂಗ್ರಹಿಸಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ ಆರೋಪಿಗಳಿಂದ 3.25 ಕೋಟಿ ರೂ. ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ ಗಳನ್ನು ಬಂಧಿಸಿ ರೂ. 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇವರು ಹೊಸ ವರ್ಷ ಆಚರಣೆಗೆ ಮಾರಾಟ ಮಾಡಲು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದರು. ದಾಳಿ ವೇಳೆ, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಕಮೀಷನರ್‌ ವಿವರ ನೀಡಿದರು.

ಪದವೀಧರ ಕಳ್ಳನ ಬಂಧನ; 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಕುಖ್ಯಾತ ದರೋಡೆಕೋರನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದು, 1.36 ಕೋಟಿ ರೂ. ಮೌಲ್ಯದ 1 ಕೆಜಿ 700 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮುರ್ದಾಬಾದ್ ಜಿಲ್ಲೆಯ ಫಯೀಮ್ ಅಲಿಯಾಸ್ ಎಟಿಎಂ(38) ಬಂಧಿತ ಆರೋಪಿ. ಈತ ಮೂರು ವಿಷಯಗಳಲ್ಲಿ ಪದವೀಧರನಾಗಿದ್ದಾನೆ.

ಅನ್ನಪೂರ್ಣೇಶ್ವರಿ ನಗರದ ಆರೋಗ್ಯ ಬಡಾವಣೆಯ ಪ್ರಸನ್ನ ಕುಮಾರ್ ಅವರು ಕುಟುಂಬ ಸಮೇತ ಕಳೆದ ಆ.19 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ ಸಂಜೆ ಹಿಂತಿರುಗಿರುತ್ತಾರೆ. ಈ ವೇಳೆಗೆ ಮುಂಬಾಗಿಲಿನ ಡೋರ್ ಲಾಕ್ ಮುರಿದು ಒಳನುಗ್ಗಿ ಕೊಠಡಿಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಅನ್ನಪೂರ್ಣೇಶ್ವರಿನಗರ ಪೊಲೀಸರು ನ.9 ರಂದು ಉತ್ತರ ಪ್ರದೇಶದ ಮುರಾದಾಬಾದ್‌ ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮೇಲೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಅತನನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈತ ಉತ್ತರ ಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತನ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ. ಕೆಂಗೇರಿ, ಜ್ಞಾನಭಾರತಿ, ಆರ್.ಎಂ.ಸಿ. ಯಾರ್ಡ್, ಪೀಣ್ಯ, ಬಾಣಾಸವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವಾರು ಕಳವು ಪ್ರಕರಣಗಳು ಪತ್ತೆಯಾಗಿವೆ.

(ವರದಿ:ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ