IAS Transfer ಕರ್ನಾಟಕದ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಜಯರಾಂ ನಿಯೋಜನೆ, ಐಎಎಸ್ ವರ್ಗ ಶುರು
May 25, 2023 06:38 AM IST
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಎನ್.ಜಯರಾಂ
- ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಅಧಿಕಾರಿಗಳ ವರ್ಗ ಪ್ರಕ್ರಿಯೆಯೂ ಜೋರಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಅಧಿಕಾರಿಗಳ ವರ್ಗ ಪ್ರಕ್ರಿಯೆಯೂ ಜೋರಾಗಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಂ ಅವರನ್ನು ನೇಮಕ ಮಾಡಲಾಗಿದೆ. ಅವರು ಬೆಂಗಳೂರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿಯೂ ಮುಂದುವರೆಯಲಿದ್ದಾರೆ. ಈವರೆಗೂ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿದ್ದ ಎಂ.ಎಸ್.ಶ್ರೀಕರ್ ಅವರು ಹೆಚ್ಚುವರಿ ಕಾರ್ಯಭಾರ ಹೊಂದಿದ್ದರು. ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ, ಮೂಲಸೌಕರ್ಯ ಇಲಾಖೆ ಅಪರಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈವರೆಗೂ ಆ ಹುದ್ದೆಯಲ್ಲಿದ್ದ ಕಪಿಲ್ ಮೋಹನ್ ಅವರಿಗೆ ಬೇರೆ ಹುದ್ದೆ ತೋರಿಸಿಲ್ಲ.
ಮೂರು ದಿನದ ಹಿಂದೆಯೇ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿತ್ತು. ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರನ್ನು ಸಿಐಬಿ ನಿರ್ದೇಶಕರಾಗಿ ಬಡ್ತಿ ಪಡೆದ ಪ್ರವೀಣ್‌ಸೂದ್ ಅವರ ಜಾಗಕ್ಕೆ ನಿಯೋಜಿಸಲಾಗಿತ್ತು. ಯಾವುದೇ ಸರ್ಕಾರ ರಚನೆಯಾದಾಗ ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳ ವರ್ಗಾವಣೆ ಸಹಜ ಪ್ರಕ್ರಿಯೆ. ಈ ವಾರದಲ್ಲಿ ಇನ್ನಷ್ಟು ಹಿರಿಯ ಅಧಿಕಾರಿಗಳ ವರ್ಗಾವಣೆ ಆಗಬಹುದು ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವರ್ಗಾವಣೆಯು ಆಗಬಹುದು ಎನ್ನಲಾಗುತ್ತಿದೆ.