Kanakpura Taluk: ವಿಜಯದಶಮಿಯ ದಿನ ಹೇಳುತ್ತಿದ್ದೇನೆ ಕೇಳಿ ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ ಎಂದ ಡಿಸಿಎಂ ಡಿಕೆ ಶಿವಕುಮಾರ್
Oct 24, 2023 06:13 PM IST
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಕನಕಪುರ ತಾಲೂಕು ಬೆಂಗಳೂರು ಜಿಲ್ಲೆಗೆ ಸೇರಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ. ರಾಮನಗರ ಜಿಲ್ಲೆಯಲ್ಲಿರುವ ಕನಕಪುರ ತಾಲೂಕು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿತ್ತು.
ರಾಮನಗರ: ವಿಜಯದಶಮಿಯ ದಿನ ಹೇಳುತ್ತಿದ್ದೇನೆ ಕೇಳಿ, ಕನಕಪುರ ತಾಲೂಕು (Kanakpura Taluk) ಬೆಂಗಳೂರು ಜಿಲ್ಲೆ (Bengaluru District) ಗೆ ಸೇರ್ಪಡೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಅವರು ಮಂಗಳವಾರ (ಅ.24) ಕನಕಪುರ ತಾಲೂಕು ಶಿವನಹಳ್ಳಿಯಲ್ಲಿ ವೀರಭದ್ರಸ್ವಾಮಿ ದೇವಸ್ಥಾನದ ಶಿಲಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅವರು ಯಾರೋ ಹೆಸರು ಮಾಡಿಕೊಳ್ಳುವುದಕ್ಕೆ ರಾಮನಗರ ಜಿಲ್ಲೆ ಮಾಡಿದ್ದಾರೆ. ನಾವು ರಾಮನಗರ ಜಿಲ್ಲೆಯವರು ಎಂದು ಮೂಲೆಗುಂಪು ಮಾಡಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ
ಶಿವನಹಳ್ಳಿ ಗ್ರಾಮ ಹೆದ್ದಾರಿಯ ಪಕ್ಕದಲ್ಲಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ. ಕೆಎಂಎಫ್ ಡೇರಿ ಇದೆ, ಕನಕಪುರ ಪಟ್ಟಣವಾಗಿ ಇಲ್ಲಿಯ ತನಕ ಬೆಳೆಯಲಿದೆ ಆದ್ದರಿಂದ, ಎಲ್ಲರಲ್ಲಿ ಮನವಿ ಮಾಡುತ್ತೇನೆ. ಭೂಮಿ ಮಾರಾಟ ಮಾಡಬೇಡಿ. ಸಿಂಧ್ಯಾ ಅವರು ಇದನ್ನೇ ದಶಕಗಳಿಂದ ಹೇಳುತ್ತಾ ಬಂದಿದ್ದರು.
ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನ ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ, ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ಕನಕಪುರ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಯಾಕಿಷ್ಟು ಮಹತ್ವ
ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಅವರ ಈ ಹೇಳಿಕೆಯು ರಾಜಕೀಯವಾಗಿ ಗಮನಸೆಳೆದಿದೆ. ಕನಕಪುರ ಕ್ಷೇತ್ರವು ರಾಮನಗರ ಜಿಲ್ಲೆಯಲ್ಲಿದೆ. ಈ ಜಿಲ್ಲೆಯಲ್ಲಿ ಕನಕಪುರ ಬಿಟ್ಟರೆ ರಾಜಕೀಯವಾಗಿ ದೇವೇಗೌಡರ ಕುಟುಂಬ ಹೆಚ್ಚು ಪ್ರಭಾವಿ. ಅದರಲ್ಲೂ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಭಾವ ಹೆಚ್ಚು. ಆದ್ದರಿಂದಲೇ ಡಿಕೆ ಶಿವಕುಮಾರ್ ಅವರ ಹೇಳಿಕೆ ರಾಜಕೀಯವಾಗಿ ಗಮನಸೆಳೆದಿದೆ.
ಕನಕಪುರ ತಾಲೂಕು ಚಿತ್ರಣ ಹೀಗಿದೆ ನೋಡಿ
ರಾಮನಗರ ಜಿಲ್ಲೆಯಲ್ಲಿ ಐದು ತಾಲೂಕುಗಳು. ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಕನಕಪುರ, ಮಾಗಡಿ. ಈ ತಾಲೂಕುಗಳ ಪೈಕಿ ಕನಕಪುರದಲ್ಲಿ ಡಿಕೆ ಶಿವಕುಮಾರ್ ಪ್ರಾಬಲ್ಯ ಹೆಚ್ಚು. ಈ ತಾಲೂಕು ಅರ್ಕಾವತಿ ನದಿ ದಂಡೆಯಲ್ಲಿದೆ. ಭಾರತದ ಅತೀಹೆಚ್ಚು ರೇಷ್ಮೆ ಉತ್ಪಾದಿಸುವ ತಾಲೂಕಾಗಿರುವ ಕನಕಪುರ ರೇಷ್ಮೆ ಕಣಿವೆ ಎಂದೇ ಪ್ರಸಿದ್ಧವಾಗಿದೆ. ಇನ್ನು ಕರ್ನಾಟಕದಲ್ಲಿ ಗ್ರಾನೈಟ್ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಕಾರಣ ಕರ್ನಾಟಕದ ಗ್ರಾನೈಟ್ ರಾಜಧಾನಿ ಎಂದು ಜನಪ್ರಿಯವಾಗಿದೆ.
ಭೌಗೋಳಿಕವಾಗಿ ನೋಡುವಾಗ ಈ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುಮಾರು ಅರ್ಧದಷ್ಟು ಭಾಗ ಕನಕಪುರದಲ್ಲಿದೆ. ಕೋಡಿಹಳ್ಳಿ ವನ್ಯ ಜೀವಿ ವಲಯ, ಹಾರೋಹಳ್ಳಿ ವನ್ಯಜೀವಿವಲಯ ಇದರ ವಿಭಾಗಗಳು. ಅದೇ ರೀತಿ, ಕಾವೇರಿ ವನ್ಯಜೀವಿ ಧಾಮದ ಸಂಗಮ ವನ್ಯ ಜೀವಿ ವಲಯ , ಮುಗ್ಗೂರು ವನ್ಯ ಜೀವಿವಲಯ ಎಂಬ 2 ಪ್ರಮುಖ ವಲಯಗಳೂ ಇದೇ ತಾಲೂಕಿನಲ್ಲಿವೆ.
ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದ ಕನಕಪುರ ತಾಲೂಕು ರಾಮನಗರ ಜಿಲ್ಲೆ ಆದಾಗ ಆ ಜಿಲ್ಲೆಗೆ ಸೇರ್ಪಡೆಯಾಗಿದೆ. ಕನಕಪುರ ತಾಲೂಕಿನಲ್ಲಿ 6 ಹೋಬಳಿಗಳು - ಕಸಬಾ ಟೌನ್, ದೊಡ್ಡಮರಳವಾಡಿ, ಹಾರೋಹಳ್ಳಿ, ಉಯ್ಯಂಬಳ್ಳಿ, ಸಾತನೂರು, ಕೋಡಿಹಳ್ಳಿ.