logo
ಕನ್ನಡ ಸುದ್ದಿ  /  ಕರ್ನಾಟಕ  /  Amazon Job Scam: ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ 1.94 ಲಕ್ಷ ಮೋಸ, ಈ ವಂಚನೆ ಹೇಗೆ ನಡೆಯುತ್ತದೆ? ಹುಷಾರಾಗಿರಿ

Amazon job scam: ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ 1.94 ಲಕ್ಷ ಮೋಸ, ಈ ವಂಚನೆ ಹೇಗೆ ನಡೆಯುತ್ತದೆ? ಹುಷಾರಾಗಿರಿ

Praveen Chandra B HT Kannada

Nov 18, 2024 11:00 AM IST

google News

ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ ಪಂಗನಾಮ

  • Amazon job scam: ಕೆಲವು ದಿನಗಳ ಹಿಂದೆ ಉಡುಪಿಯ 25 ವರ್ಷ ವಯಸ್ಸಿನ ಯುವತಿಗೆ ಅಮೆಜಾನ್‌ನಲ್ಲಿ ಪಾರ್ಟ್‌ಟೈಮ್‌ ಜಾಬ್‌ ಹೆಸರಲ್ಲಿ 1.94 ಲಕ್ಷ ರೂಪಾಯಿ ವಂಚನೆ ನಡೆದಿದೆ. ಈಕೆ ಇದು ನಂಬಿಕಸ್ಥ ಉದ್ಯೋಗ ಎಂದುಕೊಂಡಿದ್ದಳು. ಆದರೆ, ಇದು ಅತ್ಯಂತ ಎಚ್ಚರಿಕೆಯಿಂದ ಯೋಜಿಸಿದ ವಂಚನೆ ಎಂದು ತಿಳಿದಾಗ ತಡವಾಗಿತ್ತು.

ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ ಪಂಗನಾಮ
ಅಮೆಜಾನ್‌ ಜಾಬ್‌ ಹೆಸರಲ್ಲಿ ಉಡುಪಿಯ ಯುವತಿಗೆ ಪಂಗನಾಮ (Pixabay)

Amazon job scam: ಈಗ ಸಾಕಷ್ಟು ಜನರು ವರ್ಕ್‌ ಫ್ರಮ್‌ ಹೋಮ್‌ಗೆ ಹುಡುಕಾಟ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಯುವತಿಯರು, ಮಹಿಳೆಯರು, ಪುರುಷರು ಪಾರ್ಟ್‌ಟೈಮ್‌ ಜಾಬ್‌ಗೂ ಪ್ರಯತ್ನಿಸುತ್ತಾ ಇರುತ್ತಾರೆ. ಈಗಿನ ಇಂಟರ್‌ನೆಟ್‌ ಜಗತ್ತಿನಲ್ಲಿ ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್‌, ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಹಲವು ಜಾಬ್‌ ಆಫರ್‌ಗಳು ಕಾಣಿಸುತ್ತವೆ. ಅಮೆಜಾನ್‌, ಗೂಗಲ್‌ನಂತಹ ಕಂಪನಿಗಳಲ್ಲಿ ಉದ್ಯೋಗವಿದೆ ಎಂದು ತಿಳಿದರೆ ಸಾಕಷ್ಟು ಜನರು ಅಲರ್ಟ್‌ ಆಗಿ ಬಿಡುತ್ತಾರೆ. ಆದರೆ, ಈ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸುವ ಲಿಂಕ್‌ನಿಂದ ಉದ್ಯೋಗ ಪಡೆಯುವ ಬದಲು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲೂ ಇಂತಹ ಒಂದು ಘಟನೆ ವರದಿಯಾಗಿತ್ತು.

ಅರ್ಚನಾ ಎಂಬ ಉಡುಪಿಯ ಯುವತಿ ಪಾರ್ಟ್‌ಟೈಮ್‌ ಜಾಬ್‌ ಹುಡುಕುತ್ತಿದ್ದಳು. ಇನ್‌ಸ್ಟಾಗ್ರಾಂನಲ್ಲಿ ಅಮೆಜಾನ್‌ ಜಾಬ್ಸ್‌ ಆಫರ್‌ ಇರುವ ಲಿಂಕ್‌ ಕಾಣಿಸಿತ್ತು. ಆ ಜಾಹೀರಾತು ಕ್ಲಿಕ್‌ ಮಾಡಿದಾಗ ವಾಟ್ಸಪ್‌ ಚಾಟ್‌ಗೆ ಲಿಂಕ್‌ ರಿಡೈರೆಕ್ಟ್‌ ಆಗಿತ್ತು. ಇದಾದ ಬಳಿಕ ವಾಟ್ಸಪ್‌ನಲ್ಲಿ ಆ ವಂಚಕರು ತಾವು ಅಮೆಜಾನ್‌ ಜಾಬ್‌ ನೇಮಕಾತಿದಾರರು ಎನ್ನುವ ರೀತಿಯಲ್ಲಿ ಪೋಸ್‌ ನೀಡಿದ್ದರು. ಈ ಪಾರ್ಟ್‌ ಟೈಮ್‌ ಜಾಬ್‌ಗಾಗಿ ನೀವು ಅಮೆಜಾನ್‌ ಪ್ರಶರ್ ಜಾಬ್‌ ಇನ್‌ ಇಂಡಿಯಾನಲ್ಲಿ ಕೊಂಚ ಹಣ ಹೂಡಿಕೆ ಮಾಡಿದರೆ ಹೆಚ್ಚು ಗಳಿಕೆ ಮಾಡಬಹುದು ಎಂದು ಆಕೆಗೆ ತಿಳಿಸಲಾಗಿತ್ತು.

ಅಮೆಜಾನ್‌ ಪ್ರಶರ್ ಜಾಬ್‌ ಇನ್‌ ಇಂಡಿಯಾ ಎಂಬ ಲಿಂಕ್‌ ನೋಡಿ ಇದು ಅಸಲಿ ಎಂದುಕೊಂಡು ತುಸುತುಸುವೇ ಹಣ ಹೂಡಿಕೆ ಮಾಡಿದ್ದಾಳೆ. ಇದಕ್ಕಾಗಿ ಅಪರಿತರು ನೀಡಿರುವ ಯುಪಿಐ ಐಡಿಗೆ ಅಕ್ಟೋಬರ್‌ 18 ಮತ್ತು ಅಕ್ಟೋಬರ್‌ 24ರಂದು ಒಟ್ಟು 1.94 ಲಕ್ಷ ರೂಪಾಯಿ ಹಣ ಪಾವತಿಸಿದ್ದಾಳೆ. ಆದರೆ, ಅವರು ತಿಳಿಸಿದಂತೆ ಹಣ ಹೂಡಿಕೆ ಮಾಡಿದ್ದಕ್ಕೆ ಲಾಭ ಬಾರದೆ ಇರುವಾಗ ಈಕೆಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ತಕ್ಷಣ ಈಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆನ್‌ಲೈನ್‌ ವಂಚಕರಿದ್ದಾರೆ ಎಚ್ಚರಿಕೆ

ಈ ರೀತಿಯ ವಂಚನೆ ಹೊಸತಲ್ಲ. ಹೆಚ್ಚು ಲಾಭ ಬರುವ ಆಮೀಷ ತೋರಿಸಿ ವಿವಿಧ ರೀತಿಯಲ್ಲಿ ಜನರನ್ನು ವಂಚಿಸಲಾಗುತ್ತದೆ. ಕೆಲವೊಂದು ಪ್ರಕರಣದಲ್ಲಿ ಈ ರೀತಿಯ ವಂಚಕರು ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಕೊಂಚ ಲಾಭವನ್ನೂ ನೀಡುತ್ತಾರೆ. ಈ ಮೂಲಕ ದೊಡ್ಡಮೊತ್ತದ ಹಣ ಹೂಡಿಕೆ ಮಾಡಲು ತಿಳಿಸುತ್ತಾರೆ. ದೊಡ್ಡ ಮೊತ್ತ ಹಾಕಿದ ಬಳಿಕ ವಂಚಕರು ಕೈಗೆ ಸಿಗದಂತೆ ಪರಾರಿಯಾಗುತ್ತಾರೆ.

ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಲಹೆ

  1. ಉದ್ಯೋಗ ಪಡೆಯಲು ಅಧಿಕೃತ ವೆಬ್‌ಸೈ ಟ್‌ಗಳನ್ನು ಅವಲಂಬಿಸಿ. ಲಿಂಕ್ಡ್‌ಇನ್‌ನಂತಹ ತಾಣಗಳನ್ನು ನಂಬಬಹುದು. ನಿಮಗೆ ಉದ್ಯೋಗ ನೀಡಲಿರುವ ಕಂಪನಿಯ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಉದ್ಯೋಗದ ಮಾಹಿತಿ ಪಡೆಯಿರಿ. ಅಮೆಜಾನ್‌, ಗೂಗಲ್‌ನಂತಹ ಕಂಪನಿಗಳು ತಮ್ಮ ಉದ್ಯೋಗ ನೇಮಕಾತಿಗೆ ಪ್ರತ್ಯೇಕ ವೆಬ್‌ಸೈಟ್‌ ಹೊಂದಿವೆ. ಅವು ಈ ರೀತಿ ಟೆಲಿಗ್ರಾಂ, ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡುವುದಿಲ್ಲ.
  2. ನಂಬಲು ಅಸಾಧ್ಯವಾದ ಆಫರ್‌ಗಳನ್ನು ನಂಬಬೇಡಿ: ಅಮೆಜಾನ್‌ನಂತಹ ಕಂಪನಿಗಳು ಇನ್‌ಸ್ಟಾಗ್ರಾಂ ಜಾಹೀರಾತುಗಳ ಮೂಲಕ ನೇಮಕಾತಿ ಮಾಡುವುದಿಲ್ಲ. ಅವು ಹಲವು ಸುತ್ತಿನ ಸಂದರ್ಶನ, ನೇಮಕಾತಿ ಪರೀಕ್ಷೆ ನಡೆಸಿ ಬಳಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಹಣ ಹೂಡಿಕೆ ಮಾಡಲಂತೂ ಇಂತಹ ಕಂಪನಿಗಳು ತಿಳಿಸುವುದೇ ಇಲ್ಲ.
  3. ನಿಮಗೆ ಉದ್ಯೋಗದ ಆಫರ್‌ ನೀಡುವವರ ಕುರಿತು ಡಬಲ್‌ಚೆಕ್‌ ಮಾಡಿ. ವಾಟ್ಸಪ್‌ನಲ್ಲಿ ನೇಮಕ ಮಾಡುವವರನ್ನು ನಂಬಬೇಡಿ.
  4. ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.
  5. ನಿಮ್ಮ ಅಂತಾರಾತ್ಮದ ಮಾತು ಕೇಳಿ: ಯಾರೇ ಉದ್ಯೋಗದ ಆಫರ್‌ ನೀಡಿದರೂ ಒಂದಿಷ್ಟು ಹೊತ್ತು ಅದರ ಕುರಿತು ಗಂಭೀರವಾಗಿ ಯೋಚಿಸಿ. ಇದು ಅಸಲಿಯೋ, ನಕಲಿಯೋ ಎಂದು ಯೋಚಿಸಿ. ಅವರ ಆಮಿಷಗಳಿಗೆ ಬಲಿಯಾಗಬೇಡಿ. ನಿಮ್ಮ ಆಪ್ತರು, ಮನೆಯವರ ಜತೆ ಚರ್ಚಿಸಿ.

ಇದನ್ನೂ ಓದಿ: Digital Jagathu: ಆನ್‌ಲೈನ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ