AI and Privacy: ಎಐ ಕಿತಾಪತಿ, ನಮ್ಮ ಸಮಾಜ ಮತ್ತು ಖಾಸಗಿ ಬದುಕು: ಮಧು ವೈಎನ್ ಬರಹ
Oct 14, 2023 09:51 PM IST
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಸಾಂಕೇತಿಕ ಚಿತ್ರ)
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಪ್ರೈವೆಸಿ ಸದ್ಯ ಗಂಭೀರ ಚರ್ಚೆಗೊಳಗಾಗುತ್ತಿದೆ. ಮಾಹಿತಿ ಗೌಪ್ಯತೆ ಕುರಿತಾದ ಪರ ವಿರೋಧದ ಚರ್ಚೆ ಕಾವು ಪಡೆದುಕೊಂಡಿದೆ. ಹೀಗಿರುವಾಗಲೇ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಲೇಖಕ ಮಧು ವೈಎನ್ (ಮಧುಸೂಧನ) ಈ ಗಂಭೀರ ವಿಷಯವನ್ನು ಸರಳವಾಗಿ ಅರ್ಥವಾಗುವಂತೆ ವಿವರಿಸಿ ವಿವಿಧ ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸದ್ಯ ಹೆಚ್ಚು ಬಳಕೆಗೆ ಒಳಗಾಗುತ್ತಿರುವ ಮತ್ತು ಸುಧಾರಣೆ ಕಾಣುತ್ತಿರುವ ತಂತ್ರಜ್ಞಾನಗಳ ಪೈಕಿ ಒಂದು. ಇದರ ಬಳಕೆ ಹೆಚ್ಚಾದಂತೆ, ವೈಯಕ್ತಿಕ ಡೇಟಾ ಗೌಪ್ಯತೆಗೆ ಸಂಬಂಧಿಸಿ ಅಸಂಖ್ಯಾತ ಕಾಳಜಿಗಳು ವ್ಯಕ್ತವಾಗತೊಡಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆಯನ್ನು ಕಲಿಯಲು ಮತ್ತು ಮುನ್ನೋಟಗಳನ್ನು ಕಂಡುಕೊಳ್ಳಲು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ವೈಯಕ್ತಿಕ ಡೇಟಾವನ್ನು ಅವಲಂಬಿಸಿವೆ. ಇದು ಅಂತಹ ಡೇಟಾದ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂಗ್ರಹಣೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಈ ವಿಚಾರ ಸದ್ಯದ ಹಾಟ್ ಟಾಪಿಕ್. ಹೀಗಿರುವಾಗಲೇ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಲೇಖಕ ಮಧು ವೈಎನ್ (ಮಧುಸೂಧನ) ಈ ಗಂಭೀರ ವಿಷಯವನ್ನು ಸರಳವಾಗಿ ವಿವರಿಸಿದ್ದಾರೆ.
ಮಾಹಿತಿ ಗೌಪ್ಯತೆ ಬಗ್ಗೆ ಭಾರತೀಯರು ಎಂದಿಗೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ
ಎಐ ಆಪ್ ಗಳು ಡಾಟಾ ಕಲೆಕ್ಟ್ ಮಾಡ್ತಾವೆ ಅನ್ನೊದೇನೊ ಸರಿ. ಆದರೆ ಭಾರತೀಯರು ಮಾಹಿತಿ ಗೌಪ್ಯತೆ ಬಗ್ಗೆ ಎಂದಿಗೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಈ ಆಪ್‌ಗಳು ತಿಣಕಿ ಪಣಕಿ ಇಷ್ಟೆಲ್ಲ ಕಲೆಕ್ಟ್ ಮಾಡ್ತಾವೆ. ನಮ್ ಜನ ಬಸ್ ಸ್ಟ್ಯಾಂಡಲ್ಲಿ ಕೂತ್ಗಂಡು ಸುಮ್ನೆ ಕಷ್ಟ ಸುಖ ಅಂತ ಮಾತಾಡ್ಸಿದ್ರೆ ಇಡೀ ಫ್ಯಾಮಿಲಿ ಹಿಸ್ಟರಿನೇ ಹೇಳಿಬಿಡ್ತಾರೆ.
ಒಂದೇ ವ್ಯತ್ಯಾಸ ಅಂದ್ರೆ ಆಪ್ ಗಳು ಮಾಹಿತಿಯನ್ನ ವ್ಯಾಪಾರಕ್ಕೆ ಬಳಸಿಕೊಳ್ತವೆ. ಜನರು ಗಾಸಿಪ್ ಗಾಗಿ ನ್ಯಾಯ ಹೇಳುವ ನ್ಯಾಯಾಧೀಶರಾಗಿ ಬಳಸಿಕೊಳ್ತಾರೆ ಎಂದು ಮಧು ಅವರು ಲಘು ಧಾಟಿಯಲ್ಲಿ ಹೇಳಿದ್ದಾರೆ.
ತಮಾಷೆಯೂ ಹೌದು ಗಂಭೀರ ಚರ್ಚೆಯ ವಿಷಯವೂ ಹೌದು
ಇದು ತಮಾಷೆಯೂ ಹೌದು ಗಂಭೀರ ಚರ್ಚೆಯ ವಿಷಯವೂ ಹೌದು. ಪಶ್ಚಿಮದ ದೇಶಗಳಲ್ಲಿ ಮಾಹಿತಿಯು ನಾಲ್ಕು ಗೋಡೆಗಳೊಳಗೆ, ನಾಲ್ಕು ಕಟ್ಟುಗಳ ಸ್ಕ್ರೀನಿನೊಳಗೆ ಬಂಧಿಯಾಗಿರುತ್ತದೆ ಅಥವಾ ಸುರಕ್ಷಿತವಾಗಿರುತ್ತದೆ. ಪೂರ್ವ ದೇಶಗಳಲ್ಲಿ ಹಾಗಿಲ್ಲ. ಇಲ್ಲಿರುವುದು ಸಮುದಾಯಿಕ ಸಮಾಜ. ಇಲ್ಲಿ ಎಲ್ಲವೂ ಸಾರ್ವಜನಿಕ. ಇನ್ ಫ್ಯಾಕ್ಟ್ ಇಲ್ಲಿನ ಸಮಾಜ ಖಾಸಗಿ ಮಾಹಿತಿಯನ್ನೂ ಹಕ್ಕಿನಂತೆ ಕೇಳುತ್ತದೆ.
ಯಾವುದಾದರೂ ಸರಕಾರಿ ಕಛೇರಿಗಳ ನೊಟಿಸ್ ಬೋರ್ಡುಗಳನ್ನು ನೋಡಿ, ಗೌಪ್ಯತೆಯ ಪ್ರಜ್ಞೆಯೇ ಇರದೆ ಎಲ್ಲವನ್ನು ಪ್ರಕಟಿಸಿರುತ್ತಾರೆ. ಬೀದಿಯಲ್ಲಿ ಜಗಳ ಆಗ್ತಿದ್ದರೆ ಜನ ಜಡ್ಜಿಗಿಂತ ಅಧಿಕ ಮಾಹಿತಿ ಕೇಳಿ ಪಡೆಯುತ್ತಾರೆ. ಹೇಳುವವರೂ ಹಾಗೆ. ನ್ಯಾಯಕ್ಕೋಸ್ಕರ ಇಂಚಿಂಚು ಬಿಡದೇ ಹೇಳುತ್ತಾರೆ. ಪತ್ರಿಕೆಗಳ ವರದಿಗಳೂ ಹಾಗೆ. ಟಿವಿಗಳಂತೂ ಬಿಡಿ ಸೀದಾ ಬೆಡ್ ರೂಮಿಗೆ ನುಗ್ತಾರೆ.
ಈಗೀಗಷ್ಟೇ ಸ್ವಲ್ಪ ಗೊಂದಲ. ನಗರವಾಸಿಗಳು, ನ್ಯೂಕ್ಲಿಯರ್ ಕುಟುಂಬಗಳು, ವಿದೇಶಕ್ಕೆ ಹೋಗಿಬಂದವರು, ಪಶ್ಚಿಮದವರ ವ್ಯವಸ್ಥಿತ ಜೀವನಕ್ರಮ ಕಂಡವರು ಅರೆ ನಮ್ಮಲ್ಲಿ ಯಾಕೆ ಹೀಗಿಲ್ಲ ಎಂದು ಯೋಚಿಸಲಾರಂಭಿಸಿದ್ದಾರೆ. ನಮ್ಮಲ್ಲಿನ್ನೂ ಮಾಹಿತಿ ಗೌಪ್ಯತೆಯ ಪ್ರಜ್ಞೆ ಸಮಾಜಿಕ ಬದಲಾವಣೆಯಾಗಿ ಹಬ್ಬಿಲ್ಲ.