logo
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್​ಸಿ ಒಳಮೀಸಲಾತಿ: ದಲಿತ ಸಚಿವ-ಶಾಸಕರೊಂದಿಗೆ ಪರಮೇಶ್ವರ ಮಹತ್ವ ಸಭೆ, ಸಿಎಂಗೆ ವರದಿ ಸಲ್ಲಿಸಲು ಸಿದ್ಧತೆ

ಎಸ್​ಸಿ ಒಳಮೀಸಲಾತಿ: ದಲಿತ ಸಚಿವ-ಶಾಸಕರೊಂದಿಗೆ ಪರಮೇಶ್ವರ ಮಹತ್ವ ಸಭೆ, ಸಿಎಂಗೆ ವರದಿ ಸಲ್ಲಿಸಲು ಸಿದ್ಧತೆ

Prasanna Kumar P N HT Kannada

Oct 21, 2024 01:33 PM IST

google News

ಗೃಹ ಸಚಿವ ಪರಮೇಶ್ವರ

  • ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಅಕ್ಟೋಬರ್ 21ರಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಗೃಹ ಸಚಿವ ಪರಮೇಶ್ವರ
ಗೃಹ ಸಚಿವ ಪರಮೇಶ್ವರ (HT_PRINT)

ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಯಾವುದೇ ಗೊಂದಲ ಇಲ್ಲದೆ ಸಹಮತ ಮೂಡಿಸುವ ಉದ್ದೇಶದಿಂದ ಗೃಹ ಸಚಿವ ಡಾ.‌ ಜಿ ಪರಮೇಶ್ವರ ಅವರ ನೇತೃತ್ವದಲ್ಲಿ ಸೋಮವಾರ‌ (ಅಕ್ಟೋಬರ್​ 21) ಸದಾಶಿವನಗರದ ಗೃಹ ಕಚೇರಿಯಲ್ಲಿ ಪರಿಶಿಷ್ಟ ಸಮುದಾಯಗಳ ಸಚಿವರು ಹಾಗೂ ಶಾಸಕರ ಮಹತ್ವದ ಸಭೆ ನಡೆಯಿತು. ಮುಂದಿನ ಹಾಗು-ಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ದಲಿತ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಪರಮೇಶ್ವರ್ ಅವರು ಎಸ್‌ಸಿ ಸಮುದಾಯದ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದ್ದಾರೆ‌ ಎಂದು ಮೂಲಗಳು ತಿಳಿಸಿವೆ. ಒಂದು ತಾಸಿಗೂ ಹೆಚ್ಚು ಸುದೀರ್ಘ ಚರ್ಚೆ ನಡೆಸಲಾಗಿದೆ.

ಈಗಾಗಲೇ ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿ ನೇತೃತ್ವದ ಸಮಿತಿ, ಎಂಎಲ್‌ಸಿ ಸುಧಾಮದಾಸ್ ಸೇರಿದಂತೆ ಸದಸ್ಯರನ್ನೊಳಗೊಂಡ ಸಮಿತಿಯು ಮೀಸಲಾತಿ ವರ್ಗೀಕರಣದ ಕುರಿತು ಹಲವು ಸುತ್ತಿನ ಚರ್ಚೆ ನಡೆಸಿದೆ. ಎಸ್​ಸಿ ಒಳ ಮೀಸಲಾತಿ ಜಾರಿಗೆ ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹಿಂದಿನ ಬಸವರಾಜು ಬೊಮ್ಮಾಯಿ ನೇತೃತ್ವದ ಸರ್ಕಾರ ಎಸ್​ಸಿ ಮೀಸಲಾತಿಯನ್ನು 15 ರಿಂದ ಶೇಕಡಾ 17ಕ್ಕೆ ಹೆಚ್ಚಿಸಿತ್ತು ಎನ್ನಲಾಗಿದೆ.

ಅಕ್ಟೋಬರ್ 28ರಂದು ಸಚಿವ ಸಪುಟ ಸಭೆ ನಡೆಯಲಿದ್ದು, ಜಾತಿ ಗಣತಿ ಕುರಿತಂತೆ ಚರ್ಚೆಗಳಾಗುವ ಸಾಧ್ಯತೆ ಹೆಚ್ಚಿದೆ. ಸಭೆಯಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಎಸ್‌ಸಿ ವರ್ಗದ ಎಲ್ಲಾ ನಾಯಕರು ಒಳಮೀಸಲಾತಿ ಜಾರಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ಅದು ವೈಜ್ಞಾನಿಕ ರೀತಿಯಲ್ಲಿ ಇರಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಲಾಗುವುದು ಎಂದು ಶಾಸಕರೊಬ್ಬರು ಹೇಳಿದ್ದಾರೆ.

ಸಭೆಯಲ್ಲಿ ಯಾರೆಲ್ಲಾ ಇದ್ದರು?

ಸಚಿವರಾದ ಹೆಚ್​ಸಿ ಮಹದೇವಪ್ಪ, ಕೆಹೆಚ್ ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಆರ್​​ಬಿ ತಿಮ್ಮಾಪುರ್, ವಿಧಾನಸಭೆ ಉಪ‌ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ನರೇಂದ್ರಸ್ವಾಮಿ, ಎಸಿ ಶ್ರೀನಿವಾಸ್, ನೆಲಮಂಗಲ ಶಾಸಕ ಶ್ರೀನಿವಾಸ್, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸುಧಾಮದಾಸ್, ವಸಂತ‌ಕುಮಾರ್ ಸೇರಿದಂತೆ ಬಹುತೇಕ ಎಸ್‌ಸಿ‌ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಖರ್ಗೆ ಭೇಟಿಯಾಗಿದ್ದ ಪರಮೇಶ್ವರ

ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಪರಮೇಶ್ವರ ಒಳಮೀಸಲಾತಿ ಕುರಿತು ವಿವರಿಸಿದ್ದರು. ಸಮುದಾಯದ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ಕೈಗೊಳ್ಳುತ್ತಿರುವ ವಿಚಾರವನ್ನು ತಿಳಿಸಿದ್ದರು. ಒಳ ಮೀಸಲಾತಿ ಹಂಚಿಕೆ‌ ಕುರಿತು ಕೆಲ ಪ್ರಮುಖ ಸಲಹೆಗಳನ್ನು ಖರ್ಗೆ ಅವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ