ಕಾಂಗ್ರೆಸ್ ಸೇರಿದ ವರ್ಷಕ್ಕೂ ಮೊದಲೇ ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್; ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಖಚಿತ
Jan 27, 2024 04:14 PM IST
New Delhi, Jan 25 (ANI): Former Karnataka Chief Minister Jagadish Shettar rejoins the Bharatiya Janata Party (BJP) in the presence of party National President JP Nadda, former state CM B.S. Yediyurappa, and party state president Vijayendra Yediyurappa, in New Delhi on Thursday. (ANI Photo)
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವರ್ಷಕ್ಕೂ ಮೊದಲೇ ಬಿಜೆಪಿಗೆ ವಾಪಸ್ ಆಗಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಮಾಹಿತಿ ಇದೆ.
ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಬಿಜೆಪಿಗೆ ಕರೆತಂದಿರುವ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ರಹಸ್ಯ ಕಾರ್ಯಾಚರಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯದಿಂದ ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಷಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೂ ಮಾಹಿತಿ ಇರಲಿಲ್ಲ, ಇತ್ತ ರಾಜ್ಯದಲ್ಲಿ ಇತರೆ ಯಾವುದೇ ಬಿಜೆಪಿ ನಾಯಕರೂ ಈ ಬಗ್ಗೆ ಸುಳಿವು ಕೂಡ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಹಲವು ತಿಂಗಳಿನಿಂದ ಶೆಟ್ಟರ್ ಅವರನ್ನು ಕರೆತರಲು ಬಿಜೆಪಿ ವರಿಷ್ಠರು ಪ್ರಯತ್ನ ನಡೆಸುತ್ತಲೇ ಇದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇವರಿಗೆ ಟಿಕೆಟ್ ನಿರಾಕರಿಸಿತ್ತು. ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡು 35 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆ ನಂತರವೂ ಕಾಂಗ್ರೆಸ್ ಇವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡುವ ಮೂಲಕ ಗೌರವಯುತವಾಗಿ ನಡೆಸಿಕೊಂಡಿತ್ತು.
ಕಾಂಗ್ರೆಸ್ ಟಿಕೆಟ್ ನಿಂದ ಸೋಲು ಕಂಡ ನಂತರ ಶೆಟ್ಟರ್ ವಿಚಲಿತರಾಗಿದ್ದರು. ಇವರ ಸೋಲಿಗೆ ಬಿಜೆಪಿ ಪಣ ತೊಟ್ಟಿತ್ತು. ಜೊತೆಗೆ ಸ್ಥಳೀಯ ಕೈ ಮುಖಂಡರು ತಮ್ಮ ಸೋಲಿಗೆ ತುಪ್ಪ ಸುರಿದಿದ್ದರು ಎನ್ನುವುದನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ತಮ್ಮ ವಿರುದ್ದ ಕೆಲಸ ಮಾಡಿದ ಸ್ಥಳೀಯ ಮುಖಂಡರ ವಿರುದ್ದ ಕ್ರಮ ಕೈಗೊಳ್ಳುವಂತೆ ಶೆಟ್ಟರ್ ಹೈಕಮಾಂಡ್‌ಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಅಲ್ಲದೆ ಉತ್ತರ ಕರ್ನಾಟಕದ ಕೆಲವು ಕೈ ನಾಯಕರು ಶೆಟ್ಟರ ಅವರನ್ನು ದೂರವಿಟ್ಟಿದ್ದರು. ಗುಂಪುಗಾರಿಕೆ, ಉಸಿರುಗಟ್ಟಿಸುವ ವಾತಾವರಣ ಮತ್ತು ಅಶಿಸ್ತಿನಿಂದ ರೋಸಿ ಹೋಗಿದ್ದೇನೆ ಎಂದು ಶೆಟ್ಟರ್ ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. ಸಿದ್ದು ಸಂಪುಟದಲ್ಲಿ ಸಚಿವರಾಗುವ ಬಯಕೆ ಇತ್ತಾದರೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಇವರ ಬಯಕೆಯನ್ನು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳಲೂ ಇಲ್ಲ.
ಸೋತರೂ ಬಿಜೆಪಿಗೆ ಶೆಟ್ಟರ್ ಅನಿವಾರ್ಯ
ಕಳೆದ ಮೂರ್ನಾಲ್ಕು ತಿಂಗಳಿನಿಂದ ಶೆಟ್ಟರ್ ಬಿಜೆಪಿ ಅಥವಾ ತಮಗೆ ಟಿಕೆಟ್ ನಿರಾಕರಿಸಿದ ಜೋಶಿ ವಿರುದ್ದ ಹೇಳಿಕೆ ನೀಡುತ್ತಿರಲಿಲ್ಲ. ಕಾಂಗ್ರೆಸ್ ಸಭೆಗಳಿಂದ ಅನಂತರ ಕಾಯ್ದು ಕೊಂಡಿದ್ದರು. ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ವಿರುದ್ದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಇದೀಗ ಕಾಂಗ್ರೆಸ್ ಜೋಶಿ ವಿರುದ್ದ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಯ ತಲಾಶ್ ನಡೆಸಿದೆ. 67 ವರ್ಷದ ಬಿಜೆಪಿಗೆ ಶೆಟ್ಟರ್ ಅನಿವಾರ್ಯವಾಗಿದ್ದರು. ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಉತ್ತರ ಕರ್ನಾಟಕದಲ್ಲಿ ಅವರೊಬ್ಬ ಪ್ರಭಾವಿ ವೀರಶೈವ ಮುಖಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಉತ್ತರ ಕರ್ನಾಟಕದಲ್ಲಿ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಇವರ ಉಪಸ್ಥಿತಿ ಅನಿವಾರ್ಯವಾಗಿತ್ತು ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
ಕೇಂದ್ರ ಸಚಿವರನ್ನಾಗಿ ಮಾಡುವ ಭರವಸೆ ಸಿಕ್ಕಿದೆಯಾ?
ಯಾವುದೇ ರಾಜಕಾರಣಿ ಸುಖಾಸುಮ್ಮನೆ ಮತ್ತೊಂದು ಪಕ್ಷ ಸೇರ್ಪಡೆಯಾಗುವುದಿಲ್ಲ. ರಾಜಕೀಯ ಲಾಭವಿದ್ದರಷ್ಟೇ ವಲಸೆ ಹೋಗುತ್ತಾರೆ. ಈಗಲೂ ಅಂತಹ ಭರವಸೆಯೊಂದಿಗೆ ಶೆಟ್ಟರ್ ಮರಳಿ ಗೂಡು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಭರವಸೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಇಲ್ಲಿ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಮೃತಪಟ್ಟಾಗ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಇವರು ಕೇವಲ 2000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸುರೇಶ್ ಅಂಗಡಿ 3.9 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಹಾಗಾಗಿ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇವರ ಮರುಸೇರ್ಪಡೆಯ ಹಿಂದೆ ಬಿಎಸ್ ಯಡಿಯೂರಪ್ಪ, ಅವರ ಪುತ್ರ ಬಿವೈ ಪಾತ್ರ
ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸ್ ಆಗಿರುವುದರಲ್ಲಿ ವಿಜಯೇಂದ್ರ ಅವರ ಪರಿಶ್ರಮ ಇರುವುದು ಎದ್ದು ಕಾಣುತ್ತಿದೆ. ದೆಹಲಿಯಲ್ಲಿ ಗುರುವಾರ ದಿನವಿಡೀ ನಡೆದ ಬೆಳವಣಿಗೆಗಳಲ್ಲಿ ಇವರಿಬ್ಬರ ಪಾತ್ರ ಎದ್ದು ಕಾಣುತ್ತಿತ್ತು. ಅಧಿಕೃತವಾಗಿ ಪಕ್ಷ ಸೇರ್ಪಡೆಗೂ ಮುನ್ನ ಶೆಟ್ಟರ್ ಅವರು ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಜನಸಂಖ್ಯೆ ಶೇ.17ರಷ್ಟಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಶೆಟ್ಡರ್ ಅನಿವಾರ್ಯವಾಗಿದ್ದರು. 2008ರಿಂದ ಶೆಟ್ಟರ್ ಆರು ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಮೂಲತಃ ಸಂಘ ಪರಿವಾರದ ಹಿನ್ನಲೆಯ ಶೆಟ್ಟರ್ ಅವರು ತಾವು ಒಗ್ಗಿಕೊಂಡಿದ್ದ ಸಿದ್ದಾಂತಗಳಿಗೆ ಜೋತುಬಿದ್ದು ಮಾತೃಪಕ್ಷಕ್ಕೆ ಮರಳಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೆಟ್ಟರ್ ಜೊತೆ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದ ಮತ್ತೊಬ್ಬ ಪ್ರಭಾವಿ ಮುಖಂಡ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರಿಗೂ ಬಿಜೆಪಿ ಗಾಳ ಹಾಕಿರುವ ಖಚಿತ ಮಾಹಿತಿ ಲಭ್ಯವಾಗಿದೆ. ಆದರೆ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಶೆಟ್ಟರ್ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರೆ ಸವದಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರು ರಾಜೀನಾಮೆ ನೀಡಿದರೆ ಮರು ಚುನಾವಣೆ ನಡೆಯುತ್ತದೆ. ಮತ್ತೆ ಮತದಾರನ ಬಳಿ ಹೋಗುವುದು ಶೋಭೆ ಅಲ್ಲ ಎನ್ನುವುದು ಸವದಿ ಅಭಿಪ್ರಾಯ ಎಂದು ಅವರ ಆಪ್ತರು ಹೇಳುತ್ತಾರೆ.