logo
ಕನ್ನಡ ಸುದ್ದಿ  /  ಕರ್ನಾಟಕ  /  By Vijayendra: ಚುನಾವಣಾ ರಾಜಕೀಯಕ್ಕೆ ಬಿ ವೈ ವಿಜಯೇಂದ್ರ ಎಂಟ್ರಿ; ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಆಗುತ್ತಾ ‘ಸನ್’​ ರೈಸ್​?

BY Vijayendra: ಚುನಾವಣಾ ರಾಜಕೀಯಕ್ಕೆ ಬಿ ವೈ ವಿಜಯೇಂದ್ರ ಎಂಟ್ರಿ; ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಆಗುತ್ತಾ ‘ಸನ್’​ ರೈಸ್​?

Meghana B HT Kannada

May 05, 2023 10:29 AM IST

google News

ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ ವೈ ವಿಜಯೇಂದ್ರ

    • Karnataka Assembly Elections: ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಹೈ ಪ್ರೊಫೈಲ್ ಕ್ಷೇತ್ರ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರಿಲ್ಲದೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಬಿಎಸ್​ವೈ ಪುತ್ರ ಬಿ ವೈ ವಿಜಯೇಂದ್ರ ಮ್ಯಾಜಿಕ್​ ಮಾಡ್ತಾರಾ ಎನ್ನುವುದೇ ಬಿಜೆಪಿಗರಲ್ಲಿ ಹಾಗೂ ಬಿಎಸ್​ವೈ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ ವೈ ವಿಜಯೇಂದ್ರ
ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ ವೈ ವಿಜಯೇಂದ್ರ

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಅವರಿಂದ ತೆರವಾದ ಶಿವಮೊಗ್ಗದ ಶಿಕಾರಿಪುರದಿಂದ (Shikaripura) ವಿಧಾನಸಭಾ ಚುನಾವಣೆಗೆ ವಿಜಯೇಂದ್ರ ಸ್ಫರ್ಧಿಸುತ್ತಿದ್ದಾರೆ.

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಹೈ ಪ್ರೊಫೈಲ್ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಲ್ಲದೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ವಿಜಯೇಂದ್ರ ಮ್ಯಾಜಿಕ್​ ಮಾಡ್ತಾರಾ ಎನ್ನುವುದೇ ಬಿಜೆಪಿಗರಲ್ಲಿ ಹಾಗೂ ಬಿಎಸ್​ವೈ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. 99,781 ಪುರುಷ ಮತದಾರರು ಸೇರಿದಂತೆ ಒಟ್ಟು 1,98,808 ಮತದಾರರನ್ನು ಹೊಂದಿರುವ ಶಿಕಾರಿಪುರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ 35,000 ಮತಗಳಿಂದ ಸೋತಿದ್ದ ಗೋಣಿ ಮಾಲತೇಶ್ ಅವರನ್ನೇ ಈ ಬಾರಿಯೂ ಕಾಂಗ್ರೆಸ್ ಶಿಕಾರಿಪುರದಿಂದ ಕಣಕ್ಕಿಳಿಸಿದೆ. ಯಡಿಯೂರಪ್ಪ 2018ರಲ್ಲಿ 86,983 ಮತಗಳನ್ನು ಪಡೆದರೆ, ಮಾಲತೇಶ್ 51,586 ಮತಗಳನ್ನು ಪಡೆದಿದ್ದರು.

ಕಾಂಗ್ರೆಸ್ ಬಂಡಾಯ ಎಸ್‌ಪಿ ನಾಗರಾಜ ಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಭಾಗದ ಹಲವು ಕಾಂಗ್ರೆಸ್ ಕಾರ್ಯಕರ್ತರು ನಾಗರಾಜ ಗೌಡರಿಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು ಆದರೆ ಸಿಗಲಿಲ್ಲ.

ಶಿಕಾರಿಪುರದಲ್ಲಿ ಯಡಿಯೂರಪ್ಪನವರ ವಿರೋಧಿ ಕುಟುಂಬದ ಮತಗಳು, ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವವರ ಮತಗಳು ನಾಗರಾಜ ಗೌಡರಿಗೆ ಬೀಳಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ವಿಜಯೇಂದ್ರಗೆ ನಾಗರಾಜ ಗೌಡ ಉತ್ತಮ ಪೈಪೋಟಿ ನೀಡುವ ಸಾಧ್ಯತೆ ಇದೆ.

ಎಸ್‌ಸಿಗಳಿಗೆ ಒಳಮೀಸಲಾತಿ ಘೋಷಿಸಿದ ನಂತರ ಆಡಳಿತಾರೂಢ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಬಂಜಾರ ಸಮುದಾಯದ ಬೆಂಬಲ ಪಡೆಯುವ ಜತೆಗೆ ಶಿಕಾರಿಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ‘ಸಾದರ ಲಿಂಗಾಯತ’ ಸಮುದಾಯದ ಬೆಂಬಲವನ್ನು ಸಹ ಗೌಡರು ಪಡೆಯುವ ನಿರೀಕ್ಷೆಯಿದೆ. ಒಳಮೀಸಲಾತಿ ವಿಚಾರವಾಗಿ ಕೆಲ ದಿನಗಳ ಹಿಂದೆ ಪ್ರತಿಭಟನೆ ವೇಳೆ ಯಡಿಯೂರಪ್ಪ ಅವರ ಶಿಕಾರಿಪುರ ನಿವಾಸದ ಮೇಲೆ ಬಂಜಾರ ಸಮುದಾಯದವರು ಕಲ್ಲು ತೂರಾಟ ನಡೆಸಿದ್ದರು.

"ಯಾವುದೇ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗದಿದ್ದರೂ ಜನರು ನನ್ನ ಮೇಲೆ ಅಪಾರ ಪ್ರೀತಿ, ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದು ಒಂದು ರೀತಿಯಲ್ಲಿ ಸಾರ್ವಜನಿಕರ ಸಹಾನುಭೂತಿ ನನ್ನ ಪರವಾಗಿದ್ದು, ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಶಿಕಾರಿಪುರದಲ್ಲಿ 40 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತ ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ" ಎಂದು ಗೌಡರು ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜಕೀಯ ನಾಯಕರ ನಡುವಿನ ರಾಜಕೀಯ ತಿಳುವಳಿಕೆಯ ಭಾಗವಾಗಿ ವಿಜಯೇಂದ್ರಗೆ ದಾರಿ ಸುಗಮವಾಗುವಂತೆ ಮಾಡಲು ಶಿಕಾರಿಪುರದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಮಾಲತೇಶ್‌ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ ಎಂಬ ಊಹಾಪೋಹ ಇದೆ. ಆದರೆ, 2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರಂತಹ ಬಿಜೆಪಿಯ ಧೀಮಂತ ನಾಯಕನ ವಿರುದ್ಧ 51,586 ಮತಗಳನ್ನು ಪಡೆದು ತೋರಿಸಿದ್ದ ಮಾಲತೇಶ್, ಈ ಬಾರಿ ತಮ್ಮ ಪರವಾಗಿ ಸಕಾರಾತ್ಮಕ ಫಲಿತಾಂಶ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಅವರು ಶಿಕಾರಿಪುರಲ್ಲಿ ಬಿಜೆಪಿ ಸ್ಥಾನವನ್ನು ಉಳಿಸಿಕೊಳ್ಳಲು ಉತ್ಸುಕರಾಗಿದ್ದಾರೆ. "ಶಿಕಾರಿಪುರದಿಂದ ಸ್ಪರ್ಧಿಸಲು ಪಕ್ಷ ನನಗೆ ಅವಕಾಶ ನೀಡಿದೆ, ನಾನು ಪ್ರಚಾರ ಮಾಡುತ್ತಿದ್ದೇನೆ ಮತ್ತು ಜನರೊಂದಿಗೆ ಸುಲಭವಾಗಿ ಸಂವಹನ ನಡೆಸುತ್ತಿದ್ದೇನೆ, ನನ್ನ ತಂದೆ ಮತ್ತು ಹಿರಿಯ ಸಹೋದರ ಬಿ ವೈ ರಾಘವೇಂದ್ರ (ಶಿವಮೊಗ್ಗ ಸಂಸದ) ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದರಿಂದ ಚಿಂತಿಸಬೇಕಾಗಿಲ್ಲ. ಇಲ್ಲಿ ಕಾರ್ಯಕರ್ತರ ಬಲಿಷ್ಠ ತಂಡವಿದೆ, ಅವರ ಪ್ರೀತಿಗೆ ಯಾವುದೇ ಮಿತಿಯಿಲ್ಲ, ಇವೆಲ್ಲದರ ಆಧಾರದ ಮೇಲೆ ನಾನು ಗೆಲ್ಲುತ್ತೇನೆ" ಎಂದು ವಿಜಯೇಂದ್ರ ಹೇಳಿದ್ದಾರೆ.

"ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದೇನೆ ಎಂದರ್ಥವಲ್ಲ. ಇದು ನನ್ನ ಮೊದಲ ಚುನಾವಣೆ, ಇದನ್ನು ಗಂಭೀರವಾಗಿ ಪರಿಗಣಿಸಿ ಪದೇ ಪದೇ ಕ್ಷೇತ್ರ ಹಾಗೂ ಗ್ರಾಮಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ" ಎಂದರು. ವಿಜಯೇಂದ್ರ ಅವರಿಗೆ ಈ ಚುನಾವಣೆಯು ಕೇವಲ ಗೆಲುವಿಗಾಗಿ ಅಲ್ಲ, ಆದರೆ ತಲೆಮಾರಿನ ಬದಲಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ನಾಯಕರಾಗಿ ಅವರ ಭವಿಷ್ಯವನ್ನು ರೂಪಿಸಲು ಮುಖ್ಯವಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷರೊಬ್ಬರು ಹೇಳಿದರು.

ಲಿಂಗಾಯತ ಪ್ರಬಲ ವ್ಯಕ್ತಿ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 1983 ರಿಂದ ಎಂಟು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಮತ್ತು 1999 ರಲ್ಲಿ ಒಮ್ಮೆ ಸೋತಿದ್ದರು. 2013 ರಲ್ಲಿ, ಯಡಿಯೂರಪ್ಪ ಅವರು ಬಿಜೆಪಿಯಿಂದ ಬೇರ್ಪಟ್ಟ ನಂತರ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿ, ಅಭ್ಯರ್ಥಿಯಾಗಿ ಗೆದ್ದರು. 2014ರಲ್ಲಿ ಮತ್ತೆ ಬಿಜೆಪಿಗೆ ಮರಳಿದ್ದರು. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು ಹೈಕಮಾಂಡ್ ಒಪ್ಪಿಗೆ ನೀಡಿದರೆ ವಿಜಯೇಂದ್ರ ಅಭ್ಯರ್ಥಿಯಾಗಲಿರುವ ಶಿಕಾರಿಪುರ ಕ್ಷೇತ್ರವನ್ನು ತೆರವು ಮಾಡುವುದಾಗಿ ತಿಳಿಸಿದ್ದರು.

ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದರೂ, ಅಪ್ಪ-ಮಗ ಇಬ್ಬರೂ ಅಂತಿಮವಾಗಿ ಶಿಕಾರಿಪುರವನ್ನು ಬಿಟ್ಟುಕೊಡದೆ ಇರಲು ನಿರ್ಧರಿಸಿದ್ದಾರೆ.

ವಿಜಯೇಂದ್ರ ಅವರನ್ನು ಜುಲೈ, 2020 ರಲ್ಲಿ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಮೇ 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮೈಸೂರು ಜಿಲ್ಲೆಯ ವರುಣಾದಿಂದ ಸ್ಪರ್ಧಿಸಲು ಕೊನೆ ಘಳಿಗೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ನಂತರ ಅವರನ್ನು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹೆಸರಿಸಲಾಯಿತು.

2019 ಮತ್ತು 2020 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕೆಆರ್ ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿ ವಿಜಯೇಂದ್ರ ಅವರದ್ದು ಆಗಿದ್ದರಿಂದ, ಪಕ್ಷದಲ್ಲಿ ಅವರ ಗೌರವ ಮತ್ತಷ್ಟು ಹೆಚ್ಚಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ