logo
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ

Breaking News: ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ

Umesha Bhatta P H HT Kannada

Aug 30, 2024 02:26 PM IST

google News

ಹಿರಿಯ ರಾಜಕಾರಣಿ ಕೆಎಚ್‌ ಶ್ರೀನಿವಾಸ್‌ ಇನ್ನಿಲ್ಲ

    • ಕವಿ ಮನಸ್ಸಿನ ರಾಜಕಾರಣಿ, ಮಲೆನಾಡಿನ ತವರು ಸಾಗರದ ಕೆಎಚ್‌.ಶ್ರೀನಿವಾಸ್‌( KH Srinivas) ನಿಧನರಾಗಿದ್ದಾರೆ.
ಹಿರಿಯ ರಾಜಕಾರಣಿ ಕೆಎಚ್‌ ಶ್ರೀನಿವಾಸ್‌ ಇನ್ನಿಲ್ಲ
ಹಿರಿಯ ರಾಜಕಾರಣಿ ಕೆಎಚ್‌ ಶ್ರೀನಿವಾಸ್‌ ಇನ್ನಿಲ್ಲ

ಬೆಂಗಳೂರು: ಶಿವಮೊಗ್ಗಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಚ್‌ಶ್ರೀನಿವಾಸ್‌( KH Srinivas) ನಿಧನರಾಗಿದ್ದಾರೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್‌ ಜನತಾಪರಿವಾರದಲ್ಲಿ( Janata parivar leader) ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ( Rama Krishna Hegde) ಅವರ ಆಪ್ತರಾಗಿದ್ದ ಶ್ರೀನಿವಾಸ್‌ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು.ಶ್ರೀನಿವಾಸ್‌ ಅವರಿಗೆ 86 ವರ್ಷ ವಯಸ್ಸಾಗಿತ್ತು.ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಕೆ ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು. ಅಪಾರ ದುಃಖದಿಂದ ನನಗಾದ ದೊಡ್ಡ ನಷ್ಟದ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಎಂದು ಶ್ರೀನಿವಾಸ್‌ ಪುತ್ರಿ ವೈಶಾಲಿ ದುಃಖ ಹಂಚಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ1938ರ ಫೆಬ್ರವರಿ 5ರಂದು ಜನಿಸಿದರು ಕೆ.ಎಚ್‌.ಶ್ರೀನಿವಾಸ್‌. ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು.ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡು ಸಾಮಾಜಿಕವಾಗಿ ಗುರುತಿಸಿಕೊಂಡರು ಶ್ರೀನಿವಾಸ್‌. ಸಾಗರ ತಾಲೂಕು ಮತ್ತು ಸುತ್ತಮುತ್ತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರು 6, 7 ಮತ್ತು 8 ನೇ ವಿಧಾನಸಭೆಯ ಸದಸ್ಯರಾಗಿದ್ದರು. ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರಗಳಿಂದ ಗೆದ್ದಿದ್ದರು.1978-80 ರ ಅವಧಿಯಲ್ಲಿ ಅವರು ಮಾಹಿತಿ, ಯುವಜನ ಸೇವೆಗಳು ಮತ್ತು ಇಂಧನ, ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಇಂಧನ ಮತ್ತು ಮಾಹಿತಿ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1987-88ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದರು. ಆನಂತರ ವಿಧಾನಪರಿಷತ್‌ಗೂ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು. ರಾಜಕೀಯದಲ್ಲಿ ಈ ರೀತಿ ವೈವಿಧ್ಯಮಯ ವ್ಯಕ್ತಿತ್ವ ಇರುವವರು ಕಡಿಮೆ.

ಕನ್ನಡ ಬರಹಗಾರರಾಗಿದ್ದ ಅವರು ಕಾನುಗೋಡು ಮನೆ ಹಾಗೂ ಒಳಸೊನ್ನೆ ಹೊರಸೊನ್ನೆ ಕವನ ಸಂಕಲನವನ್ನು ಪ್ರಕಟಿಸಿದರು ಮತ್ತು ಜೀನ್ ಪಾಲ್ ಸಾರ್ತ್ರ ಅವರ ನಾಟಕವನ್ನು ಕನ್ನಡ ಭಾಷೆಗೆ ಅನುವಾದಿಸಿದರು. 1972 ರಲ್ಲಿ ಅವರು ರೋಟರಿ ಕ್ಲಬ್ ಆಫ್ ಇಂಡಿಯಾದ ಪ್ರಾಯೋಜಕತ್ವದಲ್ಲಿ ಅಮೆರಿಕದ ಮ್ಯಾಂಚೆಸ್ಟರ್‌ನಲ್ಲಿ ಅಧ್ಯಯನ ಪ್ರವಾಸವನ್ನು ಕೈಗೊಂಡರು. ಅವರು 1978-80ರ ಅವಧಿಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಯುರೋಪ್, ಜಪಾನ್, ಮಲೇಷಿಯಾ, ಸಿಂಗಾಪುರದಲ್ಲಿ ಪ್ರವಾಸ ಮಾಡಿದ್ದು ಅವರ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ ದೂರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದರು. ಮೂವರು ಪುತ್ರಿಯರೂ ಶ್ರೀನಿವಾಸ್‌ ಅವರಿಗೆ ಇದ್ದಾರೆ. ಇವರೂ ಚಿತ್ರದಲ್ಲಿ ಅಭಿನಯಿಸಿದ್ದರೆ, ಅವರ ಪುತ್ರಿ ವೈಶಾಲಿ ಕೂಡ ಅಭಿಯಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ