logo
ಕನ್ನಡ ಸುದ್ದಿ  /  ಕರ್ನಾಟಕ  /  Kanakapura News: ಕನಕಪುರ ತಾಲ್ಲೂಕಲ್ಲಿ ವೇತನಕ್ಕಾಗಿ ಮಲಸುರಿದುಕೊಂಡ ಪೌರಕಾರ್ಮಿಕರು: ಎರಡುಗಂಟೆಯಲ್ಲೇ ಬಿಡುಗಡೆ

Kanakapura News: ಕನಕಪುರ ತಾಲ್ಲೂಕಲ್ಲಿ ವೇತನಕ್ಕಾಗಿ ಮಲಸುರಿದುಕೊಂಡ ಪೌರಕಾರ್ಮಿಕರು: ಎರಡುಗಂಟೆಯಲ್ಲೇ ಬಿಡುಗಡೆ

HT Kannada Desk HT Kannada

Aug 23, 2023 09:23 AM IST

google News

ತಲೆ ಮೇಲೆ ಮಲ ಸುರಿದುಕೊಂಡ ಇಬ್ಬರು ಪೌರಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಲಾಗಿದೆ.

    • Karnataka pouakarmika ವೇತನ ಬಾಕಿಗೆ ಆಗ್ರಹಿಸಿ ಕನಕಪುರ ತಾಲ್ಲೂಕಲ್ಲಿ ಇಬ್ಬರು ಪೌರಕಾರ್ಮಿಕರು ತಲೆ ಮೇಲೆ ಮಲ ಸುರಿದುಕೊಂಡು ಆಕ್ರೋಶ ಹೊರ ಹಾಕಿದರು. ಇದರ ಬೆನ್ನಲ್ಲೇ ಬಾಕಿ ವೇತನ ನೀಡಲಾಗಿದೆ. 
ತಲೆ ಮೇಲೆ ಮಲ ಸುರಿದುಕೊಂಡ ಇಬ್ಬರು ಪೌರಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಲಾಗಿದೆ.
ತಲೆ ಮೇಲೆ ಮಲ ಸುರಿದುಕೊಂಡ ಇಬ್ಬರು ಪೌರಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಲಾಗಿದೆ.

ಕನಕಪುರ: ಹದಿನಾಲ್ಕು ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿರುವ ಪ್ರಕರಣ ಕನಕಪುರದಲ್ಲಿ ನಡೆದಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಈ ಘಟನೆ ನಡೆದಿದ್ದು, ಅವರ ಆಕ್ರೋಶದ ಪ್ರತಿಭಟನೆಗೆ ಬೆಚ್ಚಿದ ಪಂಚಾಯಿತಿ ಒಂದೇ ಗಂಟೆಯಲ್ಲಿ ಇಬ್ಬರ ವೇತನವನ್ನು ಪಾವತಿಸಿದೆ.

ಒಂದೂವರೆ ವರ್ಷದಿಂದ ಬಾಕಿ

ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛಗಾರರಾಗಿ ಕೆಲಸ ಮಾಡುತ್ತಿದ್ದ ವಿ. ರಂಗಯ್ಯ ಮತ್ತು ಎನ್. ಸುರೇಶ್ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು. ಇವರು 2020ರಿಂದ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಇಬ್ಬರಿಗೂ ವೇತನ ನೀಡಿರಲಿಲ್ಲ. ಇಬ್ಬರಿಗೂ ಒಂದೂವರೆ ವರ್ಷದ ಹಿಂದಿನ ತಲಾ 1.60 ಲಕ್ಷ ವೇತನ ಬಾಕಿ ಇತ್ತು ಎಂದು ತಿಳಿದು ಬಂದಿದೆ.

ಸಂಬಳಕ್ಕೆ ಸತಾಯಿಸುತ್ತಿದ್ದ ಅಧಿಕಾರಿಗಳು

ಪಂಚಾಯಿತಿ ಅಧಿಕಾರಿಗಳ ಬಳಿ ವೇತನಕ್ಕಾಗಿ ಕೇಳಿ ಕೇಳಿ ಇಬ್ಬರೂ ಕಾರ್ಮಿಕರು ಬೇಸತ್ತಿದ್ದರು. ಸಂಬಳ ಇಲ್ಲದೆ ಸಂಸಾರ ನಿರ್ವಹಣೆಗೆ ಕಷ್ಟ ಎಂದು ಅಂಗಲಾಚಿದರೂ ಅಧಿಕಾರಿಗಳು ವೇತನ ನೀಡದೆ ಸತಾಯಿಸುತ್ತಿದ್ದರು. ಇದರಿಂದ ರೋಸಿಹೋದ ಇಬ್ಬರೂ ಕಾರ್ಮಿಕರು ಇಂದು ಮಧ್ಯಾಹ್ನ ಬಿಂದಿಗೆಯಲ್ಲಿ ಮಲ ತೆಗೆದುಕೊಂಡು ಬಂದು ಪಂಚಾಯಿತಿ ಎದುರೇ ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದರು. ಇದರಿಂದ ಎಚ್ಚೆತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಇಬ್ಬರ ವೇತನವನ್ನು ಲೆಕ್ಕಾಚಾರ ಮಾಡಿ, ಚೆಕ್ ಮತ್ತು ನಗದು ಮೂಲಕ ಪಾವತಿಸಿದ್ದಾರೆ.

ನನ್ನ ಗಮನಕ್ಕೆ ಬಂದಿರಲಿಲ್ಲ

ಈ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಕಲ್ಲಹಳ್ಲಿ ಪಿಡಿಒ ಶ್ರೀನಿವಾಸ್ ಬಾಕಿ ವೇತನ ಕುರಿತು ನನಗೂ ತಿಳಿಸಿರಲಿಲ್ಲ. ಇಂದು ಇವರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಾರ್ಯಕರ್ತರೊಂದಿಗೆ ಪಂಚಾಯಿತಿಗೆ ಆಗಮಿಸಿ ಮಲ ಸುರಿದುಕೊಂಡು ಪ್ರತಿಭಟಿಸಿದ್ದಾರೆ. ತಕ್ಷಣವೇ, ಇಬ್ಬರಿಗೆ ತಲಾ ರೂ. 1,14,00 ಮೊತ್ತದ ಚೆಕ್ ಮತ್ತು ರೂ. 50 ಸಾವಿರ ಕೊಟ್ಟು ಬಾಕಿ ಸಂಬಳ ಪಾವತಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇವರಿಬ್ಬರಿಗೆ 2021ರಿಂದ 14 ತಿಂಗಳ ಸಂಬಳವನ್ನು ಹಿಂದಿನ ಪಿಡಿಒಗಳು ಬಾಕಿ ಉಳಿಸಿದ್ದರು. ನನ್ನ ಅವಧಿಯಲ್ಲಿ ಯಾವುದೇ ಬಾಕಿ ಇರಲಿಲ್ಲ. ಕಾರ್ಮಿಕರಿಗೆ ತಲಾ ರೂ. 15 ಸಾವಿರ ಸಂಬಳ ನೀಡಲಾಗುತ್ತಿತ್ತು. ಎರಡು ತಿಂಗಳಿಂದ ಕೆಲಸಕ್ಕೆ ಹಾಜರಾಗದ ಕಾರ್ಮಿಕರು, ಕನಕಪುರದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಬಂದಿತ್ತು ಎಂದು ಹೇಳಿದರು.

ಜಿಪಂ ಸಿಇಒ ಸೂಚನೆ

ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಪ್ರತಿಕ್ರಿಯಿಸಿದ್ದು, ಈ ಘಟನೆ ನಡೆದ ತಕ್ಷಣ ಪೌರ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ, ಸಕಾಲದಲ್ಲಿ ವೇತನ ಪಾವತಿಸಲು ಗ್ರಾ.ಪಂ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಭರವಸೆ ನೀಡಿದ್ದಾರೆ.

ಬಾಕಿ ವೇತನಕ್ಕಾಗಿ ಕಾರ್ಮಿಕರು ಮೈ ಮೇಲೆ ಮಲ ಸುರಿದುಕೊಂಡಿದ್ದು ನೋವು ತಂದಿದೆ. ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ, ಮೊದಲೇ ಪಾವತಿಸಲು ಕ್ರಮ ಕೈಗೊಳ್ಳುತ್ತಿದ್ದೆ ಎಂದು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ತಿಳಿಸಿದ್ದಾರೆ.

ಕ್ರಮಕ್ಕೆ ಆಗ್ರಹ

ಅಧಿಕಾರಿಗಳು ಪೌರಕಾರ್ಮಿಕರ ವೇತನಕ್ಕೆ ಸತಾಯಿಸುವುದು ಹೊಸದೇನೂ ಅಲ್ಲ. ಆದರೆ ಅಮಾನವೀಯ ನಡೆಗಳಿಗೆ ಅವರೇ ದಾರಿ ಮಾಡಿಕೊಡುತ್ತಿದ್ದಾರೆ. ವೇತನ ಕೊಡಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಪೌರಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

(ವರದಿ:ಎಚ್. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ