logo
ಕನ್ನಡ ಸುದ್ದಿ  /  ಕರ್ನಾಟಕ  /  Ct Ravi Profile: ಚಿಕ್ಕಮಾಗರಹಳ್ಳಿಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆವರೆಗೆ; ಚಿಕ್ಕಮಗಳೂರು ಅಭ್ಯರ್ಥಿ ಸಿ ಟಿ ರವಿ ಪರಿಚಯ

CT Ravi Profile: ಚಿಕ್ಕಮಾಗರಹಳ್ಳಿಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆವರೆಗೆ; ಚಿಕ್ಕಮಗಳೂರು ಅಭ್ಯರ್ಥಿ ಸಿ ಟಿ ರವಿ ಪರಿಚಯ

Rakshitha Sowmya HT Kannada

May 05, 2023 02:41 PM IST

google News

ಚಿಕ್ಕಮಗಳೂರು ಅಭ್ಯರ್ಥಿ ಸಿ.ಟಿ. ರವಿ

  • ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಉರಿಗೌಡ, ನಂಜೇಗೌಡರ ಬಗ್ಗೆ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದರು. ಒಕ್ಕಲಿಗ ನಾಯಕರಾದ ಉರಿಗೌಡ ಹಾಗೂ ನಂಜೇಗೌಡರು ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನನನ್ನು ಕೊಂದಿದ್ದಾರೆಯೇ ಹೊರತು ಬ್ರಿಟಿಷರು ಮತ್ತು ಮರಾಠರ ಸೇನೆ ಅಲ್ಲ ಎಂದು ಸಿಟಿ ರವಿ ಹೇಳಿದ್ದರು.

ಚಿಕ್ಕಮಗಳೂರು ಅಭ್ಯರ್ಥಿ ಸಿ.ಟಿ. ರವಿ
ಚಿಕ್ಕಮಗಳೂರು ಅಭ್ಯರ್ಥಿ ಸಿ.ಟಿ. ರವಿ (PC: CT Ravi Facebook)

ಕರ್ನಾಟಕ ಬಿಜೆಪಿಯ ಪವರ್‌ಫುಲ್‌ ನಾಯಕರಲ್ಲಿ ಸಿಟಿ ರವಿ ಕೂಡಾ ಒಬ್ಬರು. ಇವರು ಸುಮಾರು 20 ದಶಕಕ್ಕೂ ಹೆಚ್ಚು ಕಾಲಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಪುಟ್ಟ ಗ್ರಾಮದಲ್ಲಿ ಜನಿಸಿ ಬಿಜೆಪಿ ಪಕ್ಷದ ಪ್ರಮುಖ ನಾಯಕನ ಸ್ಥಾನ ಅಲಂಕರಿಸಿರುವ ಸಿಟಿ ರವಿ ಅವರ ವೈಯಕ್ತಿಕ ಜೀವನ, ರಾಜಕೀಯ, ಪಕ್ಷ ಸಂಘಟನೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಸಿ.ಟಿ ರವಿ ಬಾಲ್ಯ-ವಿದ್ಯಾಭ್ಯಾಸ

ಸಿ ಟಿ ರವಿ ಎಂದೇ ಕರೆಯಲ್ಪಡುವ ಚಿಕ್ಕಮಾಗರಹಳ್ಳಿ ತಿಮ್ಮೇಗೌಡ ರವಿ, ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರಹಳ್ಳಿ ಗ್ರಾಮದಲ್ಲಿ 18 ಜುಲೈ 1967ರಲ್ಲಿ ಜನಿಸಿದರು. ಚಿಕ್ಕಮಗಳೂರಿನಲ್ಲೇ ಶಾಲೆ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ ರವಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ರಾಜಕೀಯ ಎಂಟ್ರಿ

ಆರಂಭದಲ್ಲಿ ಕರ್ನಾಟಕ ಯುವ ಮೋರ್ಚಾ ಯುವ ಘಟಕದ ಅಧ್ಯಕ್ಷರಾಗಿ ರಾಜಕೀಯಕ್ಕೆ ಬಂದ ಸಿ.ಟಿ. ರವಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದರು. ಕಾಂಗ್ರೆಸ್‌ನ ಸಿ.ಆರ್‌ ಸಗೀರ್‌ ಅಹ್ಮದ್‌ ವಿರುದ್ಧ 982 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಇದಾದ ಕೆಲವೇ ದಿನಗಳಲ್ಲಿ ರವಿ, ದತ್ತಪೀಠ ಹಾಗೂ ಹಿಂದುತ್ವದ ವಿಚಾರಕ್ಕೆ ಸಂಬಂಧಿಸದ ಹೋರಾಟದಲ್ಲಿ ಅಗ್ರಸ್ಥಾನ ವಹಿಸಿದರು. ಇದು ಸಿಟಿ ರವಿ ರಾಜಕೀಯದಲ್ಲಿ ದೊಡ್ಡ ಮಟ್ಟಿಗೆ ಗುರುತಿಸಿಕೊಳ್ಳುವಂತೆ ಮಾಡಿತು. ಮುಂದಿನ ಚುನಾವಣೆಯಲ್ಲಿ ಅವರಿಗೆ ಗೆಲುವು ಕೂಡಾ ತಂದುಕೊಟ್ಟಿತು.

2004ರ ವಿಧಾನಸಭೆ ಚುನಾವಣೆಯಲ್ಲಿ ಅದೇ ಸಗೀರ್‌ ಅಹ್ಮದ್‌ ವಿರುದ್ಧ ಸ್ಪರ್ಧಿಸಿ 25,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ 2008, 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ರವಿ ಸತತ ಗೆಲುಗು ಸಾಧಿಸಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ನೇಮಕಗೊಂಡರು. 2019 ರಲ್ಲಿ ಬಿ. ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 2020 ಅಕ್ಟೋಬರ್‌ನಲ್ಲಿ ಹೈಕಮಾಂಡ್ ತೀರ್ಮಾನದಂತೆ ಪಕ್ಷ ಸಂಘಟನೆಗಾಗಿ ಸಿ.ಟಿ ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸದ್ಯಕ್ಕೆ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ತಮಿಳುನಾಡು, ಗೋವಾ, ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ವೈಯಕ್ತಿಕ ಜೀವನ

ಸಿ.ಟಿ ರವಿ 2001ರಲ್ಲಿ ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಪಲ್ಲವಿ ಎಂಬುವರನ್ನು ಮದುವೆ ಆದರು. ಈ ದಂಪತಿಗೆ ಸಮರ್ಥ್‌ ಸೂರ್ಯ ಹಾಗೂ ಸಾರ್ಥಕ್‌ ಸೂರ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಕೆಲವೊಂದು ಹೇಳಿಕೆಗಳಿಂದ ಭಾರೀ ಸುದ್ದಿಯಾಗಿದ್ದ ಸಿಟಿ ರವಿ

  • ಲಿಂಗಾಯತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಸಿ ಟಿ ರವಿ ಹೇಳಿರುವುದಾಗಿ ಒಂದು ಪೋಸ್ಟ್‌ ಬಿಜೆಪಿ ಪಕ್ಷದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಸಿ ಟಿ ರವಿ ಇದನ್ನು ನಿರಾಕರಿಸಿದ್ದರು. ಕಾಂಗ್ರೆಸ್‌, ನನ್ನ ಮೇಲೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದೆ. ನಾನೂ ಎಂದಿಗೂ ಜಾತಿ ರಾಜಕಾರಣ ಮಾಡಿದವನಲ್ಲ ಎಂದಿದ್ದರು.
  • ಸಿ.ಟಿ ರವಿ ಮಾಂಸ ತಿಂದು ಭಟ್ಕಳದ ದೇವಸ್ಥಾನಕ್ಕೆ ಹೋಗಿದ್ಧಾರೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಟಿ ರವಿ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಏನೀಗ? ಎಂದು ನಾನು ಕಾಂಗ್ರೆಸ್‌ನವರಂತೆ ಹೇಳುವುದಿಲ್ಲ. ಮಾಂಸ ತಿಂದದ್ದು ನಿಜ ಆದರೆ ದೇವಸ್ಥಾನದ ಒಳಗೆ ಹೋಗಿರಲಿಲ್ಲ. ಅಲ್ಲಿ ಕೆಲವೊಂದು ಸಮಸ್ಯೆ ಇತ್ತು. ಸ್ಥಳೀಯರೇ ದೇವಸ್ಥಾನಕ್ಕೆ ಬರುವಂತೆ ಮನವಿ ಮಾಡಿದ್ದರು. ಆದ್ದರಿಂದ ದೇವಸ್ಥಾನದ ಪ್ಯಾಸೇಜ್‌ವರೆಗೂ ಹೋಗಿ ಬಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
  • ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಉರಿಗೌಡ, ನಂಜೇಗೌಡರ ಬಗ್ಗೆ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದರು. ಒಕ್ಕಲಿಗ ನಾಯಕರಾದ ಉರಿಗೌಡ ಹಾಗೂ ನಂಜೇಗೌಡರು ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನನನ್ನು ಕೊಂದಿದ್ದಾರೆಯೇ ಹೊರತು ಬ್ರಿಟಿಷರು ಮತ್ತು ಮರಾಠರ ಸೇನೆ ಅಲ್ಲ ಎಂದು ಸಿಟಿ ರವಿ ಹೇಳಿದ್ದರು.
  • ಹೆಚ್‌.ಡಿ ದೇವೇಗೌಡರಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುವ ಆಸೆ ಇದೆ ಎಂದು ಪ್ರಜ್ವಲ್‌ ರೇವಣ್ಣ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಮುಂದಿನ ಜನ್ಮ ಅನ್ನೋದು ಹಿಂದೂಗಳಿಗೆ ಮಾತ್ರ, ಮುಸ್ಲಿಂರಿಗೆ ಇಲ್ಲ, ದೇವೇಗೌಡರಿಗೆ ಅಷ್ಟು ಆಸೆ ಇದ್ದರೆ ಮುಂದಿನ ಜನ್ಮ ಏಕೆ? ಈಗಲೇ ಹೋಗಲಿ ಎಂದು ಲೇವಡಿ ಮಾಡಿದ್ದರು. ಇದು ಜೆಡಿಎಸ್‌ ಕಾರ್ಯಕರ್ತರನ್ನು ಕೆರಳಿಸಿತ್ತು. ದೇವೇಗೌಡರ ವಿರುದ್ಧ ರವಿ ನಾಲಿಗೆ ಹರಿಯಬಿಟ್ಟಿದ್ದಾರೆ. ಅವರು ಕ್ಷಮೆ ಕೇಳಲೇಬೇಕು ಎಂದು ಪ್ರತಿಭಟನೆ ನಡೆಸಿದ್ದರು.
  • ದತ್ತ ಜಯಂತಿ ಹಿನ್ನೆಲೆ 2022 ರಲ್ಲಿ ಸಿ.ಟಿ ರವಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಗಮನ ಸೆಳೆದಿದ್ದರು.
  • 2019 ರಲ್ಲಿ ಸಿಟಿ ರವಿ ಅವರ ಕಾರು ಕುಣಿಗಲ್‌ ಬಳಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದರು.

ಬಿಜೆಪಿ ಪಕ್ಷದ ಪ್ರಭಾವಿ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ಸಿ.ಟಿ ರವಿಗೆ ಈ ಬಾರಿಯೂ ವಿಜಯಲಕ್ಷ್ಮಿ ಒಲಿಯಲಿದ್ದಾಳಾ ಕಾದು ನೋಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ