Panathur electric crematorium: ಮಳೆ ಅವಾಂತರ.. ಪಣತ್ತೂರು ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತ
Sep 05, 2022 09:51 PM IST
ಸಾಂದರ್ಭಿಕ ಚಿತ್ರ
- ಮಹದೇವಪುರ ವಲಯ ವ್ಯಾಪ್ತಿಯ ಪಣತ್ತೂರು ವಿದ್ಯುತ್ ಚಿತಾಗಾರದಲ್ಲಿ ಮಳೆ ನೀರು ತುಂಬಿರುವುದರಿಂದ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ನಾಳೆಯಿಂದ ನಾಲ್ಕು ದಿನಗಳ ಕಾಲ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯ ಪಣತ್ತೂರು ವಿದ್ಯುತ್ ಚಿತಾಗಾರದಲ್ಲಿ ಮಳೆ ನೀರು ತುಂಬಿರುವುದರಿಂದ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ 06-09-2022 ರಿಂದ 09-09-2022 (4 ದಿನಗಳು) ವರೆಗೆ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕಟಣೆ ಹೊರಡಿಸಿದೆ.
ಪಣತ್ತೂರು ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದು ಎಂದು ಮಹದೇವಪುರ ವಲಯದ ಕಾರ್ಯಪಾಲಕ ಇಂಜಿನಿಯರ್(ವಿದ್ಯುತ್) ತಿಳಿಸಿದ್ದಾರೆ.
ಪಣತ್ತೂರು ಚಿತಾಗಾರಕ್ಕೆ ಪ್ರಸ್ತುತ ಸರಾಸರಿ 4 ರಿಂದ 15 ಶವಗಳು ಬರುತ್ತಿವೆ. ಈ ಚಿತಾಗಾರದಲ್ಲಿ ಈ ಹಿಂದೆ ನಿರಂತರವಾಗಿ ಬಿಡುವಿಲ್ಲದೆ ಕಾರ್ಯನಿರ್ವಹಿಸಿದ್ದರಿಂದ ಚಿತಾಗಾರದ ಚಿಮಿನಿ ಪೈಪ್ಲೈನ್ ಹಾಳಾಗಿರುತ್ತದೆ. ಈ ಚಿತಾಗಾರವನ್ನು ಸುಸ್ಥಿತಿಯಲ್ಲಿಡುವ ಸಂಬಂಧ ಕೆ ಕೆಲಸಗಳನ್ನು ಕೈಗೊಳ್ಳಲೇಬೇಕಾಗಿದೆ ಎಂದು ಹೇಳಿದ್ದಾರೆ.
ಪಣತ್ತೂರು ಚಿತಾಗಾರದಲ್ಲಿ ದುರಸ್ತಿ ಕಾರ್ಯ ಮಾಡಬೇಕಿದೆ. ವಿದ್ಯುತ್ ಚಿತಾಗಾರದ ಫರ್ನೇಸ್‌ಗಳು 600 ಡಿಗ್ರಿ C ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫರ್ನೇಸ್ ಒಳಗೆ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಕನಿಷ್ಟ ಉಷ್ಣಾಂಶ 50 ಡಿಗ್ರಿ C ಗಿಂತ ಕಡಿಮೆ ಇರಬೇಕಾಗುತ್ತದೆ. ಉಷ್ಣಾಂಶವು 50 ಡಿಗ್ರಿ C ಗೆ ಬರಲು 2-3 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಮತ್ತು ದುರಸ್ಥಿ ಕೆಲಸಗಳು ಮುಕ್ತಾಯದ ನಂತರ ಫರ್ನೇಸ್ ಉಷ್ಣಾಂಶ 600 ಡಿಗ್ರಿ ಗೆ ಏರಲು 2-3 ದಿನಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಮೇಲಿನ ರಿಪೇರಿ ಕೆಲಸಗಳನ್ನು ಕೈಗೊಳ್ಳಲು ದಿನಾಂಕ: 06-09-2022 ರಿಂದ 09-09-2022ರ 4 ದಿನಗಳವರೆಗೆ ಚಿತಾಗಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉದ್ದೇಶಿಸಲಾಗಿದೆ. ಈ ಅವಧಿಯಲ್ಲಿ ಬರುವ ಶವಗಳನ್ನು ಕಲ್ಪಹಳ್ಳಿ ಮತ್ತು ಹೆಬ್ಬಾಳ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಗೆ ಕತ್ತರಿ?
ಮಹದೇವಪುರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಟಿ.ಕೆ.ಹಳ್ಳಿ ನೀರು ಸರಬರಾಜು ಘಟಕ ಜಲಾವೃತವಾಗಿರುವ ಕಾರಣ ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡಲು ತೊಂದರೆ ಆಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿಗರು ಎರಡು ದಿನಗಳ ಕಾಲ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.
ವಿಭಾಗ