logo
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar Profile: ಕನಕಪುರ ಕ್ಷೇತ್ರದ ಅಭ್ಯರ್ಥಿ ಡಿಕೆ ಶಿವಕುಮಾರ್‌ ಬಾಲ್ಯ, ರಾಜಕೀಯ ಎಂಟ್ರಿ, ವಿವಾದಗಳ ಬಗ್ಗೆ ಒಂದಿಷ್ಟು ಮಾಹಿತಿ

DK Shivakumar Profile: ಕನಕಪುರ ಕ್ಷೇತ್ರದ ಅಭ್ಯರ್ಥಿ ಡಿಕೆ ಶಿವಕುಮಾರ್‌ ಬಾಲ್ಯ, ರಾಜಕೀಯ ಎಂಟ್ರಿ, ವಿವಾದಗಳ ಬಗ್ಗೆ ಒಂದಿಷ್ಟು ಮಾಹಿತಿ

Rakshitha Sowmya HT Kannada

May 20, 2023 02:45 PM IST

google News

ಡಿಕೆ ಶಿವಕುಮಾರ್‌ ಪ್ರೊಫೈಲ್

  • 2018 ರ ಚುನಾವಣೆ ನಂತರ ರಾಜ್ಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ.

ಡಿಕೆ ಶಿವಕುಮಾರ್‌ ಪ್ರೊಫೈಲ್
ಡಿಕೆ ಶಿವಕುಮಾರ್‌ ಪ್ರೊಫೈಲ್ (PC: Facebook, DK Shivakumar Instagram)

ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರಲ್ಲಿ ಡಿ.ಕೆ. ಶಿವಕುಮಾರ್‌ ಕೂಡಾ ಒಬ್ಬರು. ಡಿಕೆಶಿ ಸದ್ಯಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (KPCC)ಅಧ್ಯಕ್ಷರಾಗಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದಿಂದ ಡಿಕೆಶಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಎಂದೇ ಕರೆಯಲ್ಪಡುವ ಡಿಕೆಶಿ ಹಿನ್ನೆಲೆ ಏನು? ಅವರ ರಾಜಕೀಯ ಪ್ರವೇಶ ಯಾವಾಗ? ಅವರ ಆರ್ಥಿಕ ಸ್ಥಿತಿ ಏನು? ಎಲ್ಲದರ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ.

ಕನಕಪುರದ ದೊಡ್ಡಹಳ್ಳಿಯಲ್ಲಿ ಜನನ

ಡಿಕೆಶಿ ಪೂರ್ತಿ ಹೆಸರು ದೊಡ್ಡಹಳ್ಳಿ ಕೆಂಪೇಗೌಡ ಶಿವಕುಮಾರ್‌. ರಾಮನಗರ ಜಿಲ್ಲೆ ಕನಕಪುರದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮಗನಾಗಿ 15 ಮೇ 1962ರಲ್ಲಿ ಡಿಕೆಶಿ ಜನಿಸಿದರು. ಡಿ.ಕೆ. ಸುರೇಶ್‌, ಡಿಕೆಶಿ ಅವರ ಕಿರಿಯ ಸಹೋದರ. ಬೆಂಗಳೂರಿನ ವಿದ್ಯಾವರ್ಧಕ ಸಂಘದಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಡಿಕೆಶಿ ಹೈದರಾಬಾದ್‌ ಕರ್ನಾಟಕ ಎಜುಕೇಶನ್‌ ಸೊಸೈಟಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ನಂತರ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎ ಪದವಿ ಪಡೆಯುತ್ತಾರೆ. ಮುಂದೆ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾದಲ್ಲಿ ಎಂಎ ಸ್ನಾತಕೋತ್ತರ ಪದವಿ ಗಳಿಸುತ್ತಾರೆ.

ವೈಯಕ್ತಿಕ ಜೀವನ

ಡಿಕೆ ಶಿವಕುಮಾರ್‌ 1993ರಲ್ಲಿ ಉಷಾ ಎಂಬುವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ. ಹಿರಿಯ ಪುತ್ರಿ ಹೆಸರು ಐಶ್ವರ್ಯ, ಎರಡನೇ ಮಗಳ ಹೆಸರು ಆಭರಣ. ಮಗನ ಹೆಸರು ಆಕಾಶ್.‌ 2021ರಲ್ಲಿ ಡಿಕೆಶಿ ಮೊದಲ ಮಗಳು ಐಶ್ವರ್ಯ, ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್‌ ಅವರ ಪುತ್ರ ಅಮರ್ಥ್ಯ ಅವರನ್ನು ಮದುವೆಯಾಗಿದ್ದಾರೆ.

ರಾಜಕೀಯ ಪ್ರವೇಶ

ಕಾಲೇಜು ದಿನಗಳಲ್ಲಿ ರಾಜಕೀಯದಲ್ಲಿ ಆಸಕ್ತಿ ಇದ್ದ ಡಿಕೆಶಿ, 1985ರಲ್ಲಿ ಕಾಂಗ್ರೆಸ್‌ ಪಕ್ಷದ ಮೂಲಕ ಸಾತನೂರು ಕ್ಷೇತ್ರದ ಮೂಲಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲಿ ಹೆಚ್.‌ ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ 1987ರಲ್ಲಿ ಮತ್ತೆ ಸಾತನೂರು ಕ್ಷೇತ್ರದಿಂದ ಬೆಂಗಳೂರು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಆದರು. 1989ರಲ್ಲಿ ಎರಡನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ ವಿಧಾನಸಭೆಗೆ ಆಯ್ಕೆ ಆದರು. 1991 ರಲ್ಲಿ ಎಸ್.‌ ಬಂಗಾರಪ್ಪ ಸಚಿವ ಸಂಪುಟದಲ್ಲಿ ಬಂಧಿಖಾನೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1999-2002 ಅವಧಿಯಲ್ಲಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಕ್ಯಾಬಿನೆಟ್‍ ದರ್ಜೆ ಸಚಿವರಾಗಿ ಡಿಕೆಶಿ ನೇಮಕಗೊಂಡಿದ್ದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ, ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಖಾತೆ ಸಚಿವರಾಗಿ, 2018 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಹಾಗೂ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಡಿಕೆ ಶಿವಕುಮಾರ್‌ ಕೆಲಸ ಮಾಡಿದ್ದಾರೆ. 2018 ರ ಚುನಾವಣೆ ನಂತರ ರಾಜ್ಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ.

ವಿವಾದಗಳು

ಪವರ್‌ಫುಲ್‌ ರಾಜಕಾರಣಿ ಆಗಿ ಹೆಸರು ಮಾಡಿರುವ ಡಿಕೆಶಿ ವಿರುದ್ಧ ಕೆಲವೊಂದು ಆಪಾದನೆಗಳು ಕೂಡಾ ಇವೆ. ಅಕ್ರಮ ಗಣಿಗಾರಿಕೆಯಿಂದ ಡಿಕೆಶಿ ಸಾಕಷ್ಟು ಹಣ ಸಂಪಾದಿಸಿದ್ದಾರೆ ಎಂಬ ಆರೋಪ ಇದೆ. ರಾಜಕೀಯಕ್ಕೆ ಬರುವ ಮುನ್ನ ಡಿಕೆಶಿ ಭೂಗತ ದೊರೆ ಕೊತ್ವಾಲ್‌ ರಾಮಚಂದ್ರನ ಬಲಗೈ ಬಂಟರಾಗಿದ್ದರು ಎಂದು ಸಿ.ಪಿ. ಯೋಗೇಶ್ವರ್‌ ಆರೋಪಿಸಿದ್ದರು. ಆದರೆ ಡಿಕೆಶಿ ಇದನ್ನು ನಿರಾಕರಿಸಿದ್ದರು.

2019 ಸೆಪ್ಟೆಂಬರ್‌ನಲ್ಲಿಅಕ್ರಮ ಹಣಕಾಸು ವರ್ಗಾಣೆ, ಆದಾಯ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ್ದರು. ಕೆಲವು ದಿನಗಳ ಕಾಲ ಡಿಕೆಶಿ ತಿಹಾರ್‌ ಜೈಲಿನಲ್ಲಿದ್ದರು. ನಂತರ ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಡಿಕೆಶಿ ಮೇಲೆ 4 ಐಟಿ, 1 ಲೋಕಾಯುಕ್ತ ಒಂದು, 2 ಜಾರಿ ನಿರ್ದೇಶನಾಲಯ, 6 ಕೋವಿಡ್ ನಿಯಮಾವಳಿ ಸಂಬಂಧ ಕೇಸ್‌ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಶ್ರೀಮಂತ ರಾಜಕಾರಣಿ ಡಿಕೆ ಶಿವಕುಮಾರ್‌

ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್‌ ಕೂಡಾ ಒಬ್ಬರು. ದಿನದಿಂದ ದಿನಕ್ಕೆ ಡಿಕೆಶಿ ಆಸ್ತಿ ಮೌಲ್ಯ ಹೆಚ್ಚುತ್ತಿದೆ. 2018ರ ಚುನಾವಣೆಯಲ್ಲಿ 840 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು. ಈ ಬಾರಿ ಸ್ಥಿರಾಸ್ತಿ, ಚರಾಸ್ತಿ ಒಟ್ಟು ಮೌಲ್ಯ 1214 ಕೋಟಿ ರೂಪಾಯಿ ಆಸ್ತಿ ಮೊತ್ತವನ್ನು ಘೋಷಿಸಿದ್ದಾರೆ. ಕೃಷಿ, ಮನೆ-ಕಟ್ಟಡಗಳ ಬಾಡಿಗೆ, ವಿವಿಧ ಕಂಪನಿಗಳ ಶೇರು, ಬ್ಯುಸ್ನೆಸ್‌, ಡಿಕೆಶಿ ಅವರ ಆದಾಯದ ಮೂಲವಾಗಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ವಿಡಿಯೋ ಪ್ರೊಫೈಲ್‌ ಕೆಳಗಿನ ವಿಡಿಯೋದಲ್ಲಿದೆ ವೀಕ್ಷಿಸಿ..

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ