ಕನ್ನಡ ಸುದ್ದಿ  /  ಕರ್ನಾಟಕ  /  ಮಣ್ಣಿನ ಹರಕೆಯ ಸುರ್ಯ, ಬಯಲು ಆಲಯ ಸೌತಡ್ಕ; ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಬಂದ್ರೆ ಸುತ್ತಲಿನ ಈ ಧಾರ್ಮಿಕ ಕ್ಷೇತ್ರಗಳಿಗೆ ತಪ್ಪದೇ ಭೇಟಿ ನೀಡಿ

ಮಣ್ಣಿನ ಹರಕೆಯ ಸುರ್ಯ, ಬಯಲು ಆಲಯ ಸೌತಡ್ಕ; ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಬಂದ್ರೆ ಸುತ್ತಲಿನ ಈ ಧಾರ್ಮಿಕ ಕ್ಷೇತ್ರಗಳಿಗೆ ತಪ್ಪದೇ ಭೇಟಿ ನೀಡಿ

HT Kannada Desk HT Kannada

Dec 07, 2023 02:46 PM IST

ಸೌತಡ್ಕ, ಸುರ್ಯ ದೇವಸ್ಥಾನ

    • ಧರ್ಮಸ್ಥಳದಲ್ಲಿ ನಾಳೆಯಿಂದ ಡಿ.12ರವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ಲಕ್ಷದೀಪದಲ್ಲಿ ಭಾಗವಹಿಸಲು ಧರ್ಮಸ್ಥಳಕ್ಕೆ ಭೇಟಿ ನೀಡುವ ಯೋಚನೆ ಇದ್ದರೆ ಈ ಜಾಗಗಳಿಗೂ ತಪ್ಪದೇ ಭೇಟಿ ನೀಡಿ. ಈ ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳ ವೈಶಿಷ್ಟ್ಯವನ್ನು ಹೊಂದಿರುವ ತಾಣಗಳಾಗಿವೆ. (ವಿಶೇಷ ವರದಿ: ಹರೀಶ್‌ ಮಾಂಬಾಡಿ ಮಂಗಳೂರು)
ಸೌತಡ್ಕ, ಸುರ್ಯ ದೇವಸ್ಥಾನ
ಸೌತಡ್ಕ, ಸುರ್ಯ ದೇವಸ್ಥಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ಸಂದರ್ಭ ಲಕ್ಷ ಮಂದಿ ಭಕ್ತರು ಸೇರುತ್ತಾರೆ. ಈ ಸಂದರ್ಭ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಸುತ್ತಮುತ್ತಲಿನ ಕ್ಷೇತ್ರಗಳಿಗೂ ಭೇಟಿ ನೀಡಬಹುದು. ಉಜಿರೆ, ಧರ್ಮಸ್ಥಳದ ಕೇವಲ ಹತ್ತು, ಹದಿನೈದು ಕಿ.ಮೀ. ವ್ಯಾಪ್ತಿಯಲ್ಲಿರುವ ಧಾರ್ಮಿಕ ಕ್ಷೇತ್ರಗಳು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಸುರ್ಯ ಕ್ಷೇತ್ರ.

ಟ್ರೆಂಡಿಂಗ್​ ಸುದ್ದಿ

MLC Elections2024: ಪರಿಷತ್‌ ಚುನಾವಣೆ, ನೈರುತ್ಯ- ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ಗೆ ಬಂಡಾಯ ಬಿಸಿ

Hassan Scandal: ಪ್ರಜ್ವಲ್‌ ಬೆಂಗಳೂರಿಗೆ ವಾಪಾಸ್‌ ಆಗುತ್ತಿಲ್ಲ ಯಾಕೆ, ವಿಳಂಬದ ಹಿಂದಿನ ತಂತ್ರವೇನು?

Hassan Scandal: ಬೆಂಗಳೂರಿಗೆ ಬಾರದ ಪ್ರಜ್ವಲ್‌ ರೇವಣ್ಣ, ಕಾದು ಕಾದು ಸುಸ್ತಾದ ಪೊಲೀಸರು

Bangalore News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ: ಬೆಂಗಳೂರಿನ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ಅಧಿವೇಶನದಲ್ಲಿ ಸಲಹೆ

ರಾತ್ರಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು, ಹಗಲು ಸುತ್ತಮುತ್ತಲಿನ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದುಕೊಳ್ಳುವವರು ಉಜಿರೆ ಅಥವಾ ಧರ್ಮಸ್ಥಳದಲ್ಲಿ ವಸತಿ ಮಾಡಿಕೊಳ್ಳುವುದು ಒಳ್ಳೆಯದು. ಧರ್ಮಸ್ಥಳದಿಂದ ಹೆಚ್ಚು ದೂರವೂ ಅಲ್ಲದ ಉಜಿರೆಯ ಹತ್ತಿರ ಸುರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ಶ್ರೀ ಸದಾಶಿವ ದೇವಸ್ಥಾನವಿದ್ದರೆ, ಧರ್ಮಸ್ಥಳದಿಂದ ಹದಿನಾರು ಕಿ.ಮೀ. ದೂರದಲ್ಲಿ ಸೌತಡ್ಕ ಗಣಪತಿ ದೇವಸ್ಥಾನವಿದೆ. ಎರಡೂ ಕ್ಷೇತ್ರಗಳಿಗೆ ಒಂದೇ ದಿನ ಕ್ರಮಿಸಬಹುದು.

ಮಣ್ಣಿನ ಹರಕೆಯ ಕ್ಷೇತ್ರ ಸುರ್ಯ ದೇವಸ್ಥಾನ

ನೀವು ಇಷ್ಟಾರ್ಥವನ್ನು ಮನಸ್ಸಿನಲ್ಲಿ ಧ್ಯಾನಿಸಿ ಮಣ್ಣಿನ ಗೊಂಬೆಗಳ ಹರಿಕೆಯನ್ನು ನೀಡಬಹುದಾದ ಕ್ಷೇತ್ರವೊಂದು ಬೆಳ್ತಂಗಡಿ ತಾಲೂಕಿನಲ್ಲಿದೆ. ಇದು ಧರ್ಮಸ್ಥಳ ಸಮೀಪ ಉಜಿರೆಯಿಂದ 4 ಕಿ.ಮೀ. ದೂರದಲ್ಲಿದೆ. ಸುರ್ಯ ಎಂಬುದು ಒಂದು ಹಳ್ಳಿ. ಇಲ್ಲಿ ಪ್ರಕೃತಿ ರಮಣೀಯವಾದ ಸನ್ನಿಧಿಯಲ್ಲಿ ಶ್ರೀ ಸದಾಶಿವ ದೇವಸ್ಥಾನವಿದೆ.

ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥಿಸಿ, ಸಂಕಲ್ಪ ಸಿದ್ಧಿಯಾದ ಬಳಿಕ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಇಲ್ಲಿ ನೀಡಲಾಗುತ್ತದೆ. ಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದೆ. ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಪ್ರತಿನಿಧಿಸುತ್ತದೆ. ಹೀಗಾಗಿ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವಕ್ಕೆಂದು ಬಂದವರು ಹತ್ತಿರದಲ್ಲೇ ಇರುವ ಸುರ್ಯ ದೇವಸ್ಥಾನವನ್ನು ಸಂದರ್ಶಿಸಬಹುದು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಸುಮಾರು 16 ಕಿ.ಮೀ. ಸಾಗಿದರೆ ಸೌತಡ್ಕ ದೇವಸ್ಥಾನ ಸಿಗುತ್ತದೆ. ಇದು ಬಯಲು ಆಲಯ. ಮರದ ಬುಡದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ವಿಗ್ರಹವಿದೆ. ಸೌತೆಕಾಯಿ ಬೆಳೆಯುವ ಗದ್ದೆಗೆ ಸೌತಡ್ಕ ಎನ್ನುತ್ತಾರೆ ಎಂದು ಹೇಳಲಾಗುತ್ತಿದ್ದು, ಈ ದೇವಸ್ಥಾನ ಹೇಗೆ ನಿರ್ಮಾಣವಾಯಿತು ಎಂಬುದಕ್ಕೆ ಹಲವು ಐತಿಹ್ಯಗಳಿವೆ. ಪ್ರಸ್ತುತ ಬಯಲಿನಲ್ಲಿ ಎಲ್ಲ ಭಕ್ತರ ದರ್ಶನಕ್ಕೆ ನಿಂತಿರುವ ದೇವಸ್ಥಾನಕ್ಕೆ ಆಗಮಿಸುವ ನಂಬಿಕಸ್ಥರು, ಇಷ್ಟಾರ್ಥ ಈಡೇರಿಕೆಗಾಗಿ ಹರಕೆಯನ್ನು ಹೊರುತ್ತಾರೆ. ಇಲ್ಲಿನ ಅವಲಕ್ಕಿ ಪಂಚಕಜ್ಜಾಯ ಸೇವೆ ಪ್ರಸಿದ್ಧ. ಧರ್ಮಸ್ಥಳಕ್ಕೆ ಬಂದವರು ಒಂದೇ ದಿನದಲ್ಲಿ ಸುರ್ಯ ಮತ್ತು ಸೌತಡ್ಕ ದೇವಸ್ಥಾನಗಳನ್ನು ಸಂದರ್ಶಿಸಬಹುದು.

ಧರ್ಮಸ್ಥಳದಲ್ಲೇ ನೋಡಲು ಬೇಕಾದಷ್ಟು ಸ್ಥಳಗಳಿವೆ

ಇನ್ನು ಧರ್ಮಸ್ಥಳದಲ್ಲಿಯೇ ಶ್ರೀ ಮಂಜುನಾಥನ ಸನ್ನಿಧಿಯಲ್ಲದೆ ನೋಡಲು ಬೇಕಾದಷ್ಟು ಸ್ಥಳಗಳಿವೆ. ಸುತ್ತಮುತ್ತ ಇರುವ ಅಣ್ಣಪ್ಪಸ್ವಾಮಿ ಬೆಟ್ಟ, ಉದ್ಯಾನವನ, ವಸಂತಮಹಲ್, ಮಂಜೂಷಾ ವಸ್ತುಸಂಗ್ರಹಾಲಯ, ವಿಂಟೇಜ್ ಕಾರುಗಳ ಮ್ಯೂಸಿಯಂ, ತಾಳೆಗರಿ ಗ್ರಂಥಾಲಯ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ, ಬಾಹುಬಲಿ ವಿಹಾರ ರತ್ನಗಿರಿ ಬೆಟ್ಟ ಧರ್ಮಸ್ಥಳದಲ್ಲಿಯೇ ಇವೆ.

ಧರ್ಮಸ್ಥಳದಲ್ಲಿರುವ ವಸತಿ ಛತ್ರಗಳಾದ ವೈಶಾಲಿ, ಗಾಯತ್ರಿ, ಶರಾವತಿ, ಗಂಗೋತ್ರಿ, ಸಾಕೇತ, ರಜತಾತ್ರಿ, ಸಹ್ಯಾದ್ರಿ, ಗಂಗಾ, ಕಾವೇರಿ, ಗೋದಾವರಿಯಲ್ಲಿ ವಸತಿ ಸೌಕರ್ಯಗಳಿವೆ. ಈಗಾಗಲೇ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು ವಿಶೇಷ ಬಸ್ಸುಗಳನ್ನು ಕಲ್ಪಿಸಿದೆ.

ವಿಶೇಷ ವರದಿ: ಹರೀಶ್‌ ಮಾಂಬಾಡಿ ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ