logo
ಕನ್ನಡ ಸುದ್ದಿ  /  ಕರ್ನಾಟಕ  /  V Somanna: ನಾಲ್ಕು ದಶಕದ ರಾಜಕಾರಣ, ಕರ್ನಾಟಕದ ನಂತರ ಕೇಂದ್ರದಲ್ಲೂ ಮಂತ್ರಿ ಸ್ಥಾನ ಗಿಟ್ಟಿಸಿದರು ಸೋಮಣ್ಣ

V Somanna: ನಾಲ್ಕು ದಶಕದ ರಾಜಕಾರಣ, ಕರ್ನಾಟಕದ ನಂತರ ಕೇಂದ್ರದಲ್ಲೂ ಮಂತ್ರಿ ಸ್ಥಾನ ಗಿಟ್ಟಿಸಿದರು ಸೋಮಣ್ಣ

Umesha Bhatta P H HT Kannada

Jun 09, 2024 08:55 PM IST

google News

ಸೋಮಣ್ಣ ಈಗ ಕೇಂದ್ರ ಸಚಿವ

    • Karnataka politics ಕರ್ನಾಟಕದಲ್ಲಿ ನಾಲ್ಕು ದಶಕದ ರಾಜಕಾರಣದ ಅನುಭವ ಇರುವ ವಿ.ಸೋಮಣ್ಣ ಮೊದಲ ಬಾರಿ ಸಂಸತ್‌ ಪ್ರವೇಶಿಸಿ ಸಚಿವರೂ ಆಗಿದ್ದಾರೆ.
ಸೋಮಣ್ಣ ಈಗ ಕೇಂದ್ರ ಸಚಿವ
ಸೋಮಣ್ಣ ಈಗ ಕೇಂದ್ರ ಸಚಿವ

ವೀರಣ್ಣ ಸೋಮಣ್ಣ ಎನ್ನುವ ಹೆಸರು ಕರ್ನಾಟಕದ ರಾಜಕಾರಣಕ್ಕೆ ಜನಜನಿತ. ವಿ.ಸೋಮಣ್ಣ ಬೆಂಗಳೂರು, ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗದೇ ಹಿರಿಯ ರಾಜಕಾರಣಿಯಾಗಿ, ಹಲವು ಖಾತೆಗಳನ್ನು ನಿಭಾಯಿಸಿ ಕೆಲಸ ಮಾಡಿದ ಅನುಭವ ಉಳ್ಳವರು. ರಾಜಕಾರಣದಲ್ಲಿ ಗೆಲುವಿನ ಜತೆಗೆ ಸೋಲಿನ ಅನುಭವವನ್ನು ಕಂಡವರು.72 ವರ್ಷ ಸೋಮಣ್ಣ ಅವರು ಮೂರು ಸದನಗಳ ಸದಸ್ಯರಾಗಿ ಕೆಲಸ ಮಾಡುವ ಅವಕಾಶ ಪಡೆದವರು. ರಾಜ್ಯದಲ್ಲಿಯೂ ಮೂರು ಬಾರಿ ಸಚಿವರಾಗಿ ಈಗ ಕೇಂದ್ರದಲ್ಲೂ ಮಂತ್ರಿಯಾಗಿದ್ದಾರೆ. ಬೆಂಗಳೂರು, ಮೈಸೂರು, ಚಾಮರಾಜನಗರದಲ್ಲಿ ಚುನಾವಣೆ ಎದುರಿಸಿ ಈಗ ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಕನಕಪುರ ಪ್ರತಿಭೆ

ವಿ.ಸೋಮಣ್ಣ ಮೂಲತಃ ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿ ಗ್ರಾಮದವರು.1951 ರ ಜುಲೈ 20 ರಂದು ಜನಿಸಿದ ಸೋಮಣ್ಣ ಬೆಂಗಳೂರಿನ ಸಂಜೆ ಕಾಲೇಜಿನಲ್ಲಿ ಪದವಿ ಪಡೆದವರು. ಬೆಂಗಳೂರು ನಗರ ಪಾಲಿಕೆ ಮೂಲಕ ರಾಜಕಾರಣ ಆರಂಭಿಸಿದವರು. ಬೆಂಗಳೂರು ಬಿನ್ನಿಪೇಟೆ, ಗೋವಿಂದರಾಜನಗರ ಕ್ಷೇತ್ರದಿಂದ ಸತತವಾಗಿ ಶಾಸಕರಾದವರು. ಒಮ್ಮೆ ಸೋತ ನಂತರ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಲಾಗಿತ್ತು. ಮೂರು ಬಾರಿ ಸಚಿವರಾದವರು. ಜನತಾದಳ, ಕಾಂಗ್ರೆಸ್‌ ನಂತರ ಬಿಜೆಪಿಯಲ್ಲಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಅಪ್ಪಟ ಅಭಿಮಾನಿ ವಿ.ಸೋಮಣ್ಣ,. ಹಿಂದಿನ ಡಾ.ಶಿವಕುಮಾರಸ್ವಾಮೀಜಿ ಅವರ ಒಡನಾಟವನ್ನು ಅವರು ಇಟ್ಟುಕೊಂಡಿದ್ದರು. ಮಠಕ್ಕೆ ಆಗಾಗ ಭೇಟಿ ನೀಡಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದು ಸೋಮಣ್ಣ ಅವರ ವಿಶೇಷ. ಈಗಿನ ಸ್ವಾಮೀಜಿ ಅವರೊಂದಿಗೆ ಅದೇ ನಂಟನ್ನು ಸೋಮಣ್ಣ ಮುಂದುವರೆಸಿದ್ದಾರೆ. ಇವರಿಗೆ ಪತ್ನಿ ಶೈಲಜಾ, ಇಬ್ಬರು ಪುತ್ರಿಯರು ಹಾಗೂ ಪುತ್ರ ಡಾ.ಅರುಣ್‌ ಸೋಮಣ್ಣ ಇದ್ದಾರೆ.

ಮಾತುಗಾರ ಸೋಮಣ್ಣ

ಸೋಮಣ್ಣ ಒಳ್ಳೆಯ ಮಾತುಗಾರ. ತಮ್ಮ ಮಾತಿನ ಮೂಲಕವೇ ಎಲ್ಲರನ್ನು ಆಕರ್ಷಿಸಬಲ್ಲವರು. ಇದನ್ನು ರಾಜಕೀಯದಲ್ಲಿ ಚೆನ್ನಾಗಿ ರೂಢಿಸಿಕೊಂಡು ಬಂದವರು. ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಒಡನಾಟ ಇಟ್ಟುಕೊಂಡು ಬಂದವರು. ಯಾವುದೇ ಇಲಾಖೆ ಕೊಟ್ಟರೂ ನಿಭಾಯಿಸಿಕೊಂಡು ಬಂದವರು. ಹಿರಿತನವಿದ್ದು,. ವಿಧಾನಸಭೆ, ವಿಧಾನಪರಿಷತ್‌ ನಂತರ ಲೋಕಸಭೆ ಸದಸ್ಯರೂ ಆದವರು. ಆದರೂ ಸಚಿವ ಸ್ಥಾನ ಸಿಕ್ಕರೂ ಇನ್ನಷ್ಟು ಚೆನ್ನಾಗಿ ಕೆಲಸ ಮಾಡಬಲ್ಲ ಖಾತೆ ಸಿಗಬೇಕಿತ್ತು ಎನ್ನುವುದು ಅವರೊಬ್ಬರ ಬಯಕೆಯಲ್ಲ. ಅವರ ಅಭಿಮಾನಿಗಳದ್ದೂ ಕೂಡ. ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ಹಾಸನ ಉಸ್ತುವಾರಿ ಸಚಿವರಾಗಿ ಸೋಮಣ್ಣ ಕೆಲಸ ಮಾಡಿ ಆ ಭಾಗದಲ್ಲೂ ಸೈ ಎನ್ನಿಸಿಕೊಂಡವರು.

ಜೆಎಚ್‌ ಪಟೇಲ್‌ ರಿಂದ ಯಡಿಯೂರಪ್ಪವರೆಗೆ

ಸೋಮಣ್ಣ ಅವರು ಮಾಜಿ ಸಿಎಂ ಜೆಎಚ್‌ ಪಟೇಲ್‌ ಅವರಿಗೆ ಆತ್ಮೀಯರು. ಅವರ ಕಾಲದಲ್ಲಿಯೇ ಶಾಸಕರಾಗಿ ಅವರು ಸಿಎಂ ಆಗಿದ್ದಾಗಲೇ ಮೊದಲ ಬಾರಿಗೆ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿದ್ದರು. ಪಟೇಲರ ಮಾನಸ ಪುತ್ರ ಎಂದೇ ಸೋಮಣ್ಣ ಅವರನ್ನು ಕರೆಯುತ್ತಿದ್ದರು. ಆನಂತರ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಅವರು ಜನತಾದಳದಿಂದ ಕಾಂಗ್ರೆಸ್‌ ಗೆ ಕಡೆಗೆ ಹೋದರು. ಆನಂತರ ಬಿಜೆಪಿ ಸೇರಿಕೊಂಡರು. ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ಬಿಜೆಪಿಯಲ್ಲಿದ್ದವರು. ಆದರೆ ಯಡಿಯೂರಪ್ಪ ಅವರೊಂದಿಗೆ ರಾಜಕೀಯ ಸಂಬಂಧದಲ್ಲಿ ವ್ಯತ್ಯಾಸವಾಗಿ ತೊಂದರೆಯನ್ನೂ ಅನುಭವಿಸಿದರು. ಆದರೂ ಬೇಸರಗೊಳ್ಳದೇ ಬಿಜೆಪಿಯಲ್ಲೇ ರಾಜಕೀಯ ಜೀವನ ಮುಂದುವರೆಸಿಕೊಂಡು ಹೋದರು ಸೋಮಣ್ಣ.

ಎರಡೂ ಸೋಲಿನ ನಂತರ

ಸೋಮಣ್ಣ ಮೊದಲು ಬಿನ್ನಿಪೇಟೆ ಶಾಸಕರಾಗಿದ್ದವರು. ಆನಂತರ ವಿಜಯನಗರ ಶಾಸಕರಾದರು. ಬಳಿಕ ಗೋವಿಂದರಾಜ ನಗರ ಶಾಸಕರೂ ಆದರು. ಜನತಾದಳ, ಕಾಂಗ್ರಸ್‌, ಬಿಜೆಪಿ ಸರ್ಕಾರಗಳಲ್ಲಿ ಸಚಿವರೂ ಆಗಿದ್ದಾರೆ. ಗೋವಿಂದರಾಜನಗರದಲ್ಲಿ ಒಮ್ಮೆ ಸೋತಿದ್ದಾರೆ. ಆಗ ಎಂಎಲ್ಸಿ ಸ್ಥಾನವನ್ನು ಅವರಿಗೆ ಬಿಜೆಪಿ ನೀಡಿತ್ತು. ಇದಾದ ನಂತರ ಕಳೆದ ವಿಧಾನಸಭೆ ಚುನಾವಣೆ ವೇಳೆ ಅವರನ್ನು ಗೋವಿಂದರಾಜ ನಗರ ಕ್ಷೇತ್ರದ ಬದಲು ಮೈಸೂರಿನ ವರುಣಾ ಹಾಗೂ ಚಾಮರಾಜನಗರ ಸೇರಿ ಎರಡು ಕಡೆ ನಿಲ್ಲುವಂತೆ ಹೈ ಕಮಾಂಡ್‌ ಸೂಚಿಸಿತ್ತು.ಆದರೆ ಎರಡೂ ಕಡೆ ಗೆಲ್ಲಲು ಆಗಲಿಲ್ಲ. ನನ್ನ ರಾಜಕೀಯ ಹೀಗಾಯಿತಲ್ಲ ಎಂದು ಅವರು ನೊಂದುಕೊಂಡಿದ್ದರು ಕೂಡ. ಈಗ ತುಮಕೂರು ಕ್ಷೇತ್ರದಲ್ಲಿ ಗೆದ್ದು ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೂರು ದಶಕದ ಹಿಂದೆ 1996ರಲ್ಲಿ ಬೆಂಗಳೂರು ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮಣ್ಣ ಸೋತಿದ್ದರು. ಈ ಬಾರಿ ಗೆದ್ದು ಮಂತ್ರಿ ಸ್ಥಾನವನ್ನೂ ಪಡೆದು ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯಾದವರ ಪಟ್ಟಿಗೆ ಸೇರಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸೋಲಿನ ಹಿಂದೆ ಗೆಲುವು ಇದ್ದೇ ಇರುತ್ತದೆ ಎಂದು ಸಾರಿದ್ದಾರೆ ಸೋಮಣ್ಣ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ