logo
ಕನ್ನಡ ಸುದ್ದಿ  /  ಕರ್ನಾಟಕ  /  Ramanagara News: ಅತ್ತೆಯ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರದ ಸೆಷನ್ಸ್‌ ನ್ಯಾಯಾಲಯ

Ramanagara News: ಅತ್ತೆಯ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರದ ಸೆಷನ್ಸ್‌ ನ್ಯಾಯಾಲಯ

HT Kannada Desk HT Kannada

Aug 10, 2023 11:43 AM IST

google News

ಅತ್ತೆಯ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರದ ಸೆಷನ್ಸ್‌ ನ್ಯಾಯಾಲಯ

    • Kanakapura: ಅಪರಾಧಿ ಭೀಮಾನಾಯ್ಕ ತನ್ನ ಸ್ವಗ್ರಾಮದ ಶಶಿಕಲಾ ಅವರನ್ನು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮದ್ಯವ್ಯಸನಿಯಾಗಿದ್ದ ಆತ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ತವರು ಮನೆಯ ಆಸ್ತಿ ಮಾರಾಟ ಮಾಡಿ ಹಣ ತೆಗೆದುಕೊಂಡು ಬರುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದ ಎಂಬ ಆರೋಪ ಈತನ ಮೇಲಿತ್ತು.
ಅತ್ತೆಯ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರದ ಸೆಷನ್ಸ್‌ ನ್ಯಾಯಾಲಯ
ಅತ್ತೆಯ ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರದ ಸೆಷನ್ಸ್‌ ನ್ಯಾಯಾಲಯ

ರಾಮನಗರ: ಅತ್ತೆಯನ್ನೇ ಕೊಂದ ಅಳಿಯನಿಗೆ ರಾಮನಗರ ಜಿಲ್ಲೆಯ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿದೆ. ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯ ತುಳಸಿದೊಡ್ಡಿಯ ಭೀಮಾನಾಯ್ಕ (40) ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಅತ್ತೆ ಲಕ್ಷ್ಮಿಬಾಯಿ ಅವರನ್ನು 2021ರ ಮಾರ್ಚ್ 26ರಂದು ಆತ ಕೊಲೆ ಮಾಡಿದ್ದ ಪ್ರಕರಣ ಇದಾಗಿದೆ.

ಅಪರಾಧಿ ಭೀಮಾನಾಯ್ಕ ತನ್ನ ಸ್ವಗ್ರಾಮದ ಶಶಿಕಲಾ ಅವರನ್ನು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮದ್ಯವ್ಯಸನಿಯಾಗಿದ್ದ ಆತ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ತವರು ಮನೆಯ ಆಸ್ತಿ ಮಾರಾಟ ಮಾಡಿ ಹಣ ತೆಗೆದುಕೊಂಡು ಬರುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದ ಎಂಬ ಆರೋಪ ಈತನ ಮೇಲಿತ್ತು.

ತವರು ಮನೆಯವರ ಸಹಾಯದಿಂದ ಶಶಿಕಲಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೂ ಭೀಮಾ ನಾಯ್ಕ ಮದ್ಯಪಾನ ಮಾಡಲು ಪ್ರತಿದಿನ ಹಣ ಕೊಡುವಂತೆ ಪೀಡಿಸುತ್ತಿದ್ದ. 2021ರ ಮಾರ್ಚ್ 26ರಂದು ಬೆಳಿಗ್ಗೆ ಭೀಮಾನಾಯ್ಕ ಪತ್ನಿ ಜೊತೆ ಜಗಳವಾಡಿದ್ದ. ತವರಿನ ಆಸ್ತಿ ಮಾರಿ ಹಣ ತಂದುಕೊಂಡು ಎಂದು ಒತ್ತಾಯ ಮಾಡಿದ್ದ. ವಿಷಯ ತಿಳಿದ ಅತ್ತೆ ಲಕ್ಷ್ಮಿಬಾಯಿ, ಅಂದು ಸಂಜೆ ಮಗಳ ಮನೆಗೆ ಹೋಗಿ ಅಳಿಯನಿಗೆ ಬುದ್ಧಿ ಹೇಳಿ ಮೊಮ್ಮಕ್ಕಳೊಂದಿಗೆ ತಮ್ಮ ಮನೆಗೆ ಮರಳುತ್ತಿದ್ದರು.

ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಭೀಮಾನಾಯ್ಕ, ಹುಣಸೆ ಹಣ್ಣು ಜಜ್ಜುವ ಮರದ ಪಟ್ಟಿಯಿಂದ ಲಕ್ಷ್ಮಿಬಾಯಿ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದ. ಘಟನೆ ಕುರಿತು ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ‌ಟಿ.ಟಿ. ಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಕುಮಾರ್ ಎಚ್.ಎನ್ ಅವರು, ಭೀಮಾನಾಯ್ಕನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.75 ಸಾವಿರ ದಂಡ ವಿಧಿಸಿದ್ದರು. ಆ ಪೈಕಿ, ರೂ. 50 ಸಾವಿರವನ್ನು ಮೃತರ ಪತಿಗೆ ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ, 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಈ. ಯೋಗೇಶ್ವರ ವಾದ ಮಂಡಿಸಿದ್ದರು.

ಕೊಲೆ ನಡೆದ ಎರಡೂವರೆ ವರ್ಷಗಳಲ್ಲೇ ಇತ್ಯರ್ಥವಾದ ಪ್ರಕರಣ ಇದಾಗಿದೆ.

(ವರದಿ: ಎಚ್. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ