Nikhil Kumaraswamy Political future: ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಜನರೇ ನಿರ್ಣಯಿಸುತ್ತಾರೆ: ಮಾಜಿ ಸಿಎಂ ಹೆಚ್ಡಿಕೆ
Dec 16, 2022 07:18 AM IST
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿಯಲ್ಲಿ ಹಾಲಿ ಶಾಸಕರು ಹಾಗೂ ಸಂಭವನೀಯ ಅಭ್ಯರ್ಥಿಗಳ ಸಭೆ ನಡೆಸಿ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಜನರೇ ನಿರ್ಣಯಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರೇ ತಿರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ನಿನ್ನೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರ ನೀಡಿದರು.
ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ನನಗೆ ನಿಖಿಲ್ ಅವರನ್ನು ಹೇಗಪ್ಪ ದಡ ಸೇರಿಸೋದು ಎಂಬ ಚಿಂತೆ ಇಲ್ಲ. ನನಗೆ ಇರೋದು ನಾಡಿನ ಜನರ ಚಿಂತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅಭ್ಯರ್ಥಿಗಳಿಗೆ ಕಿವಿಮಾತು:
ಪಕ್ಷದ ಕಚೇರಿಯಲ್ಲಿಂದು ಹಾಲಿ ಶಾಸಕರು ಹಾಗೂ ಸಂಭವನೀಯ ಅಭ್ಯರ್ಥಿಗಳ ಸಭೆ ನಡೆಸಲಾಯಿತು. ಚುನಾವಣೆ ನಡೆಸುವ ಬಗೆ, ಸಾಮಾಜಿಕ ಜಾಲತಾಣಗಳ ಬಳಕೆ, ಪಂಚರತ್ನಗಳ ಪ್ರಚಾರ ಸೇರಿದಂತೆ ಇನ್ನು ಚುನಾವಣೆ ತನಕ ಹೇಗೆಲ್ಲಾ ಕೆಲಸ ಮಾಡಬೇಕು ಎಂಬ ಬಗ್ಗೆ ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದೇನೆ. ನಿಧಾನ ಗತಿಯಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಸ್ವಲ್ಪ ಖಾರವಾಗಿಯೇ ಕಿವಿಮಾತು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದೇವೆ:
ಈ ಸಭೆಯಲ್ಲಿ ಅಗತ್ಯಬಿದ್ದರೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದೇವೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಕೂಡ ಇದೇ ಮಾತನ್ನು ಹೇಳಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದ್ದೇವೆ. ಕಲ್ಯಾಣೋತ್ಸವ ಮುಗಿದ ನಂತರ 97 ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ದೇವರ ಆಶೀರ್ವಾದ ಪಡೆದು ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ ಎಂದು ಕುಮಾರಸ್ವಾಮಿ ಹೇಳಿದರು.
ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಯಾತ್ರೆ ಮಾಡಿರುವ 19 ಕ್ಷೇತ್ರದಲ್ಲಿ ನಾವು 17 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಇನ್ನು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಮಾಜಿ ಸಚಿವರಾದ ಜಿ.ಟಿ.ದೇವೇಗೌಡರು, ಮಾಜಿ ಉಪ ಸ್ಪೀಕರ್ ಎಂ.ಕೃಷ್ಣಾರೆಡ್ಡಿ, ಶಾಸಕ ಲಿಂಗೀಶ್, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಜಿ.ಡಿ.ಹರೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ನಗರದ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಸುಮಾರು 53ಕ್ಕೂ ಹೆಚ್ಚು ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಮುಖ ನಾಯಕರು ಕಳೆದ ಭಾನುವಾರ (ಡಿಸೆಂಬರ್ 11) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಲ್ಲ ನಾಯಕರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಳ್ಳಲಾಯಿತು. ಚಾಮರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ರಾಜು, ಮಾಜಿ ಉಪ ಮೇಯರ್ ಶ್ರೀರಾಮೇಗೌಡ, ಪಾಲಿಕೆಯ ಮಾಜಿ ಸದಸ್ಯರಾದ ಗೌರಮ್ಮ, ಕಾಂಗ್ರೆಸ್ ಪಕ್ಷದ ನಾಯಕರಾದ ಶೇಖರ್, ದೊರೆ ಸೇರಿ 53ಕ್ಕು ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಪಕ್ಷವನ್ನು ಸೇರಿದರು.
ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆಯೇ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಯಾವೆಲ್ಲ ತಂತ್ರ ಮಾಡ್ತಾ ಇವೆ ಎನ್ನುವುದು ಗೊತ್ತಿದೆ. ಆದರೂ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗ್ರಾಫ್ ಮೇಲೆ ಹೋಗುತ್ತಿದೆ. ಪಂಚರತ್ನ ಕಾರ್ಯಕ್ರಮದ ಮೂಲಕ ಅದು ಗೊತ್ತಾಗಿದೆ ಎಂದು ಅವರು ಹೇಳಿದ್ದರು.