KC Narayana Gowda: ಕಾರ್ಯಕರ್ತರು ಹಣ ಹಂಚಿಲ್ಲ; ಕೆಆರ್ ಪೇಟೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಹೇಳಿದ ಮಾಜಿ ಸಚಿವ ಕೆಸಿ ನಾರಾಯಣಗೌಡ
May 22, 2023 10:05 PM IST
ಕಾರ್ಯಕರ್ತರು ಹಣ ಹಂಚದ ಕಾರಣ ನಾನು ಸೋಲು ಕಾಣಬೇಕಾಯಿತು ಎಂದು ಕೆಆರ್ ಪೇಟೆಯ ಮಾಜಿ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಕ್ಷೇತ್ರದಲ್ಲಿ ಕಾರ್ಯಕರ್ತರ ಹಣ ಹಂಚದ ಕಾರಣ ನಾನು ಸೋಲು ಕಾಣಬೇಕಾಯಿತು ಎಂದು ಕೆಆರ್ ಪೇಟೆ ಮಾಜಿ ಶಾಸಕ ಕೆಸಿ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯ: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಆಡಳಿತರೂಢ ಬಿಜೆಪಿ ಸರ್ಕಾರ (BJP Govt) ಹೀನಾಯ ಸೋಲು ಕಂಡಿದೆ. ಅಧಿಕಾರದಲ್ಲಿದ್ದ ಘಟಾನುಘಟಿ ಸಚಿವರುಗಳೇ ಚುನಾವಣೆಯಲ್ಲಿ ಸೋತಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್‌ನಿಂದ (Congress) ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಸಾಕಷ್ಟು ಮಂದಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಅದರಲ್ಲೊಬ್ಬರು ಮಾಜಿ ಸಚಿವ ಕೆಸಿ ನಾರಾಯಣಗೌಡ. ಇಂದು (ಮೇ 22, ಸೋಮವಾರ) ನಾರಾಯಣಗೌಡ ಅವರು ಸೋಲಿನ ನಂತರ ಆತ್ಮಾವಲೋಕನ ಸಭೆ ನಡೆಸಿದ್ದು, ಸಭೆ ನಡುವೆ ಹಣ ಹಂಚಿಕೆ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಂಡ್ಯದ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕೆಸಿ ನಾರಾಯಣಗೌಡ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡುವಾಗ, ʻಹೌದು ಸರಿಯಾಗಿ ಹಣ ಹಂಚದ ಕಾರಣ ಈ ಚುನಾವಣೆಯಲ್ಲಿ ಸೋಲಾಗಿದೆ. ಚುನಾವಣೆ ವೇಳೆ ನಾನು ಕೊಟ್ಟಿದ್ದ ಹಣವನ್ನು ಕೆಲವರು ಮತದಾರರಿಗೆ ಹಂಚಿಕೆ ಮಾಡಿಲ್ಲ. ಅಂತಹವರು ಹಣ ಇಟ್ಟುಕೊಂಡಿದ್ದರೆ ನಮ್ಮ ಟ್ರಸ್ಟ್‌ಗೆ ತಂದು ಕೊಡಿ ಎಂದು ಸಭೆಯ ವೇದಿಕೆಯ ಮೇಲೆ ನಿಂತು ಹೇಳಿದ್ದಾರೆ. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆಯಲ್ಲಿ ನಾನು ಸೋತಿದ್ದೇನೆ. ಆದರೆ ಎಂದಿಗೂ ನಾನು ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ನಾನು ಸತ್ತರೂ ಇಲ್ಲೇ ಮಣ್ಣಾಗುತ್ತೇನೆ. ಇಲ್ಲೇ ಜಾಗ ಮೀಸಲಿಟ್ಟಿದ್ದೇನೆ. ಚುನಾವಣೆ ವೇಳೆ ನಾನು ಕೊಟ್ಟಿದ್ದ ಹಣವನ್ನು ಕೆಲವರು ಮತದಾರರಿಗೆ ಕೊಟ್ಟಿಲ್ಲ. ಅಂತಹವರು ಹಣ ಇಟ್ಟುಕೊಂಡಿದ್ದರೆ ನಮ್ಮ ಟ್ರಸ್ಟ್‌ಗೆ ತಂದು ಕೊಡಿ. ನನಗೆ ಆ ಹಣ ಬೇಡ, ಟ್ರಸ್ಟ್‌ಗೆ ಕೊಡಿ. ಅದನ್ನು ಸಮಾಜ ಸೇವೆಗೆ ಬಳಸೋಣ ಅಂತ ಆತ್ಮಾವಲೋಕನ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮಂಡ್ಯ ಭಾಗದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಸಂಸದೆ ಸುಮಲತಾ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಯಾವತ್ತಿಗೂ ನಂಬಿಕೆ ಇದೆ. ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪರ ಎಲ್ಲೆಲ್ಲಿ ಪ್ರಚಾರ ಮಾಡಲಾಗಿದೆಯೋ ಅಲ್ಲೆಲ್ಲ ಕೇಸರಿ ಪಕ್ಷದ ಪರ ಮತ ಗಳಿಕೆ ಹೆಚ್ಚಾಗಿದೆ ಎಂದಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ನಾನು 2023ರ ಮಾರ್ಚ್ 10 ರಂದು ಸುದ್ದಿಗೋಷ್ಠಿ ಕರೆದು ಬಿಜೆಪಿಗೆ ನನ್ನ ಬೆಂಬಲ ಘೋಚಿಸಿದ್ದೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಪಕ್ಷವು ಏಪ್ರಿಲ್ 18 ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಿತು. ಪಕ್ಷವು ಘೋಷಣೆ ಮಾಡಿದ ನನ್ನ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ಫಸ್ಟ್ ಟೈಮ್ ಚುನಾವಣೆ ಎದುರಿಸಿದವರು. ಆದರೂ ಎದುರಾಳಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಪ್ರಚಾರಕ್ಕೆ ನಮಗಿದ್ದದ್ದು ಎರಡ್ಮೂರು ವಾರಗಳಷ್ಟೇ ಸಮಯ. ಆದರೂ ಹೊಸ ಪಡೆಯನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದೇವೆ. ಪರಿಣಾಮ ಮೊದಲ ಬಾರಿಗೆ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಮಂಡ್ಯದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೇ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಅಲೆ ಹೆಚ್ಚಾಗಿದ್ದರಿಂದ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಹಾಗಾಗಿ ಪಕ್ಷಕ್ಕೆ ಆಗಿರುವ ಸೋಲನ್ನು ಒಪ್ಪಿಕೊಂಡು, ಆತ್ಮಾವಲೋಕನದ ಜೊತೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಮಾರ್ಚ್ 10 ರಂದು ನಾನು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ‘ನಾನು ರಿಸ್ಕ್ ತಗೆದುಕೊಳ್ಳುತ್ತಿದ್ದೇನೆ. ಇದು ರಿಸ್ಕ್ ಎಂದು ನನಗೆ ಗೊತ್ತಿದೆ’ ಎಂದು ಮಾಧ್ಯಮಗಳ ಮುಂದೆಯೇ ಅವತ್ತೆ ಸ್ಪಷ್ಟ ಪಡಿಸಿದ್ದೆ. ಪಕ್ಷದ ಸೋಲಿಗೆ ಇಷ್ಟೆಲ್ಲ ಕಾರಣಗಳು ಇದ್ದರೂ, ನೀವು ನಿಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತೀದ್ದೀರಿ. ಸುಳ್ಳು ಸಂದೇಶಗಳನ್ನು ಹರಡುತ್ತಿದ್ದೀರಿ. ನೀವೇ ಸುದ್ದಿಯನ್ನು ಸೃಷ್ಟಿಸಿ ಜನರಿಗೆ ತಪ್ಪು ಮಾಹಿತಿಯನ್ನು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಭವಿಷ್ಯ ಅಥವಾ 24X7 ರಾಜಕಾರಣದ ಲೆಕ್ಕಾಚಾರ ಹಾಕುತ್ತಾ ಕೂರುವವಳು ನಾನಲ್ಲ. ನನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದ್ದರೆ ಬಹುಶಃ ನನ್ನ ನಿಲುವೇ ಬೇರೆಯದ್ದಾಗಿಯೇ ಇರುತ್ತಿತ್ತು. ಆ ರೀತಿ ಮಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ. ನನ್ನ ಆತ್ಮಸಾಕ್ಷಿ ಆಧಾರದ ಮೇಲೆ ನಾನು ನನ್ನ ನಿರ್ಧಾರಗಳನ್ನು ತಗೆದುಕೊಳ್ಳುತ್ತೇನೆ ಮತ್ತು ನನ್ನ ಕ್ಷೇತ್ರಕ್ಕೆ ಒಳ್ಳೆದಾಗುವಂತಹ ಯೋಚನೆಯನ್ನು ಮಾತ್ರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.