Jagadish Shettar Profile: ರಾಜಕೀಯವಾಗಿ ಸೈದ್ಧಾಂತಿಕ ಭಿನ್ನತೆಯ ಹಾದಿ ತುಳಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪರಿಚಯ ಹೀಗಿದೆ ನೋಡಿ
May 05, 2023 04:27 PM IST
ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)
Jagadish Shettar Profile: ಹಿಂದುತ್ವದ ಸೈದ್ಧಾಂತಿಕ ಹಿನ್ನೆಲೆಯಲ್ಲಿಯೇ ಹುಟ್ಟಿ ಬೆಳೆದು ಮುಖ್ಯಮಂತ್ರಿಯಾಗಿ ರಾಜ್ಯವನ್ನಾಳಿದ್ದ ಜಗದೀಶ ಶೆಟ್ಟರ್ ಈ ಸಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ! ತಮಗಾದ ತೀವ್ರ ನೋವನ್ನು ಅವರು ವ್ಯಕ್ತಪಡಿಸಿದ ರೀತಿ ಅದು. ಸೈದ್ಧಾಂತಿಕವಾಗಿ ಭಿನ್ನ ಹಾದಿ ತುಳಿದ ಅವರ ಕಿರುಪರಿಚಯ ಹೀಗಿದೆ ನೋಡಿ.
ʻಕಳೆದ ಎರಡು ವರ್ಷಗಳಿಂದ ಈ ಸಲ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೆ. ಈಗಾಗಲೇ ಆರು ಸಲ ಗೆದ್ದು ಏಳನೇ ಸಲ ಶಾಸಕನಾಗುವುದಕ್ಕೆ ತಯಾರಿ ಮಾಡಿಕೊಂಡಿದ್ದೆ. ಆದರೆ ಕೊನೇ ಘಳಿಗೆಯಲ್ಲಿ ಟಿಕೆಟ್ ಇಲ್ಲ ಎಂಬ ಸಂದೇಶ ಬಂತು. ಇದನ್ನೇ ಸ್ವಲ್ಪ ಗೌರವಯುತವಾಗಿ ಸ್ವಲ್ಪ ಮುಂಚಿತವಾಗಿ, ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ನೀವು ಈ ಸಲ ಸ್ಪರ್ಧಿಸಬಾರದು ಎಂದು ಹೇಳಿದ್ದರೆ ನಾನು ಕೇಳುತ್ತಿರಲಿಲ್ಲವೇ?" ಎಂದು ಬಿಜೆಪಿ ಬಿಡುವ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದರು.
ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂಬ ಸೈದ್ಧಾಂತಿಕ ಬದ್ಧತೆಯೊಂದಿಗೆ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದೆವು. ಆದರೆ ಈಗ ಪಕ್ಷ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಅವರ ಸ್ವಹಿತಾಸಕ್ತಿ ಕಾಪಾಡುವುದಕ್ಕಾಗಿ ಉಳಿದವರನ್ನೆಲ್ಲ ಅಪಮಾನಿಸಲಾಗುತ್ತಿದೆ ಎಂದೂ ಶೆಟ್ಟರ್ ಹೇಳಿಕೊಂಡಿದ್ದಾರೆ.
ಈ ಸಲದ ಚುನಾವಣೆಯಲ್ಲಿ ಅವರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದರು. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಎಂಬುದು ಖಚಿತವಾದ ಕೂಡಲೇ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷ ಶೆಟ್ಟರ್ ಅವರನ್ನು ಬರಮಾಡಿಕೊಳ್ಳಲು ಅವರ ಬೀಗರಾದ ಶ್ಯಾಮನೂರು ಶಿವಶಂಕರಪ್ಪ ಅವರನ್ನೇ ಮುಂದೆ ಬಿಟ್ಟಿತ್ತು. ಶೆಟ್ಟರ್ ಕಾಂಗ್ರೆಸ್ ಸೇರುತ್ತಲೇ ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅನ್ನೂ ಖಚಿತಪಡಿಸಲಾಗಿತ್ತು. ಹಾಗಾಗಿ ಹಿಂದುತ್ವದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿಯೇ ಹುಟ್ಟಿ ಬೆಳೆದು ಮುಖ್ಯಮಂತ್ರಿಯಾಗಿ ರಾಜ್ಯವನ್ನಾಳಿದ್ದ ಜಗದೀಶ ಶೆಟ್ಟರ್ ಈ ಸಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ!
ಅಂದ ಹಾಗೆ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ನಂತರದಲ್ಲಿ ಜಾತಿ ಕಾರ್ಡ್ ಅನ್ನೂ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಸೇರ್ಪಡೆಯ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ನೀಡಿದ ಸ್ಪಷ್ಟೀಕರಣದ ಕೊನೆಯ ಪ್ಯಾರಾದಲ್ಲಿ ಅದರ ಉಲ್ಲೇಖ ಹೀಗಿದೆ ನೋಡಿ - "ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವ ಇದೆ. ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ರಾಜ್ಯ ಎಲ್ಲ ಭಾಗದ ಲಿಂಗಾಯತ ಸಮುದಾಯದ ನಾಯಕರು ನನಗೆ ಕರೆ ಮಾಡಿ ನಿಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದ್ದು ಯಾಕೆ? ಎಂದು ಬೇಸರ ವ್ಯಕ್ತಪಡಿಸಿದರು. ಈ ಸಮುದಾಯ ಹಾಗೂ ಹುಬ್ಬಳ್ಳಿ -ಧಾರವಾಡದ ಜನರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ...."
ಹೌದು ಜಗದೀಶ ಶೆಟ್ಟರ್ ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ ಕೂಡ ಇದೇ ಸಮುದಾಯದವರು. ರಾಜ್ಯದ ಚುನಾವಣೆಯಲ್ಲಿ ಪಕ್ಷಗಳ ಗೆಲುವು ಜಾತಿ ಲೆಕ್ಕಾಚಾರದಲ್ಲಿ ಅಡಗಿದೆ. ಈ ವಿಚಾರ ಗಮನಿಸಿದರೆ ಲಿಂಗಾಯತ ಸಮುದಾಯದವರದ್ದೇ ಮತದಾರರ ಪಟ್ಟಿಯಲ್ಲಿ ದೊಡ್ಡ ಪಾಲು.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶೆಟ್ಟರ್ ಅವರು ಕಾಂಗ್ರೆಸ್‌ನ ಡಾ.ಮಹೇಶ್ ನಲ್ವಾಡ್ ಅವರನ್ನು 21,306 ಮತಗಳ ಅಂತರದಿಂದ ಸೋಲಿಸಿದ್ದರು. ಶೆಟ್ಟರ್ ಅವರು ಒಟ್ಟು 75,794 ಮತಗಳನ್ನು ಗಳಿಸಿದ್ದರೆ, ನಲ್ವಾಡ ಅವರು 54,488 ಮತಗಳನ್ನು ಗಳಿಸಿದರು. ಜೆಡಿಎಸ್‌ನ ರಾಜಣ್ಣ ಎಂ.ಕೊರವಿ 10,754 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಈ ಸಲ ಚಿತ್ರಣ ಬದಲಾಗಿದೆ. ಜಗದೀಶ ಶೆಟ್ಟರ್ ಕಾಂಗ್ರೆಸ್ ಅಭ್ಯರ್ಥಿ. ಅವರ ಚುನಾವಣೆ ಕೆಲಸಗಳನ್ನು ಗಮನಿಸುತ್ತಿದ್ದ ಕಾರ್ಯಕರ್ತ ಮಹೇಶ್ ಟೆಂಗಿನಕಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದು ಜಗದೀಶ್ ಶೆಟ್ಟರ್ ಪಾಲಿಗೆ ಪ್ರತಿಷ್ಠೆಯ ಚುನಾವಣೆ. ಬಿಜೆಪಿಗೂ ಅಷ್ಟೇ.
ಶೆಟ್ಟರ್ ಕೌಟುಂಬಿಕ ಹಿನ್ನೆಲೆ
ಜಗದೀಶ್ ಶಿವಪ್ಪ ಶೆಟ್ಟರ್ ಎಂಬುದು ಅವರ ಪೂರ್ಣ ಹೆಸರು. ಕರ್ನಾಟಕದಲ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಮಾಜಿ ಮುಖ್ಯಮಂತ್ರಿ. ವಿಧಾನ ಸಭೆಯ ಸ್ಪೀಕರ್ ಕೂಡ ಆಗಿದ್ದವರು. ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿ ಲಿಂಗಾಯತ ಸಮುದಾಯದ ನಡುವೆ ಪಕ್ಷದ ಫೇಸ್ ಆಗಿ ಪ್ರಭಾವ ಹೊಂದಿದವರು. ಅವರ ತಂದೆ, ಎಸ್‌ಎಸ್ ಶೆಟ್ಟರ್ ಅಂದಿನ ಜನಸಂಘ ಪಕ್ಷದಿಂದ ಹುಬ್ಬಳ್ಳಿ-ಧಾರವಾಡದ ಮೇಯರ್ ಆಗಿದ್ದರು ಮತ್ತು ನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಜಗದೀಶ್ ಶೆಟ್ಟರ್ 1994 ರಲ್ಲಿ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಗೆದ್ದವರು. ಹಂತ ಹಂತವಾಗಿ ಪಕ್ಷದ ಪ್ರಮುಖ ಸ್ಥಾನಗಳನ್ನು ಪಡೆದವರು. ಅವರು 2012-2013 ರ ನಡುವೆ, ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಆಗ ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಇದಕ್ಕೂ ಮುನ್ನ ಶೆಟ್ಟರ್ ಅವರು 2008 ರಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. ನಂತರ ಅವರು ಆಗಿನ ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಸದಾನಂದ ಗೌಡರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಜನ ಸಂಘ, ರಾಷ್ಟ್ರೀಯ ಸ್ವಯಂಸೇವಕ ಸಂಘಗಳ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಹುಟ್ಟಿ ಬೆಳೆದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಜಗದೀಶ್ ಶೆಟ್ಟರ್ ತಮಗಾದ ನೋವಿಗೆ ದಿಢೀರ್ ಪ್ರತಿಕ್ರಿಯೆ ತೋರಿದರು. ಅದು ಪ್ರತಿಸ್ಪಂದನೆ ಆಗದೆ ಪ್ರತಿಕ್ರಿಯೆಯಂತೆ ತೋರಿದ್ದು, ರಾಜಕೀಯ ಸೈದ್ಧಾಂತಿಕ ಭಿನ್ನತೆಯ ಹಾದಿ ಹಿಡಿದರು. ಹೀಗಾಗಿ ಅವರಿಗೂ ಈ ಚುನಾವಣೆ ಪ್ರತಿಷ್ಠೆಯದ್ದು, ಗೆಲವು ಅನಿವಾರ್ಯ ಎನ್ನುವಂಥದ್ದು. ಏನೇ ಅದರೂ, ಮತದಾರನ ತೀರ್ಪು ಎಲ್ಲವನ್ನೂ ನಿರ್ಣಯಿಸಲಿದೆ.
ಜಗದೀಶ್ ಶೆಟ್ಟರ್
ಜನನ - 17.12.1955
ಹುಟ್ಟೂರು - ಬಾದಾಮಿ ತಾಲೂಕಿನ ಕೆರೂರು
ತಂದೆ - ಎಸ್.ಎಸ್.ಶೆಟ್ಟರ್
ತಾಯಿ-ಬಸವೆಣ್ಣಮ್ಮ
ಶಿಕ್ಷಣ - ಬಿಕಾಂ ಎಲ್‌ಎಲ್‌ಬಿ
ವೃತ್ತಿ - ವಕೀಲಿಕೆ
ಪತ್ನಿ - ಶಿಲ್ಪಾ
ಪುತ್ರರು- ಪ್ರಶಾಂತ್ ಮತ್ತು ಸಂಕಲ್ಪ್
1990: ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
1994 : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
1999 : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ. 11ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ.
2004 : ಮೂರನೇ ಬಾರಿಗೆ ವಿಧಾನಸಭೆ ಸದಸ್ಯ.
2005 : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ).
2006 : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್)) ಸಮ್ಮಿಶ್ರ ಸರ್ಕಾರ .
2008 : ನಾಲ್ಕನೇ ಬಾರಿಗೆ ವಿಧಾನಸಭೆ ಸದಸ್ಯ, 13ನೇ ವಿಧಾನಸಭೆ ಸಭಾದ್ಯಕ್ಷರು.
2009 : ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್) ಇಲಾಖೆಯ ಸಚಿವರು(ಬಿಜೆಪಿ) ಸರ್ಕಾರ.
2012 : 12 ಜುಲೈ 2012 – 08 ಮೇ 2013
2013 : ಐದನೇ ಬಾರಿಗೆ ವಿಧಾನಸಭೆ ಸದಸ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ.