logo
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: ಎದುರಾಳಿಗಳ ಹೆಡೆಮುರಿ ಕಟ್ಟಿದ ಸಿದ್ದರಾಮಯ್ಯ ದಕ್ಕಿಸಿಕೊಂಡ ವಿವಾದಗಳು ಹಲವು; ಭಾವಿ ಸಿಎಂ ಬದುಕು ಸಾಗಿ ಬಂದ ಹಾದಿಯಿದು

Siddaramaiah: ಎದುರಾಳಿಗಳ ಹೆಡೆಮುರಿ ಕಟ್ಟಿದ ಸಿದ್ದರಾಮಯ್ಯ ದಕ್ಕಿಸಿಕೊಂಡ ವಿವಾದಗಳು ಹಲವು; ಭಾವಿ ಸಿಎಂ ಬದುಕು ಸಾಗಿ ಬಂದ ಹಾದಿಯಿದು

HT Kannada Desk HT Kannada

May 18, 2023 09:46 AM IST

google News

ಸಿದ್ದರಾಮಯ್ಯ

  • Karnataka Next CM: ಸಿದ್ದರಾಮಯ್ಯ ರಾಜಕಾರಣಕ್ಕೆ ಧುಮುಕಿದ್ದೇ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ದನಿ ಎತ್ತಿ. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಲೇ ಬಂದ ಸಿದ್ದರಾಮಯ್ಯ, ಕಡೆಗೆ ಸಿಎಂ ಗದ್ದುಗೆ ಏರಿದ್ದು ಮಾತ್ರ ಅದೇ ಕಾಂಗ್ರೆಸ್ ಪಕ್ಷದ ಮೂಲಕ. ಸಿದ್ದರಾಮಯ್ಯ ವ್ಯಕ್ತಿಚಿತ್ರ ಕಟ್ಟಿಕೊಟ್ಟಿದ್ದಾರೆ ಪತ್ರಕರ್ತ ಮಾರುತಿ ಎಚ್.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಸಿದ್ದರಾಮನಹುಂಡಿಯ ಸಿದ್ದರಾಮಯ್ಯ (S Siddaramiah) ಯಶಸ್ವಿ ಮುಖ್ಯಮಂತ್ರಿ, ನೇರ ಮತ್ತು ನಿಷ್ಠುರವಾದಿ ಎಂದು ಹೆಸರಾದವರು. ಕರ್ನಾಟಕ ಕಂಡ ಕಲರ್‌ಫುಲ್ ರಾಜಕಾರಣಿ (Karnataka Politics). ಏಳು ಬಾರಿ ಬಜೆಟ್ ಮಂಡಿಸಿದ ವಿತ್ತ ನಿಪುಣ ಕೂಡ. ಮೇಲಾಗಿ ಅಹಿಂದ ಮುಖಂಡ, ಭಾಗ್ಯಗಳ ಸರದಾರ. ಸದ್ಯದ ಮಟ್ಟಿಗೆ ರಾಜ್ಯ ಕಾಂಗ್ರೆಸ್ಸಿನ ಮುಂಚೂಣಿ ನಾಯಕ. ರಾಮಕೃಷ್ಣ ಹೆಗಡೆಯ ಚಾಣಾಕ್ಷತೆ, ದೇವೇಗೌಡರ ತಂತ್ರಗಾರಿಕೆ, ಜೆ.ಎಚ್. ಪಟೇಲರ ನೈಪುಣ್ಯ ಮೈಗೂಡಿಸಿಕೊಂಡಿರುವ ನಿಪುಣ ರಾಜಕಾರಣಿ ಸಿದ್ದರಾಮಯ್ಯ. ಸಿದ್ದರಾಮಯ್ಯ ರಾಜಕಾರಣಕ್ಕೆ ಧುಮುಕಿದ್ದೇ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ದನಿ ಎತ್ತಿಕೊಂಡು. ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಲೇ ಬಂದ ಆ ನಾಯಕ ಕಡೆಗೆ ಸಿಎಂ ಗದ್ದುಗೆ ಏರಿದ್ದು ಮಾತ್ರ ಅದೇ ಕಾಂಗ್ರೆಸ್ ಪಕ್ಷದ ಮೂಲಕ. ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿರುವುದೂ ಅದೇ ಪಕ್ಷದ ಮೂಲಕ ಎನ್ನುವುದು ಗಮನಾರ್ಹ ಸಂಗತಿ.

ಕಂಡ ಕನಸು ನನಸು ಮಾಡಿಕೊಂಡ ಧೀರ

ಸಿದ್ದರಾಮಯ್ಯಗೆ ಒಮ್ಮೆಯಾದೂ ತಾನು ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಕನಸು ಹೊತ್ತವರು. ಎಸ್‌.ಎಂ.ಕೃಷ್ಣ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಧರಂ ಸಿಂಗ್ ಅವರ ಅವಧಿ ಮುಗಿದ ನಂತರ ಇನ್ನೇನು ತಾವು ಮುಖ್ಯಮಂತ್ರಿಯಾಗಬೇಕು ಎನ್ನುವಾಗ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಕೆಡವಿ ಬಿಜೆಪಿಯೊಂದಿಗೆ ಕೈಜೋಡಿಸಿದರು ಎನ್ನುವುದು ಇವರ ಮುನಿಸಿಗೆ ಮುಖ್ಯ ಕಾರಣವಾಗಿ ಜೆಡಿಎಸ್‌ನಿಂದ ದೂರ ಸರಿದರು. ತಾನು ಒಮ್ಮೆಯಾದರೂ ಮುಖ್ಯಮಂತ್ರಿ ಅಗಬೇಕು ಎನ್ನುವ ಕನಸು ಸಿದ್ದರಾಮಯ್ಯ ಅವರಿಗೆ ಇದ್ದಂತೆಯೇ ಅವರನ್ನು ಆ ಸ್ಥಾನದಲ್ಲಿ ನೋಡಬೇಕು ಎನ್ನುವ ಕನಸು ಕರ್ನಾಟಕದ ಮುಕ್ಕಾಲು ಪಾಲು ಜನರಿಗೂ ಇತ್ತು.

ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಸಿದ್ದರಾಮಯ್ಯನ ಹುಂಡಿ ಸಿದ್ದರಾಮಯ್ಯನವರ ಹುಟ್ಟೂರು. ಹಿಂದುಳಿದ ಜಾತಿಯ, ಕೆಳವರ್ಗದ ರೈತಾಪಿ ಕುಟುಂಬದಲ್ಲಿ ಹುಟ್ಟಿಬೆಳೆದಿದ್ದು. ಕಾನೂನು ಪದವಿ ಪಡೆದು ವಕೀಲರಾಗಿದ್ದವರು ರಾಜಕಾರಣ ಪ್ರವೇಶ ಮಾಡಿದ್ದು ಅವರ ಜೀವನದ ಮಹತ್ವದ ತಿರುವು. ಮೈಸೂರಿನಲ್ಲಿ ಕಾನೂನು ಪದವಿ ಮುಗಿಸಿ ಕರಿಕೋಟು ತೊಟ್ಟು ಕೋರ್ಟ್ ಅಂಗಳಕ್ಕೆ ಇಳಿದ ಸಿದ್ದರಾಮಯ್ಯ ಅವರ ಬದುಕಿಗೆ ತಿರುವು ನೀಡಿದ್ದು ಜೆಪಿ ಚಳವಳಿ.

ಲೋಹಿಯಾವಾದದ ಬೆನ್ನುಹತ್ತಿದ ಯುವ ನಾಯಕ

ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಸಂಪರ್ಕದಿಂದ ಜಯಪ್ರಕಾಶ್ ನಾರಾಯಣರ ಸಮಾಜವಾದಿ ಹೋರಾಟಗಳ ಪ್ರಭಾವಕ್ಕೆ ಒಳಗಾದ ಸಿದ್ದರಾಮಯ್ಯ ನಂತರ ಲೋಹಿಯಾವಾದದ ಬೆನ್ನುಹತ್ತಿದರು. ಅದರಲ್ಲಿ ದೇವರಾಜ ಅರಸರ ಆಡಳಿತದ ಪ್ರಭಾವ ಸಿದ್ದರಾಮಯ್ಯರಿಗೆ ಹೊಸ ಮೈಲಿಗಲ್ಲನ್ನೇ ಹಾಕಿಕೊಟ್ಟಿತು. ಕಾಂಗ್ರೆಸ್ಸಿನಿಂದ ಹೊರಬಂದು ಕ್ರಾಂತಿರಂಗ ಕಟ್ಟಿದ್ದ ಅರಸು ಅವರ ನೆರಳಿನಲ್ಲಿ ಅಬ್ದುಲ್ ನಜೀರ್ ಸಾಬ್, ಬಂಗಾರಪ್ಪ, ಜೆ.ಎಚ್. ಪಟೇಲ್ ಅವರಂತಹ ಅನೇಕರು ಇದ್ದರು. 1978ರಲ್ಲಿ ಸಿದ್ದರಾಮಯ್ಯ, ಮೈಸೂರು ತಾಲ್ಲೂಕು ಬೋರ್ಡ್ ಅಖಾಡದಲ್ಲಿ ಒಂಟಿಯಾಗಿ ನಿಂತು ಭ್ರಷ್ಟಚಾರದ ಅಧಿಕಾರ ವ್ಯವಸ್ಥೆ ವಿರುದ್ಧ ಬಂಡೆದ್ದರು.

1980ರಲ್ಲಿ ಮೊದಲ ಬಾರಿಗೆ ಚರಣ್ ಸಿಂಗ್ ಅವರ ಲೋಕದಳ ಪ್ರವೇಶಿಸಿದ ಸಿದ್ದರಾಮಯ್ಯ ಆ ಮೂಲಕ ಲೋಕಸಭೆಗೆ ಸ್ಪರ್ಧಿಸಿ ಸೋಲುಂಡರು. ಆಗ ಹಿರಿಯ ಮುತ್ಸದ್ಧಿ, ಸಚಿವರೂ ಆಗಿದ್ದ ಅಬ್ದುಲ್ ನಜೀರ್ ಸಾಬ್ ಅವರು, ಸಿದ್ದರಾಮಯ್ಯಗೆ ರಾಜಕೀಯ ಗಾಡ್‌ಫಾದರ್, ಆಪದ್ಬಾಂಧವರಾಗಿ ಕೈಹಿಡಿದರು.

ಮೊದಲ ಬಾರಿಗೆ ವಿಧಾನಸಭೆ ಪ್ರವೇಶ

1983ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವತಂತ್ರವಾಗಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ ಸಿದ್ದರಾಮಯ್ಯ, ನಂತರ ಜನತಾ ರಂಗ ಸೇರಿದರು. ಅಂದರೆ, 1983ರಿಂದ 2005ರವರೆಗೆ ಜನತಾ ಪರಿವಾರದಲ್ಲಿದ್ದ ಅವರು, 1989, 1999ರಲ್ಲಿ 2 ಸಲ ಸೋತಿದ್ದರು. 12 ವರ್ಷ ಜನತಾ ಪರಿವಾರದಲ್ಲಿ ಅಧಿಕಾರದಲ್ಲಿದ್ದು ಉನ್ನತ ಸ್ಥಾನ ಪಡೆದರು. ಮೊಟ್ಟ ಮೊದಲಿಗೆ ದೊರೆತಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ. ಅನಂತರ, ರೇಷ್ಮೆ ಖಾತೆ ಸಚಿವ ಸ್ಥಾನ. ಬಳಿಕ ಪಶುಸಂಗೋಪಣಾ ಖಾತೆ. ಎರಡು ಸಲ ಮಂತ್ರಿಯಾದರೂ ಯಾವ ಹಗರಣವು ಇಲ್ಲ. ಸಿದ್ದರಾಮಯ್ಯ ಗಮನಾರ್ಹ ರಾಜಕಾರಣಿಯಾಗಿ ಜನರ ಕಣ್ಣಿಗೆ ಕಾಣಿಸಿದ್ದು 1987ರಲ್ಲಿ ಸಾರಿಗೆ ಮಂತ್ರಿಯಾದಾಗ.

1983ರಲ್ಲಿ ಜನತಾ ಪರಿವಾರ ಹೊಕ್ಕ ಹಿಂದುಳಿದ ವರ್ಗದ ಮುಖಂಡ, ಅಲ್ಲಿಂದೀಚೆಗೆ ಎಲ್ಲಿಯೂ ತಿರುಗಿ ನೋಡದೆ ರಾಜಕೀಯ ಪಡಸಾಲೆಯಲ್ಲಿ ಪ್ರಭಾವಿ ನಾಯಕನಾಗಿ ಬೆಳೆದರು. ಈ ವೇಳೆ ದೇವೇಗೌಡರ ಕಣ್ಣು ಸಿದ್ದರಾಮಯ್ಯ ಅವರ ಮೇಲೆ ಬಿತ್ತು.

ದೈತ್ಯ ರಾಜಕೀಯ ಶಕ್ತಿಯ ಜೊತೆ ಪ್ರಬಲ ಶಕ್ತಿ

ಕರ್ನಾಟಕದ ಜನರ ಬಾಯಲ್ಲಿ ಮಣ್ಣಿನ ಮಗ ಎನ್ನಿಸಿಕೊಂಡವರು ರೈತನಾಯಕ ದೇವೇಗೌಡ. ದೈತ್ಯ ರಾಜಕೀಯ ಶಕ್ತಿಯಾಗಿದ್ದ ದೇವೇಗೌಡರೊಂದಿಗೆ ಪ್ರಬಲ ಶಕ್ತಿಯಾಗಿ ಬೆಳೆದ ನಾಯಕ ಸಿದ್ದರಾಮಯ್ಯ ಅವರನ್ನು ಅರಸು ನಂತರ ಹಿಂದುಳಿದ ವರ್ಗಗಳ ನಾಯಕರೆಂದೇ ಜನರು ಪರಿಗಣಿಸಿದರು. ಸಿದ್ದರಾಮಯ್ಯ ಜನತಾ ಪರಿವಾರದ ದೊಡ್ಡ ಶಕ್ತಿಯಾಗಿದ್ದವರು. 1994ರಲ್ಲಿ ದೇವೇಗೌಡರ ಸರ್ಕಾರದಲ್ಲಿ ಹಣಕಾಸು ಮತ್ತು ಯೋಜನಾ ಖಾತೆಯ ಸಚಿವರಾದರು. ಜೆ.ಎಚ್.ಪಟೇಲ್ ಮತ್ತು ಕಾಂಗ್ರೆಸ್ಸಿನ ಧರ್ಮಸಿಂಗ್ ಆಡಳಿತದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಜನಪರ ಬಜೆಟ್ ಮಂಡಿಸಿ ರಾಜಕೀಯ ಧುರೀಣರ ಕೈಲಿ ಭೇಷ್ ಎನ್ನಿಸಿಕೊಂಡರು.

ದೇವೇಗೌಡರ ಬೆನ್ನಿಗಿದ್ದ ಸಿದ್ದು

ಅದು ಹೆಗಡೆ- ದೇವೇಗೌಡರ ಜಗಳದ ಕಾಲ. ಆ ಸಂದರ್ಭದಲ್ಲಿ ಸಿದ್ದರಾಮಯ್ಯನನ್ನು ಸುದ್ಧಿಗೆ ತಂದು ನಿಲ್ಲಿಸಿದವರು ಹಿರಿಯ ನಾಯಕ ಎಸ್.ಆರ್. ಬೊಮ್ಮಾಯಿ. ಸುದ್ದಿಗೋಷ್ಠಿಯೊಂದರಲ್ಲಿ ಕರ್ನಾಟಕದಲ್ಲಿ ಜನತಾದಳದ ಉಭಯ ಬಣಗಳು ಒಂದಾದರೆ, ಸಿದ್ದರಾಮಯ್ಯ ಏಕೀಕೃತ ಜನತಾದಳ ಅಧ್ಯರಾಗಬೇಕು; ಮುಂದೆ ಜನತಾದಳ ಗೆದ್ದರೆ ಅವರೇ ಸಿಎಂ ಆಗಬೇಕು ಹೇಳಿದ್ದೇ ಸುದ್ಧಿಗೆ ಗ್ರಾಸವಾಗಿತ್ತು.

ದೇವೇಗೌಡರು ಸಿಎಂ ಪಟ್ಟಕ್ಕೇರಿ ಕಡೆಗೆ ಪ್ರಧಾನಿ ಪಟ್ಟಗಿಟ್ಟಿಸಿಕೊಳ್ಳುವವರೆಗೂ ಬೆನ್ನಿಗೆ ನಿಂತು ಬೆಂಬಲವಾಗಿದ್ದ ಸಿದ್ದರಾಮಯ್ಯ ಕಡೆಗೆ ಗೌಡರಿಗೇ ಸೆಡ್ಡುಹೊಡೆದು ನಿಂತಿದ್ದು ರಾಜಕೀಯ ವಿಪರ್ಯಾಸವಷ್ಟೇ. ಜಾತ್ಯತೀತ ನೆಲೆಗಟ್ಟಿನಲ್ಲೇ ನಾಯಕನಾಗಿ ಬೆಳೆದುಬಂದ ಸಿದ್ದರಾಮಯ್ಯ ಕಡೆಗೆ ಅದೇ ಜಾತಿಯ ಆಧಾರದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದು ಅವರ ರಾಜಕೀಯ ಜಾಣತನಕ್ಕೆ ಹಿಡಿದ ಕೈಗನ್ನಡಿ.

ಹೊಸ ಪಕ್ಷ ಕಟ್ಟಿದ್ದ ಸಿದ್ದರಾಮಯ್ಯ

ಎಬಿಪಿಜೆಡಿ ಅನ್ನೋ ಪಕ್ಷ ಕಟ್ಟಿ ಅದರ ಜೊತೆಯಲ್ಲೇ ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತ ಸಮೂಹವನ್ನ ಒಂದು ಮಾಡಿ ಅಹಿಂದ ಸಂಘಟನೆ ಕಟ್ಟಿದ ಸಿದ್ದರಾಮಯ್ಯ ಎಲ್ಲಾ ರಾಜಕೀಯ ಮುತ್ಸದ್ದಿಗಳ ರಾಜಕೀಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಚಾಣಾಕ್ಷ ರಾಜಕಾರಣಿ. 2006ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆ ಸಮರದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು ಸಿದ್ದರಾಮಯ್ಯ. ಅವರನ್ನು ಬಗ್ಗು ಬಡಿಯಲೇಬೇಕು ಎನ್ನುವುದು ದೇವೇಗೌಡರ ಆದೇಶವಾಗಿತ್ತು.

ಆಗ ಅಧಿಕಾರದಲ್ಲಿದ್ದುದು ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಜೋಡಿಯ ಮೈತ್ರಿ ಸರ್ಕಾರ. ಸಿದ್ದರಾಮಯ್ಯ ಸ್ವರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರಿಬ್ಬರೂ ಠಿಕಾಣಿ ಹೂಡಿ ಹಲವು ಬಗೆಯ ರಾಜಕೀಯ ತಂತ್ರಗಳನ್ನು ನಡೆಸಿದರು. ಆದರೆ ಕೊನೆಗೆ ಗೆಲುವಿನ ನಗೆ ಚೆಲ್ಲಿದ್ದು ಮಾತ್ರ ಸಿದ್ದರಾಮಯ್ಯ.

ರೆಡ್ಡಿ ಬ್ರದರ್ಸ್‌ಗೆ ಸೆಡ್ಡು ಹೊಡೆದು ತೊಡೆತಟ್ಟಿದ ನಾಯಕ

ಗಣಿಧಣಿಗಳ ಆರ್ಭಟದಲ್ಲಿ ಭ್ರಷ್ಟಾಚಾರದ ದೊಡ್ಡ ಸದ್ದುಗಳ ನಡುವೆ ವಿಧಾನಸಭೆಯ ಅಂಗಳದಲ್ಲಿ ರೆಡ್ಡಿ ಬ್ರದರ್ಸ್‌ಗೆ ಸೆಡ್ಡು ಹೊಡೆದು ತೊಡೆತಟ್ಟಿದವರು ಸಿದ್ದರಾಮಯ್ಯ. 'ತಾಕತ್ತಿದ್ರೆ ಬಳ್ಳಾರಿಗೆ ಬನ್ನಿ ನಿಮ್ಮನ್ನು ಒಂದು ಕೈ ನೋಡ್ಕೊಳ್ತೀವಿ' ಎನ್ನುವ ರೆಡ್ಡಿಧಣಿಗಳ ಸವಾಲನ್ನು ಸ್ವೀಕರಿಸಿದ ಸಿದ್ದರಾಮಯ್ಯ ನಂತರ ಪಾದಯಾತ್ರೆ ಹೊರಟಿದ್ದು ಬಳ್ಳಾರಿ ಕಡೆಗೆ.

ನಂತರ ನಡೆದದ್ದು ಅಕ್ಷರಶಃ ಸಿದ್ದರಾಮಯ್ಯನ ಪವಾಡ ಅಂತಲೇ ಹೇಳಬೇಕು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಿದ್ದರಾಮಯ್ಯ ಪಾಲಿಗೆ ವರದಾನವಾಗಿತ್ತು. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ನಂತರ ಭಾಗ್ಯಗಳ ಸರದಾರರಾಗಿ ಬೆಳೆದರು. ನಾಡುಕಂಡ ಯಶಸ್ವಿ ಮುಖ್ಯಮಂತ್ರಿಯಾದರು. ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡಿ, ಬಡಜನರ ಪರವಾಗಿ ಮತ್ತು ರೈತಪರ ಬಜೆಟ್‌ಗಳನ್ನು ಮಂಡಿಸಿದರು. ಸಿಎಂ ಆದ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆ ಇಡೀ ದೇಶವೇ ಕರ್ನಾಟದತ್ತ ನೋಡುವಂತೆ ಮಾಡಿತ್ತು.

12 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದ ನಾಯಕ

ಬರೋಬ್ಬರಿ 12 ಬಾರಿ ಒಂದು ರಾಜ್ಯದ ಬಜೆಟ್ ಮಂಡಿಸುವುದು ಸುಲಭದ ವಿಚಾರದವಲ್ಲ. ಮಂಡಿಸಿದ ಬಜೆಟ್‌ಗಳೆಲ್ಲಾ ಯಶಸ್ವಿ ಮತ್ತು ಜನಪರ ಬಜೆಟ್‌ಗಳು ಎನ್ನುವುದು ಮತ್ತೊಂದು ವಿಶೇಷ. ಚುನಾವಣೆ ವೇಳೆ ಜನರಿಗೆ ಭರವಸೆ ನೀಡೋದು ಸುಲಭದ ಕೆಲಸ. ಆದರೆ ಆ ಭರವಸೆಯನ್ನು ನಂಬಿ ಮತಕೊಟ್ಟ ಜನರ ನಿರೀಕ್ಷೆ ಈಡೇರಿಸುವುದು ಸುಲಭವಲ್ಲ. ಆ ಹಾದಿಯಲ್ಲಿ ಸಿದ್ದರಾಮಯ್ಯ ಅವರ ಟ್ರಾಕ್‌ರೆಕಾರ್ಡ್ ಚೆನ್ನಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೈಗೊಂಡ ಸರಣಿ ಭಾಗ್ಯಗಳ ಯೋಜನೆ ಬಹುಪಾಲು ಜನರ ಮನಗೆದ್ದಿತ್ತು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 45 ನಿಮಿಷಗಳಲ್ಲಿ ಘೋಷಣೆ ಮಾಡಿದ ಮಹತ್ವದ ಯೋಜನೆ 'ಅನ್ನಭಾಗ್ಯ'. ಇದು ಸಿದ್ದರಾಮಯ್ಯನವರ ಕನಸಿನ ಯೋಜನೆಯಷ್ಟೇ ಅಲ್ಲಾ ಕಾಂಗ್ರೆಸ್ ಪ್ರಣಾಳಿಕೆಯ ಮೊದಲ ಯೋಜನೆಯೂ ಆಗಿತ್ತು. ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಒಟ್ಟು 4 ಕೋಟಿ ಫಲಾನುಭವಿಗಳಿಗೆ 1 ರೂಪಾಯಿಗೆ 1 ಕೆಜಿ ಅಕ್ಕಿ, ಜೊತೆಗೆ ಉಪ್ಪು ಮತ್ತು ತಾಳೆ ಎಣ್ಣೆ ಕೊಡುವ ಯೋಜನೆ ಅದು. ಈ ಯೋಜನೆಯು ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ವಿರೋಧಿಸಿದ ಪಕ್ಷದಿಂದಲೇ ಮುಖ್ಯಮಂತ್ರಿ ಗಾದಿ

ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿಯಾಗಿದ್ದ ಸಿದ್ದರಾಮಯ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾದರು. ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಅವಸಾನದ ಹಾದಿಯಲ್ಲಿದೆ ಎನ್ನುವ ಮಾತುಗಳು ರಾಷ್ಟ್ರಮಟ್ಟದಲ್ಲಿ ಕೇಳಿ ಬರುತ್ತಿತ್ತು. ಆಗ ಪಕ್ಷದ ಪಾಲಿಗೆ ಸಿದ್ದರಾಮಯ್ಯ ವರದಾನವಾಗಿ ಕಾಣಿಸಿದರು. ದೇವೇಗೌಡರು ತಪ್ಪಿಸಿದ ಸಿಎಂ ಗದ್ದುಗೆಯನ್ನು ಏರಲು ಅವರಿಗೂ ಕಾಂಗ್ರೆಸ್‌ನಂಥ ಪ್ರಬಲ ಪಕ್ಷದ ಆಸರೆ ಅನಿವಾರ್ಯವಾಗಿತ್ತು.

2006ರಲ್ಲಿ ಸಿದ್ದರಾಮಯ್ಯ ತಾವೊಬ್ಬರೇ ಕಾಂಗ್ರೆಸ್ ಸೇರಲಿಲ್ಲ. ಜೊತೆಗೆ ಜೆಡಿಎಸ್‌ನ ಒಂದು ಗುಂಪನ್ನೂ ಕರೆತಂದಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್‌ನಲ್ಲಿ ಮೂಲ vs ವಲಸಿಗ ಎನ್ನುವ ಬಿರುಕು ಕಾಣಿಸಿಕೊಂಡಿತು. ಇದು ಇಂದಿಗೂ ಮುಂದುವರಿದಿದೆ. ಹತ್ತಾರು ವರ್ಷಗಳಿಂದ ಕಾಂಗ್ರೆಸ್‌ ಸಂಘಟನೆಗಾಗಿ ಶ್ರಮ ಹಾಕಿದ್ದ ಘಟಾನುಘಟಿ ನಾಯಕರು ಸಿದ್ದರಾಮಯ್ಯ ಎದುರು ಮಂಕಾದರು. 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಪಕ್ಷದ ಅಧ್ಯಕ್ಷರಾಗಿದ್ದವರು ಡಾ ಪರಮೇಶ್ವರ್. ಸಿಎಂ ಸ್ಥಾನದ ಕನಸು ಹೊತ್ತಿದ್ದ ಪರಮೇಶ್ವರ್ ಚುನಾವಣೆಯಲ್ಲಿ ಕಂಡ ಸೋಲಿನಿಂದಾಗಿ ಸ್ಪರ್ಧೆಯಿಂದ ದೂರ ಸರಿಯಬೇಕಾಯಿತು. ಅವರ ಸೋಲಿಗೂ ಸಿದ್ದರಾಮಯ್ಯ ತಂತ್ರಗಾರಿಕೆ ಕಾರಣ ಎನ್ನುವ ಮಾತುಗಳು ಕೇಳಿಬಂದಿದ್ದವು.

ಎದುರಾಳಿಗಳ ಹೆಡೆಮುರಿ ಕಟ್ಟಿದ ಚಾಣಕ್ಯ

ಚುನಾವಣೆಯಲ್ಲಿ ಸೋತದ್ದರಿಂದ ಮುಖ್ಯಮಂತ್ರಿಯಾಗಲು ಆಗಲಿಲ್ಲ, ಕನಿಷ್ಠ ಪಕ್ಷ ಉಪಮುಖ್ಯಮಂತ್ರಿಯಾದರೂ ಆಗಬೇಕು ಎಂದು ಹಟಕ್ಕೆ ಬಿದ್ದವರು ಡಾ ಜಿ.ಪರಮೇಶ್ವರ. ಅವರು ದಲಿತ ಸಿಎಂ ಎನ್ನುವ ಪರಿಕಲ್ಪನೆಯನ್ನು ಮುಂದಿಟ್ಟರು. ಪರಮೇಶ್ವರ ಅವರಿಗೆ ಗೃಹ ಇಲಾಖೆ ಕೊಟ್ಟ ಸಿದ್ದರಾಮಯ್ಯ ದಲಿತ ಸಿಎಂ ಅಸ್ತ್ರವನ್ನು ನಿವಾರಿಸಿಕೊಂಡರು.

ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಮೊದಲಿನಿಂದಲೂ ಒಲವು ಇರುವುದು ಸುಳ್ಳಲ್ಲ. ಆದರೆ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಡಿ.ಕೆ.ಶಿವಕುಮಾರ್ ಸೇರಲೇ ಇಲ್ಲ. ಮಂಡ್ಯ ಲೋಕಸಭಾ ಉಪಚುನಾವಣೆ ಇರಬಹುದು, ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಜಯ ತಂದುಕೊಟ್ಟರು. ಶ್ರೀನಿವಾಸ ಪ್ರಸಾದ್‌ ಅವರಂಥ ಪ್ರಬಲ ದಲಿತ ನಾಯಕನನ್ನೂ ಮೂಲೆಗುಂಪು ಮಾಡಿ ಅಧಿಕಾರ ದಕ್ಕಿಸಿಕೊಂಡಿದ್ದಷ್ಟೇ ಅಲ್ಲ, ಅದನ್ನು ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.

ಹಲವು ಸವಾಲು ಎದುರಿಸಿದ ರಾಜಕಾರಿಣಿ

ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣ, ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಸ್ಥಾಪನೆ ವಿವಾದ, ಮಹದಾಯಿ-ಕಾವೇರಿ ನೀರು ಹಂಚಿಕೆ ಹೋರಾಟಗಳನ್ನು ಸಿದ್ದರಾಮಯ್ಯ ಚಾಣಾಕ್ಷ ರಾಜಕಾರಿಣಿಯಾಗಿ ನಿರ್ವಹಿಸಿದರು. ಮಗನ ಸಾವಿನ ನೋವಲ್ಲೂ ಎದೆಗುಂದದೆ ಆಡಳಿತದಲ್ಲಿ ಬಿಗಿ ಕಾಪಾಡಿಕೊಂಡರು. 2018ರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಸಿಗಲಿಲ್ಲ. ಲಿಂಗಾಯತರ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳು ಇದಕ್ಕೆ ಮುಖ್ಯ ಕಾರಣ ಎಂದು ನಂತರದ ದಿನಗಳಲ್ಲಿ ವಿಶ್ಲೇಷಿಸಲಾಯಿತು.

ಇದೀಗ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಕುರ್ಚಿಗೆ ತೀರಾ ಹತ್ತಿರಕ್ಕೆ ಬಂದಿದ್ದಾರೆ. ಶನಿವಾರವೇ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಬಹುದು ಎಂಬ ಸ್ಪಷ್ಟ ಸೂಚನೆ ಸಿಕ್ಕಿದೆ. ಡಿ.ಕೆ.ಶಿವಕುಮಾರ್ ಅವರಂಥ ಪ್ರಬಲ ಆಕಾಂಕ್ಷಿಯನ್ನು ಬದಿಗೆ ಸರಿಸಿ ಮುಖ್ಯಮಂತ್ರಿ ಸ್ಥಾನ ಒಲಿಸಿಕೊಳ್ಳುವುದು ಸುಲಭದ ಮಾತಲ್ಲ. ಅವರ ಈ ಬಾರಿಯ ಆಡಳಿತ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

ಬರಹ: ಮಾರುತಿ ಎಚ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ