logo
ಕನ್ನಡ ಸುದ್ದಿ  /  Karnataka  /  Nia Is Conducting Searches At Pfi And Sdpi Office In Mangaluru

NIA raid in Mangaluru: ಮಂಗಳೂರು ಪಿಎಫ್ಐ-ಎಸ್‌​ಡಿಪಿಐ ಕಚೇರಿ ಮೇಲೆ ಎನ್‌ಐಎ ದಾಳಿ, ಕಾರ್ಯಕರ್ತರ ಪ್ರತಿಭಟನೆ

HT Kannada Desk HT Kannada

Sep 22, 2022 08:06 AM IST

ಮಂಗಳೂರಿನಲ್ಲಿ ಎನ್‌ಐಎ ದಾಳಿ

    • ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳು ಸೇರಿದಂತೆ ನಗರದ 8 ಕಡೆ ಈ ಸಂಘಟನೆಗಳ ಮುಖಂಡರ ಮನೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನಲ್ಲಿ ಎನ್‌ಐಎ ದಾಳಿ
ಮಂಗಳೂರಿನಲ್ಲಿ ಎನ್‌ಐಎ ದಾಳಿ

ಮಂಗಳೂರು: ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ನಸುಕಿನ ಜಾವವೇ ಎನ್‌ಐಎ ದಾಳಿ ನಡೆಸಿದೆ. ಮಂಗಳೂರು ನಗರದಲ್ಲಿನ ಪಿಎಫ್ಐ ಹಾಗೂ ಎಸ್‌​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಇಂದು ನಸುಕಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಸ್ಥಳಕ್ಕೆ ಬಂದಿರುವ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದೀಗ ಕಚೇರಿಗೆ ಪ್ರವೇಶಿಸಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಂಗಳೂರು ನಗರ ಪೊಲೀಸರು ಸ್ಥಳದಲ್ಲಿ ಉಪಸ್ಥಿತರಿದ್ದು ಭದ್ರತೆ ಒದಗಿಸಿದ್ದಾರೆ. ‌ಅಲ್ಲದೆ ಕಚೇರಿ ಇರುವ ಸ್ಥಳದಲ್ಲಿ ಸಿಆರ್‌ಪಿಎಫ್ ಅಧಿಕಾರಿಗಳು ಕೂಡಾ ಬಂದೋಬಸ್ತ್​ ವಹಿಸಿದ್ದಾರೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳು ಸೇರಿದಂತೆ ನಗರದ 8 ಕಡೆ ಈ ಸಂಘಟನೆಗಳ ಮುಖಂಡರ ಮನೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಎಫ್ಐ, ಎಸ್​ಡಿಪಿಐ ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಎನ್​ಐಎ ಅಧಿಕಾರಿಗಳು ಕಚೇರಿಯೊಳಗೆ ಪರಿಶೀಲನೆ ಮುಂದುವರೆಸಿದ್ದಾರೆ.

ದೇಶದ ವಿವಿಧೆಡೆ ಇರುವ ಎಸ್​ಡಿಪಿಐ ಕಚೇರಿಗಳ (Social Democratic Party of India – SDPI) ಮೇಲೆಯೂ ದಾಳಿ ನಡೆದಿದೆ. ಎಸ್​ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್​ಐಎ ತನಿಖೆ ನಡೆಸುತ್ತಿದೆ.

ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಂತೆ ಪಿಎಫ್ಐ ಕಾರ್ಯಕರ್ತರು ಅವರ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದಾರೆ.

ಕೇರಳದಲ್ಲಿ

ರಾಜ್ಯ ಮಾತ್ರವಲ್ಲದೆ ಕೇರಳದಲ್ಲೂ ಎನ್‌ಐಎ ದಾಳಿ ನಡೆಸಿದೆ. ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ ಅವರ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ. ಪಿಎಫ್‌ಐ ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರ ಮನೆ ಮತ್ತು ಪಿಎಫ್‌ಐ ಕಚೇರಿಗಳಲ್ಲಿ ಮಧ್ಯರಾತ್ರಿಯಿಂದ ಎನ್‌ಐಎ ಮತ್ತು ಇಡಿ ದಾಳಿ ನಡೆಸುತ್ತಿದೆ.

ತಮಿಳುನಾಡಿನಲ್ಲಿ

ಅತ್ತ ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮನಾಡ್, ದಿಂಡುಗಲ್, ತೇಣಿ ಮತ್ತು ತೆಂಕಾಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪಿಎಫ್‌ಐ ಪದಾಧಿಕಾರಿಗಳ ಮನೆಗಳಲ್ಲಿ ಎನ್‌ಐಎ ಶೋಧ ಕಾರ್ಯ ನಡೆಸುತ್ತಿದೆ. ಪುರಸವಕ್ಕಂನಲ್ಲಿರುವ ಚೆನ್ನೈ PFI ರಾಜ್ಯ ಪ್ರಧಾನ ಕಚೇರಿಯಲ್ಲೂ ಶೋಧ ನಡೆಸಲಾಗುತ್ತಿದೆ. ದಿಂಡಿಗಲ್ ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪಕ್ಷದ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ದಾಳಿಯನ್ನು ವಿರೋಧಿಸಿ PFI ನ 50 ಕ್ಕೂ ಹೆಚ್ಚು ಸದಸ್ಯರು ಪಕ್ಷದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

10 ರಾಜ್ಯಗಳಲ್ಲಿ ನಡೆಸಲಾದ ದಾಳಿಯಲ್ಲಿ ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸರು 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಎನ್‌ಐಎ ಇಲ್ಲಿಯವರೆಗಿನ ಅತಿದೊಡ್ಡ ತನಿಖೆ ಪ್ರಕ್ರಿಯೆಯಲ್ಲಿ ಅನೇಕ ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದೆ. ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವಿವಿಧ ವ್ಯಕ್ತಿಗಳ ನಿವಾಸ ಮತ್ತು ಅಧಿಕೃತ ಕಚೇರಿಗಳಲ್ಲಿ ಹುಡುಕಾಟಗಳನ್ನು ನಡೆಸಲಾಗುತ್ತಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು