logo
ಕನ್ನಡ ಸುದ್ದಿ  /  ಕರ್ನಾಟಕ  /  Sara Abubakar: ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ, ಚಂದ್ರಗಿರಿಯ ತೀರದಲ್ಲಿ ಕಾದಂಬರಿಗಾರ್ತಿ ಇನ್ನು ನೆನಪು

Sara Abubakar: ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ, ಚಂದ್ರಗಿರಿಯ ತೀರದಲ್ಲಿ ಕಾದಂಬರಿಗಾರ್ತಿ ಇನ್ನು ನೆನಪು

HT Kannada Desk HT Kannada

Jan 10, 2023 02:35 PM IST

Sara Abubakar: ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

    • Sara Abubakar passed away ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ನಿಧನ ಹೊಂದಿದ್ದಾರೆ. ವಯೋಸಹಜ ಕಾರಣಗಳಿಂದ ಇವರು ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
Sara Abubakar: ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ
Sara Abubakar: ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ (Social Media)

ಮಂಗಳೂರು: ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ನಿಧನ ಹೊಂದಿದ್ದಾರೆ. ವಯೋಸಹಜ ಕಾರಣಗಳಿಂದ ಇವರು ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಯಾವಾಗ? ಫಲಿತಾಂಶ ನೋಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ

Prajwal Revanna Scandal: ಪ್ರಜ್ವಲ್ ರೇವಣ್ಣಗೆ ಮತ್ತೆ ಲುಕ್‌ಔಟ್ ನೊಟೀಸ್ ಜಾರಿ ಮಾಡಿದ ಎಸ್‌ಐಟಿ, ನೀವು ತಿಳಿಯಬೇಕಾದ 10 ಅಂಶಗಳಿವು

ತಾ‌ನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾ ರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇ‌ನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಇವರು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮವೊಂದರಲ್ಲಿ 1936ರಲ್ಲಿ ಜನಿಸಿದ್ದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಕಾಸರಗೋಡಿನಲ್ಲಿ ಹೈಸ್ಕೂಲ್‌ವರೆಗೆ ಶಿಕ್ಷಣ ಪಡೆದರು. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಎಂಜಿನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದರು. ಓದಿನ ಕುರಿತು ಆಸಕ್ತಿ ಹೊಂದಿದ್ದ ಇವರು ಬಳಿಕ ಪ್ರಮುಖ ಲೇಖಕರ ಕೃತಿಗಳನ್ನು ಓದುತ್ತಿದ್ದರು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿರುವ ಇವರು ಬಳಿಕ ಬರಹಗಾರರಾಗಿ ಜನಪ್ರಿಯರಾದರು.

ಕನ್ನಡ ವಿಕಿಪೀಡಿಯಾದಲ್ಲಿರುವ ಮಾಹಿತಿಯಂತೆ, ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು.

ಸಾರಾ ಅಬೂಬಕ್ಕರ್ ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು.

ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.

ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ , ಸುಮಯ್ಯಾ (ಜನಪದ ಆಧರಿಸಿದ ಕಥೆಗಳು), ಗಗನ ಸಖಿ ಇವರ ಪ್ರಮುಖ ಕತೆಗಳು. ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ ಇವರ ಪ್ರಮುಖ ಬಾನುಲಿ ನಾಟಕಗಳು. ಐಷಾರಾಮದ ಆಳದಲ್ಲಿ ಎಂಬ ಪ್ರವಾಸ ಕಥನವನ್ನೂ ರಚಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ ದೊರಕಿದೆ. ಇದರೊಂದಿಗೆ ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮತ್ತು ನೃಪತುಂಗ ಪ್ರಶಸ್ತಿ ಪಡೆದಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು