ರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖಾಧಿಕಾರಿಗಳ ಕೈ ಸೇರಿದ ಮರಣೋತ್ತರ ಪರೀಕ್ಷಾ ವರದಿ; ರಿಪೋರ್ಟ್‌ನಲ್ಲಿ ಏನಿದೆ?
Jul 20, 2024 06:06 AM IST
ರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖಾಧಿಕಾರಿಗಳ ಕೈ ಸೇರಿದ ಮರಣೋತ್ತರ ಪರೀಕ್ಷಾ ವರದಿ; ರಿಪೋರ್ಟ್‌ನಲ್ಲಿ ಏನಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನಡೆಸಿದ್ದ ಮರಣೋತ್ತರ ಪರೀಕ್ಷಾ ವರದಿ ತನಿಖಾಧಿಕಾರಿಗಳ ಕೈ ಸೇರಿದೆ. ಜೊತೆಗೆ ಮನೆಯೂಟ, ಹಾಸಿಗೆ ಕೇಳಿ ದರ್ಶನ್ ಸಲ್ಲಿಸಿದ್ದ ಮುಂದಿನ ವಿಚಾರಣೆ ಇದೇ ತಿಂಗಳ 29ಕ್ಕೆ ನಡೆಯಲಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ತನಿಖಾಧಿಕಾರಿಗಳ ಕೈ ಸೇರಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಏನಿದೆ?
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೊಲೆ ಹೇಗೆ ನಡೆದಿದೆ ಎಂದು ವಿವರವಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮನೆ ಊಟ ಮತ್ತು ಹಾಸಿಗೆ ಪಡೆಯಲು ಅನುಮತಿ ನೀಡಬೇಕೆಂದು ದರ್ಶನ್ ತೂಗುದೀಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿಗೆ 4-5 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಗಂಭೀರವಾಗಿ ಹಲ್ಲೆ ನಡೆಸಿರುವುದು ತಿಳಿದುಬಂದಿದೆ. ವಿಪರೀತವಾಗಿ ಹೊಡೆದಿರುವುದರಿಂದ ನೋವು ತಾಳಲಾರದೆ ರೇಣುಕಸ್ವಾಮಿ ಕೊನೆಯುಸಿರು ಬಿಟ್ಟಿದ್ದಾರೆ. ತೀವ್ರವಾದ ಹೊಡೆತಗಳು ಬಿದ್ದಿರುವುದರಿಂದ ದೇಹದ ಕೆಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿಗೆ ಬಲವಾಗಿ ಹೊಡೆದಿರುವುದರಿಂದ ಹಲವಾರು ಮೂಳೆಗಳು ಮುರಿದಿವೆ. ಜತೆಗೆ ರಕ್ತಸ್ರಾವವೂ ಆಗಿದ್ದು, ಇವರ ಮೇಲೆ ಹಲ್ಲೆ ನಡೆದಿರುವ ದಿನದಂದು ಸಂಜೆ 6.30ರಿಂದ 7 ಗಂಟೆಯೊಳಗೆ ಮೃತಪಟ್ಟಿದ್ದಾರೆ. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಸ್ನೇಹಿತೆಯ ಪತಿಯೊಬ್ಬರು ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ಅವರು ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆ ನಡೆದ ದಿನದಂದು ಅವರು ರಜೆಯಲ್ಲಿದ್ದರು ಎಂದೂ ಸ್ಪಷ್ಟಪಡಿಸಲಾಗಿದೆ. ಇವರ ಬದಲಿಗೆ ಮತ್ತೊಬ್ಬ ವೈದ್ಯರು ಪರಿಕ್ಷೆ ನಡೆಸಿದ್ದಾರೆ.
ಈ ಕೊಲೆ ಪ್ರಕರಣದ ಆರೋಪಿಗಳ ಜತೆಗೆ ಸಾಕ್ಷಿದಾರರ ಮೊಬೈಲ್‌ಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೇಣುಕಾಸ್ವಾಮಿ ಬಳಸುತ್ತಿದ್ದ ಇನ್ಸ್‌ಸ್ಟಾಗ್ರಾಂ ಖಾತೆ ಹಾಗೂ ವಾಟ್ಸಾಪ್ ಖಾತೆಯ ದತ್ತಾಂಶವನ್ನು ಸೆನ್ ಪೊಲೀಸರ ನೆರವಿನಿಂದ ಮರು ಪಡೆಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ದರ್ಶನ್ ಮನೆಯಿಂದ ವಶಪಡಿಸಿಕೊಳ್ಳಲಾದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಸೈಬರ್ ತಜ್ಞರು ಪರಿಶೀಲಿಸಿ ದತ್ತಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನಿಖೆಗೆ ಬೇಕಿರುವ ಬಹುತೇಕ ಅಂಶಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ದರ್ಶನ್ ಭೇಟಿ ಮಾಡಿದ ಮೇಲುಕೋಟೆ ಶಾಸಕ ದರ್ಶನ್
ಈ ನಡುವೆ ಮಂಡ್ಯ ಜಿಲ್ಲೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರಪ್ಪನ ಅಗ್ರಹಾರ ಬಂಧೀಖಾನೆಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಜೈಲು ಅಧಿಕಾರಿಗಳು ಅನುಮತಿ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದೆ. ಜೈಲಿನಲ್ಲಿ ಪುಸ್ತಕಗಳನ್ನು ಓದುತ್ತಿರುವುದಾಗಿ ಅವರು ತಿಳಿಸಿದರು. ನಾನೂ ಕೆಲವು ಪುಸ್ತಕಗಳನ್ನು ನೀಡಿದ್ದೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಮನೆಯೂಟಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದು ಆದೇಶಿಸಿದೆ. ನ್ಯಾಯಮೂರ್ತಿ ಎಸ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಕಾಯಿದೆ ಅಡಿಯಲ್ಲಿ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ ಮತ್ತಿತರ ಸವಲತ್ತು ಪಡೆಯಲು ಅರ್ಹರಾಗಿದ್ದಾರೆ. ಜೈಲೂಟದಿಂದ ದರ್ಶನ್ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಆದ್ದರಿಂದ ಅವರಿಗೆ ಮನೆಯೂಟ ಪಡೆಯಲು ಅವಕಾಶ ನೀಡಬೇಕು. ಊಟ ಕೈದಿಯ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿ.ಜಿ. ಭಾನುಪ್ರಕಾಶ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳಿದ್ದಾರೆ. ಎಲ್ಲರೂ ಮನೆಯೂಟಕ್ಕೆ ಅರ್ಜಿ ಸಲ್ಲಿಸಿದರೆ ಕಷ್ಟವಾಗುತ್ತದೆ. ಸರ್ಕಾರ ಕೈದಿಗಳಿಗೆ ಪೌಷ್ಠಿಕ ಆಹಾರನ್ನೇ ನೀಡುತ್ತಿದೆ ಎಂದು ವಾದಿಸಿದರು. ಅಂತಿಮವಾಗಿ ಅರ್ಜಿದಾರರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದು ತಿಳಿಸಿ ಈ ತಿಂಗಳ 29ರೊಳಗೆ ಈ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಆದೇಶ ಹೊರಡಿಸಿತು. ಮುಂದಿನ ವಿಚಾರಣೆ ಇದೇ ತಿಂಗಳ 29ಕ್ಕೆ ನಡೆಯಲಿದೆ.
ವರದಿ: ಎಚ್.ಮಾರುತಿ, ಬೆಂಗಳೂರು