logo
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಒಳಮೀಸಲಾತಿ ಹೋರಾಟಗಾರ ತುಮಕೂರಿನ ಪಾರ್ಥಸಾರಥಿ ಹೋರಾಟದ ನೆನಪುಗಳು; ವಾದಿರಾಜ್‌ ಸಾಮರಸ್ಯ ಲೇಖನ

obituary: ಒಳಮೀಸಲಾತಿ ಹೋರಾಟಗಾರ ತುಮಕೂರಿನ ಪಾರ್ಥಸಾರಥಿ ಹೋರಾಟದ ನೆನಪುಗಳು; ವಾದಿರಾಜ್‌ ಸಾಮರಸ್ಯ ಲೇಖನ

Umesha Bhatta P H HT Kannada

Jul 10, 2024 01:52 PM IST

google News

ತುಮಕೂರಿನ ಸಾಮಾಜಿಕ ಹೋರಾಟಗಾರ ಪಾರ್ಥಸಾರಥಿ ನಿಧನರಾದರು.

  •  Tumkur News ತುಮಕೂರಿನ ಸಾಮಾಜಿಕ ಹೋರಾಟಗಾರ ಪಾರ್ಥಸಾರಥಿ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ಧಾರೆ.ಅವರ ಜತೆಗಿನ ಒಡನಾಟವನ್ನು ಸಾಮಾಜಿಕ ಕಾರ್ಯಕರ್ತ ವಾದಿರಾಜ್‌ ಸಾಮರಸ್ಯ ನೆನಪಿಸಿಕೊಂಡಿದ್ದಾರೆ.

ತುಮಕೂರಿನ ಸಾಮಾಜಿಕ ಹೋರಾಟಗಾರ ಪಾರ್ಥಸಾರಥಿ ನಿಧನರಾದರು.
ತುಮಕೂರಿನ ಸಾಮಾಜಿಕ ಹೋರಾಟಗಾರ ಪಾರ್ಥಸಾರಥಿ ನಿಧನರಾದರು.

ನಿನ್ನೆ ಬೆಳಗ್ಗೆ ಗೆಳೆಯ ಸಿ ಎಸ್ ಪಾರ್ಥಸಾರಥಿ ಅವರ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ತುಮಕೂರಿಗೆ ಹೊರಡುವಾಗ , ಬಾಗಲಕೋಟೆ ಜಿಲ್ಲೆಯ ಮುಧೋಳದ ರಂಗಭೂಮಿ ಕಲಾವಿದೆ ಕುಳಲಿ ಹನುಮವ್ವ ಕರೆ ಮಾಡಿದರು . ಅವರಿಗೆ ಈ ಅನಿರೀಕ್ಷಿತ ಸುದ್ದಿಯನ್ನು ಖಾತರಿಪಡಿಸಿಕೊಳ್ಳಬೇಕಿತ್ತು .

ದಶಕಗಳ ಹಿಂದೆ ಪಾರ್ಥಸಾರಥಿ ಮುಧೋಳ , ಜಮಖಂಡಿ ಭಾಗದ ದೇವದಾಸಿಯರ ನಡುವೆ ತಮ್ಮ NGO ಮೂಲಕ ಕೆಲಸ ಮಾಡುತ್ತಿದ್ದರು . ಆ ದಿನಗಳಿಂದ ಪಾರ್ಥಸಾರಥಿ ಪರಿಚಯ . ಸರ್ಕಾರ ದೇವದಾಸಿ ಪದ್ಧತಿಯನ್ನು ನಿಷೇಧಿಸಿತ್ತು . ಆದರೆ ಎಳೆಯ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡುವ ಪ್ರವೃತ್ತಿ ಮುಂದುವರಿದಿತ್ತು . ಆದರೆ ಪಾರ್ಥಸಾರಥಿ ಅವರ ಜೊತೆಗಿನ ಪರಿಚಯ ನಿಕಟತೆಗೆ ತಿರುಗಿದ್ದು ಒಳ ಮೀಸಲಾತಿಯ ಹೋರಾಟದ ವಿಷಯದಲ್ಲಿ . ಮೊದಮೊದಲು ನನ್ನ ಬದ್ಧತೆಯ ಬಗ್ಗೆ ಅವರಿಗೂ ಅನುಮಾನಗಳಿದ್ದವು . ನೂರಾರು ಭೇಟಿಗಳು , ತಾಸುಗಟ್ಟಲೆ ಚರ್ಚೆಗಳು ಅನುಮಾನದ ಗೆರೆಗಳನ್ನು ಅಳಿಸಿಹಾಕಿತು .

ಒಳ ಮೀಸಲಾತಿ ವಿಷಯದಲ್ಲಿ ಬೀದಿ ಹೋರಾಟದಷ್ಟೆ ಕಾನೂನಾತ್ಮಕ ಹೋರಾಟವೂ ಮುಖ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿವರು ಪಾರ್ಥಸಾರಥಿ . ಆ ದೃಷ್ಟಿಯಲ್ಲಿ ನ್ಯಾ ಅರುಣ್ ಮಿಶ್ರಾ ತೀರ್ಪು ನಿರ್ಣಾಯಕ ಎಂಬುದನ್ನು ಮನಗಂಡವರು ಪಾರ್ಥಸಾರಥಿ . 2020 ರಲ್ಲಿ ಬಂದ ಈ ತೀರ್ಪಿನ ತರುವಾಯ ಸಂಸತ್ತಿನಲ್ಲಿ 341 ನೇ ವಿಧಿಗೆ ತಿದ್ದುಪಡಿಯಾಗಬೇಕೆಂಬ ವಾದ ಅಪ್ರಸ್ತುತವಾಗಿತ್ತು . ನ್ಯಾ ಅರುಣ್ ಮಿಶ್ರಾ ತೀರ್ಪನ್ನು ಸುಪ್ರೀಂಕೋರ್ಟ್ 7 ಸದಸ್ಯರ ಪೀಠದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿತು . ಸ್ವತಃ ಕೇಂದ್ರ ಸರಕಾರವೇ ಒಳ ಮೀಸಲಾತಿಯ ಪರವಾಗಿ ವಾದ ಮಂಡಿಸಿತು . ಈಗ ತೀರ್ಪು ಬರುವುದು ಬಾಕಿಯಿದೆ . ಬೇಸಿಗೆಯ ಸುಧೀರ್ಘ ರಜೆಯ ತರುವಾಯ ನಿನ್ನೆಯಿಂದ ಸುಪ್ರೀಂಕೋರ್ಟ್ ಮತ್ತೆ ಕೆಲಸ ಶುರು ಮಾಡಿದೆ . ಕೆಲ ದಿನಗಳಲ್ಲಿ ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ತೀರ್ಪು ಹೊರಬೀಳಲಿದೆ . ಪಾರ್ಥಸಾರಥಿ ಅವರ ಜೀವಮಾನದ ಪ್ರಶ್ನೆಗೆ ಉತ್ತರ ಸಿಗುತ್ತಿರುವ ಹೊತ್ತಿನಲ್ಲೇ ನಮ್ಮನ್ನು ಬಿಟ್ಟು ಅಗಲಿದ್ದಾರೆ . ಹಾಗೆ ನೋಡಿದರೆ ಇದೇ ಜುಲೈ 7 , 8 ರಂದೇ 30 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ಅಂದಿನ ಆಂಧ್ರದ ವಾರಂಗಲ್ ನಲ್ಲಿ ಒಳಮೀಸಲಾತಿಯ ಮೊದಲ ಹೋರಾಟ ಆರಂಭವಾದದ್ದು .

ಪಾರ್ಥಸಾರಥಿ ವಿದ್ಯಾರ್ಥಿ ದಿಸೆ ಇಂದಲೇ ಬಿ ಕೃಷ್ಣಪ್ಪನವರ ನೇರ ಗರಡಿಯಲ್ಲೇ ಡಿಎಸ್ಸೆಸ್ ಹೋರಾಟದಲ್ಲಿ ಪಳಗಿದವರು . ಆನಂತರ ಒಳ ಮೀಸಲಾತಿಯ ಹೋರಾಟಕ್ಕೆ ಹೊರಳಿದವರು . ಒಳ ಮೀಸಲಾತಿಯ ತಾರ್ಕಿಕ ಅಂತ್ಯಕ್ಕೆ ' ಆರೆಸೆಸ್ಸಿನ ಪಾತ್ರ ದೊಡ್ಡದೆಂದು ' ಮುಕ್ತಕಂಠದಿಂದ ಹೇಳಿದವರು .

ಒಳ ಮೀಸಲಾತಿಯ ಹೋರಾಟದ ಯಾತ್ರೆಯಲ್ಲಿ ತೆಲಂಗಾಣದ ' ಮಾದಿಗ ವಿಶ್ವರೂಪಂ ' ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು ಐತಿಹಾಸಿಕ ತಿರುವು . ತರುವಾಯ ಕರ್ನಾಟಕದ ಉದ್ದಗಲಕ್ಕೆ ಮಾದಿಗ ಮುನ್ನಡೆ ಕಾರ್ಯಕ್ರಮ ನೆಡೆಯಿತು . ಇದರ ಇಡೀ ಯೋಜನೆಯಲ್ಲಿ ಪ್ರಧಾನ ಭೂಮಿಕೆ ವಹಿಸಿದವರು ಪಾರ್ಥಸಾರಥಿ . ಬೆಂಗಳೂರಿನ ಹೊರವಲಯದ ಆರೆಸ್ಸೆಸ್ ಶಾಲೆಯ ಪರಿಸರದಲ್ಲಿ ನೆಡೆದ ಮಾದಿಗ ಮುನ್ನೆಡೆಯ ಪೂರ್ವಭಾವಿ ಸಭೆ , ರಾಜ್ಯದ ಎಲ್ಲೆಡೆಯಿಂದ ಬಂದ 600 ಹೆಚ್ಚು ಕಾರ್ಯಕರ್ತರು , ಸಭೆಯ ಶಿಸ್ತು , ಅಚ್ಚುಕಟ್ಟುತನ ಪಾರ್ಥಸಾರಥಿ ಅವರನ್ನು ರೋಮಾಂಚನಗೊಳಿಸಿತು . ರಾಯಚೂರಿನ ಮಾದಿಗ ಮುನ್ನೆಡೆ ಸಮಾವೇಶದಲ್ಲಿ ಸ್ವತಃ ಪಾರ್ಥಸಾರಥಿ ವೇದಿಕೆಯಲ್ಲಿದ್ದರು . ಅತ್ತ ಸುಪ್ರೀಂಕೋರ್ಟಿನ positive ಬೆಳವಣಿಗೆಗಳು , ಇತ್ತ ಮಾದಿಗ ಮುನ್ನಡೆಯ ಯಶಸ್ಸು ಪಾರ್ಥಸಾರಥಿ ಅವರಿಗೆ ನಿಜಕ್ಕೂ ಒಂದು ರೀತಿಯ ನೆಮ್ಮದಿ ತಂದಿತ್ತೇನೋ . ಅವತ್ತು ಜನವರಿ 14 ಸಂಕ್ರಾಂತಿಯ ದಿನ . ಅವರ ಆಪ್ತ ಗೆಳೆಯ ಧರ್ಮಣ್ಣ ಅವರ ಜೊತೆ ಎಳ್ಳು ಬೆಲ್ಲ ಕೊಡಲು ಬಂದಿದ್ದರು . ಒಳ ಮೀಸಲಾತಿಯ ಹೋರಾಟ ಈ ಹಂತಕ್ಕೆ ಬರಬಹುದೆಂದು ನಾನೆಣಿಸಿರಲಿಲ್ಲ . ಇದರಲ್ಲಿ ನಮ್ಮ ಇಡೀ ಜನಾಂಗದ ಭವಿಷ್ಯ ಆಡಗಿದೆ ಎಂದು ಹೇಳುತ್ತಾ ಭಾವುಕರಾದ ಪಾರ್ಥಸಾರಥಿ ನನ್ನನ್ನು ತಬ್ಬಿ ಕಣ್ಣೀರಾದರು .

ವಾರಕ್ಕೆ ಒಂದೋ ಎರಡು ಸಲ ಫೋನ್ ಮಾಡದೆ ಇದ್ದವರಲ್ಲ , ಪ್ರತಿ ಕರೆಯಲ್ಲೂ ಯಾವುದೋ ರಾಜ್ಯದ ಹೋರಾಟ , ಕೋರ್ಟ್ ತೀರ್ಪಿನ ಅಪರೂಪದ ಮಾಹಿತಿ ಇಲ್ಲದೆ ಮಾತು ಮುಕ್ತಾಯವಾದದ್ದು ಇಲ್ಲ , ಕಳೆದ ವಾರವಷ್ಟೆ ಕುದ್ಮುಲ್ ರಂಗರಾಯರ ಬಗ್ಗೆ , ಬಾಬು ಜಗಜೀವನ್ ರಾಮ ಅವರ ಸಿ ಎಫ್ ಡಿ ಬಗ್ಗೆ ಮಾತನಾಡಿದ್ದರು .

' ತಮ್ಮ ಮಾದಿಗ ಸಮಾಜಕ್ಕಾಗಿ ದುಡಿಯುವ ಕೇಡರ್ ಗಳನ್ನು ರೂಪಿಸಬೇಕು . ಅದಕ್ಕಾಗಿ ರಾಜ್ಯದ ಬೇರೆ ಬೇರೆ ಕಡೆ workshop ಮಾಡಬೇಕು . ಒಳ ಮೀಸಲಾತಿಯನ್ನು ಬಳಸಿಕೊಳ್ಳಲು ಸಮಾಜವನ್ನು ಸಿದ್ಧಪಡಿಸಬೇಕು , ತಮಿಳುನಾಡಿನ ಚಾರಿತ್ರಿಕ ಹೋರಾಟಗಾರ ವಂಡಿವೀರನ್ ಗೆ ಸ್ಮಾರಕ ಮಾಡಬೇಕು . ಅದಕ್ಕಾಗಿ ತಿರುವನ್ವೈಲಿ ಹೋಗಬೇಕು . ಕೇಂದ್ರ ಸಚಿವ ಮುರುಗನ್ ಹತ್ತಿರ ಮಾತನಾಡಬೇಕು . ಮಂದಕೃಷ್ಣ ಮಾದಿಗ ಅವರಿಗೆ ಒಂದು ನಾಗರಿಕ ಸನ್ಮಾನ ಮಾಡಬೇಕು . ಒಳ ಮೀಸಲಾತಿ ಹೋರಾಟದ ದಾಖಲೆಗಳೆಲ್ಲ ಒಂದೇ ಕಡೆ ಸಿಗೋ ಹಾಗೆ ಒಂದು ಲೈಬ್ರರಿ ಮಾಡಬೇಕು . ' - ಇದೆಲ್ಲ ಮಾತಿನ ನಡುವೆ ಪಾರ್ಥಸಾರಥಿ ಹಂಚಿಕೊಳ್ಳುತ್ತಿದ್ದ ಕನಸುಗಳು . ಕಳೆದ ಕೆಲ ವರ್ಷಗಳಿಂದ ತೀರಾ ಆತ್ಮೀಯರಾಗಿದ್ದ ಪಾರ್ಥಸಾರಥಿ ಅರವತ್ತರ ಅಂಚಿನ ವಯಸ್ಸಿನಲ್ಲಿ ಅಗಲಿದ್ದಾರೆ . ಅವರಿಲ್ಲ , ಅವರ ಕನಸುಗಳಿಗೆ ' ಜೀವ ' ಕೊಡಬೇಕಷ್ಟೆ .

ನಿನ್ನೆ ರಾತ್ರಿ ತುಮಕೂರು ಸಮೀಪದ ಕುಂದೂರಿನಲ್ಲಿ ಪಾರ್ಥಸಾರಥಿ ಅವರನ್ನು ' ಮಣ್ಣು' ಮಾಡಿ ವಾಪಸ್ ಬರುವಾಗ ಕುಳಲಿ ಹನಮವ್ವ ಅವರದ್ದು ಮತ್ತೆ ಫೋನ್ ಕರೆ . ' ಎಲ್ಲ ಆಯ್ತಾ ಸಾರ್ , ನಮಗೆ ಮುಖನೂ ಸಿಗಲಿಲ್ಲ ' ಎಂದು ಮರುಗಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ